Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.
ಧಾರವಾಡದ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಮಾತನಾಡಿದಾಗ…
ನಾವು ಕನ್ನಡಿಗ ನಾಗರಿಕರು. ವ್ಯವಹಾರವನ್ನು ಎಲ್ಲರೂ ಕೂಡಿಯೇ ಮಾಡುವುದು. ವ್ಯವಹಾರದಿಂದಲೇ ಮನುಷ್ಯ ಬದುಕುವುದು. ವ್ಯವಹಾರ ಎನ್ನುವುದು ಬದುಕಲು ಇರುವ ಒಂದು ಸಾಧನ. ಯಾವ ಧರ್ಮದಲ್ಲಿ ಹುಟ್ಟಿದವರೂ ಯಾವ ವ್ಯವಹಾರವನ್ನೂ ಮಾಡಬಹುದು. ಧರ್ಮಕ್ಕೂ ಅದನ್ನು ತಳಕು ಹಾಕಬಾರದು. ನಾಗರಿಕ ಜೀವನದಲ್ಲಿ ನಾವೆಲ್ಲರೂ ಒಂದಾಗಿಯೇ ಬದುಕಬೇಕು. ಕನ್ನಡನಾಡಿನಲ್ಲಿರುವವರೆಲ್ಲ ಕನ್ನಡಿಗರು. ಭಾರತದಲ್ಲಿ ಇರುವವರು ಭಾರತೀಯರು. ನಾವು ಭಾರತೀಯರಲ್ಲಿ ಅನೇಕ ಧರ್ಮದವರಿದ್ದೇವೆ. ಧರ್ಮಗಳ ಸಾಮರಸ್ಯ ದೊಡ್ಡದು. ಈ ಸಾಮರಸ್ಯದಿಂದಲೇ ನಾವು ಮಾನವರಾಗಿ ಬದುಕುತ್ತಿದ್ದೇವೆ.
ಅವರವರ ಇಷ್ಟದೈವ ಬೇರೆ ಬೇರೆ. ನನ್ನ ಇಷ್ಟದೈವ ಬೇರೆ ಇರಬಹುದು. ನನ್ನ ನೆರೆಯವರ ಇಷ್ಟದೈವ ಬೇರೆ ಇರಬಹುದು. ಶಕ್ತಿಗಳು ಬೇರೆಬೇರೆಯಾದರೂ ಬೆಳೆಯುತ್ತಿರುವ ಭಕ್ತಿ ಭಾವ ಒಂದೇ. ದೇವರು ಎನ್ನುವುದು ಒಂದು ಪರಿಕಲ್ಪನೆ; ನಮ್ಮ ತಿಳಿವಳಿಕೆ ನಮ್ಮ ಜ್ಞಾನ. ಯಾವ ದೇವರನ್ನು ಯಾರು ನೋಡಿದ್ಧಾರೆ? ಅಲ್ಲಾ, ಶಿವ, ಏಸು ಇವೆಲ್ಲ ನಮ್ಮ ಕಲ್ಪನೆಗಳಷ್ಟೇ. ಮಹಾಂತರು, ಜನರು ಗುರುತಿಸಿದ ವಿವಿಧ ದೇವತೆಗಳು. ಒಬ್ಬನಲ್ಲದೆ ಜಗಕೆ ಇಬ್ಬರುಂಟೆ? ಈಶ್ಚರ, ಅಲ್ಲಾ ತೇರೇ ನಾಮ್ ಇದು ನಮ್ಮ ಭಜನೆ. ಖಂಡಿತ ಶ್ರೀರಾಮಸೇನೆಯವರು ಮಾಡಿದ್ದು ಸೂಕ್ತವಲ್ಲ.
ನಮ್ಮ ಉಪಾಸನೆಗೆ ಅವರು ತೊಂದರೆ ಕೊಟ್ಟಾಗ ವಿಚಾರಣೆ ಮಾಡಬೇಕು. ಅವರ ಉಪಾಸನೆಗೆ ನಾವು ತೊಂದರೆ ಕೊಟ್ಟಾಗಲೂ ವಿಚಾರಣೆ ನಡೆಯಬೇಕು. ಒಟ್ಟಿನಲ್ಲಿ ಅವರವರ ಉಪಾಸನೆಗಳಿಗೆ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು. ಇದು ಮಾನವ ಧರ್ಮ.
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ; ‘ಸಾಕ ನಿಲ್ಲಸ್ರೀ ಆರ್ತನಾದ, ಬುದ್ಧಿವಂತಿಕೆಯಿಂದ ಬಲಿಷ್ಠ ‘ನಾದ’ ಹೊಮ್ಮಿಸ್ರೀ’
ದೇವರು ಎಂಬ ನಂಬಿಕೆ ಅವರವರದು. ಅವರವರ ನಂಬಿಕೆ ಅವರಿಗೆ. ಇನ್ನೊಬ್ಬರ ನಂಬಿಕೆಯ ಮೇಲೆ ಆಕ್ರಮ ಮಾಡಬಾರದು. ಇನ್ನು ಮನುಷ್ಯ ಧರ್ಮಕ್ಕೆ ಚ್ಯುತಿ ಬಂದಾಗ ಮಾನವರೆಲ್ಲಾ ಒಂದು. ನಮ್ಮ ನಮ್ಮ ಉಪಾಸನೆ ನಂಬಿಕೆ ಬೇರೆ ಇರಬಹುದು. ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಮ್ಮ ಸಂವಿಧಾನದಲ್ಲಿಯೇ ಉಲ್ಲೇಖವಿದೆ. ಕೂಡಿ ಬಾಳಿಯೇ ನಮ್ಮ ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕು. ಈ ತತ್ವಕ್ಕೆ ವಿರುದ್ಧವಾಗಿ ಇದ್ದವರು ಅಪರಾಧಿಗಳು.
ಇನ್ನು ರಾಜಕೀಯ ವ್ಯಕ್ತಿಗಳು, ನೀವು ಯಾವ ಕ್ಷೇತ್ರದಿಂದಲೇ ಸ್ಪರ್ಧಿಸಲಿ, ಆ ಕ್ಷೇತ್ರದ ಜನರನ್ನು ಸಮಾನವಾಗಿ ಪ್ರೀತಿಸಬೇಕು. ಆಯಾ ಜನರ ಭಾಷೆಯನ್ನು ಸಂಸ್ಕೃತಿಯನ್ನು ಪ್ರೀತಿಸಬೇಕು. ಅದನ್ನು ಶ್ರದ್ಧೆಯಿಂದ ಒಪ್ಪಿಕೊಳ್ಳಬೇಕು. ಹೀಗಿದ್ದಾಗ ತಕರಾರು ಬರುವುದೇ ಇಲ್ಲ.
ಕಲೆಯಲ್ಲಿ ದೊಡ್ಡ ಪರಂಪರೆಯೇ ಇದೆ. ಸಹಜವಾಗಿ ಬದುಕಿದಂಥ ಘನವಾದ ಇತಿಹಾಸವಿದೆ. ಸಾಮೂಹಿಕ ಸಾಮರಸ್ಯ ಇಂದಿನ ಅಗತ್ಯ. ಇದು ನಮ್ಮ ದೇಶದಲ್ಲಷ್ಟೇ ಅಲ್ಲ. ಎಲ್ಲಾ ಜಗತ್ತಿಗೂ ಸಂಬಂಧಿಸಿದ್ದು. ಜಾತಿ ವಿಭಜನೆ ಯಾವತ್ತೂ ರಾಜಕಾರಣ ಸೃಷ್ಟಿಸುತ್ತದೆ. ಸಾಹಿತ್ಯ-ಸಂಗೀತ-ಕಲೆ ಸಾಮೂಹಿಕ ಸಾಮರಸ್ಯದತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಪಂ. ಮಲ್ಲಿಕಾರ್ಜುನ ಮನ್ಸೂರ ಅವರು ಅಲ್ಲಾದಿಯಾ ಖಾನ್ ಶಿಷ್ಯರು. ಕವಿ ಬಿ. ಎ. ಸನದಿ ಮುಸಲ್ಮಾನರಲ್ಲ. ಕನ್ನಡದ ಕವಿ. ನನ್ನ ಆಪ್ತ ಸ್ನೇಹಿತರಾಗಿದ್ದರು. ಹಾಗೆಯೇ ನಿಸಾರ್ ಅಹಮ್ಮದ್ ಕೂಡ. ನಾವೆಲ್ಲ ಅಭಿರುಚಿಯಿಂದ ಒಂದಾದವರು.
ಬೇಂದ್ರೆ, ಕಾರಂತ ಬ್ರಾಹ್ಮಣ, ಕುವೆಂಪು ಒಕ್ಕಲಿಗ, ಬಾಲೇಖಾನ್, ಫಯಾಝ್ಖಾನ್ ಮುಸ್ಲಿಮ್, ಮನ್ಸೂರ್, ರಾಜಗುರು, ವೆಂಕಟೇಶಕುಮಾರ ಹೀಗೆ ಒಬ್ಬೊಬ್ಬರು ಒಂದೊಂದು ಜಾತಿ ಧರ್ಮ. ಅಂತಿಮವಾಗಿ ವೈಯಕ್ತಿಕ ಪ್ರತಿಭೆ ಎನ್ನುವುದು ಸಾಮೂಹಿಕ ಕೊಡುಗೆ. ಕೊಡುಗೆ ವಿಷಯಕ್ಕೆ ಬಂದಾಗ ಜಗತ್ತು ನಮ್ಮನ್ನು ಗುರುತಿಸುವುದು ಕನ್ನಡ ನಾಡಿನವರು, ಭಾರತೀಯರು ಎಂದು. ಹಾಗಾಗಿ ಈ ಪ್ರಜ್ಞೆ ನಮಗೆ ಯಾವಾಗಲೂ ಮುಖ್ಯ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಸುಗಂಧ ಸೂಸುವ ನದಿಯಂತೆ, ಮೃತನದಿಯನ್ನು ಸೇರಲಿಹವು
Published On - 11:22 am, Tue, 12 April 22