Column: ವೈಶಾಲಿಯಾನ: ಕೋಮುವಾದಿ ಸಿದ್ಧಾಂತಗಳು ರಾಷ್ಟ್ರೀಯತೆ, ದೇಶಭಕ್ತಿಯನ್ನು ಅರ್ಥೈಸಿಕೊಳ್ಳುವ ಪರಿಯೇ ವಿಚಿತ್ರ

ನಮ್ಮ ನಾಡಿನ ಬಹುಮುಖಿ ಸಂಸ್ಕೃತ, ಸೌಹಾರ್ದತೆಯ ಪರಿಸರವನ್ನು ಮಲಿನಗೊಳಿಸುವ ಹೇಯ ಘಟನೆಗಳು ಪದೇ, ಪದೇ ಸಂಭವಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ.

Column: ವೈಶಾಲಿಯಾನ: ಕೋಮುವಾದಿ ಸಿದ್ಧಾಂತಗಳು ರಾಷ್ಟ್ರೀಯತೆ, ದೇಶಭಕ್ತಿಯನ್ನು ಅರ್ಥೈಸಿಕೊಳ್ಳುವ ಪರಿಯೇ ವಿಚಿತ್ರ
Vaishaliyaana
Follow us
TV9 Web
| Updated By: ನಯನಾ ರಾಜೀವ್

Updated on:Jul 09, 2022 | 5:08 PM

ನಮ್ಮ ನಾಡಿನ ಬಹುಮುಖಿ ಸಂಸ್ಕೃತಿ, ಸೌಹಾರ್ದತೆಯ ಪರಿಸರವನ್ನು ಮಲಿನಗೊಳಿಸುವ ಹೇಯ ಘಟನೆಗಳು ಪದೇ, ಪದೇ ಸಂಭವಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಬೆಳವಣಿಗೆ. ಜಾತ್ಯತೀತ ಮತ್ತು ಸಮಾಜವಾದಿ ತತ್ತ್ವಾಧಾರಿತ ಭಾರತದ ಸಂವಿಧಾನಕ್ಕೆ ಬದ್ಧರಾದ ಎಲ್ಲರೂ ಕೋಮುವಾದದ ವಿರುದ್ಧ ಸಂಘಟಿತರಾಗಿ ಹೋರಾಡುವ ಅಗತ್ಯ ಮತ್ತು ಅನಿವಾರ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.

ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಬಿತ್ತುವಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತಿದೆ. ಶಿವಮೊಗ್ಗ ಜಿಲ್ಲೆಯ ಅನವಟ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕದ ಮೇಲೆ ಹಿಂದೂ ಸಂಘಟನೆಗಳ ಕೆಂಗಣ್ಣು ಬಿದ್ದು , ನಾಟಕ ಪ್ರದರ್ಶನವೇ ರದ್ದಾದ ವಿಷಮ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ.

ವಿವೇಚನಾರಹಿತರಾಗಿ , ಸತ್ಯಾಸತ್ಯತೆಗಳ ಅನ್ವೇಷಣೆಗೆ ತೊಡಗದೆ, ಪೂರ್ವಗ್ರಹಪೀಡಿತ ಅಭಿಪ್ರಾಯಕ್ಕೆ ಬಹಳ ಬೇಗ ತಲುಪಿ ಸಮುದಾಯಗಳ ನಡುವೆ ಗೋಡೆಗಳನ್ನು ನಿರ್ಮಿಸಲು ಯತ್ನಿಸಲಾಗುತ್ತಿದೆ. ಒಂದು ನಾಟಕವನ್ನು ರಂಗಮಂಚದ ಮೇಲೆ ವೀಕ್ಷಿಸದೇ, ಕೃತಿಯಾಗಿ ಅದನ್ನು ಓದಿ ಅರಿಯುವ ಗೋಜಿಗೂ ಹೋಗದೆ ಆಕ್ರೋಶದಿಂದ ಅದನ್ನು ವಿರೋಧಿಸುವುದು, ಯಾವ ರೀತಿಯ ಅಹಿತಕರ ಮನಸ್ಥಿತಿಯೆಂಬುದನ್ನು ಸಹ ನಾವು ಪರಾಮರ್ಶಿಸಬೇಕಾಗಿದೆ.

