Sign In

By signing in or creating an account, you agree with Associated Broadcasting Company's Terms & Conditions and Privacy Policy.

New Novel : ಅಚ್ಚಿಗೂ ಮೊದಲು : ’ನಾಲ್ಕನೇ ಎಕರೆ’ ಬೆವರುಪ್ಪಿನ ಕಥೆ ಸದ್ಯದಲ್ಲೇ ನಿಮ್ಮ ಓದಿಗೆ

Nalago Ekaram : ‘ದಟ್ಟವಾದ ಗ್ರಾಮ್ಯ ಭಾಷೆಯೊಂದಿಗೆ, ತಿಳಿಹಾಸ್ಯ ಬೆರೆಸಿ ಹೇಳುವ ಶ್ರೀರಮಣರ ಶೈಲಿ ವಿಭಿನ್ನವಾದುದು. ಇದಲ್ಲದೆ ನಮ್ಮದೂ ರೈತಾಪಿ ಕುಟುಂಬವೇ ಆದ್ದರಿಂದ ಕಥೆಯಲ್ಲಿ ಬರುವ ಹಲವಾರು ವಿವರಗಳು ನನ್ನನ್ನು ಕಥೆಯ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದವು. ಹೀಗಿದ್ದೂ ನಾನಿದನ್ನು ಕನ್ನಡಕ್ಕೆ ಸಶಕ್ತವಾಗಿ ಅನುವಾದಿಸಬಲ್ಲೆನೆ ಎಂಬ ಭಯ ಅನುವಾದ ಮಾಡಿ ಮುಗಿಸುವವರೆಗೂ ನನ್ನನ್ನು ತೀವ್ರವಾಗಿ ಕಾಡುತ್ತಲೇ ಇತ್ತು.’ ಅಜಯ ವರ್ಮಾ ಅಲ್ಲೂರಿ

New Novel : ಅಚ್ಚಿಗೂ ಮೊದಲು : ’ನಾಲ್ಕನೇ ಎಕರೆ’ ಬೆವರುಪ್ಪಿನ ಕಥೆ ಸದ್ಯದಲ್ಲೇ ನಿಮ್ಮ ಓದಿಗೆ
ಲೇಖಕ, ಅನುವಾದಕ ಅಜಯ ವರ್ಮಾ ಅಲ್ಲೂರಿ
Follow us
ಶ್ರೀದೇವಿ ಕಳಸದ
|

Updated on:Jul 22, 2021 | 12:33 PM

ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ತೆಲುಗಿನ ಮುಖ್ಯ ಕಥೆಗಾರರಲ್ಲೊಬ್ಬರಾದ ಶ್ರೀರಮಣ ಅವರ ‘ನಾಲಗೋ ಎಕರಂ’ ನೀಳ್ಗತೆ 2019 ರಲ್ಲಿ ಪ್ರಕಟವಾಯಿತು. ಅದರ ಕನ್ನಡಾನುವಾದ ಸದ್ಯದಲ್ಲೇ ನಿಮ್ಮನ್ನು ತಲುಪಲಿದೆ. ಅನುವಾದಕ ಅಜಯ ವರ್ಮಾ ಅಲ್ಲೂರಿ ಮತ್ತು ಶ್ರೀ ರಮಣ ಅವರ ಮಾತುಗಳೊಂದಿಗೆ ಆಯ್ದ ಭಾಗ ನಿಮ್ಮ ಓದಿಗೆ.

*

ಕೃತಿ : ನಾಲ್ಕನೇ ಎಕರೆ (ನೀಳ್ಗತೆ) ತೆಲುಗು ಮೂಲ : ಶ್ರೀರಮಣ ಕನ್ನಡಕ್ಕೆ : ಅಜಯ ವರ್ಮಾ ಅಲ್ಲೂರಿ ಪುಟ : 112 ಬೆಲೆ : ರೂ. 100 ಮುಖಪುಟ ವಿನ್ಯಾಸ : ಶ್ವೇತಾ ಆಡುಕಳ ಪ್ರಕಾಶನ : ಛಂದ ಪುಸ್ತಕ *

