Autobiography : ಅಭಿಜ್ಞಾನ ; ‘ಅವತ್ತು ಎರಡು ಗಂಟೆಯಾದರೂ ಬಾಗಿಲು ತೆರೆಯಲಿಲ್ಲ ಅವನು’

|

Updated on: Dec 11, 2021 | 9:04 AM

Prathibha Nandakumar : ‘ಜೋರಾಗಿ ನಗುವ ಹಾಗಾಯಿತು. ಚಿಕ್ಕಮಕ್ಕಳಾಗಿದ್ದಾಗಲೂ ನಮ್ಮ ಮನೆಗಳಲ್ಲಿ ರಸ್ತೆ ಪಕ್ಕ ಹಾಗೆಲ್ಲಾ ಅಭ್ಯಾಸ ಮಾಡಿಸಿರಲಿಲ್ಲ. ಎರಡು ಮಕ್ಕಳ ತಾಯಿ ನಾನು, ರೇಷ್ಮೆ ಸೀರೆ ಉಟ್ಟು, ಜುಮುಕಿ ಗಿಮುಕಿ ಹಾಕಿಕೊಂಡು, ಹೈಹೀಲ್ಸ್​ನಲ್ಲಿ ರಸ್ತೆ ಪಕ್ಕ ಕೂತು... ಹಹಹಾ ಅಂತ ನನಗೆ ನಾನೇ ನಗುತ್ತಾ ಮತ್ತೆ ಮೆಟ್ಟಿಲು ಹತ್ತಿ ಬಾಲ್ಕನಿಯಲ್ಲಿ ಸುಮ್ಮನೆ ಮಲಗಿಬಿಟ್ಟೆ. ನಿದ್ದೆಯೂ ಬಂತು.’

Autobiography : ಅಭಿಜ್ಞಾನ ; ‘ಅವತ್ತು ಎರಡು ಗಂಟೆಯಾದರೂ ಬಾಗಿಲು ತೆರೆಯಲಿಲ್ಲ ಅವನು’
ಕವಿ ಪ್ರತಿಭಾ ನಂದಕುಮಾರ್
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com 

*

ಕವಿ ಪ್ರತಿಭಾ ನಂದಕುಮಾರ್ ಅವರ ಅನುದಿನದ ಅಂತರಗಂಗೆ ಆತ್ಮಕಥನದಿಂದ.

*

ರೇಷ್ಮೆ ಸೀರೆ ಉಟ್ಟು ಸಾಂಪ್ರದಾಯಿಕ ವೇಷಭೂಷಣದಲ್ಲಿ ಹೋದೆ. ರಷ್ಯಾದ ಕಲಾವಿದರು, ಬರಹಗಾರರು ತುಂಬಾ ಆಸಕ್ತಿಯಿಂದ ಮಾತನಾಡಿದರು. ಕಾರ್ಯಕ್ರಮ ಎಂಟು ಗಂಟೆಗೆ ಮುಗಿಯುವುದಿತ್ತು. ಮಾತುಕತೆಯ ಭರದಲ್ಲಿ ಹೊತ್ತಾಯಿತು. ಆಗಿನ್ನೂ ನನ್ನ ಹತ್ತಿರ ಸ್ಕೂಟರ್ ಇರಲಿಲ್ಲ. ಆಟೋ ಹಿಡಿದು ಮನೆಗೆ ಬಂದಾಗ ರಾತ್ರಿ ಹತ್ತೂವರೆ ಆಗಿಬಿಟ್ಟಿತ್ತು.

ಕಾರ್ಯಕ್ರಮದಕ್ಕೆ ಹೋಗುವ ಮೊದಲೇ ಅಡಿಗೆ ಮಾಡಿಟ್ಟು ಹೋಗಿದ್ದೆ. ಅಮ್ಮ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಿದ್ದರು. ಬಾಗಿಲು ಬೆಲ್ ಮಾಡಿದಾಗ ಕಿಟಕಿಯಿಂದ ಅವನು ಅಲ್ಲಿಂದಲೇ ಇಣುಕಿ ನೋಡಿದ.

‘ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ಎಲ್ಲಿಂದ ಬರುತ್ತಿದ್ದೀಯಾ? ಎಂದ.

‘ಅಮ್ಮ ಹೇಳಲಿಲ್ಲವೇ? ಕಾರ್ಯಕ್ರಮ ಇತ್ತು’ ಅಂದೆ.

