Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ದಿಂದ ‘ಹೆಂಡ, ಬೀರು ಮತ್ತು ದಲಿತರು’
*
ತಮ್ಮ ಹಸಿವು ಅವಮಾನಗಳನ್ನು ಹೆಂಡ ಕುಡಿದು ಸಾಯಿಸುತ್ತೇವೆನ್ನುವ ಜನಸಮುದಾಯದಿಂದ ಬಂದವರಿಂದಲೇ ಮದ್ಯಪಾನದ ಬಗ್ಗೆ ಮೂರು ಮಾತುಗಳಿವೆ. ಆ ಮೂರು ಮಾತುಗಳನ್ನು ನಾಕಾರು ದಿಕ್ಕಿನಿಂದಲೂ ತಾಳೆ ಮಾಡಿ ಒಂದು ನಿಲುವು ತಾಳಬೇಕಾಗಿದೆ. ಅದ್ಯಾವುದೆಂದು ವಿಚಾರಿಸೋಣ. ಈ ಹೇಳಿಕೆಗಳನ್ನು ನೋಡಿರಿ.
1. ಮದ್ಯಪಾನ ರದ್ದಾಗಲಿ – ಶ್ರೀ ಟಿ.ಎನ್. ನರಸಿಂಹಮೂರ್ತಿ
2. ಹೆಂಡದ ಬದಲು ಬೀರು ಕುಡಿಯಿರಿ ಶ್ರೀ ಎನ್. ರಾಚಯ್ಯ
3. ಹೆಂಡ ಕುಡಿಯಿರಿ – ಶ್ರೀ ಸಿದ್ಧಲಿಂಗಯ್ಯ.
ಮದ್ಯಪಾನ ರದ್ದು ಕೂಡಾ ಆಗಿ ಸೋತಿದೆ. ಮದ್ಯಪಾನ, ಲಾಟರಿ, ಕುದುರೆ ಜೂಜು ಇತ್ಯಾದಿಗಳಿಂದ ಬರುವ ಕೋಟಿಗಟ್ಟಲೆ ಕಾಂಚಾಣ ಯಾವ ಸರ್ಕಾರವನ್ನೇ ಆಗಲಿ ಮೋಹಿಸಿ ಬಲಿ ತೆಗೆದುಕೊಳ್ಳುವಂತಹ ಶಕ್ತಿ ಉಳ್ಳದ್ದು. ಆದ್ದರಿಂದ ಮದ್ಯಪಾನ ರದ್ದಾಗಬೇಕಾದರೆ ಅದರಲ್ಲಿ ವ್ಯಾವಹಾರಿಕತೆಗಿಂತ ಭಾವನಾತ್ಮಕವಾದ ಪ್ರಬಲ ಮನಸ್ಸಿರಬೇಕಾಗುತ್ತದೆ. ಅಂದರೆ, ಮದ್ಯಪಾನ ರದ್ದು ಮಾಡುವ ಸರ್ಕಾರಕ್ಕೆ ತನ್ನ ಸಂಬಂಧಿಗಳು ಈ ಮದ್ಯಪಾನದಿಂದ ಹಾಳಾಗುತ್ತಿದ್ದಾರೆ ಎಂದು ಬಲವಾಗಿ ಅನ್ನಿಸಬೇಕಾಗುತ್ತದೆ. ಈ ರೀತಿ ಅನ್ನಿಸಬೇಕಾದರೆ ಕುಡಿತದ ಜಗತ್ತಿನಿಂದ ಬಂದವರ ಕೈಲಿ ಸರ್ಕಾರ ಇದ್ದೂ ಅವರ ಕೈಲೇ ಅಧಿಕಾರವೂ ಇರಬೇಕಾಗುತ್ತದೆ. ಇದಾದರೂ ಆಗದೆ ಇರಬಹುದು. ಆದರೆ ನಿಜವಾದ ಗಾಂಧಿ ತಾತ್ವಿಕತೆ ಉಳ್ಳಂಥ ಇಚ್ಛಾಶಕ್ತಿ ಅಧಿಕಾರದಲ್ಲಿದ್ದರೆ ಮದ್ಯಪಾನ ರದ್ದಾಗುವ ಸಾಧ್ಯತೆಗಳಿವೆ. ಇಲ್ಲದಿದ್ದರೆ ಮದ್ಯಪಾನ ರದ್ದಿನಿಂದ ಆಗುವ ಕೋಟಿಗಟ್ಟಲೆ ಹಣದ ನಷ್ಟವನ್ನು ಕಳೆದುಕೊಳ್ಳಲು ಸಹಜವಾಗೇ ಯಾರೂ ಬಯಸುವುದಿಲ್ಲ.
ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಮದ್ಯಪಾನ ರದ್ದು ಒಂದು ಆದರ್ಶ ಅಷ್ಟೇ. ಮುಂದಿನ ‘ಹೆಂಡದ ಬದಲು ಬೀರು ಕುಡಿಯಿರಿ’ ಎಂಬ ಮಾತು ತುಂಬಾ ಕುತೂಹಲದ್ದಾಗಿದೆ. ಮದ್ಯಪಾನ ಸದ್ಯಕ್ಕೆ ರದ್ದಾಗದು ಎಂಬ ಅರಿವು ಈ ಮಾತಿನಲ್ಲಿದೆ. ಹೆಂಡವನ್ನು ಕುಡಿಯುವ ಜನತೆಗೆ ಮಾತ್ರವೇ ಈ ಮಾತನ್ನು ಹೇಳಲಾಗಿದೆ. ತಮಾಷೆಯೆಂದರೆ ಹೆಂಡವನ್ನು ಕುಡಿಯುವ ಜನ ಬೀರನ್ನು ಕುಡಿಯಲು ಆರ್ಥಿಕವಾಗಿ ಅಸಮರ್ಥರಾಗಿದ್ದಾರೆ. ಆದ್ದರಿಂದ ಈ ‘ಹೆಂಡದ ಬದಲು ಬೀರು ಕುಡಿಯಿರಿ’ ಮಾತಿನಂತೆ ದಲಿತ ಜನತೆ ನಡೆದುಕೊಳ್ಳುವುದಾದರೆ ಇವರಿಗೆ ಅಪರೂಪಕ್ಕೆ ಮಾತ್ರ ಬೀರು ಕುಡಿಯಲು ಸಾಧ್ಯವಾಗುತ್ತದೆ. ಈ ಮಾತಿನ ಒಳಗೆ ಹೆಂಡವನ್ನು ಕುಡಿದು ಹಾಳಾದ ಜನಾಂಗದ ಅಸಹಾಯಕ ಒಳನೋವಿದೆ.
“ಹೆಂಡವನ್ನು ಕುಡಿಯಿರಿ, ದನದ ಬಾಡನ್ನು ತಿನ್ನಿ, ಇದು ಅಂತರರಾಷ್ಟ್ರೀಯ ಆಹಾರ’’- ಇತ್ಯಾದಿಯಾಗಿ ಶ್ರೀ ಸಿದ್ಧಲಿಂಗಯ್ಯ ಹೇಳುವರು. ಇದಕ್ಕಾಗಿ ಕೀಳಾಗಿ ಭಾವಿಸಿಕೊಳ್ಳಬೇಕಾಗಿಲ್ಲ ಎಂದು ಇವರ ವಾದ. ಹೆಂಡ, ದನದ ಬಾಡನ್ನು ಕೇವಲ ಆಹಾರವೆಂಬಂತೆ ಭಾವಿಸಿ ಇವರು ಈ ಮಾತನ್ನು ಹೇಳುವರು. ದುರಂತವೆಂದರೆ- ಹೆಂಡ, ದನದ ಬಾಡು ನಮ್ಮ ಪಾಲಿಗೆ ಕೇವಲ ಆಹಾರ ಮಾತ್ರವಾಗಿಲ್ಲ. ಈ ಸಮಾಜದಲ್ಲಿ ಹೆಂಡ, ದನದ ಬಾಡಿನಲ್ಲಿ ಅವಮಾನ ಜೊತೆಗೂಡಿಸಲ್ಪಟ್ಟಿದೆ. ಹೆಂಡ ದನದ ಬಾಡು ಭಾರತದಲ್ಲಿ ಪ್ರತಿಷ್ಠಿತ ಹೋಟೆಲ್, ತಿಥಿ ಊಟ ಆಗುವವರೆಗೂ ಈ ಆಹಾರಕ್ಕೆ ಅಂಟಿಸಿರುವ ಅವಮಾನದಿಂದ ತಪ್ಪಿಸಿಕೊಳ್ಳುವುದು ಕಷ್ಟ.
ಹಾಗಾದರೆ ಏನು ಮಾಡೋಣ? ಹೆಂಡ ತಪ್ಪೇ? ದನದ ಬಾಡು ತಪ್ಪೇ? ಅದರಲ್ಲಿ ಏನು ತಪ್ಪಿದೆ? ಹೆಂಡ, ದನದ ಬಾಡಿನಲ್ಲಿ ಅಡಕವಾಗಿಸಿರುವ ಅವಮಾನ ತಪ್ಪು, ಹೆಂಡ ದನದ ಬಾಡಿನಲ್ಲಿ ಅಡಕವಾಗಿಸಿರುವ ಅವಮಾನದ ಅಂಶ ತೆಗೆದರೆ ಮಾತ್ರ ಇವೂ ಸಹಜ ‘ಆಹಾರ’ ಆಗುತ್ತವೆ. ಅಲ್ಲಿಯವರೆಗೂ ಏನು ಹೇಳೋಣ?- ‘ಹೆಂಡದ ಬದಲು ಬೀರು ಕುಡಿಯಿರಿ’
ಸೌಜನ್ಯ : ಅಭಿನವ ಪ್ರಕಾಶನ, ಬೆಂಗಳೂರು, 9448804905
ಇದನ್ನೂ ಓದಿ : ಸಿದ್ದಲಿಂಗಯ್ಯ ನುಡಿನಮನ : ‘ಪ್ರಖರ ಚಿಂತನೆ, ವಿಡಂಬನಾ ಪ್ರಜ್ಞೆ ಏಕಕಾಲಕ್ಕೆ ಸಿದ್ಧಿಸಿತ್ತು’
ಇದನ್ನೂ ಓದಿ : Literature : ಅಭಿಜ್ಞಾನ : ಭರ್ತೃಹರಿಗೆ ರೋಮಾಂಚನದಿಂದ ಕೂದಲು ನಿಮಿರೆದ್ದರೆ, ಬೌದ್ಧರಿಗೆ ಮಹಾ ಮುಜುಗರ