Vijaya Bhaskar’s Death Anniversary: ಸಭೆ, ಸನ್ಮಾನ, ಹಾಳುಹರಟೆ, ವಿವಾದಗಳೆಲ್ಲದರಿಂದ ದೂರ

Vijaya Bhaskar’s Death Anniversary: ಸಭೆ, ಸನ್ಮಾನ, ಹಾಳುಹರಟೆ, ವಿವಾದಗಳೆಲ್ಲದರಿಂದ ದೂರ
ಚಲನಚಿತ್ರ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಮತ್ತು ಹಿರಿಯ ಪರ್ತಕರ್ತ ಎನ್. ಎಸ್. ಶ್ರೀಧರಮೂರ್ತಿ

Music Director : ದಕ್ಷಿಣ ಭಾರತದಲ್ಲಿ ಮ್ಯೂಸಿಕ್ ಡೈರೆಕ್ಟರ್ ಮತ್ತು ಲಿರಿಕ್ಸ್ ರೈಟರ್​ಗಳಿಗೆ ಕೂಡ ಹಕ್ಕುಗಳು ಬೇಕು ಎಂದು ಹೋರಾಡಿದ ಮೊದಲಿಗರು. ಅವರು ಅದಕ್ಕಾಗಿ ಅವರು ರಾಷ್ಟ್ರ ಮಟ್ಟದಲ್ಲಿಯೇ ಇಂಡಿಯನ್ ಪರ್ಫಾರ್ಮನ್ಸ್ ಸೊಸೈಟಿ ಕಟ್ಟಿದರು.

ಶ್ರೀದೇವಿ ಕಳಸದ | Shridevi Kalasad

|

Mar 03, 2022 | 1:43 PM

ವಿಜಯ ಭಾಸ್ಕರ್ | Vijaya Bhaskar (1931-2002) :  ವಿಜಯ ಭಾಸ್ಕರ್ ನೌಷಾದ್ ಅಂತಹವರ ಬಳಿ ಕೆಲಸ ಮಾಡಿದವರು. ಅವರು ಭೀಮ್​ಪಲಾಸ್ ರಾಗವನ್ನು ಅಳವಡಿಸಿಕೊಂಡಿರುವ ಕುರಿತು ಒಂದು ಕುತೂಹಲಕರ ಅಂಶ ಇದೆ. “ಬಾರೆ ಬಾರೆ ಚಂದದ ಚೆಲುವಿನ ತಾರೆ”ಯಲ್ಲಿ ಭೀಮ್​ಪಲಾಸ್​ನ ಶುದ್ದನಡಿಗೆ ಇದೆ. ಅದೇ “ಪಂಚಮ ವೇದ ಪ್ರೇಮದ ನಾದ”ದಲ್ಲಿ ಚತುಶ್ರುತ ರಿಷಭದ ಜೊತೆಗೆ ಶುದ್ಧ ರಿಷಭವನ್ನು ಬಿಟ್ಟಿದ್ದಾರೆ. ಭೀಮ್​ಪಲಾಸ್​ಗೆ ದೈವಿಕ ರಾಗ ಅನ್ನೋ ಹೆಸರಿದೆ. ಸಿನಿಮಾ ಕಥೆಯಲ್ಲಿ ಪ್ರೇಮ ಊನ ಅಗಿದೆ ಅಂತ ತೋರಿಸೋಕೆ ಈ ಎಕ್ಸಪಿರಿಮೆಂಟ್ ಮಾಡಿದ್ದಾರೆ. ಅದೇ ಗೆಜ್ಜೆಪೂಜೆ ಸಿನಿಮಾದ ‘ಗಗನವು ಎಲ್ಲೋ’ ಹಾಡಿನಲ್ಲಿ ಜೀವಸ್ವರ ಧೈವತವನ್ನೇ ಬಿಟ್ಟಿದ್ದಾರೆ. ನಾಯಕಿಯ ಉನ್ಮಾದ ಕ್ಷಣಿಕ ಅನ್ನೋದನ್ನ ಅದು ತೋರಿಸುತ್ತೆ. ಇಂತಹ ಎಕ್ಸಾಂಪಲ್ ಸಾಕಷ್ಟು ಕೊಡ ಬಹುದು. ಥೀಮ್ ಮ್ಯೂಸಿಕ್ ಪರಿಚಯಿಸಿದ ಹೆಗ್ಗಳಿಕೆ ವಿಜಯಭಾಸ್ಕರ್ ಅವರದು. ಎನ್​. ಎಸ್. ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತ

*

(ಭಾಗ 5)

ಗಾನ ಅಮೃತಪಾನ, ಪತಿತಪಾವನಿ ಹೀಗೆ ಆರು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದರು. ಇದುವರೆಗೂ ಇದು ದಾಖಲೆಯಾಗಿಯೇ ಉಳಿದಿದೆ. ಅದಲ್ಲದೆ ವಿವಿಧ ರಾಜ್ಯಗಳ 38 ವಿವಿಧ ಪುರಸ್ಕಾರಗಳನ್ನು ಪಡೆದಿರುವ ವಿಜಯ ಭಾಸ್ಕರ್ ಮೂರು ಸುರ್ ಸಿಂಗಾರ್ ಗೌರವ ಪಡೆದ ದೇಶದ ಏಕೈಕ ಸಂಗೀತ ನಿರ್ದೇಶಕರಾಗಿದ್ದಾರೆ. ‘ಮಲಯ ಮಾರುತ’ ಸಿನಿಮಾಕ್ಕಾಗಿ ಈ ಅವಾರ್ಡ್ ಪಡೆದಾಗ ಅವರು ಇದನ್ನು ಪಡೆದ ಮೊದಲ ಸೌತ್ ಇಂಡಿಯನ್ ಮ್ಯೂಸಿಕ್ ಡೈರೆಕ್ಟರ್ ಎನ್ನಿಸಿ ಕೊಂಡಿದ್ದರು. 2001 ರಲ್ಲಿ ಅವರಿಗೆ ಜೀವಮಾನದ ಸಾಧನೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿ ಕೂಡ ಬಂದಿತು.

ಸದಾ ಹಸನ್ಮುಖಿ, ಸೂಟು ಬೂಟುದಾರಿಯಾಗಿದ್ದ ವಿಜಯಭಾಸ್ಕರ್ ಸಂಗೀತದ ವಿಷಯದಲ್ಲಂತೂ ಶಿಸ್ತಿನ ಸಿಪಾಯಿ ಆಗಿದ್ದರು. ಒಂದು ನೋಟ್ ಆಚೆ ಈಚೆ ಆದರೂ ಸಹಿಸುತ್ತಾ ಇರಲಿಲ್ಲ. ಪ್ರತಿ ವಿಷಯದಲ್ಲಿಯೂ ಪರ್‌ಫೆಕ್ಷನಿಸ್ಟ್. ಸಾಂಗ್ಸ್ ಮಾತ್ರ ಅಲ್ಲ ಸಿನಿಮಾದ ಪ್ರತಿ ಸೀನ್‌ಗಳ ವಿಷಯದಲ್ಲಿ ಕೂಡ ಇದೇ ಎಚ್ಚರಿಕೆ ವಹಿಸುತ್ತಾ ಇದ್ದರು. ರೆಕಾರ್ಡಿಂಗ್ ಸಮಯದಲ್ಲಿ ಇರ ಬಹುದು, ಬೇರೆ ವಿಷಯದಲ್ಲೇ ಇರಬಹುದು ಒಂದು ಅಗತ್ಯಕ್ಕಿಂತ ಒಂದು ಶಬ್ದ ಹೆಚ್ಚು ನುಡಿಯದ ಸಂಯಮ ಅವರದ್ದು. ಲೂಸ್ ಟಾಕ್ ಮಾಡುವವರನ್ನು ಹತ್ತಿರಕ್ಕೆ ಕೂಡ ಸೇರಿಸ್ತಾ ಇರಲಿಲ್ಲ. ಯಾವ ವಿವಾದಗಳಿಗೂ ಒಳಗಾದವರಲ್ಲ. ಪ್ರೋಗ್ರಾಂ, ಸನ್ಮಾನ ಎಲ್ಲವೂ ದೂರವೇ ಉಳಿಯಿತು.

ಇದನ್ನೂ ಓದಿ : Vijaya Bhaskar’s Death Anniversary: ‘ಮನಮೆಚ್ಚಿದ ಮಡದಿ’ ಟೈಟಲ್ ಕಾರ್ಡಿನಲ್ಲಿ ‘ಜೈ ಭಾರತ ಜನನಿಯ ತನುಜಾತೆ‘