ಗ್ರಾಮೀಣ ಪ್ರದೇಶದಲ್ಲಿ ಸಾಗುವ ಕಥೆಯಾದ್ದರಿಂದ ರೈತಾಪಿ ಜನರ ಬೆವರುಪ್ಪಿನ ಆಡುಮಾತನ್ನೇ ಇಲ್ಲಿ ಬಳಸಿದ್ದೇನೆ. ಇದು ಮೂರು ಪದರುಗಳಾಗಿ ಬಿಚ್ಚಿಕೊಳ್ಳುವ ಕಥೆ. ಗ್ರಾಮ್ಯ ಜೀವನ, ನಗರೀಕರಣ, ಈ ಎರಡರ ನಡುವೆ ಸಿಲುಕಿ ನಲುಗುತ್ತಿರುವ ಹಳೆ ಮತ್ತು ಹೊಸ ತಲೆಮಾರುಗಳು ಈ ಕಥೆಯಲ್ಲಿ ಕಾಣಸಿಗುತ್ತವೆ. ಈಗಿನ ಹುಡುಗರಿಗೆ ಹಾಲು – ಹೆಪ್ಪಿನ ಹನಿಯಿಂದ ಮೊಸರಾಗುವುದಕ್ಕೂ, ನಿಂಬೆಯ ರಸದಿಂದ ಒಡೆದುಹೋಗುವುದಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ನಮ್ಮ ಹಳ್ಳಿ ಬಿಟ್ಟು ಐವತ್ತು ವರ್ಷ ದಾಟಿದರೂ, ಅಲ್ಲಿಗೆ ಹೋದಾಗಲೆಲ್ಲಾ ನಾನಿನ್ನೂ ಅಲ್ಲಿಯ ಬೆಳೆಕುಪ್ಪೆ, ದನದ ಕೊಟ್ಟಿಗೆ, ಹುಲ್ಲು ಬಣವೆ, ಎತ್ತಿನಗಾಡಿಗಳ ಸುತ್ತಲೇ ತಿರುಗುತ್ತಿರುತ್ತೇನೆ. ದನಕಾಯುವ ಹುಡುಗರ ಆಟೋಟಗಳು, ಅವರು ಹಾಯಾಗಿ ಅಲೆಯುತ್ತಾ ಹೆಣೆದು ಹಾಡುವ ಪೋಲಿ ಹಾಡುಗಳು ನನ್ನ ಮನದಲ್ಲಿ ಮಾಸದೆ ಈಗಲೂ ಹಸಿರಾಗಿವೆ. ಒಂದು ಕಾಲಘಟ್ಟದ ಹಳ್ಳಿಗಳ ಗತವೈಭವದಲ್ಲಿನ ಒಂದು ಪಾರ್ಶ್ವವನ್ನು ಸ್ವಲ್ಪಾದರೂ ಪರಿಚಯಿಸಬೇಕೆಂಬುದು ನನ್ನ ಬಯಕೆ. ಓದುಗರು ಸಹೃದಯ ಭಾವದಿಂದ ಈ ಕಥೆಯನ್ನು ಬರಮಾಡಿಕೊಳ್ಳುತ್ತಾರೆ ಅಂದುಕೊಂಡಿದ್ದೇನೆ. ಶ್ರೀರಮಣ, ತೆಲುಗು ಕಥೆಗಾರರು

