Global Running Day 2022: ಎದ್ರೀ ಯವ್ವಾ, ನಾವು ಎದ್ವೀ ನೋಡ್ರಿವಾ ಈಗ…

ಶ್ರೀದೇವಿ ಕಳಸದ

|

Updated on:Jun 01, 2022 | 11:30 AM

Run : ಸಣ್ಣಾರಂಗ ಕಾಣ್ಬೇಕಲ್ಲ. ಬಿಪಿ ಶುಗರ್ ದೂರ ಇರಬೇಕಲ್ಲ. ಮನಸು, ಹೃದಯ ಹಸನಾಗಿರಬೇಕಲ್ಲ. ಮತ್ಯಾಕ ತಡ ನಾನಂತೂ ಓಡಾಕ ಹೊಕ್ಕೀನಿ. ನೀವು?

Global Running Day 2022: ಎದ್ರೀ ಯವ್ವಾ, ನಾವು ಎದ್ವೀ ನೋಡ್ರಿವಾ ಈಗ...
ಮಕ್ಕಳೊಂದಿಗೆ ಓಡಲು ಸಿದ್ದ ಸಾವಿತ್ರಿ ಹಟ್ಟಿ

Global Running Day 2022: ಬೆಳ್ ಬೆಳಿಗ್ಗೆನ ಎದ್ದ ಹೆಣ್ಮಕ್ಳು “ಎದ್ರಾ ಯವ್ವ” “ ಎದ್ವಿ, ಎದ್ರಾ ಯವ್ವ” ಅಂತ ನಿದ್ದಿ ಎಂಬ ಮರಣ ಗೆದ್ದು ಎದ್ದ ಸಂಭ್ರಮನ ಹಂಚ್ಕೊಳ್ಳೂದು ಅವಾಗೆಲ್ಲಾ ನಿತ್ಯ ಜೀವನದ ಒಂದು ಅವಿಭಾಜ್ಯ ಭಾಗ ಆಗಿತ್ತು. ಈಗೀಗ ಅಂತಹ ಸಂಭ್ರಮ ಕಾಣ್ವಲ್ದು. ಈಗ ಎಲ್ರೂ ಓಡಾಕ್ಹತ್ತೀವಿ ನಮ್ ನಮ್ಮ ಕೆಲ್ಸದ ಒತ್ತಡದ ಜೊತಿ ನಿರಂತರ ರನ್ನಿಂಗ್ ರೇಸ್ ಏರ್ಪಾಟಾಗೇತಿ. ರನ್ನಿಂಗ್, ವಾಕಿಂಗ್, ಜಾಗಿಂಗ್ ಮಹತ್ವ ತಿಳಿದ ಮಂದಿನೂ ಓಡಾಕ್ಹತ್ಯಾರ ಅವರವರ ಯಾಂತ್ರಿಕ ದಿನಚರಿ ಜೊತಿ. ಬೆಳಿಗ್ಗೆ ಎದ್ದು ಅಂಕಲ್​ಗಳು ಎಷ್ಟೊ ಜನ ಓಡ್ತಾರ. ನಾನೂ ಸಾಕಷ್ಟು ಲಕ್ಷ್ಯಗೊಟ್ಟು ನೋಡ್ತಿರತೀನಿ. ಹೊಟ್ಟಿನ ಮುಂದಕ್ ದಬ್ಬಿಕೊಂಡು ಓಡಾಕ್ಹತ್ಯಾರೊ ಏನ್ ಹಿಂದ ಕಡಕಲು ನಾಯಿ ಬೆನ್ನು ಹತ್ಯಾದೊ ಅನ್ನುವಂಗ ತೀರಾ ಒತ್ತಡಕ್ಕ ಸಿಕ್ಕು ಓಡ್ತಿರತಾರ. ಮಧ್ಯ ವಯಸ್ಸಿನ ಆಂಟಿಯರು ಗೋಣಿ ಚೀಲ ಹಾಕ್ಕೊಂಡು ದಸ್ ಬಾಯಿ ಬಿಟ್ಕೊಂತ ನಡೀತಿರತಾರ. ಸಣ್ಣ ವಯಸ್ಸಿನ ಹುಡುಗ್ರು ಮೊಬೈಲ್ ಮುಖ ಸವರ್ಕೊಂತ ವಾಸ್ತವದ ಜೀವನ ಮರತು ಕಾಣದ ಕಡಲಿನ‌ ಕಡೆ ಓಡಾಕ ನಿಂತಾರ ಜಾಸ್ತಿ. ಸಾವಿತ್ರಿ ಹಟ್ಟಿ (Savitri Hatti)