ಇದನ್ನೂ ಓದಿ

ಖೂನ್ ಖರಾಬಾ ಹೋನಾ ಹೈ ತೊ ಎಕಬಾರ್ ಹೋ ಜಾನೆ ದೋ’ ಎಂದು ಉದ್ರಿಕ್ತರಾಗಿ ಗುಡುಗಿದ ಹಿಂದೂ ಸನ್ಯಾಸಿನಿ ಸಾಧ್ವಿ ರೀತಾಂಬರರವರ ಭಾಷಣಗಳ ಪರಿಣಾಮವಾಗಿ , ರಾಮ ಜನ್ಮಭೂಮಿ ಗಲಭೆಯ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಮುಸ್ಲಿಮರ ಸರಣಿ ಹತ್ಯೆಗಳು ನೆನಪಾಗುತ್ತವೆ. ಈ ಕೋಮುವಾದಿ ಮನಸ್ಥಿತಿಯನ್ನು ವಿಶ್ಲೇಷಿಸಿ ನೋಡುವುದು ಅಗತ್ಯವೆಂದು ನನಗನ್ನಿಸುತ್ತದೆ.

ಕೋಮುವಾದವೆನ್ನುವುದು ಆಧುನಿಕ ರಾಜಕೀಯ ಪರಿಕಲ್ಪನೆಗಳು, ಯಾವುದು ಸಮಾಜದಲ್ಲಿ ಪವಿತ್ರವೆಂದು ಪರಿಗಣಿಸಲ್ಪಡುತ್ತದೆಯೋ, ಆ ವಲಯದಿಂದ ಎರವಲು ಪಡೆದು, ತಮ್ಮ ಮಹತ್ವವನ್ನು ಅಥವಾ ಚಲಾವಣೆಯನ್ನು , ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಯತ್ನಿಸುವ ಒಂದು ಪ್ರಕ್ರಿಯೆ. ಕೋಮುವಾದ ಯಾವಾಗಲೂ ಒಂದು ಪರಾವಲಂಬಿ ಸಿದ್ಧಾಂತವೇ. ಅದಕ್ಕೆ ಅದರದ್ದೇ ಆದ ಯಾವ ಧ್ಯೇಯ – ಆದರ್ಶಗಳೂ ಇಲ್ಲ.

ಧಾರ್ಮಿಕ ಅಸ್ತಿತ್ವದ ಸೀಮೆಗಳನ್ನು ಪುನರ್ ನಿರ್ಮಿಸುತ್ತ , ಬೇರೊಂದು ಸಮುದಾಯದವರನ್ನು ಶತ್ರುಗಳನ್ನಾಗಿ ನೋಡುವ ದೃಷ್ಟಿಕೋನವನ್ನು ಇದು ಪ್ರತಿಪಾದಿಸುತ್ತದೆ. ಕೋಮುವಾದಿ ಸಿದ್ಧಾಂತಗಳು ರಾಷ್ಟ್ರೀಯತೆಯನ್ನು , ದೇಶಭಕ್ತಿಯನ್ನು ಅರ್ಥೈಸಿಕೊಳ್ಳುವ ಪರಿಯೇ ವಿಚಿತ್ರವಾಗಿದೆ.

ಸಂಘ ಪರಿವಾರದವರ ಪ್ರಕಾರ ‘ಹಿಂದುತ್ವ’ ಎನ್ನುವುದು ಬಹುಸಂಖ್ಯಾತರಾಗಿರುವ ಹಿಂದೂಗಳಿಗೆ ತಮ್ಮ ಧರ್ಮದ ಸಂರಕ್ಷಣೆಯ ಬಗ್ಗೆ ಇರುವ ಕಾಳಜಿಯನ್ನು ಧ್ವನಿಸುತ್ತದೆ.

ಆದರೆ ಬೇರೆ ಧರ್ಮದವರ ಪವಿತ್ರ ಸ್ಥಳಗಳಾದ ಮಸೀದಿಗಳು , ಇಗರ್ಜಿಗಳನ್ನು ಧ್ವಂಸಗೊಳಿಸುವುದು, ಧಾರ್ಮಿಕ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ಎಸಗುವುದು, ಅವರನ್ನು ಭಯಗ್ರಸ್ತರನ್ನಾಗಿಸಿ, ದೇಶದ ಕಾನೂನುಗಳನ್ನು ಉಲ್ಲಂಘಿಸುವುದು ಯಾವ ರೀತಿಯಲ್ಲೂ ಹಿಂದೂ ಧಾರ್ಮಿಕ ನಂಬಿಕೆಗಳು , ಆಚರಣೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಲಕ್ಷಣವಂತೂ ಅಲ್ಲವೇ ಅಲ್ಲ. ‘ಹಿಂದುತ್ವ’ ಎನ್ನುವ ಭ್ರಮಾಧೀನ ಪರಿಕಲ್ಪನೆಗೆ , ನಮ್ಮ ದೇಶದ ಬಹು ಪಾಲು ಹಿಂದೂ ಧರ್ಮೀಯರ ಬೆಂಬಲವೇ ಇಲ್ಲ.

