ಸಾಂದರ್ಭಿಕ ಚಿತ್ರ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಹೆಮ್ಮೆಯಾಗಿದೆ. ಕಳೆದ ವರ್ಷ ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಸೇರಿದಂತೆ ಅನೇಕ ಮಹತ್ವದ ಸಾಧನೆಗಳಿಂದ ಇಸ್ರೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ, 2024 ರಲ್ಲಿ ಅನೇಕ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ತನ್ನ ಸಾಧನೆಯ ಮೂಲಕವೇ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿರುವ ಇಸ್ರೋದ ಈ ವರ್ಷದ ಸಾಧನೆಗಳ ಪಟ್ಟಿ ಇಲ್ಲಿದೆ.
- ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2024 ರ ಮೊದಲ ದಿನವೇ ಉಪಗ್ರಹ ಉಡಾವಣೆ ಮೂಲಕ ಇತಿಹಾಸವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 2024 ರ ಜನವರಿ 1 ರಂದು ಇಸ್ರೋ ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸ್ಯಾಟ್ ಉಡಾವಣೆ ಮಾಡಿತು. ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲಾಕ್ ಹೋಲ್) ಸೇರಿದಂತೆ ಅಲ್ಲಿ ಹೊರಹೊಮ್ಮುವ ಎಕ್ಸ್ ಕಿರಣಗಳ ಮೂಲವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C58) ರಾಕೆಟ್, ತನ್ನ 60 ನೇ ಕಾರ್ಯಾಚರಣೆಯಲ್ಲಿ ಪೇಲೋಡ್ ‘ಎಕ್ಸ್‌ಪೋಸ್ಯಾಟ್’ ಸೇರಿದಂತೆ 10 ಇತರ ಉಪಗ್ರಹಗಳನ್ನು ಹೊತ್ತೊಯುವಲ್ಲಿ ಯಶಸ್ವಿಯಾಗಿದೆ.
- 2024 ರಲ್ಲಿ ಇಸ್ರೋ ಇನ್ಸಾಟ್-3ಡಿಎಸ್ ಎಂಬ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವೊಂದನ್ನು ಉಡಾವಣೆ ಮಾಡಿತು. ಇನ್ಸಾಟ್-3ಡಿಎಸ್ ಉಪಗ್ರಹ ವಿವಿಧ ಹವಾಮಾನಶಾಸ್ತ್ರದ ಸ್ಪೆಕ್ಟ್ರಲ್ ಚಾನೆಲ್‌ಗಳನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಭೂಮಿಯ ಮೇಲ್ಮೈ ಹಾಗೂ ಸಾಗರ ವೀಕ್ಷಣೆ ನಡೆಸಲು ಪ್ರಯತ್ನಿಸುತ್ತದೆ. ವಿವಿಧ ಮಾಹಿತಿ ಸಂಗ್ರಹಣಾ ವ್ಯವಸ್ಥೆಗಳಿಂದ ಹವಾಮಾನಕ್ಕೆ ಸಂಬಂಧ ಪಟ್ಟ ಮಾಹಿತಿಗಳನ್ನು ಕಲೆ ಹಾಕಿ ಹಂಚಿಕೊಳ್ಳುತ್ತವೆ.
- 2024 ರ ಆಗಸ್ಟ್ 16 ರಂದು ಇಸ್ರೋ ತನ್ನ ಹೊಸ ಉಪಗ್ರಹವನ್ನು (SSLV-D3-EOS-08) ಯಶಸ್ವಿಯಾಗಿ ಉಡಾವಣೆ ಮಾಡಿತು. ಈ ರಾಕೆಟ್ ಹೊಸ ಭೂ ವೀಕ್ಷಣಾ ಉಪಗ್ರಹ EOS-8 ವನ್ನು ಒಳಗೊಂಡಿದೆ. ಇದರೊಂದಿಗೆ ಸಣ್ಣ ಉಪಗ್ರಹ SR-0 DEMOSAT ಅನ್ನು ಉಡಾವಣೆ ಮಾಡಲಾಗಿದೆ. ವಿಪತ್ತುಗಳಿಂದ ಮುನ್ಸೂಚನೆಯನ್ನು ನೀಡುವ ಉದ್ದೇಶದಿಂದಾಗಿ ಈ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದ್ದು, ಇದು ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತವೆ.
- ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ – ಎಲ್ 1ನೌಕೆ ತನ್ನ ಮೊದಲ ಹ್ಯಾಲೊ ಆರ್ಬಿಟ್ ಈ ವರ್ಷವೇ ತನ್ನ ಪ್ರದಕ್ಷಿಣೆ ಪೂರ್ಣಗೊಳಿಸಿದೆ. ಆದಿತ್ಯ- ಎಲ್ 1 ಮಿಷನ್ ಲಗ್ರಾಂಜಿಯನ್ ಪಾಯಿಂಟ್ ಎಲ್ 1 ನಲ್ಲಿ ಭಾರತದ ಮೊದಲ ಸೌರ ವೀಕ್ಷಣಾಲಯವಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿತ್ತು. ಆದರೆ ಈ ವರ್ಷ ಆದಿತ್ಯ – ಎಲ್ 1 ನೌಕೆ ತನ್ನ ಮೊದಲ ಹ್ಯಾಲೊ ಆರ್ಬಿಟ್ ಪ್ರದಕ್ಷಿಣೆ ಪೂರ್ಣಗೊಳಿಸಿದ್ದು, ಇದು ಇಸ್ರೋದ ಮತ್ತೊಂದು ಮಹತ್ವದ ಸಾಧನೆಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