ಬ್ಯಾಸಿಗಿ ರಜೆಕ ತವರಮನಿಗಿ ಹೋದಾಗ ತಂಗಿ ಮನಿಯಿಂದ ಅವ್ವಾರ ಮನಿಗಿ ಹೋಗುವಾಗ ನಮ್ ಹೊಲದ ಕ್ರಾಸ್ ಹತ್ರ ಇಳದು ಓಡಿದೆ. ಅದು ನಾನು ಓಡಾಡಿದ ರಸ್ತೆ. ಕಾಲು ಓಡುನಡಿಗಿ ಮ್ಯಾಲಿದ್ವು. ಮನಸು ಅದ್ಕಿಂತ ಜೋರಾಗಿ ಓಡಾಕ್ಹತ್ತಿತ್ತು. ಕಾಲು ಮುಂದ ಮುಂದ ಹೊಂಟ್ರೂ ಮನಸು ಹಿಂದಕ್ಕ ಯಾಡ್ ದಶಕದಾಚೆಕ ಹೊಂಟಿತ್ತು.

ಗದಗಿನ ದಾರಿ ಹಿಡದು ಓಡ್ಕೊಂತ ಸಂಭಾಪುರ ಕ್ರಾಸ್ ತಿರುಗಿ ಪಾಪನಾಶಿ ತನಕ ಓಡಿ ಮತ್ತೆ ಅಲ್ಲಿಂದ ಪೂರ್ವಕ್ಕ ಲಕ್ಕುಂಡಿ ಕಡೆ ಮುಖ ಮಾಡ್ತಿದ್ದ ದಿನಗಳ ನೆನಪು ಕಾಡಾಕ್ಹತ್ತು. ಎಂಥಾ ಕಲ್ಲು, ಮಣ್ಣಿನ ದಾರಿನೂ ನನ್ನ ಓಟಕ್ಕ ಹಿಂಜರಿಕೆ ಕೊಟ್ಟಿರಲಿಲ್ಲ. ಈಗ ಎತ್ತ ನೋಡಿದರೂ ನುಣುಪಾದ ರಸ್ತೆಗಳು. ಈಗ ಓಡೂದಾದ್ರ ಎಂಥಾ ಸಂಭ್ರಮ ಅನ್ನಿಸ್ತು! ಹಂಗ ಯೋಚಿಸ್ಕೊಂತ ದಾರಿ ತಪ್ಪಿದೆನೊ ಏನೊ ಅಂತ ಎದೆ ಡವ ಡವ ಬಡ್ಕೊಂತು. ಅವ್ವಾರ ಹೊಲನ ಬರವಲ್ದು. ಎಷ್ಟಕೊಂಡ ನಡದೇ ನಡಿದೆ. ಕೈಯಾಗ ಒಂದು ಚೀಲ ಒಂದೀಟು ವಜ್ಜೆನ ಅನ್ನಿಸ್ತು. ತಲಿ ಮ್ಯಾಲೆ ಸೂರ್ಯಪ್ಪನ ಛತ್ರಿ ಇತ್ತಲ್ಲ ದಳದಳ ಬೆವರ್ಕೊಂತ ಹೊಂಟೆ. ಕಡಿಗಿ ನಮ್ ಹೊಲ ಕಂಡಾಗ ಖುಷಿಯಾಗಿ ಓಡಿತು ‌ಮನಸು. ಆದ್ರ ಕಾಲಿಗೆ ಓಡೂವಾಸೆ ಇದ್ರೂನೂ ದೇಹಕ್ಕಂಟಿದ ಸಣ್ಣ ಕುಂಬಳಕಾಯಿ ಓಡಾಕ ಸಹಕರಿಸಲಿಲ್ಲ. ಅಂತೂ ಓಡುನಡಿಗೆಲಿ ಹೊಲ ಮುಟ್ಟಿದೆ. ಎಷ್ಟು ದೀರ್ಘ ಹೊತ್ತು ತಗೊಂಡೆ ಅನ್ನಿಸ್ತು.