ಅವರಿಂದಲೂ ಪ್ರತಿರೋಧ ವ್ಯಕ್ತವಾಗುತ್ತಿದೆ. ಇನ್ನು ‘ಹಿಂದೂ ರಾಷ್ಟ’ ಎಂಬ ಪರಿಕಲ್ಪನೆಯನ್ನು ಕುರಿತು ಯೋಚಿಸಿದಾಗ ಕೇವಲ ಹಿಂದೂ ಧರ್ಮಕ್ಕೆ ನಿಷ್ಠರಾಗಿರುವವರು ಮಾತ್ರ ಈ ರಾಷ್ಟ್ರದ ನಿಜವಾದ ಪ್ರಜೆಗಳೆಂದು ಘೋಷಿಸಿ ‘ಹಿಂದುತ್ವ’ಕ್ಕೆ ಒಂದು ರಾಜಕೀಯ ಸ್ವರೂಪವನ್ನು ನೀಡಿ ಅದನ್ನು ಅಧಿಕೃತವಾಗಿ ಜಾರಿಗೊಳಿಸುವುದು ಎಂಥಾ ಮತಾಂಧತೆಯ, ನಿರಂಕುಶಮತಿತ್ವದ ಪರಮಾವಧಿ ಎಂಬುದು ಯಾರಿಗಾದರೂ ಗೋಚರಿಸುವ ಸತ್ಯ. ಇದು ಧರ್ಮ ನಿರಪೇಕ್ಷಿತ , ಪ್ರಜಾಪ್ರಭುತ್ವದ ಬುನಾದಿಯ ಮೇಲೆ ಕಟ್ಟಲಾದ ಈ ದೇಶದ ಸಂವಿಧಾನದ ಆಶೋತ್ತರಗಳಿಗೇ ವ್ಯತಿರಿಕ್ತವಾದಂಥ ವಿಕೃತ ಮನಸ್ಥಿತಿಯ ಸಮರ್ಥನೆ.

ಈ ಹಿಂದೂ ರಾಷ್ಟ್ರದ ಕಲ್ಪನೆ ಧಾರ್ಮಿಕ ಅಲ್ಪ ಸಂಖ್ಯಾತರನ್ನು ಮತ್ತು ಹಿಂದೂ ಧರ್ಮದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿರುವ ತಳ ಸಮುದಾಯವರನ್ನು ಹಾಗೂ ಈ ಬಗೆಯ ಹಿಂದುತ್ವದ ಕಲ್ಪನೆಗೆ ಸಹಮತವಿಲ್ಲದ ಹಿಂದೂಗಳನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅವರನ್ನು ಗಣನೆಗೇ ತಂದುಕೊಂಡಂತೆ ಕಾಣುವುದಿಲ್ಲ. ಪ್ರಪಂಚಾದ್ಯಂತ ನಾವು ಮತೀಯವಾದಿ ಅಥವಾ ಬಲಪಂಥೀಯ ಪ್ರಭುತ್ವಗಳನ್ನು ಗಮನಿಸಿದಾಗ ಕೆಲವು ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ : ಈ ಪ್ರಭುತ್ವಗಳು ಅಧಿಕಾರದ ಲಗಾಮು ಹಿಡಿಯಲು ಬಳಸುವುದು ಪ್ರಜಾಪ್ರಭುತ್ವದ ತಂತ್ರಗಳನ್ನೇ . ( ಚುನಾವಣೆ ಇತ್ಯಾದಿ.)

ಗದ್ದುಗೆ ಏರಿದ ನಂತರ ಅವು ಅಧಿಕಾರದಲ್ಲೇ ಉಳಿಯಲು ಕಾನೂನುಗಳನ್ನು ಮಾರ್ಪಾಡು ಮಾಡುವುದರಲ್ಲಿ ಅತೀವ ಆಸಕ್ತಿಯನ್ನು ತೋರುತ್ತವೆ. ಯಾರು ಪ್ರಜೆಗಳು ಎನ್ನುವುದರ ವ್ಯಾಖ್ಯಾನದಲ್ಲೂ ಧರ್ಮ, ಪ್ರಾಂತ್ಯಗಳನ್ನು ಆಧರಿಸಿ ತಾರತಮ್ಯ ಮಾಡಲಾಗುತ್ತದೆ. ಈ ವ್ಯಾಖ್ಯಾನದಲ್ಲಿ ಹಲವರು ದೇಶದ್ರೋಹಿಗಳಾಗಿ ಪರಿಗಣಿಸಲ್ಪಡುತ್ತಾರೆ. ಉದಾಹರಣೆಗೆ ಮುಸ್ಲಿಮರು, ಪಾರ್ಸಿಗಳು, ಕ್ರೈಸ್ತರು – ಹೀಗೆ ಕೆಲವು ಸಮುದಾಯದವರು ಪರಕೀಯರಾಗಿಬಿಡಬಹುದು. ಈಶಾನ್ಯ ಭಾಗದಿಂದ ವಲಸೆ ಬಂದ ಜನರು ಅನುಭವಿಸಿದ ಆತಂಕ, ಅಭದ್ರತೆಗಳು ನೆನಪಾಗುತ್ತದೆ. ಯಾವುದೇ ಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳದ ಜನರೂ ದ್ವಿತೀಯ ದರ್ಜೆಯ ಪ್ರಜೆಗಳಾಗಿಬಿಡುತ್ತಾರೆ.

ಇಂತಹ ವ್ಯವಸ್ಥೆಗಳು ಮಹಿಳೆಯರ ಸ್ವಾತಂತ್ರ್ಯ- ಹಕ್ಕುಗಳನ್ನೂ ಅಧಿಕ ಪ್ರಮಾಣದಲ್ಲಿ ನಿಯಂತ್ರಿಸುತ್ತವೆ. ಸಾಕಷ್ಟು ರೀತಿಯ ನಿರ್ಬಂಧನೆಗಳು ಚಲಾವಣೆಗೆ ಬರುತ್ತವೆ. ಇದಕ್ಕೆ ನಾವು ದೂರದ ತಲೀಬಾನಿಗಳ ಉದಾಹರಣೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಹಿಂದುತ್ವವಾದಿಗಳು ಹಿಂದೂ ಮಹಿಳೆಯರ ಮೇಲೆ ಯಾವ ಹೊಣೆಗಾರಿಕೆ ಹೊರಿಸುತ್ತಾರೆ ಎಂಬುದನ್ನು ಗಮನಿಸಿದರೆ ಅದು ಸ್ಪಷ್ಟವಾಗಿ ತಿಳಿಯುವ ವಿಚಾರ.

ಈ ಸಾಧ್ವಿಯರ ಭಾಷಣಗಳನ್ನೇ ಗಮನಿಸಿ : ಇವರು ಪುರುಷತ್ವ, ಪರಾಕ್ರಮ , ಧರ್ಮಯುದ್ಧದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಇಲ್ಲಿ ನಪುಂಸಕತ್ವದ ಬಗ್ಗೆಯೂ ಬಹಳ ಲೇವಡಿಯ ಮಾತುಗಳು ಬರುತ್ತವೆ. ಮಾತೃಶಕ್ತಿಯ ಬಗ್ಗೆ ಉಲ್ಲೇಖಿಸಲಾಗುತ್ತದೆ. ಆದರೆ ಇದು ಮಾತೃತ್ವದ ಆದರ್ಶಗಳಿಗೇ ವಿರುದ್ಧವಾಗಿರುವ ಕಲ್ಪನೆ. ವೀರ ಹಿಂದೂ ವನಿತೆಯರು ತಮ್ಮ ಪುತ್ರರು ಮುಸ್ಲಿಮರ ವಿರುದ್ಧ ಸಿಡಿದೇಳಬೇಕೆಂಬ ಕರಾಳ ಅಪೇಕ್ಷೆ ಇಲ್ಲಿ ಇಣುಕುತ್ತದೆ. ಇಲ್ಲಿ ಪುತ್ರರು ಪರಧರ್ಮೀಯರ ಮೇಲೆ ಸೇಡು ತೀರಿಸಿಕೊಳ್ಳಲು , ಅವರನ್ನು ಹತ್ತಿಕ್ಕಲು ಬಳಸುವ ಆಯುಧಗಳಷ್ಟೇ.

ಈ ವ್ಯಾಖ್ಯಾನದಲ್ಲಿರುವ ಮತ್ತೊಂದು ಆಘಾತಕಾರಿ ಅಂಶವೆಂದರೆ ಹಿಂದೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಶೂರ ಪುತ್ರರನ್ನು ಹೆರಬೇಕು ಎಂಬುದೂ ಆಗಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ , ಮುಸ್ಲಿಮರ ಸಂಖ್ಯೆ ದ್ವಿಗುಣಿಸುತ್ತಿದೆ ಎಂಬ ಆತಂಕಗಳೂ ಇದರ ಸುತ್ತ ಪರಿಭ್ರಮಿಸುತ್ತವೆ. ವಾಸ್ತವದಲ್ಲಿ ಹಿಂದೂಗಳ ಜನಸಂಖೈ ಮುಸ್ಲಿಮರ ಜನಸಂಖ್ಯೆಗಿಂತ ಜಾಸ್ತಿಯೇ ಇದೆ. ಮುಸ್ಲಿಂ ಸಮುದಾಯದ ಅಂಕಿ ಅಂಶಗಳನ್ನು ಗಮನಿಸಿದಾಗ ಅವರು ಹಿಂದೂಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವುದು ಯಾರಿಗಾದರೂ ಕಂಡುಬರುವ ಸತ್ಯ.

