Literature: ನೆರೆನಾಡ ನುಡಿಯೊಳಗಾಡಿ: ಟಿ.ಡಿ. ರಾಜಣ್ಣ ತಗ್ಗಿ ಅನುವಾದಿಸಿದ ಪಾಲಗುಮ್ಮಿ ಪದ್ಮರಾಜು ಅವರ ತೆಲುಗು ಕಥೆ

|

Updated on: May 27, 2022 | 3:36 PM

Short Story of Palagummi Padmaraju : ಅವರ ಪ್ರಕಾರ ವೇದಾಂತಕ್ಕೆ, ಜೀವನ ವಿಧಾನಕ್ಕೆ ಮತ್ತು ತೀಕ್ಷ್ಣ ಮಾನವಾನುಭವಗಳಿಗೆ ಅತೀತವಾದ ವಿಷಯಗಳೊಂದಿಗೆ ಯಾವ ಸಂಬಂಧವೂ ಇರುವುದಿಲ್ಲ. ಆ ಸಂತೃಪ್ತಿಯ ಕಾರಣದಿಂದ ಜೀವನದ ಬಗ್ಗೆ ಅಮಿತ ಉತ್ಸಾಹ, ಪವಿತ್ರ ಉದ್ವೇಗದಿಂದ ಮಾತಾಡಬಲ್ಲವರಾಗಿದ್ದರು.

Literature: ನೆರೆನಾಡ ನುಡಿಯೊಳಗಾಡಿ: ಟಿ.ಡಿ. ರಾಜಣ್ಣ ತಗ್ಗಿ ಅನುವಾದಿಸಿದ ಪಾಲಗುಮ್ಮಿ ಪದ್ಮರಾಜು ಅವರ ತೆಲುಗು ಕಥೆ
ತೆಲುಗು ಕಥೆಗಾರ ಪಾಲಗುಮ್ಮಿ ಪದ್ಮರಾಜು, ಅನುವಾದಕ ರಾಜಣ್ಣ ತಗ್ಗಿ
Follow us on

ನೆರೆನಾಡ ನುಡಿಯೊಳಗಾಡಿ | Nerenaada Nudiyolagaadi : ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ತಲುಪುವ ಕತೆಗಳನ್ನು ಕೆಲವಾದರೂ ಬರೆಯಬಲ್ಲ ಕತೆಗಾರರು ಇದ್ದಾರೆಂದು ನಿರೂಪಿಸಿದ ತೆಲುಗು ಲೇಖಕ ಪಾಲಗುಮ್ಮಿ ಪದ್ಮರಾಜು. ‘ಗಾಳಿ ಮಳೆ’, ‘ದೋಣಿ ಪಯಣ’ ಇವರ ಪ್ರಸಿದ್ಧ ಕತೆಗಳು. ಇವರ ಹುಟ್ಟೂರು ಪಶ್ವಿಮ ಗೋದಾವರಿ ಜಿಲ್ಲೆಯ ಅತ್ತಿಲಿ ಗ್ರಾಮ. ಉಪನ್ಯಾಸಕರಾಗಿದ್ದ ಇವರು ನಂತರದ ಜೀವನ ನಿರ್ವಹಣೆಗಾಗಿ ಸಿನಿಮಾ ಬರಹಗಾರನಾಗಿ ಮದ್ರಾಸಿನಲ್ಲಿ ನೆಲೆ ನಿಂತರು. ದಾಸರಿ ನಾರಾಯಣರಾವ್ ನಿರ್ದೇಶಿಸಿದ ಕೆಲ ಸಿನೆಮಾಗಳಲ್ಲಿ ಇವರ ಕೈಚಳಕವೂ ಇದೆ. ಚಿತ್ರಗೀತೆ, ಕವನ, ಕಾದಂಬರಿಗಳನ್ನು ಬರೆದ ಇವರು 1983ರಲ್ಲಿ ನಿಧನ ಹೊಂದಿದರು. ಪ್ರಸ್ತುತ ಕಥೆಯನ್ನು ಬರೆದಿದ್ದು 1951ರಲ್ಲಿ. ಇದನ್ನು ಇಲ್ಲಿ ಅನುವಾದಿಸಿದ ಡಾ. ಟಿ. ಡಿ. ರಾಜಣ್ಣ ತಗ್ಗಿ ‘ಮಳೆಗಾಲದ ಒಂದು ರಾತ್ರಿಯಲ್ಲಿ’, ‘ರಾಸಾನಿ ಕಥೆಗಳು’, ‘ಜೋಗತಿ’, ‘ಯಾಜ್ಞಸೇನಿ ಆತ್ಮಕಥೆ’, ‘ಬಣ್ಣದ ಬದುಕು ಮತ್ತು ಹೋರಾಟದ ಬದುಕು’, ‘ಕಾಮಕೂಪ’, ‘ಮೈ ಫಾದರ್ ಬಾಲಯ್ಯ’, ‘ಯಾತ್ರಿಕನ ಕನಸು’, ‘ಅಲೆಮಾರಿಯೊಬ್ಬನ ಆತ್ಮಕತೆ’, ‘ಪಾತಾಳಕ್ಕೆ ಪಯಣ’ ಮತ್ತು ‘ದಾಹ’ (2016), ಅಜೇಯ-ದಿ ಕೌಂಟ್ ಆಫ್ ಮಾಂಟೆ ಕ್ರಿಸ್ಟೋ, ಅಷ್ಟಾವಕ್ರನೂ ಅಪೂರ್ವ ಸುಂದರಿಯೂ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕಥೆ : ಗಾಳಿ ಮಳೆ | ತೆಲುಗು ಮೂಲ : ಪಾಲಗುಮ್ಮಿ ಪದ್ಮರಾಜು | ಕನ್ನಡಕ್ಕೆ : ಟಿ.ಡಿ. ರಾಜಣ್ಣ ತಗ್ಗಿ