*

ಮೂರು-ನಾಲ್ಕು ತಿಂಗಳಿನ ಹಿಂದೆ ವಸುಧೇಂದ್ರರು ಈ ಪುಸ್ತಕದ ಬಗ್ಗೆ ಹೇಳಿ, ಅದನ್ನು ‘ಛಂದ ಪುಸ್ತಕ’ಕ್ಕಾಗಿ ಅನುವಾದಿಸಲು ಸಾಧ್ಯವೇ ಎಂದು ಕೇಳಿದಾಗ, ನನಗೆ ಉತ್ತರ ನೀಡಲು ಅನೇಕ ದಿನಗಳೇ ಹಿಡಿಯಿತು. ಈ ಹಿಂದೆ ಅವರೇ ಕನ್ನಡೀಕರಿಸಿದ ಶ್ರೀರಮಣರ ‘ಮಿಥುನ’ ಕೃತಿಯು ಕನ್ನಡದಲ್ಲಿ ಆರೇಳು ಮುದ್ರಣಗಳನ್ನು ಕಂಡಿತಲ್ಲದೆ, ನಾಲ್ಕು ಬೇರೆ ಬೇರೆ ತಂಡಗಳಿಂದ ನಾಟಕವಾಗಿಯೂ ಪ್ರದರ್ಶನಗೊಂಡು ದೊಡ್ಡ ಯಶಸ್ಸನ್ನೇ ಪಡೆಯಿತು. ಅಂಥಾ ‘ಮಿಥುನ’ದ ಕಥೆಗಳೆದರು ಈ ನೀಳ್ಗತೆಯು ನನಗೆ ಸ್ವಲ್ಪ ಸಪ್ಪೆಯಾಗಿ ತೋರಿತಾದರೂ ಕಥೆಯ ಭಾಷೆ ನನ್ನನ್ನು ಬಹುವಾಗಿ ಸೆಳೆಯಿತು. ದಟ್ಟವಾದ ಗ್ರಾಮ್ಯ ಭಾಷೆಯೊಂದಿಗೆ, ತಿಳಿಹಾಸ್ಯ ಬೆರೆಸಿ ಹೇಳುವ ಶ್ರೀರಮಣರ ಶೈಲಿ ವಿಭಿನ್ನವಾದುದು. ಇದಲ್ಲದೆ ನಮ್ಮದೂ ರೈತಾಪಿ ಕುಟುಂಬವೇ ಆದ್ದರಿಂದ ಕಥೆಯಲ್ಲಿ ಬರುವ ಹಲವಾರು ವಿವರಗಳು ನನ್ನನ್ನು ಕಥೆಯ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದವು. ಹೀಗಿದ್ದೂ ನಾನಿದನ್ನು ಕನ್ನಡಕ್ಕೆ ಸಶಕ್ತವಾಗಿ ಅನುವಾದಿಸಬಲ್ಲೆನೆ ಎಂಬ ಭಯ ಅನುವಾದ ಮಾಡಿ ಮುಗಿಸುವವರೆಗೂ ನನ್ನನ್ನು ತೀವ್ರವಾಗಿ ಕಾಡುತ್ತಲೇಯಿತ್ತು. ಭಯಕ್ಕೆ ಕಾರಣ ಈ ಕೃತಿಯ ಅನುವಾದಾತೀತ ಅಂಶಗಳು. ಯಾವುದೇ ಅನುವಾದಕ ಭಾಷಿಕ ಅನುವಾದಾತೀತತೆ ಹಾಗೂ ಸಾಂಸ್ಕೃತಿಕ ಅನುವಾದಾತೀತತೆಗಳ ವಿರುದ್ಧ ಸೆಣಸಾಡಲೇಬೇಕು. ಈ ಸೆಣಸಾಟ ಕೃತಿಯಿಂದ ಕೃತಿಗೆ, ಅನುವಾದಕನಿಂದ ಅನುವಾದಕನಿಗೆ ಬೇರೆ-ಬೇರೆಯೇ ಆಗಿರುವುದು. ಈ ಅನುವಾದಾತೀತತೆಯನ್ನು ಹಂತಹಂತವಾಗಿ ಜಯಿಸುತ್ತಾ ಹೋದಾಗ ಮನಸ್ಸು ಹಗುರಾಗತೊಡಗಿತು. ಅಜಯ ವರ್ಮಾ ಅಲ್ಲೂರಿ, ಲೇಖಕರು, ಅನುವಾದಕರು.

achchigoo modalu ajay varma alluri

ತೆಲುಗು ಕಥೆಗಾರ ಶ್ರೀ ರಮಣ ಮತ್ತು ಛಂದ ಪುಸ್ತಕದಿಂದ ಅನುವಾದಿತಗೊಂಡ ಅವರ ಕಥಾಸಂಕಲನ ‘ಮಿಥುನ’

*

(‘ನಾಲ್ಕನೇ ಎಕರೆ’ಯಿಂದ ಆಯ್ದ ಭಾಗ)

ಪೆದಕಾಪು ಅವರ ಅಂಗಳದಲ್ಲಿ ದೊಡ್ಡದೊಂದು ಮದರಂಗಿಯ ಪೊದೆಯಿತ್ತು. ವಲ್ಲಿಗೆ ಬೇಕಾದಾಗಲೆಲ್ಲಾ ಮದರಂಗಿಯ ಸಲುವಾಗಿ ನಾವಲ್ಲಿಗೆ ಹೋಗುತ್ತಿದ್ದೆವು.