ಬಹುಪತ್ನೀತ್ವದ ಆರೋಪವೂ ಆಧಾರರಹಿತವಾಗಿದ್ದು , ಹಿಂದೂಗಳಲ್ಲಿಯೇ ದ್ವಿಪತ್ನೀತ್ವ ಮೊದಲಾದ ಕಾನೂನು ಬಾಹಿರ ಆಚರಣೆಗಳು ಕಂಡುಬರುತ್ತವೆ. ನಗರಗಳಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ನಮ್ಮ ದೇಶದಲ್ಲಿ ಬಡತನದ ರೇಖೆಯ ಕೆಳಗಿದ್ದಾರೆ. ಹಿಂದೊಮ್ಮೆ ರಾಷ್ಟ್ರೀಯ ಸೇವಕ ಸಂಸ್ಥೆಯ ಧುರೀಣ ಹಾಗೂ ಭಾ.ಜ.ಪ ಪಕ್ಷದ ಉಪಾಧ್ಯಕ್ಷರಾಗಿದ್ದ ಕೆ.ಆರ್ ಮಲ್ಕಾನಿಯವರೇ ‘ಈ ದೇಶದ ಮುಸ್ಲಿಮರಿಗೆ ನಮ್ಮ ಸರ್ಕಾರದಿಂದ ಕೇವಲ ಲಾಲಿಪಪ್ ಮಿಠಾಯಿಗಳಷ್ಟೇ ಸಿಕ್ಕಿವೆ’ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಮುಸ್ಲಿಮರು ಭಾರತದ ಮುಖ್ಯವಾಹಿನಿಗೆ ಸೇರಿದವರೇ ಅಲ್ಲ , ಅವರು ಪಾಕಿಸ್ತಾನಕ್ಕೆ ನಿಷ್ಠರು ಎಂಬಂತಹ ಮಿಥ್ಯಾರೋಪಗಳು ದಿಟವಾಗಿಯೂ ಮರ್ಮಾಘಾತಗೊಳಿಸುವಂತಿವೆ.

ವಾಸ್ತವದಲ್ಲಿ ಭಾರತದಂತಹ ವೈವಿಧ್ಯಮಯ ಸಂಸ್ಕøತಿಯ, ಬಹುಧರ್ಮೀಯ, ಬಹುಭಾಷಿಕ ರಾಷ್ಟ್ರದಲ್ಲಿ ಒಂದು ಧರ್ಮ, ಒಂದೇ ಭಾಷೆ ಹಾಗೂ ಒಂದೇ ಪಂಗಡದ ಜನರನ್ನು ಮುಖ್ಯವಾಹಿನಿಯೆಂದು ಪರಿಗಣಿಸುವುದೇ ಅಸಂಬದ್ಧವಾದ, ಮೂರ್ಖತನ.

ಮುಸ್ಲಿಮ್ ಮಹಿಳೆಯರನ್ನು ಅವರ ಸಮುದಾಯದಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರುವವರು ಹಿಂದೂ ಧರ್ಮದಲ್ಲಿಯೂ ಎಷ್ಟು ಮಹಿಳಾ ವಿರೋಧಿ ಆಚರಣೆಗಳಿವೆ ಎಂಬುದನ್ನೂ ಅವಲೋಕಿಸಿ ಮಾತನಾಡಬೇಕು. ನಮ್ಮಲ್ಲಿ ಇನ್ನೂ ದಲಿತರನ್ನು ಅಮಾನುಷವಾಗಿ ಶೋಷಿಸುವ ಆಚರಣೆಗಳು ಜೀವಂತವಾಗಿಯೇ ಇವೆ.

ಬಾಲ್ಯ ವಿವಾಹಗಳೂ ಚಾಲ್ತಿಯಲ್ಲಿವೆ. 1986 ರಲ್ಲಿಯೇ ಹದಿಹರೆಯದ 18 ರ ಪ್ರಾಯದ ಮುಗ್ಧ ತರುಣಿ , ಭಯದಿಂದ ಅಡಗಿ ಕುಳಿತಿದ್ದ ರೂಪ್ ಕನ್ವರ್‍ಳನ್ನು ಎಳೆದು ತಂದು ಮೃತ ಗಂಡನ ಚಿತೆಯ ಮೇಲೆ ಕೂರಿಸಿ ಸಜೀವ ದಹನ ಮಾಡಿ ‘ಸತೀ ಮಾತಾ ಕಿ ಜೈ’ ಎಂದು ಅಟ್ಟಹಾಸಗೈದ ಕಿರಾತಕರೂ ಹಿಂದೂಗಳೇ ಅಲ್ಲವೇ? ಕಠುವಾದ ಅಮಾಯಕ 8 ವರ್ಷ ಪ್ರಾಯದ ಹಸುಳೆಯ ಮೇಲೆ ನಿರಂತರವಾಗಿ ಹಲವಾರು ದಿನಗಳು ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಕೊಲೆ ಮಾಡಿದ ವ್ಯಕ್ತಿಗಳು ಈ ಕೃತ್ಯವನ್ನು ಒಂದು ದೇಗುಲದಲ್ಲಿಯೇ ರಾಜಾರೋಷವಾಗಿ ಮಾಡಿದ್ದನ್ನು ನಾವು ನೆನಪು ಮಾಡಿಕೊಳ್ಳಬೇಕು.

ಉನ್ನಾವೊ ಅತ್ಯಾಚಾರದಲ್ಲಿಯೂ ಕೂಡ ಭಾ.ಜ.ಪ ಪಕ್ಷದ ಜನನಾಯಕನೊಬ್ಬನ ಪಾತ್ರವಿತ್ತು. ಹಾಥರಸ್‍ನಲ್ಲಿ ದಲಿತ ಸಮುದಾಯದ ಯುವತಿಯ ಮೇಲಾದ ಅತ್ಯಾಚಾರ , ಬಳಿಕ ಘಟಿಸಿದ ಆಕೆಯ ದಯನೀಯ ಸಾವು ಕೂಡ ನಮಗೆ ನೆನಪಾಗಬೇಕು. ಭಾರತದಂತಹ ರಾಷ್ಟ್ರದಲ್ಲಿ ಎಲ್ಲಾ ಧರ್ಮದವರನ್ನೂ ಸಮಾನರೆಂದೇ ಪರಿಗಣಿಸಬೇಕು. ಅವರ ಸಂರಕ್ಷಣೆ ಸರ್ಕಾರದ ಪ್ರಮುಖ ಕರ್ತವ್ಯಗಳಲ್ಲಿ ಒಂದು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಮುಸ್ಲಿಂ ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ಆದ ಲೈಂಗಿಕ ದೌರ್ಜನ್ಯಗಳ ಭಯಾನಕ ವರದಿಗಳನ್ನು ಓದಿದರೆ ಮೈ ನಡುಗುತ್ತದೆ .

ನಮ್ಮ ರಕ್ತವನ್ನೇ ಹೆಪ್ಪಗಟ್ಟಿಸಿ ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಸಂಗತಿಗಳು ಇವು. ದೆಹಲಿಯ ಮುಸ್ಲಿಮ್ ವಿಮೆನ್ಸ್ ಫೋರಮ್‍ನ ಸೈಯಿದಾ ಹಮೀದ್ , ಬೆಂಗಳೂರಿನ ನ್ಯಾಷನಲ್ ಅಲೈಯನ್ಸ್ ಆಫ್ ವಿಮೆನ್ ಸಂಸ್ಥೆಯ ರೂಥ್ ಮನೋರಮಾ, ದೆಹಲಿಯ ನಿರಂತರ್ ಸಂಸ್ಥೆಯ ಮಾಲಿನಿ ಘೋಷ್ , ಅಹ್ಮದಾಬಾದಿನ ‘ಸಹೆರ್ವಾರು’ ಸಂಸ್ಥೆಯ ಶೀಬಾ ಜಾರ್ಜ್ , ದೆಹಲಿಯ ಪತ್ರಕರ್ತೆ ಫಾರಾ ನಕ್ವಿ, ತಮಿಳುನಾಡಿನ ಅಕಾರ್ಡ್ ಸಂಸ್ಥೆಯ ಮಾರಿ ತೇಕೇಕರ – ಇವರುಗಳನ್ನೊಳಗೊಂಡ ಒಂದು ಸತ್ಯ ಶೋಧನಾ ಸಮಿತಿ, ಅಹ್ಮದಾಬಾದಿನ ‘Citizen’s Initiative’ ಆಶ್ರಯದಲ್ಲಿ ಏಪ್ರಿಲ್ 16, 2002 ರಲ್ಲಿ ಪ್ರಕಟಿಸಿದ ವರದಿ ನಾರೋಡಾ ಪಾಟಿಯಾದಲ್ಲಿ ಸಂಭವಿಸಿದ ಅಪ್ರಾಪ್ತ ವಯಸ್ಸಿನ ಮುಸ್ಲಿಮ್ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ನಡೆದ ಭೀಕರ ಸಾಮೂಹಿಕ ಅತ್ಯಾಚಾರಗಳ ಬೆಚ್ಚಿ ಬೀಳಿಸುವ ವಿವರಗಳನ್ನು ಬಿಚ್ಚಿಡುತ್ತದೆ.