ಆದರೆ ಚಿತ್ರಗೀತೆಗಳ ಹಕ್ಕುಗಳ ವಿಷಯ ಬಂದಾಗ ದೊಡ್ಡ ಹೋರಾಟಗಾರರು. ದಕ್ಷಿಣ ಭಾರತದಲ್ಲಿ ಮ್ಯೂಸಿಕ್ ಡೈರೆಕ್ಟರ್ ಮತ್ತು ಲಿರಿಕ್ಸ್ ರೈಟರ್​ಗಳಿಗೆ ಕೂಡ ಹಕ್ಕುಗಳು ಬೇಕು ಎಂದು ಹೋರಾಡಿದ ಮೊದಲಿಗರು. ಅವರು ಅದಕ್ಕಾಗಿ ಅವರು ರಾಷ್ಟ್ರಮಟ್ಟದಲ್ಲಿಯೇ ಇಂಡಿಯನ್ ಪರ್‌ಫಾರ್ಮನ್ಸ್ ಸೊಸೈಟಿ ಕಟ್ಟಿದರು. ತಮ್ಮ ಗುರುಗಳಾದ ನೌಷಾದ್ ಅವರನ್ನು ಪ್ರೆಸಿಡೆಂಟ್ ಮಾಡಿದರು. ಕೊನೆಯವರೆಗೂ ತಾವು ವೈಸ್ ಪ್ರೆಸಿಡೆಂಟ್ ಆಗಿಯೇ ಉಳಿದರು. ಕನ್ನಡ ಚಿತ್ರರಂಗ ಬಹಳ ಕಾಲ ಚೆನ್ನೈನಲ್ಲಿಯೇ ಇದ್ದಿದ್ದರಿಂದ ವಿಜಯ ಭಾಸ್ಕರ್ ಕೂಡ ಅಲ್ಲಿಯೇ ನೆಲೆ ನಿಂತಿದ್ದರು. ಕ್ರಮೇಣ ಚಿತ್ರರಂಗ ಬೆಂಗಳೂರಿಗೆ ಬಂದಿತು. ಇಲ್ಲಿಯೇ ರೆಕಾರ್ಡಿಂಗ್‌ಗಳೂ ಆರಂಭವಾದವು.

ಬೆಂಗಳೂರಿಗೆ ಬಂದಾಗಲೆಲ್ಲಾ ವಿಜಯ ಭಾಸ್ಕರ್ ಖಾಯಂ ಆಗಿ ಉಳಿಯುತ್ತಾ ಇದ್ದಿದ್ದು ಹೋಟಲ್ ಜನಾರ್ದನದಲ್ಲಿ. ಚೆನ್ನೈನಲ್ಲಿ ಮಡದಿ ಜಯಲಕ್ಷ್ಮೀ ಅವರ ಜೊತೆಗೆ ಸಂತಸದ ಜೀವನವನ್ನು ವಿಜಯ ಭಾಸ್ಕರ್ ನಡೆಸುತ್ತಾ ಇದ್ದರು. ಅವರ ಮಗ ಆಸ್ಟ್ರೇಲಿಯಾದಲ್ಲಿ ನೆಲೆ ನಿಂತರೆ ಇಬ್ಬರೂ ಹೆಣ್ಣು ಮಕ್ಕಳಲ್ಲಿ ಶಂಕರಿ ಅನಂತ್ ಬೆಂಗಳೂರಿನಲ್ಲಿ ಮತ್ತು ಮಂಗಳ ಗೌರಿ ಪಾಂಡುಚೇರಿಯಲ್ಲಿ ನೆಲೆ ನಿಂತಿದ್ದರು. ವಿಜಯ ಭಾಸ್ಕರ್ ಅವರಿಗೂ ಬೆಂಗಳೂರಿಗೆ ಬರುವ ಹಂಬಲ ಮೂಡಿ ಚೆನ್ನೈನಲ್ಲಿ ಸ್ವಂತ ಮನೆ ಇದ್ದರೂ ಜೆ.ಪಿ.ನಗರದಲ್ಲಿ ತಮ್ಮ ಕಲ್ಪನೆಯ ಮನೆಯನ್ನು ಕಟ್ಟಿಸಿಕೊಂಡು ಇಲ್ಲಿಯೇ ವಾಸಕ್ಕೆ ಬಂದರು. ಆದರೆ ಈ ಮನೆಯಲ್ಲಿ ಹೆಚ್ಚು ಕಾಲ ಇರುವ ಅದೃಷ್ಟ ಅವರಿಗೆ ಇರಲಿಲ್ಲ. 2002 ರ ಮಾರ್ಚ್ 3ರಂದು ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ ಅವರಿಂದ ಪಡೆಯ ಬೇಕಾದ ಬಹಳಷ್ಟನ್ನು ಕಳೆದುಕೊಂಡಿತು. ಅವರು ಮಧುರವಾಗಿ ಮೂಡಿಸಿದ ಸಾವಿರಾರು ಹಾಡುಗಳು ಮಾತ್ರ ಇಂದಿಗೂ ಅವರ ನೆನಪಾಗಿ ನಮ್ಮ ಜೊತೆಯಲ್ಲಿ ಉಳಿದು ಕೊಂಡಿವೆ.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com 

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/manadolage-sadaa

Follow us on

Most Read Stories

Click on your DTH Provider to Add TV9 Kannada