‘ಇಷ್ಟು ಹೊತ್ತೇಕೆ ಆಯಿತು?’

‘ಲೇಟಾಯ್ತು’

‘ಯಾರ ಜೊತೆ ಚಕ್ಕಂದ ಆಡುತ್ತಿದ್ದೆಯೋ, ಅಲ್ಲೇ ಹೋಗಿ ಇರು ಹೋಗು’ ಅಂದ.

ನಿಜವಾಗಿ ನನಗೆ ಅರ್ಥವಾಗಲಿಲ್ಲ. ನಾನು ಅಷ್ಟು ಪ್ರೀತಿಸಿ, ಮದುವೆಯಾದ ವ್ಯಕ್ತಿ ಹೀಗೆ ಯೋಚಿಸಬಲ್ಲ ಅಂತ ಊಹಿಸಲೂ ಕೂಡ ನನಗೆ ಸಾಧ್ಯವಿರಲಿಲ್ಲ.

‘ಅರೇ! ನಾನು ಐಸಿಸಿಆರ್ ಪ್ರೋಗ್ರಾಂಗೆ ಹೋಗಿದ್ದೆ. ಇದೇನು ಹೀಗೆ ಮಾತಾಡ್ತಿದ್ದೀಯಾ? ಬಾಗಿಲು ತೆಗಿ’ ಎಂದೆ.

ಅವನು ಬಾಗಿಲು ತೆಗೆಯಲಿಲ್ಲ. ‘ಎಲ್ಲಾದರೂ ಹೋಗಿ ಸಾಯಿ’ ಅಂದುಬಿಟ್ಟ.

ನಾನು ದಂಗಾದೆ. ಅಂತಹ ಪರಿಸ್ಥಿತಿಗಳು ಬೇರೆ ಯಾರಿಗೋ ಬರುತ್ತವೆ ಅಂದುಕೊಂಡಿದ್ದೆ. ನನ್ನ ಬಾಳಿನಲ್ಲಿ ಅಂತಹ ಘಟನೆಗಳೆಲ್ಲ ಖಂಡಿತಾ ನಡೆಯುವುದಿಲ್ಲ ಎಂದುಕೊಂಡಿದ್ದೆ. ಆದರೆ ನನಗೇ ಹಾಗಾಗುತ್ತಿತ್ತು. ಏನು ಮಾಡುವುದೋ ಗೊತ್ತಾಗಲಿಲ್ಲ. ಅಲ್ಲೇ ಮೆಟ್ಟಿಲ ಮೇಲೆ ಕೂತು ಯೋಚಿಸಿದೆ. ಸ್ವಲ್ಪ ಹೊತ್ತಿಗೆ ಕೋಪ ಇಳಿದ ಮೇಲೆ ಬಾಗಿಲು ತೆಗೆಯಬಹುದು ಅಂತ ಕಾದೆ. ಅಮ್ಮನನ್ನು ಕರೆದೆ. ಅವನು ಯಾವ ಕಾರಣಕ್ಕೂ ಬಾಗಿಲು ತೆಗೆಯಬಾರದು ಅಂತ ಅಮ್ಮನಿಗೆ ಕಟ್ಟಪ್ಪಣೆ ಮಾಡಿದ. ಅಮ್ಮ ನನ್ನ ಪರವಾಗಿ ಗೋಗರೆದರು.

‘ಅವಳು ಲೇಖಕಿ, ಸಾಹಿತಿ ಕಣೋ. ಎಲ್ಲ ಕಡೆ ಹೋಗಬೇಕಾಗುತ್ತೆ. ಅವಳೇನು ಕೆಟ್ಟ ಕೆಲಸ ಮಾಡಕ್ಕೆ ಹೋಗಿಲ್ಲ. ಈಗ ತಾನೇ ಟೀವಿಯಲ್ಲಿ ಬಂದಿದ್ಲಪ್ಪ ಅಂತ. ಯಾರೋ ರಸ್ತೇಲಿ ಹೋಗೋದು ನನಗೆ ಹೇಳಬೇಕಾ? ನಾನು, ನನಗೆ ಗೊತ್ತಿಲ್ಲ ಅಂತ ಹೇಳಬೇಕಾ? ಇವಳು ಯಾಕೆ ನನಗೆ ಹೇಳಿ ಪರ್ಮಿಷನ್ ತಗೊಳ್ಳಲಿಲ್ಲ? ಅದೂ ಎಷ್ಟು ಹೊತ್ತಿಗೆ ಬರೋದು? ಇಷ್ಟು ಹೊತ್ತಿನಲ್ಲಿ ಬಂದಿದ್ದಾಳಲ್ಲ ಜನ ಏನಂತಾರೆ?’ ಹೀಗೆ ಅವನ ವಾದ ಸಾಗಿತ್ತು.