ಅಲ್ಲಿನ ಭಾ.ಜ.ಪ ಶಾಸಕಿ ಮಾಯಾ ಕೊಡ್ನಾನಿ ಆಗ ಸತ್ಯ ಶೋಧನಾ ಸಮಿತಿ ಮಾಡಿದ ಸಂದರ್ಶನದಲ್ಲಿ ಯಾವ ಪಶ್ಚಾತ್ತಾಪವನ್ನೂ ವ್ಯಕ್ತ ಪಡಿಸದೆ , ಸರ್ಕಾರ ಏನೂ ಮಾಡಲು ಸಾಧ್ಯವಿರಲಿಲ್ಲವೆಂದು ಉತ್ತರ ನೀಡಿದ್ದರು. ‘ಗುಜರಾತ್‍ಗಾಗಿ ನನ್ನ ಹೃದಯ ಮಿಡಿಯುತ್ತದೆ. ಗುಜರಾತ್‍ನಿಂದ ನಾನು ದೂರ ಹೋದರೆ, ಆ ಅಗಲಿಕೆಯೆಂಬ ಚೂರಿ ನನ್ನ ಹೃದಯವನ್ನು ಇರಿದು ಘಾಸಿಗೊಳಿಸುತ್ತದೆ. ಈ ಭೂಮಿಯ ಮೇಲೆ ಈ ಅಗಲಿಕೆಯ ನೋವನ್ನು ಶಮನ ಮಾಡುವ ಯಾವ ಮುಲಾಮೂ ಇಲ್ಲ’ ಎಂದು ಭಾವುಕರಾಗಿ ನುಡಿದಿದ್ದ ಸೂಫಿ ಸಂತ – ಕವಿ ವಾಲಿ ಗುಜರಾಥಿ ಅವರ ಮುನ್ನೂರು ವರ್ಷಗಳಷ್ಟು ಹಳೆಯ ಸಮಾಧಿಯನ್ನು ಫೆಬ್ರವರಿ 28, 2002 ರಂದು ಧ್ವಂಸ ಮಾಡಲಾಗಿತ್ತು.

ಹೀಗೆ ಅನೇಕ ಪೈಶಾಚಿಕ ಕೃತ್ಯಗಳನ್ನು ಹಿಂದೂಗಳು ಎಸಗಿದ್ದರು. ಅಲ್ಲಿ ಎಷ್ಟೋ ದಶಕಗಳಿಂದ ನೆಲೆಸಿದ್ದ ತಮ್ಮ ಮುಸ್ಲಿಂ ನೆರೆಹೊರೆಯವರನ್ನು ಕಗ್ಗೊಲೆ ಮಾಡಿದ್ದರು. ಅವರ ಮನೆಗಳಿಗೆ ಬೆಂಕಿಯಿಟ್ಟದ್ದರು. ಅವರ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ , ಅವರನ್ನು ಚಿತ್ರಹಿಂಸೆ ಮಾಡಿ ಕೊಲೆ ಮಾಡಿದ್ದರು.

ಇಂಥಾ ಭೀಕರ ಹತ್ಯಾಕಾಂಡವನ್ನು ಮರೆಯಲಾದೀತೇ? ನಾನಿಲ್ಲಿ ಕೆಲವು ಘಟನೆಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನಷ್ಟೇ. 1947 ರಲ್ಲಿ ಜರುಗಿದ ಭಾರತ- ಪಾಕಿಸ್ತಾನದ ವಿಭಜನೆಯ ದಾರುಣ ಚಿತ್ರಣ ನೀಡಿದ ಸುಪ್ರಸಿದ್ಧ ಉರ್ದು ಲೇಖಕ –ಕತೆಗಾರ ಸಾದತ್ ಹಸನ್ ಮಂಟೋನ ಕಥೆ ‘ ತೋಬಾ ತೇಕ್ ಸಿಂಗ್’ ನೆನಪಾಗುತ್ತಿದೆ. 1955 ರಲ್ಲಿ ಪ್ರಕಟಗೊಂಡ ಈ ಕತೆಯಲ್ಲಿ ಅದ್ಭುತವಾದ ವಿಡಂಬನಾತ್ಮಕ ಶೈಲಿಯಲ್ಲಿ ಮಂಟೋ ಭಾರತದ ವಿಭಜನೆಯ ದುರಂತವನ್ನು ವರ್ಣಿಸುತ್ತಾರೆ.

ವ್ಯಂಗ್ಯ ಮತ್ತು ಹಾಸ್ಯ ಬೆರೆತ ನಿರೂಪಣೆ ನಮ್ಮನ್ನು ವಿಭಜನೆಯ ಅರ್ಥಹೀನತೆಯೊಂದಿಗೆ ಮುಖಾ-ಮುಖಿಯಾಗಿಸುತ್ತದೆ. ಕತೆ ಹೀಗೆ ಸಾಗುತ್ತದೆ : ಮಾನಸಿಕ ಅಸ್ವಸ್ಥರ ಆಸ್ಪತ್ರೆಯೊಂದರಲ್ಲಿ ಇರುವ ಮಾನಸಿಕ ರೋಗಿಗಳನ್ನು ವಿಭಜನೆಯ ನಂತರ ಯಾವ ರೀತಿಯಲ್ಲಿ ಭಾರತ ಹಾಗೂ ಪಾಕಿಸ್ತಾನಿ ಸರ್ಕಾರಗಳು ವಿನಿಮಯ ಮಾಡಿಕೊಳ್ಳಬೇಕೆಂಬ ಬಿಕ್ಕಟ್ಟು ಎದುರಾಗುತ್ತದೆ. ಆಸ್ಪತ್ರೆಯಲ್ಲಿ ಭೀಷನ್ ಸಿಂಗ್ ಎಂಬ ಮಾನಸಿಕ ರೋಗಿಯೊಬ್ಬನಿದ್ದಾನೆ. ಆತನಿಗೆ ತನ್ನ ಊರು ‘ತೋಬಾ ತೇಕ್ ಸಿಂಗ್’ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ಎಂಬ ಸಂದಿಗ್ಧತೆ ಕಾಡುತ್ತದೆ.

ಆತ ಉಭಯ ದೇಶಗಳ ನಡುವೆ ಇರುವ ಹೆಸರಿಲ್ಲದ ಜಾಗದಲ್ಲಿ ಕುಳಿತು ತಾನು ಬೇರೆ ಇನ್ನೆಲ್ಲೂ ಹೋಗುವುದಿಲ್ಲವೆಂದು ಹಠ ಹಿಡಿಯುವುದು, ಸಾಮಾನ್ಯ ಜನರಿಗಾದ ಆಘಾತ, ಗಲಿಬಿಲಿ , ಸಂಕಟಗಳನ್ನು ಮಾರ್ಮಿಕವಾಗಿ ನಿರೂಪಿಸುತ್ತದೆ. ಆಸ್ಪತ್ರೆಯ ರೋಗಿಗಳು ದಿಗ್ಭ್ರಾಂತರಾಗಿದ್ದಾರೆ. ‘ನಾನು ಎಲ್ಲಿಯೂ ಹೋಗದೆ ಇಲ್ಲಿಯೇ ಒಂದು ಮರ ಹತ್ತಿ ಕುಳಿತು ಬಿಡುತ್ತೇನೆ’ ಎನ್ನುವಾಗ ಭಾರತ- ಪಾಕಿಸ್ತಾನದ ವಿಭಜನೆಯಿಂದ ಉಂಟಾದ ಕೋಲಾಹಲ, ಅನರ್ಥಗಳನ್ನು, ಈ ರೂಪಕಗಳ ಮೂಲಕ ಮಂಟೋ ಮನವರಿಕೆ ಮಾಡಿಕೊಡುವ ಅಸಾಧಾರಣ ಕಥನಗಾರಿಕೆ ನಮ್ಮನ್ನು ಮೂಕರನ್ನಾಗಿಸುತ್ತದೆ.

ಪ್ರಪಂಚವೇ ಒಂದು ಹುಚ್ಚರ ಆಸ್ಪತ್ರೆಯಾಗುವ ಅಸಂಗತ ಸನ್ನಿವೇಶವನ್ನು ನಾವು ಇಲ್ಲಿ ಕಾಣಬಹುದು. ಕೋಮುವಾದವೆನ್ನುವುದು ಒಂದು ವೈರಸ್ ಇದ್ದಂತೆ. ಸಾಂಕ್ರಾಮಿಕ ಪಿಡುಗಿನಂತೆ, ಇದು ಶರವೇಗದಲ್ಲಿ ಇಡೀ ಸಮಾಜವನ್ನೇ ಆಹುತಿ ತೆಗೆದುಕೊಂಡುಬಿಡುತ್ತದೆ.

ಸೂಫಿ ಸಂತರ ವಿಶ್ವಮಾನವತಾವಾದ , ಭ್ರಾತೃತ್ವದ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಶೃತಿಯಾಗಿ ಅಳವಡಿಸಿಕೊಂಡರೆ ಎಷ್ಟು ಸೊಗಸು ಅಲ್ಲವೇ ?

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ

Published On - 4:57 pm, Sat, 9 July 22

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM