AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Turtle Day 2026: ಮನುಷ್ಯದ ಸ್ವಾರ್ಥದಿಂದ ಅಳಿವಿನಂಚಿಗೆ ತಲುಪಿವೆ ಆಮೆಗಳ ಸಂತತಿ

ಆಮೆಗಳು ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಅಕ್ರಮ ವ್ಯಾಪಾರ, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಈ ಎಲ್ಲಾ ಕಾರಣಗಳಿಂದ ಆಮೆಗಳ ಸಂತತಿ ಅಳಿವಿನಂಚಿಗೆ ತಲುಪಿದ್ದು, ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಆಮೆಗಳನ್ನು ಕೇವಲ ಚಿತ್ರಗಳಲ್ಲಿ ನೋಡುವ ಕಾಲ ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ಆಮೆಗಳ ಸಂತತಿಯನ್ನು ಸಂರಕ್ಷಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

World Turtle Day 2026: ಮನುಷ್ಯದ ಸ್ವಾರ್ಥದಿಂದ ಅಳಿವಿನಂಚಿಗೆ ತಲುಪಿವೆ ಆಮೆಗಳ ಸಂತತಿ
ವಿಶ್ವ ಆಮೆ ದಿನImage Credit source: Pexels
ಮಾಲಾಶ್ರೀ ಅಂಚನ್​
|

Updated on: May 23, 2026 | 9:47 AM

Share

ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವ ವೈವಿಧ್ಯವೂ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿವೆ. ಅದೇ ರೀತಿ ಸರೀಸೃಪ ಗುಂಪಿಗೆ ಸೇರಿದ ಸಾದು ಜೀವಿಯಾದ ಆಮೆಗಳು (Turtle) ಸಹ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಹೌದು ಆಲಿವ್‌ ರಿಡ್ಲಿ, ಲೆದರ್‌ ಬ್ಯಾಕ್‌ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ  ಮತ್ತು ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇಂದು ಅಕ್ರಮ ಬೇಟೆ, ಆವಸಸ್ಥಾನದ ನಷ್ಟ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದಾಗಿ ಅವೆಷ್ಟೋ ಜಾತಿಯ ಆಮೆಗಳು ಅಳಿವಿನಂಚಿಗೆ ತಲುಪಿವೆ, ಅವುಗಳ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ. ಹಾಗಾಗಿ ಆಮೆಗಳನ್ನು ಸಂರಕ್ಷಿಸಲು, ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆಮೆ ದಿನದ ಇತಿಹಾಸವೇನು?

ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್‌ ಟಾರ್ಟಾಯಿಸ್‌ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು.  ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು.

ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಡೈನೋಸಾರ್‌ ಭೂಮಿಯ ಮೇಲೆ ಬರುವುದಕ್ಕೂ ಮುಂಚೆಯೇ ಇವುಗಳ ಅಸ್ತಿತ್ವವಿತ್ತು. ಆದರೆ ಇಂದು ಇವುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ ಇವುಗಳ ರಕ್ಷಣೆಯ ಉದ್ದೇಶದಿಂದ ಈ ಲಾಭರಹಿತ ಸಂಸ್ಥೆ ಈ ವಿಶೇಷ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆಮೆ ದಿನದ ಮಹತ್ವವೇನು?

  • ಜಗತ್ತಿನಲ್ಲಿ 300 ಜಾತಿಯ ಆಮೆಗಳಿದ್ದು, ಅವುಗಳಲ್ಲಿ 129 ಜಾತಿಯ ಆಮೆಗಳು ಅಳಿವಿನಂಚಿನಲ್ಲಿವೆ. ಹಾಗಾಗಿ ಇವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.
  • ಆಮೆಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸುವುದು, ಅಕ್ರಮ ವ್ಯಾಪಾರ, ಬೇಟೆಯಾಡುವಿಕೆಯನ್ನು ತಡೆಗಟ್ಟುವುದು ಈ ದಿನದ ಉದ್ದೇಶವಾಗಿದೆ.
  • ಈ ವಿಶೇಷ ದಿನವು ಆಮೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.
  • ಈ ದಿನ ಜನರಿಗೆ ಶಿಕ್ಷಣ ನೀಡುವ, ಆಮೆಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಡಲ ತೀರಗಳನ್ನು ಸ್ವಚ್ಛಗೊಳಿಸುವುದು, ಆಮೆಗಳ ಆವಾಸಸ್ಥಾನಗಳನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಕಾರ್ಯಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಜೀವ ವೈವಿಧ್ಯತೆಯನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ

ಆಮೆಗಳ ಕುರಿತ ಅದ್ಭುತ ಸಂಗತಿಗಳು:

  • ಆಮೆಗಳು ಭೂಮಿಯ ಮೇಲಿನ ಅತ್ಯಂತ ಹಳೆಯ ಜೀವಿಗಳಲ್ಲಿ ಒಂದಾಗಿದ್ದು, ಸುಮಾರು 220 ದಶಲಕ್ಷ ವರ್ಷಗಳಿಂದ ಅಸ್ತಿತ್ವದಲ್ಲಿವೆ.
  • ಆಮೆಗಳು  ಭೂಮಿಯ ಮೇಲಿನ ಅತಿ ಹೆಚ್ಚು ಕಾಲ ಬದುಕುವ ಜೀವಿಗಳಲ್ಲಿ ಒಂದಾಗಿದೆ. ಈ ಸರೀಸೃಪವು 150 ವರ್ಷಗಳಿಗೂ ಹೆಚ್ಚು ಕಾಲ ಬದುಕುತ್ತದೆ ಎಂದು ನಂಬಲಾಗಿದೆ.
  • ಕೆಲವು ಜಾತಿಯ ಆಮೆಗಳು ನೀರಿನ ಅಡಿಯಲ್ಲಿ 6 ಗಂಟೆಗಳವರೆಗೆ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲವು.
  • ಸಮುದ್ರ ಆಮೆಗಳು ವಿಶೇಷವಾಗಿ ಸಂತಾನೋತ್ಪತ್ತಿ ಅವಧಿಯಲ್ಲಿ 10,000 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಬಹುದು.
  • ಆಮೆಗಳಿಗೆ ಹಲ್ಲುಗಳಿಲ್ಲ,ಅವು ಆಹಾರವನ್ನು ಜಗಿಯಲು ತಮ್ಮ ಕೊಕ್ಕಿನಂತಹ ಬಾಯಿಗಳನ್ನು ಬಳಸುತ್ತವೆ.
  • ಪ್ರಪಂಚದಾದ್ಯಂತ 300 ಕ್ಕೂ ಹೆಚ್ಚು ಜಾತಿಯ ಆಮೆಗಳಿವೆ. ಆದಾಗ್ಯೂ, ಇವುಗಳಲ್ಲಿ 129 ಜಾತಿಗಳು ಅಳಿವಿನಂಚಿನಲ್ಲಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More