ಹಿಂದಿನ ದಿನವೇ ನಾನು ಹೇಳಿದ್ದೆ. ಅವನಿಗೆ ಮರೆತು ಹೋಗಿತ್ತು. ಹೊರಗೆ ಕೂತ ನನಗೆ ಇದನ್ನೆಲ್ಲ ಕೇಳಿ ಕೋಪ ಉಕ್ಕಿ ಬರುತ್ತಿತ್ತು. ಯಾಕೆ ಮೊದಲೇ ಹೇಳಿ ಪರ್ಮಿಷನ್ ತಗೋಬೇಕು? ನಾನೇನು ಎಳೇ ಮಗುನಾ? ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಇವನ ಪರ್ಮಿಶನ್ ಯಾಕೆ ಬೇಕು? ಮಾಡ್ತೀನಿ ತಾಳು, ಇನ್ನು ಮೇಲೆ ಇವನಿಗೆ ಏನನ್ನೂ ಹೇಳಲ್ಲ. ಏನೆಂದುಕೊಂಡಿದ್ದಾನೆ… ಅಂತ ಹಲ್ಲು ಕಡಿಯುತ್ತಾ ಕೂತೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವತ್ತು ರಾತ್ರಿ ಎರಡು ಗಂಟೆ ಆದರೂ ಬಾಗಿಲು ತೆರೆಯಲಿಲ್ಲ ಅವನು. ಹೊರಗೇ ಕೂತು ನಕ್ಷತ್ರ ನೋಡುತ್ತಾ ನೋಡುತ್ತಾ ಕೊನೆಗೆ ತೂಕಡಿಸಿಬಿಟ್ಟಿದ್ದೆ ನಾನು. ಕತ್ತಲೆ, ಸೊಳ್ಳೆ. ಜೊತೆಗೆ ಟಾಯ್ಲೆಟ್​ಗೆ ಬೇರೆ ಹೋಗಬೇಕಿತ್ತು. ಅವತ್ತಿನ ಕಾರ್ಯಕ್ರಮದಲ್ಲಿ ಕುಡಿದ ಒಂದು ಗ್ಲಾಸ್ ವೈನ್ ಕೆಲಸ ಮಾಡಿತ್ತು. ಏನು ಮಾಡೋದು ಗೊತ್ತಾಗಲಿಲ್ಲ. ಮೆಟ್ಟಿಲು ಇಳಿದು ಕಾಂಪೌಂಡಿಗೆ ಬಂದೆ. ನಮ್ಮ ಮನೆ ಇದ್ದಿದ್ದು ಒಂದನೇ ಮಹಡಿಯಲ್ಲಿ. ಸಣ್ಣ ರಸ್ತೆ. ರಾತ್ರಿ ಎರಡು ಗಂಟೆಗೆ ಯಾರಿರುತ್ತಾರೆ ಅಂದುಕೊಂಡು ಮೋರಿಯ ಹತ್ತಿರ ಉಚ್ಚೆ ಮಾಡಿದೆ.

ಜೋರಾಗಿ ನಗುವ ಹಾಗಾಯಿತು. ಚಿಕ್ಕಮಕ್ಕಳಾಗಿದ್ದಾಗಲೂ ನಮ್ಮ ಮನೆಗಳಲ್ಲಿ ರಸ್ತೆ ಪಕ್ಕ ಹಾಗೆಲ್ಲಾ ಅಭ್ಯಾಸ ಮಾಡಿಸಿರಲಿಲ್ಲ. ಎರಡು ಮಕ್ಕಳ ತಾಯಿ ನಾನು, ರೇಷ್ಮೆ ಸೀರೆ ಉಟ್ಟು, ಜುಮುಕಿ ಗಿಮುಕಿ ಹಾಕಿಕೊಂಡು, ಹೈಹೀಲ್ಸ್​ನಲ್ಲಿ ರಸ್ತೆ ಪಕ್ಕ ಕೂತು… ಹಹಹಾ ಅಂತ ನನಗೆ ನಾನೇ ನಗುತ್ತಾ ಮತ್ತೆ ಮೆಟ್ಟಿಲು ಹತ್ತಿ ಬಾಲ್ಕನಿಯಲ್ಲಿ ಸುಮ್ಮನೆ ಮಲಗಿಬಿಟ್ಟೆ. ನಿದ್ದೆಯೂ ಬಂತು.