(ಭಾಗ 1)

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

‘ಮೋಡಗಳು ದಟ್ಟವಾಗಿ ಆವರಿಸಿಕೊಳ್ಳುತ್ತಿದ್ದವು. ರೈಲು ತುಂಬ ತಡವಾಗಿ ಬಂದಿತು. ರಾವ್ ಅವರು ಎರಡನೇ ದರ್ಜೆಯ ಬೋಗಿಯನ್ನು ಹತ್ತುವಾಗ, ಅವರಿಗೆ ತಮ್ಮ ಮನೆಯಲ್ಲಿ ಅಭ್ಯಾಸಗೊಂಡಿದ್ದ ಸೌಕರ್ಯಗಳು ಒಂದೊಂದಾಗಿ ನೆನಪಿಗೆ ಬಂದವು. ಶುಭ್ರವಾಗಿ ಒರೆಸಿ ಒಪ್ಪ ಓರಣ ಮಾಡಿದ್ದ ಅವರ ಓದುವ ಕೋಣೆ… ಆ ಕೋಣೆಯಲ್ಲಿ ನುಣುಪು ಹಲಗೆಯಿಂದ ತಯಾರಿಸಿದ್ದ ಒಂದು ಮೇಜು. ಅದರ ಮೇಲೆ ಒಂದು ತುದಿಯಲ್ಲಿ ಬೆಳಗುತ್ತಿರುವ ಎಲೆಹಸಿರು ಬಣ್ಣದ ಕೊಳವೆಯ ಒಂದು ದೀಪ. ಅವರು ಕುಳಿತುಕೊಳ್ಳುವ ಜಾಗದಲ್ಲಿ ಕುಳಿಬಿದ್ದಿದ್ದ ಮೆತ್ತನೆಯ ಕುರ್ಚಿ. ಸೋಪಾದಲ್ಲಿ ಇರುವುದೂ ಗೊತ್ತಾಗದಂತೆ ಕುಳಿತುಕೊಂಡಿರುತ್ತಿದ್ದ ಅವರ ಹೆಂಡತಿ… ಅವರಿಗೆ ನಾಲ್ಕು ಜನ ಮಕ್ಕಳು. ಅವರಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು. ಆ ಮಕ್ಕಳನ್ನು ನೋಡಿದರೆ ಅವರಿಗೆ ತುಂಬ ಹೆಮ್ಮೆ…

ರೈಲು ಬೋಗಿಯಲ್ಲಿನ ಮೂರು ಸೀಟುಗಳನ್ನು ಯಾರೋ ಆಕ್ರಮಿಸಿಕೊಂಡು ತಮ್ಮ ಬೆಡ್‌ಶೀಟ್‌ಗಳನ್ನು ಹಾಸಿಕೊಂಡಿದ್ದರು. ತಾನು ರೈಲುಬೋಗಿ ಹತ್ತಿದ್ದನ್ನು ಕಂಡು ಅದರಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಬೇಸರ ಮಾಡಿಕೊಳ್ಳುತ್ತಿದ್ದುದನ್ನು ರಾವ್ ಅವರು ಅವರ ಮುಖಗಳನ್ನು ನೋಡದೆಯೇ ಗ್ರಹಿಸಿದರು. ತಾನು ಇನ್ನೊಂದು ಬೋಗಿಗೆ ಹೋಗುವುದು ಒಳ್ಳೆಯದೆನಿಸಿತು. ಆದರೆ ಕೂಲಿಯವನು ತನ್ನ ಬೆಡ್ಡಿಂಗ್, ಪೆಟ್ಟಿಗೆ ಮತ್ತು ಕೊಡೆಯನ್ನು ಮೇಲಿನ ಸೀಟಿನ ಮೇಲಿಟ್ಟು ಹೊರಟು ಹೋಗಿದ್ದ. ರೈಲು ಕದಲುತ್ತಿತ್ತು. ಹಿರಿಯ ವ್ಯಕ್ತಿಯೊಬ್ಬ ತನ್ನ ಬೆಡ್‌ಶೀಟನ್ನು ಸ್ವಲ್ಪ ಹಿಂದಕ್ಕೆ ಮಡಚಿ ರಾವ್ ಅವರಿಗೆ ಜಾಗ ಮಾಡಿಕೊಟ್ಟ. ರಾವ್ ಅದರ ಮೇಲೆ ಕುಳಿತುಕೊಂಡು ತನ್ನ ಸುತ್ತಲಿನ ಪರಿಸರವನ್ನು ವೀಕ್ಷಿಸುವುದಕ್ಕೆ ಪ್ರಾರಂಭಿಸಿದರು.

ಆ ನಾಲ್ಕೂ ಮಂದಿ ದೂರ ಪ್ರಯಾಣಿಕರೆಂದು ರಾವ್ ಗ್ರಹಿಸಿದರು. ಕಾಲುಚೀಲಗಳ ಸಮೇತ ಆ ನಾಲ್ಕೂ ಜನರ ಬೂಟುಗಳು ಸೀಟಿನ ಕೆಳಕ್ಕೆ ತಳ್ಳಲ್ಪಟ್ಟಿದ್ದವು. ತಮ್ಮ ಅಂಗಿ, ಪ್ಯಾಂಟ್ ಮತ್ತು ಕೋಟುಗಳನ್ನು ಮೇಲಿನ ಕೊಕ್ಕೆಗಳಿಗೆ ನೇತುಹಾಕಿದ್ದರು. ಅವರಲ್ಲಿ ಮೂವರು ದೊಗಳೆ ಪೈಜಾಮಗಳನ್ನು ಧರಿಸಿದ್ದರು. ತಮ್ಮ ವಸ್ತುಗಳನ್ನು ಯಾವ ಅವಸರವೂ ಇಲ್ಲವೆಂಬಂತೆ ಅಲ್ಲಲ್ಲಿ ಅಡ್ಡಾದಿಡ್ಡಿ ಹರಡಿದ್ದರು. ಕಿಟಕಿ ಪಕ್ಕದಲ್ಲಿನ ಎರಡು ಸೀಟುಗಳ ಮೇಲೆ ಇಬ್ಬರು ವಯಸ್ಸಾದ ವ್ಯಕ್ತಿಗಳು ಕುಳಿತುಕೊಂಡಿದ್ದರು. ಒಳಗಿನ ಸ್ಲೀಪರ್ ಬರ್ತ್ ