Literature: ಅಚ್ಚಿಗೂ ಮೊದಲು; ಕರ್ಕಿ ಕೃಷ್ಣಮೂರ್ತಿಯವರ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಕೃತಿ ಜೂನ್ 26ಕ್ಕೆ ಬಿಡುಗಡೆ

|

Updated on: Jun 24, 2022 | 3:54 PM

Book Release : ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ. ಸತ್ಯಶೋಧನೆಯ ಹಾದಿಯಲ್ಲಿ ನಮ್ಮ ಪೂರ್ವಿಕರು ಕಂಡುಕೊಂಡಿದ್ದ ‘ನೇತಿ, ನೇತಿ’ ತತ್ವ ಪ್ರಯೋಗವನ್ನು; ನಾವಿಂದು, ‘ಇದಲ್ಲ, ಇದೂ ಅಲ್ಲ’ ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ.

Literature: ಅಚ್ಚಿಗೂ ಮೊದಲು; ಕರ್ಕಿ ಕೃಷ್ಣಮೂರ್ತಿಯವರ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಕೃತಿ ಜೂನ್ 26ಕ್ಕೆ ಬಿಡುಗಡೆ
ಕಥೆಗಾರ ಕರ್ಕಿ ಕೃಷ್ಣಮೂರ್ತಿ
Follow us on

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ:  ದಿಬ್ಬದಿಂದ ಹತ್ತಿರ ಆಗಸಕ್ಕೆ (ಕಥಾಸಂಕಲನ)
ಲೇಖಕಿ: ಕರ್ಕಿ ಕೃಷ್ಣಮೂರ್ತಿ
ಪುಟ: 125
ಬೆಲೆ: ರೂ. 170
ಮುಖಪುಟ ವಿನ್ಯಾಸ : ಹಾದಿಮನಿ ಟಿ. ಎಫ್.
ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು

ತನಗೆ ಬೇಕಿರುವುದೇನೆಂಬ ಸ್ಪಷ್ಟ ಅರಿವಿಲ್ಲದೇ ಅದಕ್ಕಾಗಿ ಅರಸುವುದು ಆಧುನಿಕ ಮನುಷ್ಯನ ಲಕ್ಷಣವಾಗಿದೆ. ಸತ್ಯಶೋಧನೆಯ ಹಾದಿಯಲ್ಲಿ ನಮ್ಮ ಪೂರ್ವಿಕರು ಕಂಡುಕೊಂಡಿದ್ದ “ನೇತಿ, ನೇತಿ” ಎನ್ನುವ ತತ್ವ ಪ್ರಯೋಗವನ್ನು; ನಾವಿಂದು, “ಇದಲ್ಲ, ಇದೂ ಅಲ್ಲ” ಅನ್ನುತ್ತ ನಮ್ಮ ಸುಖದ ಅನ್ವೇಷಣೆಗೆ ಅಳವಡಿಸಿಕೊಂಡಿದ್ದೇವೆ. ಇರದಿರುವುದೇನೆಂದು ಗೊತ್ತಿಲ್ಲದೇ ತುಡಿಯುವ ಈ ಸ್ಥಿತಿ ವಿಭಿನ್ನ ಹಾಗೂ ತೀಕ್ಷ್ಣ. ಸಾಲದೆಂಬಂತೆ ಜಾಗತೀಕರಣ, ನಗರವಾಸ, ಕಾರ್ಪೋರೇಟ್ ವ್ಯವಸ್ಥೆ ಇತ್ಯಾದಿಗಳು ಆ ತುಡಿತದ ಕಾವಿಗೆ ಉರುವಲಾಗಿವೆ ಇಂದು. ಸಪ್ತಸಾಗರದಾಚೆಯ ದೇಶವೂ ನಮ್ಮ ನೆರೆಮನೆಯಷ್ಟೇ ಹತ್ತಿರವೆನಿಸಬಹುದಾದ ಕಾಲಘಟ್ಟದಲ್ಲೂ, ಈ ವಿದೇಶದ ಆಕರ್ಷಣೆ ನಮ್ಮಲ್ಲಿನ್ನೂ ಮಾಸಿಲ್ಲ. ಇದೂ ಆ ಅರಸುವಿಕೆಯ ಒಂದು ಭಾಗವೇ ಆಗಿರಬಹುದು. ಅಂತಹುದೇ ಹುಡುಕಾಟದ, ವಿದೇಶೀ ನೆಲದ ಕಥೆಗಳೇ ಹೆಚ್ಚಿರುವ ಈ ಸಂಗ್ರಹಕ್ಕೆ ‘ದಿಬ್ಬದಿಂದ ಹತ್ತಿರ ಆಗಸಕ್ಕೆ’ ಎನ್ನುವ ಹೆಸರು ಸೂಕ್ತ ಎನಿಸಿತು ನನಗೆ.
ಕರ್ಕಿ ಕೃಷ್ಣಮೂರ್ತಿ, ಕಥೆಗಾರ