‘ತಡ್ರಿ… ಅದ್ಕ ಮುಳ್ಳಿರ್ತಾವು, ನಾವಾ ಕೋಯ್ಸಿ ಕಳಸ್ತೀನಿ’ ಎಂದು ಪೆದಕಾಪು ದಂಪತಿ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದ್ದರು.

‘ಮುಳ್ಳು ಚುಚ್ಕೋಳ್ಳಾರ್ದ ಮದರಂಗಿ ಹಚ್ಚಿದ ಕೈ ಕೆಂಪ್ಗಾಗಲ್ಲ’ ಎನ್ನುತ್ತಾ ನಾವು ಮದರಂಗಿ ಕೊಯ್ಯುವ ಕೆಲಸಕ್ಕೆ ಬೀಳುತ್ತಿದ್ದೆವು. ಅವರೂ ಬಂದು ನಾಲ್ಕು ಕೈ ಜೋಡಿಸುತ್ತಿದ್ದರು. ಮೊನ್ನೆಯೊಂದು ಸಲ ಮದರಂಗಿ ಎಲೆಗಳನ್ನ ಬಿಡಿಸುತ್ತಾ ಹಳೆಯ ಸಂಗತಿಗಳನ್ನು ಅವರ ಬಾಯಿಂದ ಹೇಳಿಸಿಕೊಂಡು ಖುಷಿಪಟ್ಟೆವು.

ಈ ಸಲ ನಾನು ವಿಷಯ ಬದಲಾಯಿಸಿ, ‘ಅಪ್ಪ ಭಾಳ ಹೇಳ್ತಿರ್ತಾರ – ನಮ್ ಪೆದಕಾಪು ಕೊರಳೆತ್ತಿ ಪದಾ ಹಾಡೋದು ನೀವು ಕಿವಿಯಾರೆ ಕೇಳಲೇಬೇಕು ಅಂತ. ನಮಗೋಸ್ಕರ ಒಂದು ಹಾಡೋ ಇಲ್ಲಾ ಪದಾನೋ ಹಾಡಬಾರ್ದಾ?’ ಎಂದೆ ಸಲಿಗೆಯಿಂದ.

‘ಇಲ್ಲ ಅಂತ ಯಾಕನ್ನಲಿ ಸ್ವಾಮ್ಯಾರ… ಆದ್ರ ಇಲ್ಲಿ ಹೆಂಗ ಹಾಡ್ಲಪ್ಪ? ಹಾಡಾಕ ಹೊಲ ಕಣಿಮಿ ಇರ್ಬೇಕು. ನಮ್ ದನೀನ ಮಾರ್ದನಿಸಾಕ ಸುತ್ತಾ ತಾಳೀಮರದ ಸಾಲು ಇರ್ಬೇಕು. ಕೈಯ್ಯಾಗ ಹಗ್ಗಾ, ಬಡಿಗೀ ಇರ್ಬೇಕು. ನಡುನಡುವಾ ‘ಛೋ ಛೋ…. ಹೈ ಹೈ’ ಅಂತಾ ಎತ್ತುಗೊಳನ್ನ ಹದ್ದಿನಾಗ ಇಡ್ತಾ, ಅವು ಮಾತು ಕೇಳದಿದ್ರ ಯಾಡು ಕೆಟ್ಟು ಬೈಗುಳ ಬೈತಾ – ಆಗ ‘ಚೆಲ್ಲಿಯೋ ಚೆಲ್ಲಕೋ…’ ಅಂತ ಹಾಡು ಎತ್ತಿಕೊಂಡ್ರ ಅದು ಮಾತು! ಆಕಾಶಾ ಉದಿರಿ ಬೀಳುವಂಗ್ ಇರಬೇಕು.’

ಆ ಮಾತುಗಳಿಗೆ ವಲ್ಲಿ ಗಲಗಲನೆ ನಕ್ಕಳು.

ಪೆದಕಾಪು ಅವರು ಉತ್ಸಾಹದಿಂದ ವಲ್ಲಿಗೆ ‘ನಿಮ್ ಮಾವೋರಿಗಿ ‘ರಾಧೆಯ ರಮಿಸುತಾನೋ ಮಾಧವ, ಗೋಪಲದೇವ ರಾಧೆಯ ರಮಿಸುತಾನೋ…’ ಹಾಡಂದ್ರ ಬಾಳ ಇಷ್ಟ. ಆ ಹಾಡಿನ ಸಲ್ವಾಗಿ ಹೊಲಕ್ಕೂನೂ ಬಂದು ನನ್ನಿಂದ ಹಾಡಿಸಿ ತಾವು ಕುಣ್ಕೋತಾ ಕೇಳ್ತಿದ್ರು’ – ಎಂದು ತನ್ಮಯತೆಯಿಂದ ಹೇಳಿದರು.

ತಂಪಾದ ಹೊತ್ತಿನಲ್ಲಿ ಆ ಮಾತುಗಳಿಂದ ನಮ್ಮ ಮನಸ್ಸುಗಳು ತುಂಬಿಬಂದವು. ವಲ್ಲೀ ನಡುವಿಗೆ ಸುತ್ತಿಕೊಂಡ ಮೇಲ್ಸೆರಗು ಮದರಂಗಿಯಿಂದ ತುಂಬಿಕೊಂಡಿತು.

ನಾವು ಹೊರಡುತ್ತಿದ್ದಾಗ ಪೆದಕಾಪಮ್ಮ ವಲ್ಲಿಗೆ ಕುಂಕುಮ ಹಚ್ಚಿದರು. ಸಣ್ಣ ದುಂಡುಮಲ್ಲಿಗೆಯೊಂದನ್ನು ಕೊಡುತ್ತಾ, ‘ಮಗಳಾ! ರುಬ್ಬೂವಾಗ ಹೆಬ್ಬಳ್ಳಿನಷ್ಟು ‘ಅಳಂಬು’ ಹಾಕೀಯಂದ್ರ ಬೆಳಕರಿಯೋ ಹೊತ್ಗಿ ನಿಮ್ ಅತ್ತೀ ಸೊಸ್ಯಾರ ಕೈ ಹವಳದಂಗ ಕೆಂಪಾಕ್ಕಾವು’ ಎಂದರು ನಗುತ್ತಾ.

ವಲ್ಲಿ ತನಗೆ ಗೊತ್ತೆಂಬಂತೆ ತಲೆಯಾಡಿಸಿದಳು.

ಹೋಗುತ್ತಿದ್ದ ವಲ್ಲಿ ನಿಂತು, ಏನೋ ನೆನಪಾದಂತೆ, ‘ಹುರುಳಿಕಾಳಿನ ಸಾರು ಬೇಸಿರ್ತೈತಂತಲ್ಲ, ಹೆಂಗ ಮಾಡ್ತಾರೋ…’ ಎಂದು ರಾಗವೆಳೆದಳು.

ಪೆದಕಾಪಮ್ಮ ಬೆಚ್ಚಿಬಿದ್ದು ಪೆದಕಾಪು ಅವರತ್ತ ನೋಡಿದರು.

‘ಆ ಕಾಳಿನ್ ಹೆಸ್ರು ನಮ್ ಮನ್ಯಾಗ ಕೇಳಿಬರಬಾರ್ದು’ – ಎಂದು ಪೆದಕಾಪು ಸ್ಪಷ್ಟವಾಗಿ ಹೇಳಿದರು. ನಾನೂ, ವಲ್ಲಿಯೂ ತಪ್ಪುಮಾಡಿದವರಂತೆ ಅವರತ್ತ ನೋಡಿದೆವು. ಅದನ್ನು ಗಮನಿಸಿ-

‘ಯಾಕಂತ ಹೇಳ್ತೀನಿ. ನಮ್ ಅವ್ವನ ಮಾತಿನಾಗೇ ಹೇಳ್ತೀನಿ. ಯಾಕಂದ್ರ ದಿನಾಲೂ ಒಂದ್ ಸಲ ಆಕಿ ಅದರ ಬಗ್ಗಿ ಬಾಯಿ ಬಡ್ಕೋತಿದ್ಲು. ಕೇಳ್ರಿ…

‘ನನ್ ಚೊಚ್ಚಲ ಮಗ… ನಿನ್ನಣ್ಣ… ಹೆಂಗಿರ್ತಿದ್ದ… ರಾಜನಂಗ! ಆ ವರ್ಷಾ ಗಾಳೀಮಳಿ ಎಲ್ಲಾ ಬೇಸಿತ್ತು. ಬಗಡೀ ಹೊಲ್ದಾಗ ಹುಳ್ಳೀಕಾಳು ಬೇಸು ಬೆಳ್ದಿತ್ತು. ಕಣದಾಗ ದೊಡ್ಡದೊಂದು ರಾಶೀ ಮಾಡಿದ್ರು. ನಾಕು ವರ್ಷದ ಕೂಸು ಕಣದಾಗ ಹೋರಿ ಕರದ ಜೊತಿ ಆಡ್ಕಂತ್ತಿತ್ತು. ನಿಮಪ್ಪ ಮುದ್ದು ಮಾಡ್ತಾ ಆತ್ನನ್ನ ಎತ್ತಿಕಂಡು ರಾಶೀಮ್ಯಾಗ ಕೂಡ್ಸಿದ್ದ. ತನ್ ಕೆಲಸದಾಗ ತಾನಿದ್ದುಕಂಡು, ಸಲ್ಪ ಹೊತ್ತಿನ ಮ್ಯಾಕ ನೋಡಿದ್ರಾ ಕೂಸು ಕಾಣ್ಲಿಲ್ಲ. ಸುತ್ತಮುತ್ತ ಎಲ್ಲಿ ನೋಡುದ್ರೂ ಇಲ್ಲೇ ಇಲ್ಲ. ರಾಶೀಮ್ಯಾಕ ಆಡ್ತಾ ಆಡ್ತಾ ನನ್ ಕೂಸು ಹುಳ್ಳ್ಯಾಗ ಹೂತ್ಕಂಬುಡ್ತು. ಹುಳ್ಳೀಕಾಳು ಬಾಳ ಹಗುರಿರ್ತಾವಲ್ಲ. ಕಾಲ್ಕಿತ್ತಿ ಕಾಲಿಡುವಾಗ ಕೆಸರಿನ ಹೊಂಡದಾಗ ಹೆಂಗ ಹೂತೋಕ್ಕಾರೋ ಹಂಗಾ ರಾಶ್ಯಾಗ ಹೂತೋಗ್ಯಾನ. ಎಲ್ಲಾ ಕಡಿ ಹುಡ್ಕಿದ್ವಿ. ಕೊನಿಗಿ ಹುಳ್ಳೀ ರಾಶ್ಯಾಗ ಉಸುರಿಲ್ದ ಹುಡುಗ ಸಿಕ್ತು. ಇವತ್ತಿಂದ ಹುಳ್ಳೀಕಾಳು ನನ್ ಮನೀಗಿ ಬರಬಾರ್ದು ಅಂತ ನಿಮಪ್ಪ ಆ ರಾಶೀನ ಅಲ್ಲೇ ಬಿಟ್ಬಿಟ್ಟ. ನಾನಾ ಕೈಯಾರ ನನ್ ಮಗನ್ನ ಹೂತಾಕೀನಿ ಅಂತ ನಿಮಪ್ಪ ಬಿಕ್ಕಿಬಿಕ್ಕಿ ಅತ್ತಿದ್ದ… ಬ್ಯಾಡ ಮಗನ. ಅವು ನಮಗ ಸರಿ ಬಂದಿಲ್ಲ, ಬ್ಯಾಡ ಮಗನ…’

ಅಂತ ನಮವ್ವ ಅದನ್ನಾ ನೆನ್ಸಿಕಂಡು ನೆನ್ಸಿಕಂಡು ಅಳತಿದ್ಳು.

ಇದ್ದಕ್ಕಿದ್ದಂತೆ ವಾತಾವರಣ ಬದಲಾಯಿತು. ಎಲ್ಲರ ಕಣ್ಣಲ್ಲೂ ಕಂಬನಿ. ಒದ್ದೆಕಣ್ಣುಗಳಿಂದಲೇ ಹೋಗಿ ಬರುತ್ತೇವೆಂದು ತಿಳಿಸಿ ಅಲ್ಲಿಂದ ಹೊರಟುಬಂದೆವು.

‘ಹಂಗ ಎಲ್ಲಾರಾ ಆಗತ್ತಾ?’ ಎಂದು ದಾರಿಯಲ್ಲಿ ಸಂದೇಹದಿಂದ ಕೇಳಿದಳು ವಲ್ಲಿ.

‘ಹಾ… ಆಗುತ್ತ. ಹುರುಳಿಕಾಳು ಬಾಳ ಹಗೂರಿರ್ತಾವ. ರಾಶಿ ಹತ್ತಿ ಕೂತೋವ್ರು ಹಾಗೇ ಹೂತುಹೋಕ್ಕಾರ. ಬೇಕಾದ್ರ ಒಂದು ದೊಡ್ಡ ಬಟ್ಟಲ ತುಂಬಾ ಹುರುಳಿಕಾಳು ಹಾಕಿ ಅದರಾಗ ಹಲ್ಲೀನ ಬಿಟ್ಟು ನೋಡು. ನಾನು ಎಷ್ಟೋ ಸಲ ಕೇಳೀನಿ. ಇದೇನೂ ವಿಚಿತ್ರ ಅಲ್ಲ ಬುಡು’ ಎಂದು ಹೇಳಿದೆ.

ಸಂಜೆಗತ್ತಲಲ್ಲಿ ಕೊಕ್ಕರೆಗಳು ಗೂಡು ಸೇರುತ್ತಿದ್ದವು. ರೆಂಬೆಕೊಂಬೆಗಳ ಮೇಲಿನ ಗೂಡುಗಳಲ್ಲಿ ಹಕ್ಕಿಗಳ ಕಲರವ ಕೇಳಿಬರುತ್ತಿತ್ತು. ರಾಜಗೋಪುರದ ಬಳಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಅಪ್ಪ ನಮಗಾಗಿಯೇ ಕಾದು ನಿಂತಿದ್ದರು. ವಲ್ಲಿಯ ಕಣ್ಣಲ್ಲಿಯ ಖುಷಿಯನ್ನೂ, ಉಡಿಯಲ್ಲಿನ ಮದರಂಗಿಯನ್ನೂ ಗಮನಿಸಿ ‘ನೋಡು ತಾಯಿ! ಮದರಂಗಿ ಎಲಿಗಳನ್ನ ನಮಗೆ ನಾವೇ ಬಿಡಿಸ್ಕಾಬೇಕು. ಇಟ್ಟುಗೊಳ್ಳೋ ಕೈಗಳೇ ರುಬ್ಬಿಕಾಬೇಕು. ನಾಲ್ಕು ಹೆಂಗಸರ ಜೊತಿ ಸೇರಿಕೊಂಡು ಹಚ್ಕಾಬೇಕು. ಹಾಲಿನಂತಾ ಬೆಳದಿಂಗಳದಾಗ ಅದೊಂದು ಉತ್ಸವದಂಗ ಸಾಗಿದ್ರಾ, ಜಗುಲಿ ಮೇಲಿನ ಹರಟೇನೂ ರಂಗೇರಿ, ಕೈಗಳೂ ಕೆಂಪಗಾಗ್ತಾವ’ ಎನ್ನುತ್ತಾ ಅಪ್ಪ ನಮ್ಮನ್ನು ಮನೆಯತ್ತ ನಡೆಸಿದರು. ಅಮ್ಮ ಎದುರುಬಂದು ಮದರಂಗಿಯನ್ನು ತೆಗೆದುಕೊಂಡು ಖುಷಿಗೊಂಡಳು.

achchigoo modalu ajay varma alluri

ಇಲ್ಲಸ್ಟ್ರೇಷನ್ : ಸೃಜನ್

ಪರಿಚಯ : ಸೀಮಾಂಧ್ರದ ತೆನಾಲಿಯವರಾದ ಶ್ರೀರಮಣರು 1952ರಲ್ಲಿ ಜನಿಸಿದ್ದಾರೆ. ತೆಲುಗಿನ ‘ಆಂಧ್ರಜ್ಯೋತಿ’ಯ ‘ನವ್ಯ’ ವಾರಪತ್ರಿಕೆಗೆ ಸಾಕಷ್ಟು ವರ್ಷಗಳ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ಮುಂದೆ ದೃಶ್ಯಮಾಧ್ಯಮದ ಕೆಲವು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತೆಲುಗಿನಲ್ಲಿ ಅಂಕಣ ಬರಹಗಳನ್ನು ಬರೆಯುತ್ತಾ ಪ್ರಸಿದ್ಧರಾದ ಇವರು, ಹತ್ತಕ್ಕೂ ಹೆಚ್ಚು ಅಂಕಣ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಕಳೆದ ಮೂರು-ನಾಲ್ಕು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲೂ ಬರಹಗಾರರಾಗಿ ಸೈ ಎನಿಸಿಕೊಂಡಿದ್ದಾರೆ. ಬರೆದ ಕೆಲವೇ ಕಥೆಗಳ ಪೈಕಿ ‘ಮಿಥುನಂ’ ಕಥೆ ತುಂಬಾ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ದೆಹಲಿಯ ‘ಕಥಾ’ ಪುರಸ್ಕಾರವನ್ನು ಪೆಡದುಕೊಂಡ ಈ ಕಥೆ ಕನ್ನಡಕ್ಕೂ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ‘ಶ್ರೀರಮಣ ಪೇರಡೀಲು’, ‘ವೆಂಕಟ ಸತ್ಯ ಸ್ಟಾಲಿನ್’, ‘ಸಿಂಹಾಚಲಂ ಸಂಪೆಂಗಲು’ ಶ್ರೀರಮಣರ ಕೆಲವು ಪ್ರಮುಖ ಕೃತಿಗಳು.

ಪರಿಚಯ : ಅಜಯ್ ವರ್ಮಾ ಅಲ್ಲೂರಿ ರಾಯಚೂರು ಜಿಲ್ಲೆಯ ಸಿಂಧನೂರಿನವರು. 1996ರಲ್ಲಿ ಜನನ. ಧಾರವಾಡದ ಜೆ.ಎಸ್‌.ಎಸ್ ಕಾಲೇಜಿನಲ್ಲಿ ವಿಜ್ಞಾನ ಪದವಿ, ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಭಾಷಾಂತರದಲ್ಲಿ ಡಿಪ್ಲೊಮಾ. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದರೂ ಸಾಹಿತ್ಯದಲ್ಲಿನ ಅತೀವ ಆಸಕ್ತಿಯಿಂದಾಗಿ ಸದ್ಯ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ‘ಗಗನಸಿಂಧು’ (ಕಾವ್ಯ); ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’ (ಅನುವಾದ) ಇದುವರೆಗಿನ ಪ್ರಕಟಿತ ಕೃತಿಗಳು. ತಮ್ಮ ಶೈಕ್ಷಣಿಕ ಹಾಗು ಸಾಹಿತ್ಯಿಕ ಸಾಧನೆಗಳಿಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ಡಿ.ಸಿ.ಪಾವಟೆ ಬಹುಮಾನ, ಕ್ರೈಸ್ಟ್ ವಿಶ್ವವಿದ್ಯಾಲಯದ ದ.ರಾ.ಬೇಂದ್ರೆ ಕಾವ್ಯ ಬಹುಮಾನ, ಅ.ನ.ಕೃ ಕಥಾ ಬಹುಮಾನ, ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತೆಲುಗು ಮಾತೃಭಾಷೆಯವರಾದ ಅಜಯ್ ಅವರಿಗೆ ಇತರೆ ಭಾರತೀಯ ಭಾಷೆಗಳನ್ನು ಕಲಿಯುವುದು ಪ್ರಧಾನ ಆಸಕ್ತಿ.

*

ಈ ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 9945939436

ಇದನ್ನೂ ಓದಿ : Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ

Published On - 12:19 pm, Thu, 22 July 21

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