ಅನುದಿನದ ಅಂತರಗಂಗೆ

ಬೆಳಗ್ಗೆ ನಾಲ್ಕೂವರೆಗೆ ಯಾರೋ ಎಬ್ಬಿಸಿದರು.

ಅಮ್ಮ ಅಲ್ಲಾಡಿಸುತ್ತಿದ್ದರು. ‘ಬಾಮ್ಮಾ ಒಳಗೆ ಬಂದು ಮಲಕ್ಕೋ’ ಅನ್ನುತ್ತಲೇ ಗೊಳೋ ಎಂದು ಅಳತೊಡಗಿದರು. ಅವನು ಕುಡಿದ ನಶೆಯಲ್ಲಿ ಮಲಗಿ ಗೊರಕೆ ಹೊಡೆಯುತ್ತಿದ್ದ.

ಒಳಗೆ ಬಂದು ಸೀರೆ ಬದಲಿಸಿ ಒಡವೆ ಎಲ್ಲ ಎತ್ತಿಟ್ಟು ಕೈಕಾಲು ತೆಳೆದೆ. ಅಮ್ಮ ಕಾಫಿ ಮಾಡಿಕೊಟ್ಟರು. ಅಡಿಗೆ ಮನೆಯಲ್ಲೇ ಕೂತು ಇಬ್ಬರೂ ಮೆಲುದನಿಯಲ್ಲಿ ಮಾತನಾಡಿದೆವು.

ಮಗನ ಪೆದ್ದುತನ, ಹಿಂಸೆಗೆ ಅಮ್ಮ ಕ್ಷಮೆ ಕೇಳುತ್ತಿದ್ದರು! ‘ನೋಡಮ್ಮ, ನಮ್ಮ ಕಾಲದಲ್ಲಿ ನಮಗೆಲ್ಲ ಓದಕ್ಕೆ ಆಸೆ ಇದ್ದರೂ ಓದಿಸಲಿಲ್ಲ. ಹುಟ್ಟಿ ಬೆಳೆದು ಅಡಿಗೆ, ಕಸಮುಸುರೆ, ದನ ಕೊಟ್ಟಿಗೆ ಅಂತ ಇಷ್ಟರಲ್ಲೇ ಎಲ್ಲಾ ಮುಗಿದು ಹೋಯಿತು. ಒಂದು ದಿನ ನನಗೆ ಇಷ್ಟ ಬಂದ ಹಾಗೆ ಮಾಡಲಿಲ್ಲ. ಇಷ್ಟಪಟ್ಟಿದ್ದು ಉಣ್ಣಲಿಲ್ಲ. ಉಡಲಿಲ್ಲ. ಎಲ್ಲಾ ಯಜಮಾನನ ಆಜ್ಞೆ ಪ್ರಕಾರನೇ ನಡೀತು. ನನ್ನದು ಒಂದೇ ಒಂದು ತಪ್ಪಿಲ್ಲದಿದ್ದರೂ ದಿನ ಬೆಳಗಾದರೆ ಬೈದೂ ಬೈದೂ ಹಣ್ಣು ಮಾಡುತ್ತಿದ್ದರು. ಎಲ್ಲಾನೂ ಹಲ್ಲು ಕಚ್ಚಿಕೊಂಡು ಸಹಿಸಿಕೊಂಡು ಬಾಳಿದೆ. ನಿನ್ನ ಹಾಗೆ ಧೈರ್ಯವಾಗಿ ಇರಕ್ಕೆ ನಾನೇನು ಓದಿದವಳಾ ಅಥವಾ ಹೊರಗೆ ದುಡಿದು ಸಂಪಾದನೆ ಮಾಡ್ತಿದ್ದವಳಾ? ಹೊಟ್ಟೆಗೆ ಬಟ್ಟೆಗೆ ಇವರೇ ಗತಿ. ಅಷ್ಟು ಮಾಡಿದ್ರೂ ಕೊನೆಗೆ ನನ್ನ ತಲೇಮೇಲೆ ಗೂಬೆ ಕೂರಿಸಿದರು. ಕೊನೇವರೆಗೂ ಒಂದು ಒಳ್ಳೇ ಮಾತು ಆಡಲಿಲ್ಲ. ಒಂದು ಒಳ್ಳೇ ದಿನ ತೋರಿಸಲಿಲ್ಲ. ಈಗ ಇವನು ನೋಡು ಹೇಗೆ ನಿನ್ನನ್ನ ಹಾಕಿ ಅರೀತಿದ್ದಾನೆ. ಥೇಟು ತಂದೆ ಬುದ್ಧಿ. ಹೆಣ್ಣುಮಕ್ಕಳು ಇರೋದೇ ಹೀಗೆ ಅರೆಸಿಕೊಳ್ಳೋಕಾ?’

ಆ ಕ್ಷಣದಲ್ಲಿ ಎರಡು ನಿರ್ಧಾರ ನನ್ನಲ್ಲಿ ದೃಢವಾಗಿ ಮೂಡಿತು. ಒಂದು ಅಮ್ಮನಿಗೆ ಸಾಧ್ಯವಿದ್ದಷ್ಟು ನೆಮ್ಮದಿ ಕೊಡಬೇಕು. ಇನ್ನೊಂದು ಯಾವ ಕಾರಣಕ್ಕೂ  ಎಂತಹ ಸಂದರ್ಭದಲ್ಲೂ ಇವನ ದಬ್ಬಾಳಿಕೆಗೆ ಸೋಲಬಾರದು.

ಬೆಳಗ್ಗೆ ಎದ್ದಾಗ ಇವನಿಗೆ ರಾತ್ರಿ ನಡೆದಿದ್ದು ಮರೆತೇ ಹೋಗಿತ್ತು! ನಗುತ್ತಾ ‘ಗುಡ್​ ಮಾರ್ನಿಂಗ್’ ಅಂದ! ಚಪಾತಿ ಮಾಡುತ್ತಿದ್ದ ನಾನು ‘ನಾಚಿಕೆ ಆಗಲ್ವಾ ಹಾಗನ್ನಕ್ಕೆ?’ ಅಂದೆ. ಅವನಿಗೆ ಹಿಂದಿನ ರಾತ್ರಿ ನೆನಪಾಗಿ ತಲೆತಗ್ಗಿಸಿ ‘ಸಾರಿ, ಐ ಯಾಮ್ ರಿಯಲೀ ವೆರಿ ಸಾರಿ, ಹಾಗೆ ಮಾಡಬಾರದಾಗಿತ್ತು ನಾನು’ ಅಂದ.

ಅದಕ್ಕೆ ಪಶ್ಚಾತ್ತಾಪವೆಂಬಂತೆ ಆ ಸಂಜೆ ಆರು ಗಂಟೆಗೆ ಗುರುನಾನಕ್ ಭವನದಲ್ಲಿ ಇದ್ದ ರಷ್ಯನ್ ಜಾನಪದ ಕಾರ್ಯಕ್ರಮಕ್ಕೆ ತಾನೇ ಕರೆದುಕೊಂಡು ಹೋದ. ಹಿಂದಿನ ದಿನ ಪರಿಚಯವಾಗಿದ್ದ ರಷ್ಯನ್ ಕಲಾವಿದರು ಬರಹಗಾರರನ್ನು ಪರಿಚಯಿಸಿದೆ. ಎಲ್ಲರ ಜೊತೆ ನಕ್ಕು ಚೆನ್ನಾಗಿ ಮಾತನಾಡಿದ. ಎಲ್ಲರೂ ನನ್ನ ಬಗ್ಗೆ ಹೊಗಳಿ, ಮೆಚ್ಚಿ ನುಡಿದಾಗ ಸಂಭ್ರಮಪಟ್ಟ. ಅಲ್ಲಿಂದಲೇ ಮನೆಗೆ ಫೋನ್ ಮಾಡಿ ಅಮ್ಮನಿಗೆ ನಾವು ಹೊರಗೇ ಊಟ ಮಾಡಿಬರುತ್ತೇವೆ ಎಂದು ಹೇಳಿ ಮಕ್ಕಳಿಗೆ ಊಟ ಕೊಟ್ಟು ಮಲಗಿಸಲು ಹೇಳಿದ. ಯೂನಿಟಿ ಬಿಲ್ಡಿಂಗ್​ ಕಾಮತ್​ನಲ್ಲಿ ಊಟ ಮಾಡಿದೆವು. ಪಕ್ಕದ ಜನಾರ್ಧನ ಸಿಲ್ಕ್​ಹೌಸ್​ನಲ್ಲಿ ಒಂದು ಸೀರೆ ಡಿಸ್ಪ್​ಲೇ ಮಾಡಿದ್ದರು.  ‘ಎಷ್ಟು ಚೆನ್ನಾಗಿದೆ’ ಅಂದೆ. ತಕ್ಷಣ ಒಳಗೆ ಹೋಗಿ ಅದರ ಬೆಲೆ ಕೇಳಿ, ನಾನು ದುಬಾರಿ ಅಂದರೂ ಕೇಳದೆ ಕೊಡಿಸಿದ.

ಆ ರಾತ್ರಿ ನಾನು ಬದುಕಿನ ಬಗ್ಗೆ ಬಹಳ ಯೋಚಿಸಿದೆ. ನಿನ್ನ ಗಂಡನ್ನ ಒದ್ದು ಹೊರಗೆ ಬಾ ಅಂತ ಹೇಳಿದ ಗೆಳೆಯ, ಗೆಳತಿ, ನೆಂಟರಿಷ್ಟರು ಯಾರಿಗೂ ಅವನು ಅರ್ಥವಾಗಿರಲಿಲ್ಲ. ಅರ್ಥವಾಗಿದ್ದ ನನಗೆ ಗಟ್ಟಿಯಾಗಿ ನಿಲ್ಲುವುದು ಇನ್ನೂ ಕರಗತವಾಗಿರಲಿಲ್ಲ. ನನ್ನ ಮನಸ್ಸು ಇನ್ನೂ ಹೊಯ್ದಾಡುತ್ತಿತ್ತು. ಪ್ರೀತಿಗೆ ಹಂಬಲಿಸುತ್ತಿತ್ತು.

ಮುಖವಾಡ

ಒಂದೊಂದೇ ದಿನದ ಲೆಕ್ಕ ಕೊಡಬೇಕು
ಮಾಡಿದ್ದು ಮಟ್ಟಿದ್ದು ಮಾಡದುಳಿದದ್ದು
ನಿಟ್ಟುಸಿರು ಬಿಟ್ಟು ಹೊರಟ ಮೇಲೆ
ಕೊನೆಗೊಮ್ಮೆ ಗುರಿ ಮುಟ್ಟಲೇಬೇಕು.
ಮನದೊಳಗೊಂದು ಹೊರಗೊಂದು ಅಂತರವೆದ್ದು
ಮುಖವಾಡದ ಹುಡುಗಿಯರು ಕದ್ದು
ಬರುತ್ತಾರೆ ಅಲ್ಲೆ ಬಿಟ್ಟು ಅಂತರಾತ್ಮದ ಗುಟ್ಟು
ಕಾಡುವ ಕನಸು ನನಸುಗಳ ನಡುವೆ
ಕಳೆದು ಹೋಗುತ್ತ ಅರಿಸಿದ್ದು ದಕ್ಕದೆ
ಬಳಲುತ್ತಾರೆ ಮನದಲ್ಲಿ ಕುದಿಯುತ್ತಾರೆ.
ಕೊನೆಗೊಮ್ಮೆ ಗುರಿ ಮುಟ್ಟಲೇಬೇಕು
ಚಿತ್ತದೊಳಗಿನ ಪುತ್ಥಳಿಗೆ ಎಲ್ಲ ನಿವೇದಿಸಬೇಕು
ಕಂಡೂ ಕಾಣದ ಹಾಗೆ ತೇಲಿಬಿಡುವುದು ಬಿಟ್ಟು
ಎದ್ದು ಎದೆಯೊಡ್ಡಿ ಗುದ್ದು ಸ್ವೀಕರಿಸಬೇಕು.

*

ಸೌಜನ್ಯ : ಅಹರ್ನಿಶಿ, ಶಿವಮೊಗ್ಗ. 9449174662

ಇದನ್ನೂ ಓದಿ : Music : ಅಭಿಜ್ಞಾನ ; ‘ನಿನ್ನ ಊದುವ ತುತ್ತೂರಿ ದನಿಗೆ ಜಗತ್ತಿನಲ್ಲಿ ಅಷ್ಟೊಂದು ಬೆಲೆ ಇದೆ, ನನ್ನ ಸೂಜಿ ದಾರಕ್ಕೆ ಬೆಲೆ ಇಲ್ಲವಾ’