*

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ದಿಸ್ ಈಸ್ ಗ್ರೇಟ್ ವಾಲ್ ಆಫ್ ಚೈನಾ

ಪಲ್ಲವಿ ಯಾವತ್ತೂ ಹಾಗೇನೇ. ಪೇಟೆಗೆ ಹೋದರೆ ಫುಟ್‌ಪಾತ್ ಪಕ್ಕದ ಸಾಲಂಗಡಿಯ ಬಗೆಬಗೆಯ ಜುಮುಕಿ, ಸರ, ಬಳೆಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿಂತುಬಿಡುತ್ತಾಳೆ. ಯಾವುದಾದರೂ ಅಂಗಡಿಯಲ್ಲಿ ಆಕೆ ಅದನ್ನು ಕೊಳ್ಳಹೋದರೆ, `ಅವೆಲ್ಲಾ ಬ್ಯಾಗಡೆ ಯಾಕೆ ಖರೀದಿಸ್ತೀಯಾ, ಬಂಗಾರದ ನೆಕ್‌ಲೆಸ್ಸೇ ನಿನಗೆ ಕೊಡಿಸುತ್ತೇನೆ’ ಅನ್ನುತ್ತಾನೆ ಸದಾಶಿವ. ಆಕೆ ಕಾಮತ್ ಹೊಟೇಲಿನಲ್ಲಿ ಕಾಫಿ ಕುಡಿಯೋಣವೆಂದರೆ, ಈತ `ಮುಂದಿನ ವೀಕೆಂಡ್ ಪ್ಲಾನ್ ಮಾಡಿ ತಾಜ್‌ಗೇ ಹೋಗೋಣ. ಅದ್ಯಾಕೆ ಈ ಪುಟಗೋಸಿ ಕಾಮತ್ತು?’ ಅಂತಾನೆ. ಇದು ಆ ಗಳಿಗೆಯಲ್ಲಿ ತಪ್ಪಿಸಿಕೊಳ್ಳುವ ಜಾಣತನ ವೇನೂ ಅಲ್ಲ ಆತನದು. ಈ ಸಣ್ಣಪುಟ್ಟದ್ದೆಲ್ಲಾ ಯಾಕೆ, ಕೈಹಾಕಿದರೆ ದೊಡ್ಡದ್ದಕ್ಕೇ ಹಾಕಬೇಕು ಎಂಬುದು ಅವನ ಸಿದ್ಧಾಂತ. ಎಲ್ಲವೂ ಗ್ರಾಂಡ್ ಆಗಿಯೇ ಇರಬೇಕು. ಲಾರ್ಜ್ ಸ್ಕೇಲು, ಕಿಂಗ್ ಸೈಜು. ಬ್ಯಾಟು ಬೀಸಿದರೆ ಚಂಡು ಬೌಂಡರಿಯ ಹೊರಗೇ ಬೀಳಬೇಕು. ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಮಾಡುತ್ತಾನೆ ಆತ. ಆದರೆ ಪ್ರತಿ ಬಾರಿಯೂ ಆದರ ತಯಾರಿಗೇ ಶ್ರಮ, ಸಮಯ ವ್ಯಯವಾಗುತ್ತಿತ್ತೇ ವಿನಾ ಅದು ಸಫಲವಾದ ದಾಖಲೆಗಳು ಕಮ್ಮಿ.

ಪಲ್ಲವಿಗೆ ನೆಕ್ಲೆಸ್ಸು ಕೊಡಿಸುತ್ತೇನೆ ಎಂದು ಹೇಳಿದ ಮಾರನೇ ದಿನವೇ ಅದ್ಯಾವುದೋ ಜುವೆಲರ್ಸಿಗೆ ಹೋಗಿ ಕಂತಿನಲ್ಲಿ ದುಡ್ಡು ಕಟ್ಟುವ ಸ್ಕೀಮು ಮಾಡಿಸಿ ಬಂದಿದ್ದ. ಹದಿನೆಂಟು ತಿಂಗಳ ನಂತರ ಕಟ್ಟಿದ ಹಣಕ್ಕೆ ಚಂದದೊಂದು ಕುತ್ತಿಗೆಯ ಸರ ಬರುವುದಿತ್ತು. ಆದರೆ ಮೂರೇ ತಿಂಗಳಲ್ಲಿ ಆ ಚಿನ್ನದ ಅಂಗಡಿಯವ ಬಾಗಿಲು ಮುಚ್ಚಿ, ನಾಪತ್ತೆ ಕೇಸ್ ದಾಖಲಾಗಿ, ತಾನು ಕಟ್ಟಿದ ಹಣದ ವಾಪಸಾತಿಗಾಗಿ ಈಗಲೂ ಅಲೆದಾಡುತ್ತಿದ್ದಾನೆ ಸದಾಶಿವ. ಕಾಶ್ಮೀರಕ್ಕೆ ಟ್ರಿಪ್ಪಿಗೆ ಹೋಗುವ ವಿಷಯದಲ್ಲೂ ಹಾಗೇ. ಎರಡು ಮೂರು ಬಾರಿ ಪ್ಲಾನ್ ಮಾಡಿ ಅದು-ಇದು ಕಾರಣಕ್ಕೆ ಮುಂದೂಡಿ, ಕೊನೆಗೂ ಒಮ್ಮೆ ಹೊರಡುವ ಮುಂಚಿನ ದಿನ ಶ್ರೀನಗರದಲ್ಲಿ ಬಾಂಬ್ ಸ್ಫೋಟ, ಕರ್ಫ್ಯೂ ಜಾರಿಯಾಗಿ ವಿಮಾನ ರದ್ದಾಗಿತ್ತು. ಮತ್ತೆ ಕಾಶ್ಮೀರಕ್ಕೆ ಹೋಗುವ ಮಾತುಕತೆ ಬಂದಾಗಲೇ- `ಹೇಗೆಂದರೂ ಇನ್ನು ಚೈನಾಕ್ಕೆ ಹೋಗಿ ಬರುವುದು ಇದ್ದೇ ಇರುತ್ತಾದ್ದರಿಂದ ಅಲ್ಲೇ ಹೋದರಾಯಿತು, ಕಾಶ್ಮೀರವೇಕೆ?’ ಎಂದಿದ್ದು ಸದಾಶಿವ.

ಹಾಗೆ ನೋಡಿದರೆ, ಈ ಹಿಂದೆ ಮಾಡಿದ ಯೋಜನೆಗಳೆಲ್ಲಾ ಕೈಗೂಡದಿದ್ದಾಗ ಪಲ್ಲವಿ ನಿರಾಸೆ ಪಟ್ಟಿದ್ದು ನೆನಪಿಗೆ ಬರುತ್ತಿಲ್ಲ ಸದಾಶಿವನಿಗೆ. ಚಿನ್ನದಂಗಡಿ ಮುಚ್ಚಿ ಹೋದಾಗ, ದುಡ್ಡು ಹೋಯಿತೆಂದು ತುಸು ಬೇಸರಿಸಿದಳೇ ಹೊರತು ನೆಕ್ಲೆಸ್ಸು ಸಿಗಲಿಲ್ಲ ಎನ್ನುವ ಕೊರಗು ಕಿಂಚಿತ್ತೂ ಕಂಡಿರಲಿಲ್ಲ ಅವಳಲ್ಲಿ. ಕಾಶ್ಮೀರ ಪ್ರವಾಸ ರದ್ದಾದಾಗಲೂ, ಆಕೆಯೇ ನನಗೆ ಸಮಾಧಾನ ಮಾಡಿದ್ದಳು. ಹೌದಲ್ಲ; ನಾನು ಯಾವತ್ತೂ ಪಲ್ಲವಿಯ ಹತ್ತಿರ `ನಿನಗೆ ಕಾಮತ್ ಹೊಟೇಲಿನಲ್ಲಿ ಕಾಫಿ ಕುಡಿಯುವುದು ಇಷ್ಟವೋ ಅಥವಾ ತಾಜ್‌ನಲ್ಲೇ ಕುಡಿಯಬೇಕೋ’ ಎಂಬುದನ್ನು ಕೇಳಿಯೇ ಇಲ್ಲವಲ್ಲ?

ಇದನ್ನೂ ಓದಿ : New Book : ಅಚ್ಚಿಗೂ ಮೊದಲು; ‘ಕಡಲು ನೋಡಲು ಹೋದವಳು’ ಫಾತಿಮಾ ರಲಿಯಾ ಕೃತಿ ಸದ್ಯದಲ್ಲೇ ನಿಮ್ಮ ಓದಿಗೆ

ಇಲ್ಲಿ ಬೀಜಿಂಗಿಗೆ ಬಂದು ಹೀಗೇ ಏನೋ ಎಡವಟ್ಟಾಗಿ, ಚೈನಾ ಗೋಡೆ ನೋಡಲಾಗದೇ ಹೋದರೆ ಆಕೆ ಬೇಸರಿಸಲಿಕ್ಕೇ ಇಲ್ಲ. ಯಾರಿಗೆ ಗೊತ್ತು, ಗ್ರೇಟ್ ವಾಲ್ ಹತ್ತಿಸಿ ವಾಪಸ್ಸು ಬರುವಾಗ ಸ್ಯಾಂಡಿಯ ಆ ಕುಸಿದ ಗೋಡೆಯನ್ನೂ ಆಕೆಗೆ ತೋರಿಸಿದರೆ, ಅದೇ ಚೆನ್ನಾಗಿದೆ ಅಂದರೂ ಅಂದಳೇ. ಹಾಗೇ ಆಲೋಚನೆಗಳು ಮುಂದುವರಿಯುತ್ತ- ಪಲ್ಲವಿ ಆ ದಿಬ್ಬದ ತುದಿಯಲ್ಲಿ ನಿಂತು ಕೈಗಳೆರಡನ್ನೂ ಚಾಚಿ ಆಕಾಶ ನೋಡುತ್ತ `ಕೂಽಽಽಽ’ ಎಂದು ಜೋರಾಗಿ ಕೂಗುವ ದೃಶ್ಯ ಮನದಲ್ಲಿ ಮೂಡಿತು. ಇದೇ ಫೋಸಿನಲ್ಲಿ ನನ್ನದೊಂದು ಫೋಟೋ ತೆಗಿ ಅನ್ನಬಹುದು. ಅಥವಾ ‘ಐ ಲವ್ ಯೂಽಽಽ’ ಎಂದು ನನ್ನತ್ತ ಚೀರಿ ಹೇಳಬಹುದು…