ಇದನ್ನೂ ಓದಿ

ಬದುಕಿನ ಓಟ ಅವಸರಕ್ಕ ಇಟ್ಕೊಂಡ ಪರಿಣಾಮ ಕಾಲಿನ ಓಟ ನಿಂತಿದ್ದೇ ಎಲ್ಲಾ ಸಮಸ್ಯೆಕೂ ಮೂಲ ಅನ್ನಿಸಾಕ್ಹತ್ತೇತಿ. ಈಗ ಯಾಡ್ ದಿನದಿಂದ ಮಕ್ಕಳ ಜೊತಿ ಮತ್ತೆ ಸಂಜೆ ವಾಕ್ ಹೊಂಟೀನಿ. ಇವತ್ತ ವಿಶ್ವ ಓಟದ ದಿನ ಅಂತ. ಇದರ ನೆವದಾಗ ಮಕ್ಕಳ ಆಸೆನೂ ನೆರವೇರಿಸಿದಂಗ ಆಗುತ್ತಲ್ಲ ಒಂದೀಟು ದೂರ ಓಡೇ ಬಿಡಬೇಕು ಅಂತ ಅನ್ಕೊಂಡೀನಿ. ಓಡಿದ ನಂತ್ರ ಅನುಭವ ಹಂಚ್ಕೊಂತೀನಿ.

ಇದನ್ನೂ ಓದಿ : Books Day 2021 : ನನ್ನ ಸಮಯವೆನ್ನುವುದು ಮತ್ತೆ ನನಗೀಗ ಸಿಕ್ಕಿದೆ

ಮುಖ್ಯವಾಗಿ ಓಡ್ಯಾರ ಓಡ್ರಿ ನಡದಾರ ನಡೀರಿ. ಅದ್ರ ಖುಷಿಯಾಗಿ ಓಡ್ರಿ. ಕಚೇರಿ ಕಾರುಬಾರು, ಮನಿ ರಗಳಿನೆಲ್ಲ ಕಟ್ಕೊಂಡು ಓಡ್ಬಾರದು. ಓಡೂವಾಗ ಓಟದ ಕಡೇನ ಉಸಿರಾಡ್ತಿದ್ರ ಮಾತ್ರ ನಾವು ಖುಷಿಯಾಗಿರಾಕ ಸಾಧ್ಯ . ಸಣ್ಣಾರಂಗ ಕಾಣ್ಬೇಕಲ್ಲ. ಬಿಪಿ ಶುಗರ್ ದೂರ ಇರಬೇಕಲ್ಲ. ಮನಸು, ಹೃದಯ ಹಸನಾಗಿರಬೇಕಲ್ಲ. ಮತ್ಯಾಕ ತಡ ನಾನಂತೂ ಓಡಾಕ ಹೊಕ್ಕೀನಿ. ನೀವು?

*

ಗಮನಿಸಿ : ವಿಶೇಷ ದಿನಗಳ ಸಂದರ್ಭಕ್ಕೆ ನೀವೂ ಕೂಡ ನಿಮ್ಮ ವಿಚಾರ, ಅನುಭವವನ್ನು ಬರೆಯಬಹುದು. ಒಂದು ವಾರ ಮೊದಲು ಸುಮಾರು 300 ಪದಗಳಲ್ಲಿ ನಿಮ್ಮ ಫೋಟೋದೊಂದಿಗೆ ಬರಹ ನಮ್ಮನ್ನು ತಲುಪಲಿ. 

ಪ್ರತಿಕ್ರಿಯೆಗಾಗಿ : tv9kannadadigital@gmail.com

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada