Mother‘s Day : ನನ್ನಲ್ಲಿ ನಾಸ್ತಿಕತೆಯ ಬೀಜ ಮೊದಲು ಬಿತ್ತಿದ್ದೇ ನನ್ನಮ್ಮ

ಆದರೆ ನನ್ನ ಚಿಂತೆಯೇ ಬೇರೆಯಾಗಿತ್ತು! ಇಬ್ಬರಲ್ಲಿ ಕನಿಷ್ಟ ಒಬ್ಬರಾದರೂ ಸುಳ್ಳು ಹೇಳುತ್ತಿದ್ದಾರೆ. ಒಂದು ಆಣೆಯಾದರೂ ಸುಳ್ಳಾಗಿ ನಾನು ಸತ್ತು ಹೋಗಿಬಿಟ್ಟರೆ? ಇಬ್ಬರಲ್ಲಿ ಒಬ್ಬರಿಗೂ ಸಹ ತನ್ನ ಮಗನ ಸಾವಿನ ಬಗ್ಗೆ ಆತಂಕವೇ ಇಲ್ಲವಲ್ಲ ಅಂತ ಖೇದವಾಯಿತು. ಅಮ್ಮ ಅದಾಗಲೇ ವೈದ್ಯರ ವಿಷಯದಲ್ಲಿ ಪುತ್ರದ್ರೋಹಿಯಾಗಿದ್ದಳು, ಅಪ್ಪ ಕೂಡ ಈಗ ಅದೇ ವರ್ಗಕ್ಕೆ ಸೇರಿಬಿಟ್ಟಿದ್ದರು. ಇಬ್ಬರಿಗೂ ಬೇಡವಾದ ಕೂಸು ನಾನು ಅಂತ ಅದೆಂಥ ಅನಾಥ ಪ್ರಜ್ಞೆ ಕಾಡಿತ್ತು ನನಗೆ!

Mother‘s Day : ನನ್ನಲ್ಲಿ ನಾಸ್ತಿಕತೆಯ ಬೀಜ ಮೊದಲು ಬಿತ್ತಿದ್ದೇ ನನ್ನಮ್ಮ
ಲೇಖಕ ಶ್ರೀಹರ್ಷ ಸಾಲೀಮಠ

ಬೇರುಗಳನ್ನು ಕಿತ್ತುಕೊಂಡು ಗಾಯಗೊಂಡ ರೆಕ್ಕೆಗಳನ್ನೇ ನೆಚ್ಚಿಕೊಂಡು ಒಂದೇ ಪರಿಚಯವಿರದ ಸಿಡ್ನಿ ಮಾಯಾನಗರಿಗೆ ಹೊರಟಾಗ ಕಳಿಸಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ನನ್ನಮ್ಮ ಜಗತ್ತಿನ ಅರಿವನ್ನೇ ಬದಿಗಿಟ್ಟ ಬುದ್ದನಂತೆ ಶಾಂತಮುದ್ರೆಯಲ್ಲಿ ಕಡೆಯವರೆಗೂ ಕುಳಿತಿದ್ದರು. ಮನದೊಳಗೆ ಕಡಲು ಕೊರೆಯುತ್ತಿತ್ತೊ, ಅಂಟಾರ್ಟಿಕದ ಮಂಜುಗಡ್ಡೆಯಿತ್ತೊ, ಸಿಡಿಯುವ ಲಾವಾರಸವಿತ್ತೋ ಮುಖ ಮಾತ್ರ ಯಾವ ಪ್ರಚೋದನೆಗೊಳಪಡದೇ ಕೂತಿತ್ತು. ಒಂದೇ ಒಂದು ಮಾತಿಲ್ಲ. ಕಡೆಗೆ ಹೋಗುವಾಗ ಕಾಲು ಮುಟ್ಟಿ ನಮಸ್ಕರಿಸಿದರೆ “ಹಂ” ಎಂದ ಅರೆ ಹೃಸ್ವದ ಉದ್ಗಾರ ಅಷ್ಟೇ!  ಅದಾದ ಮೇಲೆ ನಾನು ಮತ್ತೆ ಅಮ್ಮನನ್ನು ಎಂದಿಗೂ ಎದುರು ಬದುರಿಗೆ ನೋಡಲಾರೆ ಅಂತ ಬಲವಾಗಿ ಅನ್ನಿಸಿತ್ತು. ಅನಿಸಿಕೆ ವಾಸ್ತವಕ್ಕೆ ಹೆಚ್ಚು ದೂರವೂ ಅಗಲಿಲ್ಲ.

ತಾಯಿಯ ಬಗೆಗಿನ ಸಿನಿಮಾಗಳಲ್ಲಿ ಪುಸ್ತಕಗಳಲ್ಲಿ ಬರುವ “ಗ್ಲಾಮರೈಸ್ಡ್” ವರ್ಣನೆಯನ್ನು ನೋಡಿದಾಗ ಅದನ್ನು ನನ್ನ ಮಟ್ಟಿಗೆ ಪ್ರಸ್ತುತಗೊಳಿಸುವುದು ನನಗೆ ಬಹಳ ಕಷ್ಟ. ನನಗೆ ತಾಯಿ ಅಂದರೆ ಹಿಂಗೆ ಇರುವುದು ಸಾಧ್ಯವೇ ಅನ್ನಿಸುವಷ್ಟರ ಮಟ್ಟಿಗೆ ಅಚ್ಚರಿಯಾಗುವುದುಂಟು. ನನ್ನ ಮಾತ್ರವಲ್ಲ ನನ್ನ ಹತ್ತಿರದ ಬಂಧುಗಳಲ್ಲೂ ಸಹ ಆ ಮಟ್ಟಿನ ಸೆಂಟಿಮೆಂಟುಗಳು, ಕರುಳು ಕಕ್ಕಲಾತಿಗಳು ಕಣ್ಣಾರೆ ನೋಡಿದ್ದು ಕಡಿಮೆ. ಬಹುತೇಕರು ತನ್ನ ತಾಯಿ ಸತ್ತಾಗ ಔಪಚಾರಿಕವಾಗಿಯಾದರೂ ಅತ್ತಿದ್ದು ನೋಡಿಲ್ಲ. ಎಲ್ಲ ನಿಂತು ನಡೆಸಬೇಕಾದ ಮಕ್ಕಳೇ “ಮಣ್ಣು ಎಷ್ಟೊತ್ತಿಗೆ?” ಅಂತ ಕೇಳಿಕೊಂಡು ಸರಿಯಾಗಿ ರುದ್ರಭೂಮಿಗೆ ಬಂದು ಮಣ್ಣು ಹಾಕಿ ಹಂಗೇ ವಾಪಸು ಹೋಗಿದ್ದನ್ನು ಕಂಡಿದ್ದೇನೆ.  ಕಾದಂಬರಿ ಸಿನಿಮಾಗಳಲ್ಲಿ ಬರುವಷ್ಟು ಅಪ್ಯಾಯಮಾನತೆ ನನ್ನ ತಾಯಿಯೊಡನೆ ನನಗೆ ಇದ್ದದ್ದು ನೆನಪಿಲ್ಲ. ನನಗೆ ನನ್ನ ತಾಯಿ ಮುದ್ದು ಮಾಡಿದ್ದು ಒಟ್ಟೆಂದರೆ ಒಟ್ಟೇ ನೆನಪಿಲ್ಲ. ಒಂದೆರಡು ಸಾರಿ ಹೊಡೆದದ್ದು ನೆನಪಿದೆ. ತಾಯಿಗಿಂದ ಚಿಕ್ಕಮ್ಮ ಅತ್ತೆ ಅಕ್ಕಂದಿರ ಜೊತೆಗೇ ನನಗೆ ಸಲುಗೆ ಜಾಸ್ತಿ.

ನನ್ನ ತಾಯಿಯದು ನಿರ್ಭಾವುಕ ಮುಖ ಮತ್ತು ಪ್ರಶಾಂತ ಸ್ಥಿತಿ. ಮನದೊಳಗಿನದು ಮುಖದ ಮೇಲೆ ಒಂದು ಗೆರೆಯಷ್ಟೂ ಕಂಡದ್ದಿಲ್ಲ. ಆಕೆ ಒಳ್ಳೆಯ ಗಾಯಕಿಯಾಗಿದ್ದರು. ಅದರೆ ಹಾಡುವಾಗ ಕೂಡ ಈ ಹಾಡುಗಾರ-ಗಾರ್ತಿಯರು ಮುಖದ ಮೇಲೆ ಮೂಡಿಸುವ ಸೊಳ್ಳಂಬಳ್ಳ ಮುಖಚರ್ಯೆ ನನ್ನ ತಾಯಿಯ ಮುಖದ ಮೇಲೆ ಕಂಡಿದ್ದಿಲ್ಲ. ನಾನು ನನ್ನ ತಾಯಿಯ ಹೆಗಲ ಮೇಲೆ ಕೈ ಬಳಸಿಕೊಂಡೋ ಅಪ್ಪಿಕೊಂಡೋ ನಿಂತ ಒಂದೇ ಒಂದು ಫೋಟೋ ನನ್ನದಿಲ್ಲ. ಹಾಗಾಗಿ ಫೇಸ್ಬುಕ್ಗಳಲ್ಲಿ ತಾಯಿಯ ಬಗ್ಗೆ ಎಲ್ಲ ಹಾಕಿಕೊಳ್ಳುವುದೂ ಅಷ್ಟೊಂದು ಸತ್ಯವೇ ಅಂತ ನಾನು ಅಚ್ಚರಿ ಪಟ್ಟದ್ದುಂಟು. ನನ್ನ ಸಂಬಂಧಿಕನೊಬ್ಬ ಪ್ರತಿ ವರ್ಷ ತನ್ನ ಮತ್ತು ತನ್ನ ತಾಯಿಯ ಅನ್ಯೋನ್ಯತೆಯ ಬಗ್ಗೆ ಬರೆದುಕೊಳ್ಳುತ್ತಾನೆ. ಅದರೆ ಆತನ ತಾಯಿ ತೀರಿ ಹೋದಾಗ ಬೀದಿ ಹೆಣದಂತೆ ಅನಾಥವಾಗಿ ಶವ ಜಗುಲಿಯ ಮೇಲೆಯೇ ಬಿದ್ದುಕೊಂಡದ್ದು ನೆನಪಾಗುತ್ತದೆ.  ಹಾಗಾಗಿ ಎಲ್ಲ ಸೆಂಟಿಮೆಂಟಲ್ ಕತೆಗಳ ಬಗ್ಗೆ ನನಗೆ ಅಷ್ಟು ನಂಬಿಕೆಯಿಲ್ಲ.

ನನ್ನಲ್ಲಿ ನಾಸ್ತಿಕತೆಯ ಬೀಜ ಮೊದಲು ಬಿತ್ತಿದ್ದೇ ನನ್ನಮ್ಮ ಅನ್ನಬಹುದು. ನನಗೆ ಇಂಜಕ್ಷನ್ ಎಂದರೆ ಭಯ. ಈಗಲೂ ಭಯ! ನಾನು ಆರೋ ಏಳೋ ವರ್ಷದವನಿರಬಹುದೇನೊ. ನನಗೆ ಜ್ಚರ ಬಂದಿದೆ ಎಂಬ ಕಾರಣಕ್ಕಾಗಿ ಮನೆ ಹತ್ತಿರದ ವೈದ್ಯರ ಬಳಿ ತೋರಿಸಲು ಕರೆದುಕೊಂಡು ಹೋಗುತ್ತಿದ್ದರು. ನಾನು ದಾರಿಯುದ್ದಕ್ಕೂ ನನಗೆ ಇಂಜಕ್ಷನ್ ಬೇಡ, ಇಂಜಕ್ಷನ್ ಕೊಡಸಲ್ಲ  ಅಂತ ಹೇಳು ಅಂತ ಪದೇ ಪದೇ ಹೇಳುತ್ತಿದ್ದೆ. ನನ್ನಮ್ಮ “ಆಯ್ತು, ಕೊಡಸಲ್ಲ ಬಾ” ಅಂತ ಅಷ್ಟು ಸಾರಿ ಹೇಳಿದರೂ ನಾನು ಪಟ್ಟು ಬಿಡದೇ “ಎಲ್ಲಿ ದೇವರಾಣೆ ಹಾಕಿ ಹೇಳು” ಅಂತ ಕೇಳಿದೆ. ದಿನಾ ಮುಂಜಾನೆ ಮುಕ್ಕಾಲು ತಾಸು ದೇವರಕೋಣೆಯಲ್ಲಿ ಆಕೆ ಸಮಯ ಕಳೆಯುತ್ತಿದ್ದರಿಂದ ಆಕೆ ದೈವಭಕ್ತೆಯೆಂದೂ ದೇವರ ಆಣೆಗೆ ಆಕೆಯಲ್ಲಿ ಮನ್ನಣೆ ಇರಬಹುದೆಂದೂ ಎಣಿಸಿದ್ದೆ. ಉತ್ತರವಾಗಿ ಆಕೆ “ದೇವರಾಣೆಗೂ ನಿನ್ನಾಣೆಗೂ ಇಂಜಕ್ಷನ್ ಕೊಡಸಲ್ಲ ಬಾ” ಅಂತ ಎಳೆದುಕೊಂಡು ಹೋದರು. ಆಣೆ ಹಾಕಿದ ಮೇಲೆ ನಾನು ಧೈರ್ಯದಿಂದ ನಡೆದೆ. ಅಲ್ಲಿ ವೈದ್ಯರು ನನ್ನ ಪರೀಕ್ಷೆ ಮಾಡಿ ಮೆಡಿಸಿನ್ ಕೊಡ್ತೀನಿ ಕೊಡಿ ಅಂತ ಬರೆಯತೊಡಗಿದರು. ನನ್ನಮ್ಮ ತಾನೇ ಮೇಲೆ ಬಿದ್ದು “ಇಂಜಕ್ಷನ್ ಕೊಡಲ್ವಾ ಡಾಕ್ಟ್ರೇ?” ಅಂತ ಕೇಳಿದರು. ನನಗೆ ನೆಲವೇ ಕುಸಿದಂತಾಯಿತು. ಮೊದಲನೆಯದು ನನ್ನ ತಾಯಿ ನನಗೆ ಮಾಡಿದ ನಂಬಿಕೆ ದ್ರೋಹ. ಎರಡನೆಯದು ದೇವರ ಮೇಲೆ ಆಣೆ ಹಾಕಿ ದೇವರು ಸತ್ತು ಹೋದರೆ ಹಾಳಾಗಿ ಹೋಗಲಿ ನನ್ನ ಮೇಲೆ ಆಣೆ ಹಾಕಿದ್ದಾಳಲ್ಲ ನಾನು ಸತ್ತು ಹೋದರೆ? ಪುಣ್ಯವಶಾತ್ ಡಾಕ್ಟರು ಇವತ್ತು ಕರೆಂಟಿಲ್ಲ ಇದ್ದಿದ್ದರೆ ಕೊಡ್ತಿದ್ದೆ ಅಂತ ಉತ್ತರ ಕೊಟ್ಟು ನಿರಾಕರಿಸಿದರು. ಅವತ್ತು ಕರೆಂಟು ತೆಗೆದವನ ಹೊಟ್ಟೆ ತಣ್ಣಗಿರಲಿ!

mothers day

ಸೌಜನ್ಯ : ಐಸ್ಟಾಕ್

ಆಣೆಯ ಇನ್ನೊಂದು ಪ್ರಸಂಗದಲ್ಲಿ ಒಮ್ಮೆ ನನ್ನ ತಂದೆಗೂ ನನ್ನ ತಾಯಿಗೂ ಜಗಳವಾಯಿತು. ಅವರಿಬ್ಬರಿಗೂ ಜಗಳ ಆಡಲು ವಿಷಯ ಬೇಕೇ ಬೇಕೆಂದಿರಲಿಲ್ಲ. ಇವತ್ಯಾಕೋ ಉಂಡಿದ್ದು ಜೀರ್ಣ ಆಗಿಲ್ಲ ಅನ್ನಿಸುತ್ತಿದ್ದಂತೆ ಜಗಳ ಶುರುಹಚ್ಚಿಕೊಂಡುಬಿಡೋರು. ಈ ಬಾರಿಯ ಜಗಳ ಏನೆಂದರೆ ನೀನು ನನಗೇನೋ ಅಂದೆ ಅದಕ್ಕೆ ನನಗೆ ಬೇಜಾರಾಯಿತು ಅಂತ ಅಪ್ಪ, ನಾನು ಹಾಗಂದೇ ಇಲ್ಲ ಎಂದು ಅಮ್ಮ! ಜಗಳ ಆಡುವಾಗ ನಮ್ಮ ತಾಯ್ತಂದೆಯರ ಕನ್ನಡ ಕೇಳಲು ಬಹಳ ಸೊಗಸಾಗಿರುತ್ತಿತ್ತು. ಜನಪದ ಕತೆಗಳು ಉದಾಹರಣೆಗಳು ಅಣಿಮುತ್ತುಗಳು ಗಾದೆಗಳು ಲೋಕಾರೂಢಿಗಳೆಲ್ಲ ಸಂಶೋಧಕರ ಬರಹಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಪಟ್ಟಿಯಾಗುತ್ತಿದ್ದವು. ಈ ಜಗಳ ತಾರಕಕ್ಕೆ ಹೋಗಿ ಇಬ್ಬರ ಜಗಳವನ್ನು ನೋಡುತ್ತಾ ಜ್ಞಾನವೃದ್ಧಿ ಮಾಡಿಕೊಳ್ಳುತ್ತಿದ್ದ ನನ್ನನ್ನು ಸುಖಾಸುಮ್ಮನೆ ಭೌತಿಕವಾಗಿಯೂ ತಾತ್ವಿಕವಾಗಿಯೂ ನೈತಿಕವಾಗಿಯೂ ನಡುವೆ ಎಳೆದು ನನ್ನಪ್ಪ “ಹೆತ್ತ ಕೂಸಿನ್ ಮ್ಯಾಲ ಆಣಿ ಹಾಕಿ ಹೇಳ್ತಿನಿ ನೀ ಖರೇವಂದ್ರೂ ನನಗ ಹಂಗಂದಿ” ಅಂದು ನನ್ನ ತಲೆ ಮೇಲೆ ಕೈಯಿಟ್ಟರು. ನನ್ನಮ್ಮ ಒಡಲಲ್ಲಿ ಹೊತ್ತದ್ದರಿಂದ ಹೆಚ್ಚಿನ ಹಕ್ಕನ್ನು ಹೊಂದಿದವಳಲ್ಲವೇ? ಆಕೆ ನನ್ನನ್ನು ಮತ್ತಷ್ಟು ರಭಸದಿಂದ ಎಳೆದು “ನಾನು ಹೆತ್ತ ಕೂಸು. ನಾನು ಆಣಿ ಮಾಡಿ ಹೇಳ್ತೀನಿ ಹಂಗಂದಿಲ್ಲ ನಾ” ಅಂತ ಅಂದರು. ಹೀಗೆ ಇಬ್ಬರೂ ನನ್ನನ್ನು ಎಳೆದಾಡಿ ಹದಿನೈದಿಪ್ಪತ್ತು ಸಾರಿ ನನ್ನ ಮೇಲೆ ಆಣೆ ಮಾಡಿದರು. ಸುತ್ತಲೂ ನಿಂತು ನೋಡುತ್ತಿದ್ದ ಬಂಧುಗಳು ಜಗಳದ ಬಗ್ಗೆ ನಿರ್ಲಿಪ್ತತೆ ಹೊಂದಿದ್ದರೂ ನನ್ನ ಮಾನಸಿಕ ಸ್ಥಿತಿಗತಿ ಮತ್ತು ಬೆಳವಣಿಗೆಯ ಬಗ್ಗೆ ಆತಂಕ ಹೊರಸೂಸುತ್ತಿದ್ದರು.

ಆದರೆ ನನ್ನ ಚಿಂತೆಯೇ ಬೇರೆಯಾಗಿತ್ತು! ಇಬ್ಬರಲ್ಲಿ ಕನಿಷ್ಟ ಒಬ್ಬರಾದರೂ ಸುಳ್ಳು ಹೇಳುತ್ತಿದ್ದಾರೆ. ಒಂದು ಆಣೆಯಾದರೂ ಸುಳ್ಳಾಗಿ ನಾನು ಸತ್ತು ಹೋಗಿಬಿಟ್ಟರೆ? ಇಬ್ಬರಲ್ಲಿ ಒಬ್ಬರಿಗೂ ಸಹ ತನ್ನ ಮಗನ ಸಾವಿನ ಬಗ್ಗೆ ಆತಂಕವೇ ಇಲ್ಲವಲ್ಲ ಅಂತ ಖೇದವಾಯಿತು. ಅಮ್ಮ ಅದಾಗಲೇ ವೈದ್ಯರ ವಿಷಯದಲ್ಲಿ ಪುತ್ರದ್ರೋಹಿಯಾಗಿದ್ದಳು, ಅಪ್ಪ ಕೂಡ ಈಗ ಅದೇ ವರ್ಗಕ್ಕೆ ಸೇರಿಬಿಟ್ಟಿದ್ದರು. ಇಬ್ಬರಿಗೂ ಬೇಡವಾದ ಕೂಸು ನಾನು ಅಂತ ಅದೆಂಥ ಅನಾಥ ಪ್ರಜ್ಞೆ ಕಾಡಿತ್ತು ನನಗೆ! ಆದರೆ ಆಗ ಸುಳ್ಳು ಆಣೆ ಹಾಕಿದ ಮೇಲೆ ಅದು ಸಾವನ್ನು ಕಾರ್ಯಗತಗೊಳಿಸುವ ಕಾಲಮಿತಿ ಏನು ಅಂತ ಗೊತ್ತಿಲ್ಲದ್ದರಿಂದ ಅನೇಕ ದಿನಗಳವರೆಗೆ ನಾನು ಸಾಯುವ ಆತಂಕದಲ್ಲೇ ಕಾಲ ದೂಡಿದ್ದೆ!

ನನ್ನಮ್ಮನಿಗೆ ಇದ್ದ ದೊಡ್ಡ ಕೆಟ್ಟ ಚಾಳಿಯೆಂದರೆ ಜರಿಯುವುದು. ಒಮ್ಮೆ ನಮ್ಮ ಮನೆಗೆ ನೆಂಟರಾರೋ ಮಗನ ಮದುವೆ ನಿಕ್ಕಿಯಾಗಿದ್ದನ್ನು ತಿಳಿಸಲು ಬಂದಿದ್ದರು. ನಮ್ಮಮ್ಮ ಸಡಗರದಿಂದ ಹೌದೇ? ಯಾ ಮನೆ ಸಂಬಂಧ ಎಂದು ಸಹಜವಾಗಿ ಕೇಳಿದರು, ಅವರು ತಾವು ಶ್ರೀಮಾನ್ ತಿಮ್ಮಣ್ಣನವರ ಮನೆಯಿಂದ ಹೆಣ್ಣನ್ನು ತಂದಿರುವುದಾಗಿಯೂ ವರದಕ್ಷಿಣೆ ಇಲ್ಲದೇ ಮದುವೆಯಾಗುತ್ತಿರುವುದಾಗಿಯೂ ಹೇಳಿಕೊಂಡರು. ನನ್ನಮ್ಮ ಸುಮ್ಮನಿರಲಾರದೇ “ಹೌದು ಭಾಳ ಚೊಲೋ ಮನೆತನ. ಹುಡುಗಿ ನೋಡಾಕ ಅಂತಾ ಚಂದಿಲ್ಲ, ಸಲ್ಪ ಕಪ್ಪಗ ಅದಾಳ. ಆದರ ಸ್ವಭಾವ ಚೊಲೋ ಐತಿ. ಸ್ವಭಾವ ಮನೆತನ ನೋಡಿ ಮಾಡಿಕೊಬೇಕಷ್ಟ ನೋಡ್ರಿ ಹುಡಗಿನ್ನ” ಅಂತ ಟಿಪ್ಪಣಿಸಿದರು. ನನಗೆ ಬಂದವರ ಮುಖ ನೋಡಲೂ ಧೈರ್ಯವಾಗಲಿಲ್ಲ.

ಹಿಂಗಿದ್ದಾಗ ಒಂದು ಪ್ರಸಂಗ ನಡೆಯಿತು. ನಾನು ಮದುವೆಯ ವಯಸ್ಸಿಗೆ ಬಂದಿದ್ದೇನೆಂದು ನಿರ್ಧರಿಸಿ ನಮ್ಮನೆಯಲ್ಲಿ ಕನ್ಯೆ ನೋಡಲು ಶುರುವಿಟ್ಟುಕೊಂಡಿದ್ದರು. ನಮ್ಮ ನೆಂಟರಲ್ಲಿಯೇ ಶ್ರೀಮತಿ ತಿಮ್ಮಕ್ಕನವರ ಮೊಮ್ಮಗಳು ಅತ್ಯಂತ ಸುಂದರಿಯೆಂದೂ ಆಕೆಯನ್ನು ನೋಡಲು ಅನೇಕ ಕಣ್ಣುಗಳು ಸಾಲದೆಂದೂ ಹೆಸರಾಗಿದ್ದಳು. ತಿಮ್ಮಕ್ಕನವರು ನನ್ನನ್ನು ಚಿಕ್ಕವನಿದ್ದಾಗಿಂದ ನೋಡಿದ್ದವರು ಮತ್ತು ನನ್ನ ಬಗ್ಗೆ ಬಹಳ ಪ್ರೀತಿ ಅಭಿಮಾನ ಇಟ್ಟುಕೊಂಡಿದ್ದರು. ನಾನು ಇಂಜಿನಿಯರ್ ಆಗಿ ಕೈತುಂಬಾ ಸಂಬಳ ಪಡೆಯುತ್ತಿದ್ದರಿಂದ ಮತ್ತು  ಕೆಲವರು ವಿನಾಕಾರಣ ನಮ್ಮಮ್ಮನ ತಲೆಯಲ್ಲಿ ನಿಮ್ಮ ಮಗ ಲಕ್ಷಣವಾಗಿದ್ದಾನೆ ಅಂತ ತುಂಬಿದ್ದರಿಂದ ಇದು ಕೈಗೂಡುವ ಸಂಬಂಧವೇ ಅಂತ ನನ್ನಮ್ಮ ಬಗೆದಿದ್ದರು.

ಈ ಸಂಬಂಧ ಕುದುರಿಸುವುದಕ್ಕಾಗಿಯೇ ತಿಮ್ಮಕ್ಕನವರು ಮತ್ತು ಸೊಸೆಯೂ ಬರಲಿರುವ ಮದುವೆ ಕಾರ್ಯಕ್ರಮಕ್ಕೆ ಮುದ್ದಾಂ ಹೋಗಿದ್ದರು. ವಿಷಯ ತಿಳಿದ ತಿಮ್ಮಕ್ಕನವರು ಸಂತೋಷಪಟ್ಟರಂತೆ ಆದರೆ ಸೊಸೆ ಅಸಡ್ಡೆ ತೋರಿಸಿದರಂತೆ. “ಹುಡುಗ ಇಂಜಿನಿಯರ್ ಅದಾನ್ರಿ” ಅಂದದ್ದಕ್ಕೆ “ಇವಾಗೇನ್ರಿ ಹಾದಿಗೊಬ್ಬ ಬೀದಿಗೊಬ್ಬ ಇಂಜಿನಿಯರ್ ಸಿಗ್ತಾನೆ” ಅಂದರಂತೆ. “ಕೋಟ್ಯಂತರ ಆಸ್ತಿ ಐತ್ರಿ” ಅಂದದ್ದಕ್ಕೆ “ಆಸ್ತಿ ಏನು ನಮ್ಮತ್ರನೂ ಐತಿ” ಅಂತ ಮೂತಿ ಸೊಟ್ಟಿಸಿದರಂತೆ. “ವರದಕ್ಷಿಣೆ ಏನೂ ಬ್ಯಾಡ ನಮಗ” ಅಂದಿದ್ದಕ್ಕೆ “ಕೇಳಿದ್ರು ಕೊಡೋನು ಯಾವನು” ಅಂತ ಕಿಸಿದರಂತೆ. ನಮ್ಮಮ್ಮನೊಳಗಿನ ‘ಗಂಡಿನ ತಾಯಿ’ ಎಂಬ ಅಹಮ್ಮಿಗೆ ಒಮ್ಮೆಗೆ ಪೆಟ್ಟು ಬಿದ್ದು ಕಾರ್ಯಕ್ರಮದಿಂದ ವಾಪಸು ದುಸುಮುಸುಗುಡುತ್ತಾ ಬಂದು “ಎಷ್ಟು ಹಾಂಕಾರ ಸೊಕ್ಕು ಅಕೀಗೆ” ಅಂತ ಮುಖ ಕೆಂಪಗೆ ಮಾಡಿ ಊದಿಸಿಕೊಂಡು ಕೂತಿದ್ದರು. ನನಗೆ ನಗು ತಡೆಯಲಾಗದೇ ನೆಲದ ಮೇಲೆಲ್ಲಾ ಬಿದ್ದು ನಕ್ಕಿದ್ದೆ. ತಿಮ್ಮಕ್ಕನವರ ಮೊಮ್ಮಗಳು ಈಗ ಎಲ್ಲಿದ್ದಾಳೋ ಹೇಗಿದ್ದಾಳೋ ಗೊತ್ತಿಲ್ಲ. ಆಕೆಯ ಹೊಟ್ಟೆಯೂ ತಣ್ಣಗಿರಲಿ!

ನಾನು ಮದುವೆಯಾದ ಮೇಲೆ ನನ್ನಮ್ಮ ಇದ್ದಕ್ಕಿದ್ದಂತೆ ಮಂಕಾಗಿಬಿಟ್ಟರು. ಮಾತಿಲ್ಲ ಕತೆಯಿಲ್ಲ. ತಾವಾಯಿತು ಟಿವಿಯಾಯಿತು ಎಂಬಂತೆ. ಮನೆ ಹಿರಿಯರು ಹೀಗೆ ಮೌನವಾಗಿ ಕೂತಿದ್ದಾಗ ಕಿರಿಯರಿಗೆ ದಿಕ್ಕೇ ತೋಚದಂತಾಗುವುದು ಸಹಜ. ನನ್ನ ಹೆಂಡತಿ ಒಂದು ದಿನ “ಯಾಕೆ ಹೀಗೆ ಕೂತಿರ್ತಿರಾ? ಮಾತಾಡಿ” ಅಂತೇನೋ ಹೇಳಲು ಹೋಗಿ “ನಾನೇನು ಮಾಡಿನಿ? ನನ್ನ ಪಾಡಿಗೆ ನಾನಿರೋದು ತಪ್ಪಾ ?” ಅಂತ ನಮ್ಮಮ್ಮ ಉತ್ತರ ಹೇಳಿ ಮಾತು ಬೆಳೆಯುತ್ತಾ ಹೋಯಿತು. ನಾನು ನನ್ನ ಹೆಂಡತಿಗೆ ಸುಮ್ಮನಿರಲು ಸೂಚಿಸಿದೆ. ಆಕೆ ನಾನು ಹೇಳಿದ ಕೂಡಲೆ ಸುಮ್ಮನಾಗಿ ಅಡುಗೆ ಕೋಣೆಯೊಳಕ್ಕೆ ಹೊರಟಳು. ಆದರೆ ನಮ್ಮಮ್ಮ ಮಾತ್ರ ಪಟ್ಟು ಬಿಡದೆ “ಬಾ ಇಲ್ಲಿ ಮಾತಾಡು ಏನು ತಪ್ಪಾಗೇತಿ ಹೇಳು. ಏನು ಅನ್ಯಾಯ ಮಾಡೀನಿ ಹೇಳು” ಅಂತ ಪಟ್ಟು ಹಿಡಿದು ಕೂತರು. ನಾನು ಮತ್ತೊಮ್ಮೆ ನನ್ನ ಹೆಂಡತಿಗೆ ಮಾತನಾಡದಿರುವಂತೆ ಸೂಚಿಸಿದೆ. ಆದರೆ ಅಮ್ಮ ಮಾತ್ರ ನಾನು ನಡುವೆ ಬರಕೂಡದೆಂದೂ ತಾವಿಬ್ಬರೂ ಮಾತಾಡಿ ಬಗೆಹರಿಸಿಕೊಳ್ಳುವುದೆಂದೂ ಅಪ್ಪಣೆಯಿತ್ತರು.

ನಾನು ನನ್ನ ಪಾಡಿಗೆ ಅಡುಗೆ ಮನೆಗೆ ಹೋಗಿ ಕಾಫಿ ಬೆರೆಸಿಕೊಂಡು ಬಂದು ಸೋಫಾ ಮೇಲೆ ಕೂತು ಕಾಫಿಯ ಜೊತೆ ಇವರಿಬ್ಬರ ಜಗಳವನ್ನೂ ಸವಿಯುವುದೆಂದೂ ಬಹಳ ದಿನಗಳ ನಂತರ ನಮ್ಮಮ್ಮನ ಕನ್ನಡ ಪಾಂಡಿತ್ಯದ ಸೊಗಡನ್ನು ಅನುಭವಿಸುವುದೆಂದೂ ಬಗೆದು ಇವರು ಜಗಳವಾಡುತ್ತಿದ್ದ ಲಿವಿಂಗ್ ರೂಮ್ ಕಡೆ ಬಂದರೆ ನಾನು ಕಾಣುವುದೇನು? ನನ್ನಮ್ಮ ನನ್ನ ಹೆಂಡತಿಯ ಹೆಗಲ ಮೇಲೆ ತಲೆಯಿಟ್ಟು ಅಳುತ್ತಿದ್ದಾರೆ. ನನ್ನ ಹೆಂಡತಿ ಆಕೆಯ ತಲೆ ನೆವರಿಸಿ ಸಂತೈಸುತ್ತಿದ್ದಾಳೆ! ನಾನು ಬಂದ ಕೂಡಲೇ “ನೋಡಮ್ಮ ಮದುವೆ ಮುಂಚೆ ಹೆಂಗಿದ್ದ ಮದುವೆ ಆದ ಮ್ಯಾಲ ಭಾಳ ಬದಲಾಗಿಬಿಟ್ಟಾನಮ್ಮಾ” ಅಂತ ದೂರಿದರು. ನನ್ನ ಹೆಂಡತಿ ನನ್ನನ್ನು ವಿಲನ್ ನೋಡುವಂತೆ ನೋಡಿದಳು. ನಾನು ಈ ಇಡಿಯ ಜಗಳದಲ್ಲಿ ಎಲ್ಲೆಂದರೂ ಎಲ್ಲೂ ಇರಲಿಲ್ಲ. ನಿಷ್ಪಾಪಿಯಂತೆ ದೂರ ನನ್ನ ಪಾಡಿಗೆ ನಿಂತಿದ್ದ ನಾನು ಅದ್ಯಾವ ಮಾಯೆಯಲ್ಲಿ ಇವರಿಬ್ಬರೂ ಸೇರಿಕೊಂಡು ನನ್ನನ್ನು ಖಳನನ್ನಾಗಿ ಮಾಡಿದರೋ ತಿಳಿಯದು! ನಾನು ಈ ಅನಿರೀಕ್ಷಿತ ಕ್ಲೈಮ್ಯಾಕ್ಸ್​ನಿಂದಾಗಿ ಕಕ್ಕಾಬಿಕ್ಕಿಯಾಗಿ ನಿಂತಿದ್ದೆ. “ಮದುವೆಯಾದ ಮೇಲೆ ಕೆಟ್ಟವನಾದ” ಎಂಬ ಮಾತಿಗೆ ಐಕ್ಯಮತ ಸೂಚಿಸಿ ಸಮಾಧಾನ ಮಾಡಿದ ನನ್ನ ಹೆಂಡತಿಗೆ ನನ್ನಮ್ಮ ಪರೋಕ್ಷವಾಗಿ ತನ್ನನ್ನೇ ಮೂದಲಿಸುತ್ತಿದ್ದಾಳೆ ಅಂತ ಇನ್ನೂ ಹೊಳೆದಿಲ್ಲ!

ಮಕ್ಕಳ ವಿಷಯಕ್ಕೆ ಅದರಲ್ಲೂ ನನ್ನ ವಿಷಯಕ್ಕೆ ಬಂದರೆ ನನ್ನಮ್ಮನದು ಝೆನ್ ಸನ್ಯಾಸಿಯ ನಿರ್ಲಿಪ್ತತೆ. ನಾನು ದಾವಣಗೆರೆ ಬಿಟ್ಟು ಕೆಲಸಕ್ಕಾಗಿ ಚೆನ್ನೈಗೆ ಹೊರಟುಹೋದಾಗ ಎರಡು ಮೂರು ದಿನ ಮನೆಯ ಸಂಪರ್ಕ ಸಾಧ್ಯವಾಗಿರಲಿಲ್ಲ. ಮೊಬೈಲ್ ಸಿಮ್ ಆ್ಯಕ್ಟಿವೇಟ್ ಆದ ಕೂಡಲೇ ಮನೆಯವರು ಗಾಬರಿಯಾಗಿದ್ದಿರಬಹುದೋ ನನ್ನ ಬಗ್ಗೆ ಆತಂಕಗೊಂಡಿರಬಹುದೋ ಎಂಬ ಭ್ರಮೆಯಿಂದ ಅವಸರವಸರವಾಗಿ ಮನೆಗೆ ಕರೆ ಮಾಡಿದರೆ  ಆ ಕಡೆಯಿಂದ ನಮ್ಮಮ್ಮ ಫೋನ್ ಎತ್ತಿದರು. ನನ್ನ ದನಿ ಕೇಳಿ ಮನೆಯಲ್ಲಿ ಯಾವ ಸಂಭ್ರಮವೂ ಉಂಟಾದಂತೆ ಕಾಣಲಿಲ್ಲ. ಎಲ್ಲವೂ ಶಾಂತವಾಗಿದ್ದಂತೆ ತೋರಿತು.

“ಹು.. ಹೇಳು” ಅಂದರಷ್ಟೇ. ನಾನು ಚೆನೈ ಅನ್ನು ಮುಟ್ಟಿದ್ದನ್ನೂ ಅಲ್ಲಿ ಉಳಿದುಕೊಂಡದ್ದನ್ನೂ ಹೊಸ ಫೋನ್ ನಂಬರನ್ನು ಕೊಡುವುದನ್ನೂ ಹೇಳುವ ಉದ್ದೇಶವಿತ್ತು. “ಎಲ್ಲಾ ಅರಾಮಿದಿರಾ?” ಅಂತ ಕೇಳಿದೆ.
“ಹು, ನಮಗೇನಾಗೇತಿ ಧಾಡಿ? ವಿಷಯ ಏನು ಹೇಳು ಲಗೂನ ಕೆಲಸ ಅದಾವು” ಅಂತ ನಿರ್ಭಾವುಕರಾಗಿ ಹೇಳಿದರು. ಏನಿಲ್ಲ ಸುಮ್ಮನ ಮಾಡಿದ್ದೆ ಅಂತ ಫೋನಿಟ್ಟೆ. ನನ್ನ ಆರೋಗ್ಯ ವಸತಿ ಕೇಳುವುದಿರಲಿ ನಿನ್ನನ್ನು ಸಂಪರ್ಕಿಸುವುದು ಹೇಗೆ ಅಂತ ಸಹ ಕೇಳಲಿಲ್ಲ!

ಬೇರುಗಳನ್ನು ಕಿತ್ತುಕೊಂಡು ಗಾಯಗೊಂಡ ರೆಕ್ಕೆಗಳನ್ನೇ ನೆಚ್ಚಿಕೊಂಡು ಒಂದೇ ಪರಿಚಯವಿರದ ಸಿಡ್ನಿ ಮಾಯಾನಗರಿಗೆ ಹೊರಟಾಗ ಕಳಿಸಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ನನ್ನಮ್ಮ ಜಗತ್ತಿನ ಅರಿವನ್ನೇ ಬದಿಗಿಟ್ಟ ಬುದ್ದನಂತೆ ಶಾಂತಮುದ್ರೆಯಲ್ಲಿ ಕಡೆಯವರೆಗೂ ಕುಳಿತಿದ್ದರು. ಮನದೊಳಗೆ ಕಡಲು ಕೊರೆಯುತ್ತಿತ್ತೊ, ಅಂಟಾರ್ಟಿಕದ ಮಂಜುಗಡ್ಡೆಯಿತ್ತೊ, ಸಿಡಿಯುವ ಲಾವಾರಸವಿತ್ತೋ ಮುಖ ಮಾತ್ರ ಯಾವ ಪ್ರಚೋದನೆಗೊಳಪಡದೇ ಕೂತಿತ್ತು. ಒಂದೇ ಒಂದು ಮಾತಿಲ್ಲ. ಕಡೆಗೆ ಹೋಗುವಾಗ ಕಾಲು ಮುಟ್ಟಿ ನಮಸ್ಕರಿಸಿದರೆ “ಹಂ” ಎಂದ ಅರೆ ಹೃಸ್ವದ ಉದ್ಗಾರ ಅಷ್ಟೇ!  ಅದಾದ ಮೇಲೆ ನಾನು ಮತ್ತೆ ಅಮ್ಮನನ್ನು ಎಂದಿಗೂ ಎದುರು ಬದುರಿಗೆ ನೋಡಲಾರೆ ಅಂತ ಬಲವಾಗಿ ಅನ್ನಿಸಿತ್ತು. ಅನಿಸಿಕೆ ವಾಸ್ತವಕ್ಕೆ ಹೆಚ್ಚು ದೂರವೂ ಅಗಲಿಲ್ಲ.

*
ಪರಿಚಯ : ದಾವಣಗೆರೆಯ ಶ್ರೀಹರ್ಷ ಸಾಲೀಮಠ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸಿಸುತ್ತಿದ್ಧಾರೆ. ವೃತ್ತಿಯಿಂದ ತಂತ್ರಜ್ಞರಾಗಿರುವ ಇವರು ಕನ್ನಡದ ಮೊಟ್ಟಮೊದಲ ಆಡಿಯೋ ಪುಸ್ತಕಗಳ ಆ್ಯಪ್​ ‘ಆಲಿಸಿರಿ’ ಸಂಸ್ಥಾಪಕರು. ವೈಟ್​ ಬೋರ್ಡ್​ ಅನಿಮೇಷನ್​ ಅನ್ನು ಮೊದಲ ಬಾರಿಗೆ ಕನ್ನಡದಕ್ಕೆ ತಂದವರು. ಬೆರಗು ವಿಜ್ಞಾನ ಪತ್ರಿಕೆಯ ಸಂಪಾದಕರು. ಕನ್ನಡದಲ್ಲಿ ಕಂಪ್ಯೂಟರ್ ಕೋಡಿಂಗ್ ಮಾಡುವಲ್ಲಿ ಯಶಸ್ವಿಯಾದವರು ಮತ್ತು ‘ಆಟಿಕೆ’ ಎಂಬ ಕನ್ನಡದಲ್ಲಿ ಕಲಿಕೆಯ ವಿಡಿಯೋ ಗೇಮ್ ತಯಾರಿಸಿದವರು.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