ಮನಸ್ಸು ಎಲ್ಲೆಲ್ಲೋ ಓಡುತ್ತ ತಲುಪಿದ ಈ ರೋಮ್ಯಾಂಟಿಕ್ ಕಲ್ಪನೆಗೆ ಸಣ್ಣ ರೋಮಾಂಚನವೂ, ನಾಚಿಕೆಯೂ ಒಟ್ಟೊಟ್ಟಿಗೇ ಆಯಿತು ಅವನಿಗೆ. ಅಲ್ಲಿಂದ ವಾಪಸ್ಸು ಬರುವಾಗ ಆ ಚೀನೀ ಹೆಣ್ಣು ಮಕ್ಕಳು ಮಾರುವ ಗ್ರೇಟ್ ವಾಲಿನ ಕಲ್ಲಿನಲ್ಲಿ ಕೆತ್ತಿದ ಜುಮುಕಿ ಸರ ಕೊಳ್ಳಲು ನಿಲ್ಲುವವಳೇ ಆಕೆ. ಛೇ..ಛೇ…ಆ ಮೂರುಕಾಸಿನ ಕಲ್ಲಿನ ಆಭರಣವನ್ನೇಕೆ ಕೊಳ್ಳಬೇಕವಳು? ಪ್ಲಾಟಿನಮ್‌ದನ್ನೇ ಕೊಡಿಸಬಲ್ಲೆ…. ರ‍್ರೆ, ಆದರೆ ಆ ಕಲ್ಲಿನ ಆಭರಣಗಳನ್ನು ಕೊಳ್ಳುವ ಹಾಗೇ ಇಲ್ಲವಲ್ಲ! ಏರ್ಪೋರ್ಟ್ ಸ್ಕ್ಯಾನಿಂಗ್​ನಲ್ಲೇನಾದರೂ ಸಿಕ್ಕಿಬಿದ್ದು, ಅಲ್ಲಿಯ ಆಫೀಸರನೇನಾದರೂ ಕಿರಿಕ್ಕು ಪಾರ್ಟಿ ಯಾಗಿದ್ದರೆ, ಯಾರಿಗೆ ಬೇಕು ಇಲ್ಲದ ಸಮಸ್ಯೆ…

ಆಲೋಚನೆಗಳ ನಡುವೆ ಮತ್ತೇನೋ ಸೂಚಿಸಿದಂತಾಗಿ, ಬ್ಯಾಗಿನಲ್ಲಿ ಪ್ಯಾಕ್ ಮಾಡಿ ಇಟ್ಟಿದ್ದ ಶಕ್ತಿಮದ್ದು ಫಕ್ಕನೆ ನೆನಪಿಗೆ ಬಂತು ಅವನಿಗೆ. ಹೌದು, ಅದರಲ್ಲೇನಿರ ಬಹುದು? ಯಾವ ಕೆಮಿಕಲ್ಲೋ? ಕೇವಲ ಸಣ್ಣ ಕಡ್ಡಿಯಲ್ಲಿ ತುದಿಗೆ ಸವರಿಕೊಂಡರೂ ಅಷ್ಟೊಂದು ಪವರ್ ನೀಡುವಂಥದ್ದು ಅಂತಾದರೆ ಅದ್ಯಾವುದಾದರೂ ಉದ್ದೀಪನ ವಸ್ತು ಸೇರಿಸಿರುವ ದ್ರಾವಣವೇ ಆಗಿದ್ದರೆ?

ಥಟ್ಟನೆ ಹಾಸಿಗೆಯಲ್ಲೇ ಎದ್ದು ಕುಳಿತ. ಎದೆ ಜೋರಾಗಿ ಹೊಡೆದುಕೊಳ್ಳತೊಡಗಿತು. ಇದರ ಮಾರಾಟವೂ ಅಸಿಂಧುವಾಗಿರಬಹುದಲ್ಲ? ಗುಟ್ಟು ಮಾಡಿದವಳಂತೆ ಸಣ್ಣ ಕೋಣೆಯಲ್ಲಿ ಅದನ್ನು ನೀಡಿದ ಅಂಗಡಿಯವಳು ನೆನಪಾದಳು. ಹಾಗೆ ಮಾಡಿದ್ದು ಆಕೆಯ ಮಾರಾಟ ತಂತ್ರ ಇದ್ದರೂ ಇರಬಹುದು. ಆದರೆ ಆಕೆ ಆ ಬಾಟಲನ್ನು ಉಳಿದೆಲ್ಲ ಸಾಮಾನುಗಳ ಜೊತೆ ಯಾಕೆ ಡಿಸ್‌ಪ್ಲೇ ಮಾಡಿರಲಿಲ್ಲ? ಸ್ಟಾಕಿನಲ್ಲಿರುವುದನ್ನು ಹೊರಗೆ ತಂದಿಡಲು ಮರೆತಿರಬಹುದು… ಕಾರಣ ಏನೇ ಇರಲಿ, ಸುಡುಗಾಡು. ನನ್ನ ನಸೀಬೇ ಸರಿ ಇಲ್ಲದೇ ಅದು ನಿಷೇಧಿತ ದ್ರಾವಣವೇ ಆಗಿದ್ದಿದ್ದರೆ! ಚೀನೀ ಮಕ್ಕಳು ಮಾರುತ್ತಿದ್ದ ಕಲ್ಲಿನ ಕುಸುರಿಯ ಜುಮುಕಿ ಕೊಂಡೊಯ್ಯುವುದ ಬೇಡ ಎಂದು ಬಿಟ್ಟವ, ಇದನ್ನು ತೆಗೆದುಕೊಂಡು ಹೋಗುತ್ತಿರುವೆನಲ್ಲ!

ಇದನ್ನೂ ಓದಿ : New Book: ಅಚ್ಚಿಗೂ ಮೊದಲು; ಕೆಕೆ ಗಂಗಾಧರನ್ ಅನುವಾದಿಸಿದ ‘ಬಿರಿಯಾನಿ’ ಕಥಾಸಂಕಲನ ಸದ್ಯದಲ್ಲೇ ಓದಿಗೆ

ಬ್ಯಾಗಿನಿಂದ ಬಾಟಲಿಯನ್ನು ಹೊರತೆಗೆದು ಟೇಬಲ್ಲಿನ ಮೇಲಿಟ್ಟು, ಕೋಣೆಯಲ್ಲಿ ಹಿಂದೆ ಮುಂದೆ ಓಡಾಡತೊಡಗಿದ ಸದಾಶಿವ. ರಾತ್ರಿ ಒಂದು ಗಂಟೆಯಾಗಿತ್ತು. ಗೋಡೆ ಗಡಿಯಾರದ ಸೆಕೆಂಡು ಮುಳ್ಳು ಚಲಿಸಿದ ಸದ್ದು ಕ್ಷೀಣವಾಗಿ ಕೇಳುತ್ತಿತ್ತು. ಏಸಿಯ ಗಾಳಿಗೆ ಕರ್ಟನ್ನಿನ ಅಂಚು ಮೆಲ್ಲನೆ ಅದುರುತ್ತಿತ್ತು. ಪಕ್ಕದ ಕೋಣೆಯ ಟಾಯ್ಲೆಟ್ಟಿನಲ್ಲಿ ಫ್ಲಶ್ ಮಾಡಿದ ಸಪ್ಪಳ. ನಡುವೆ, ದೂರದಲ್ಲೆಲ್ಲೋ ವಾಹನವೊಂದು `ವೊಂಽಽಯ್ ವೋಂssಯ್…’ ಎಂದು ಹಾರ್ನ್ ಮಾಡುತ್ತಾ ಹೋದ ಸದ್ದು. ಅಂಬೂಲನ್ಸೋ ಅಥವಾ ಪೋಲೀಸ್ ಜೀಪೋ ಇರಬೇಕು.

`ಹೆಚ್ಚೆಂದರೆ ಏನಿರಬಹುದು ಈ ಬಾಟಲಲ್ಲಿ? ಅನಸ್ತೇಶಿಯಾ ದ್ರಾವಣ? ಅದರಿಂದ ಒನ್ ಅವರ್ ಬ್ಲಾ..ಬ್ಲಾ…ಬ್ಲಾ…ಸಾಧ್ಯವೇ? ಸ್ಟೀರಾಯ್ಡು…ಡ್ರಗ್ಸು…? ಯಾವುದಕ್ಕೂ ಇದು ಚುಚ್ಚಿಕೊಳ್ಳುವುದೇನೂ ಅಲ್ಲವಲ್ಲ, ಹಚ್ಚಿಕೊಳ್ಳುವುದು. ಒಂದು ರಿಸ್ಕ್ ತೆಗೆದುಕೊಂಡು ಬಿಡಲೇ….’

ಟೇಬಲ್ ಲ್ಯಾಂಪ್ ಉರಿಸಿ ಬಾಟಲಿಯನ್ನು ಹಿಂದೆ ಮುಂದೆ ತಿರುವಿ ಮತ್ತೆ ಪರಿಶೀಲಿಸಿದ. ಅದರ ಮೇಲೆ ಮುದುಕನ ಚಿತ್ರ ಹಾಗೂ ಚೈನೀಸಿನಲ್ಲಿ ಒಂದಿಷ್ಟು ಬರಹ ಬಿಟ್ಟರೆ ಮತ್ತೇನೂ ಇರಲಿಲ್ಲ. ಬಾಟಲಿಯನ್ನು ಜೋರಾಗಿ ಅಲ್ಲಾಡಿಸಿದ. ಒಳಗಿನ ದ್ರಾವಣ ತುಳುಕಿದ ಸದ್ದು ಕೇಳಿತು. `ಇಂಡಿಯಾದ ಏರ್ಪೋರ್ಟಿನಲ್ಲಿ ಚೆಕ್ ಮಾಡಿದರೆ, ಹೇಗೋ ಮ್ಯಾನೇಜ್ ಮಾಡಬಹುದು. ಇಲ್ಲೇ ಬೀಜಿಂಗಿನಲ್ಲೇ ಹಿಡಿದರೆ?’ ಮೂರುನಾಲ್ಕು ಚೀನೀ ಆಫೀಸರುಗಳು ತನ್ನನ್ನು ಸುತ್ತುವರಿದಿರುವುದು. ಪಕ್ಕದಲ್ಲೇ, ಒಳಗಿನ ಸಾಮಾನು ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ತೆರೆದಿಟ್ಟ ನನ್ನ ಸೂಟ್‌ಕೇಸು. ಅದ್ಯಾವ ಬಾಟಲು, ಅದರಲ್ಲಿರು ವುದೇನು ಎಂಬುದನ್ನು ಹೇಳಲಾರದೇ ಚಡಪಡಿಸುತ್ತಿರುವ ನಾನು… ಇತ್ಯಾದಿ ದೃಶ್ಯಗಳೆಲ್ಲಾ ಕಲ್ಪನೆಗೆ ಬಂತು.’

ಇದನ್ನೂ ಓದಿ : New Book :ಅಚ್ಚಿಗೂ ಮೊದಲು; ಸಮತಾ ಆರ್ ಕೃತಿ ‘ಪರಿಮಳಗಳ ಮಾಯೆ’ ಸದ್ಯದಲ್ಲೇ ನಿಮ್ಮ ಕೈಗೆ

ಬಾಟಲನ್ನು ಕೋಣೆಯ ಟೇಬಲ್ಲಿನ ಮೇಲೇ ಬಿಟ್ಟು ಹೋದರೆ? ನಂತರ ಹೌಸ್ ಕೀಪಿಂಗಿನವರಿಗೆ ಸಿಗುತ್ತೆ. ದಡೂತಿ ಹೆಂಗಸು ನೆನಪಾದಳು. ಅದೇನೆಂದು ಆಕೆಗೆ ಗೊತ್ತಾಗಬಹುದೇ? ಗೊತ್ತಾದರೆ ಆಕೆ ತನ್ನ ಸಂಗಾತಿಗೆ ಕೊಟ್ಟಾಳು. ಆತ ಕುಣಿದು ಕುಪ್ಪಳಿಸಿಯಾನು. ಮಜಾ ಮಾಡಲಿ ಡುಮ್ಮಿ ಅಥವಾ ನಾನು ಚೆಕ್-ಔಟ್ ಮಾಡುವ ಮೊದಲೇ `ಏನೋ ಬಿಟ್ಟು ಹೋಗಿದ್ದೀರಿ…’ ಎನ್ನುತ್ತ ಓಡೋಡಿ ಬಂದು ವಾಪಸು ಕೊಟ್ಟು ಪ್ರಾಮಾಣಿಕತೆ ಮೆರೆದರೆ? ಮತ್ತೆ ನನಗೇ ತಗುಲಿಕೊಳ್ಳುತ್ತಲ್ಲ… ಅಥವಾ ಅವಳಿಗೂ ಇದು ಡೇಂಜರ್ ಡ್ರಗ್ಗು ಎಂಬುದು ತಿಳಿದಿದ್ದು, ಕಂಪ್ಲೇಂಟೇ ನೀಡಿದರೆ?
ಹೀಗೆ, ಹಿಂದೆ ಮುಂದೆ ವಿಚಾರವನ್ನು ಸಾಕಷ್ಟು ಎಳೆದಾಡಿ, ಬಾಟಲನ್ನೊಮ್ಮೆ ಕಸದ ಬುಟ್ಟಿಗೆ ಎಸೆದು, ಮತ್ತೆ ಎತ್ತಿಟ್ಟ. ಐದು ಸಾವಿರ ನೀಡಿರುವೆ. ಇಷ್ಟು ಸಣ್ಣ ಶೀಷೆಗೆ. ದುಡ್ಡಿನ ವಿಷಯ ಹಾಗಿರಲಿ, ಅದೇನು ಪವಾಡವಿದೆ ಇದರಲ್ಲಿ ಎಂಬುದನ್ನು ಅರಿತುಕೊಳ್ಳದೇ ಬಿಟ್ಟು ಹೋಗುವುದಾದರೂ ಹೇಗೆ? ಕೈಗೆ ಬಂದ ತುತ್ತಿನ ರುಚಿ ನೋಡದ ಮೂರ್ಖ ನಾನೆಂದು ಮುಂದೆ ಸಂಕಟಪಡಬೇಕಾದೀತು. ಅಂದಹಾಗೆ, ಮೈದಾನಕ್ಕೆ ಇಳಿದರೆ ಮಾತ್ರ ಆಟವೇ? ಅದೆಷ್ಟು ಬಾರಿ ಎದುರಿನ ಗೋಡೆಗೆ ಬಡಿದು ಪುಟಿದೇಳುವ ಚಂಡಿನೊಡನೆ ನಾನೊಬ್ಬನೇ ಬ್ಯಾಟಿಂಗ್ ಮಾಡಿಲ್ಲ. ಏಕಾಂಗಿ ಆಟಕ್ಕೆ ಯಾರಾದರೂ ಆಗಬಹುದು, ವಾಂಗ್-ಲೀಯ ಸೆಕ್ರೆಟರಿಯೂ… ಎಂದೆನಿಸುತ್ತಲೇ, ತಡಮಾಡದೇ ಬಾಟಲಿಯ ಬಿರಡೆ ತೆರೆದ…

(ಈ ನೀಳ್ಗತೆಯ ಪೂರ್ತಿ ಓದಿಗೆ ಮತ್ತು ಸಂಕಲನ ಖರೀದಿಗೆ ಸಂಪರ್ಕಿಸಿ : 9019190502 )