ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅವರು, ನನ್ನ ಅಂಗಡಿಯಿಂದಲೂ ಎಷ್ಟೋ ಐನಾತಿ ಸಾಮಾನು ತಗೊಂಡಿದಾರೆ. ಪಕ್ಕದ ಅಂಗಡೀ ಕಸಾಯಿಯವನ ಪಡಿಪಾಟಲು ನೋಡಿದರೆ, ನಾನೇನೂ ಕಂಪ್ಲೇಂಟ್ ಮಾಡೋಹಾಗಿಲ್ಲ. ಅಂಗಡೀಗೆ ಹೊಸ ಮಾಂಸ ತರೋದೇ ತಡ, ಅವರು ಬಂದು ಅಷ್ಟನ್ನೂ ನುಂಗಿ ನೀರು ಕುಡೀತಾರೆ. ಅವರ ಕುದುರೆಗಳು ಕೂಡ ಮಾಂಸ ಕಂಡರೆ ಬಿಡೋದಿಲ್ಲ. ಎಷ್ಟೋ ಸಲ, ಕುದುರೆ ಮತ್ತು ಮನುಷ್ಯ ಅಕ್ಕಪಕ್ಕ ಬಿದ್ಕೊಂಡು ಒಂದೇ ಚೂರು ಮಾಂಸ ಜಗೀತಾ ಇರ್‍ತಾರೆ. ಆ ತುದಿಯಿಂದ ಮನುಷ್ಯ. ಈ ತುದಿಯಿಂದ ಕುದುರೆ. ಅಂಗಡಿಯೋನು ಪ್ರತಿ ದಿನ ಹೊಸ ಮಾಂಸ ತರಲೇಬೇಕು. ಬೇರೆ ದಾರಿ ಇಲ್ಲ. ಅವನು ಮಾಂಸ ಕೊಳ್ಳೊಕೆ, ನಾವೆಲ್ಲ ಚಂದಾ ಹಾಕಿ ದುಡ್ಡು ಕೊಡ್ತೀವಿ. ಮಾಂಸ ಸಿಗದೇ ಇದ್ರೆ, ಈ ಅಲೆಮಾರಿಗಳು ಏನುಮಾಡ್ತಾರೋ ಯಾರಿಗೆ ಗೊತ್ತು? ಅದಿರಲಿ, ಪ್ರತಿ ದಿನ ಮಾಂಸ ಸಿಕ್ರೂ ಅವರ ತಲೇಲಿ ಏನು ಯೋಚನೆ ಬರತ್ತೋ? ಹೇಗೆ ಹೇಳೋದು?
ಕಥೆ : ಹಳೆಯ ಹಸ್ತಪ್ರತಿ | ಮೂಲ : ಫ್ರಾನ್ಝ್ ಕಾಫ್ಕಾ | ಕನ್ನಡಕ್ಕೆ : ಡಾ. ಎಚ್. ಎಸ್. ರಾಘವೇಂದ್ರ ರಾವ್
(ಭಾಗ 2)
ಕೆಲವು ದಿನಗಳ ಹಿಂದೆ, ಕಸಾಯಿಯವನು ಒಂದು ಪ್ಲ್ಯಾನ್ ಮಾಡಿದ. ಮಾಂಸ ಕತ್ತರಿಸೋ ಕೆಲಸ ಆದರೂ ತಪ್ಪಲಿ ಅಂತ, ಒಂದು ದಿನ ಬದುಕಿರೋ ಎತ್ತು ತಂದ. ಸರಿಯಾಗಿ ಬುದ್ಧಿಬಂತು. ಅವನ ಜೀವಮಾನವಿಡೀ ಅಂಥ ಕೆಲಸ ಮಾಡೋದಿಲ್ಲ. ನಾನು ಅಂಗಡಿ ಬಾಗಿಲು ಹಾಕಿ, ಹಿಂದುಗಡೆ ಹೋಗಿ, ಮೂಲೇಲಿ ಬಿದ್ಕೊಂಡೆ. ಕಿವಿ ಸುತ್ತಲೂ ಇರೋಬರೋ ಬಟ್ಟೆ, ಕಂಬಳೀ, ದಿಂಬು. ಎತ್ತಿನ ಕೂಗು ಕೇಳಿಸಿಕೊಳ್ಳದೆ ಇರೋಕೆ ಇಷ್ಟೆಲ್ಲ ಕಸರತ್ತು ಮಾಡಿದ್ರೂ, ಈಗಲೂ ಕೇಳ್ತಾನೇ ಇದೆ. ಅಲೆಮಾರಿಗಳು, ಜೀವಂತವಾದ ಎತ್ತಿನ ಮೇಲೆ ಎಗರ್‍ತಾ ಇದ್ದರು. ಒಂಚೂರು ಮಾಂಸ, ಹಲ್ಲಲ್ಲಿ ಕಿತ್ತುಕೊಳ್ಳೋದು, ಜಗಿಯೋದು ಮತ್ತೆ ಎಗರೋದು. ನಾನು, ಎಷ್ಟೋ ಹೊತ್ತು ಆ ಕಡೆ ತಲೆಹಾಕಲೇ ಇಲ್ಲ. ಆಮೇಲೆ ನೋಡಿದ್ರೆ, ತಿಂದುಮಿಕ್ಕಿದ್ದ ಎತ್ತಿನ ಸುತ್ತ ಎಲ್ಲರೂ ಬಿದ್ಕೊಂಡಿದ್ರು. ಹೆಂಡದ ಖಾಲೀ ಪೀಪಾಯಿ ಸುತ್ತಲೂ ಮಲಗಿರೋ ಕುಡುಕರ ಹಾಗೆ.
ಆಗಲೇ ಇರಬೇಕು. ನಾನು, ಚಕ್ರವರ್ತಿಗಳನ್ನು ನೋಡಿದೆ. ನಿಜವಾಗಲೂ. ಅರಮನೆಯ ಕಿಡಕಿ ಹಿಂದೆ ನಿಂತಿದ್ರು. ಹೀಗೆ ಹೊರಗಡೆ ಬರೋದು, ಬಹಳ ಬಹಳ ಅಪರೂಪ. ಸದಾ ಅರಮನೆಯೊಳಗಿನ ಉದ್ಯಾನವನದಲ್ಲೇ ಕಾಲ ಕಳೀತಾರೆ. ಇವತ್ತು ಯಾಕೋ ಬಂದಿದ್ರು ಅಥವಾ ನನಗೆ ಹಾಗೆ ಅನ್ನಿಸಿರಬೇಕು. ಕಿಡಕಿಯಲ್ಲಿ ನಿಂತುಕೊಂಡು, ಮುಂದೆ ಬಾಗಿ, ತನ್ನ ಅರಮನೆಯ ಸುತ್ತಲಿನ ಈ ವಿದ್ಯಮಾನಗಳನ್ನು ಗಮನಿಸ್ತಾ ಇದ್ರು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ’ಮಾರ್ಫಾ, ಓ ಮಾರ್ಫಾ ಯಾರ ಜೊತೆ ನೀ ಚುಂಬನ ಚೆಲ್ಲಾಟ ನಡೆಸಿದ್ದೀ?’
“ಇನ್ನು ಮುಂದೆ ಏನಾಗತ್ತೆ?” ಅಂತ, ನಾವೆಲ್ಲರೂ ಕೇಳಿಕೊಳ್ತೀವಿ. “ಈ ಹೊರೆಯನ್ನು, ಈ ಹಿಂಸೆಯನ್ನು ಎಷ್ಟು ದಿನ ತಡ್ಕೊಳ್ಳೊಕೆ ಸಾಧ್ಯ? ಈ ಅಲೆಮಾರಿಗಳು ಇಲ್ಲಿಗೆ ಬರೋದಕ್ಕೆ, ಚಕ್ರವರ್ತಿಗಳ ಅರಮನೆಯೇ ಕಾರಣ. ಆದರೆ, ಅವರನ್ನು ಹಿಂದಕ್ಕೆ ಅಟ್ಟೋದು ಹೇಗೆ ಅಂತ ಅವರಿಗೆ ಗೊತ್ತಿಲ್ಲ. ಅರಮನೆಯ ಬಾಗಿಲು ಯಾವಾಗಲೂ ಮುಚ್ಚಿರತ್ತೆ. ರಾಜವೈಭವದಿಂದ, ಹೊರಗೆ ಒಳಗೆ ತಿರುಗಾಡ್ತಿದ್ದ ಕಾವಲುಗಾರರು, ಈಗ ಮುಚ್ಚಿದ ಮುಚ್ಚಿದ ಕಿಡಕಿಗಳ ಹಿಂದೆ ಮರೆಯಾಗಿದಾರೆ. ದೇಶವನ್ನು ಕಾಪಾಡಿಕೊಳ್ಳುವ ಹೊಣೆ, ನಮ್ಮಂತಹ ಚಿಕ್ಕಪುಟ್ಟ ವ್ಯಾಪಾರಿಗಳ ಮೇಲೆ, ಕೆಲಸಗಾರರ ಮೇಲೆ ಬಿದ್ದಿದೆ. ನಮಗೆ ಅಂಥ ಕೆಲಸ ಮಾಡೋ ಶಕ್ತಿ ಇಲ್ಲ. ನಮಗೆ ಅದು ಸಾಧ್ಯ ಅಂತ ನಾವು ಹೇಳಿಯೂ ಇಲ್ಲ. ಇಲ್ಲಿ ಏನೋ ತಪ್ಪು ತಿಳಿವಳಿಕೆ ಇದೆ. ಇದರಿಂದ ನಾವೆಲ್ರೂ ನಾಶವಾಗ್ತೀವಿ.”
(ಮುಗಿಯಿತು)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್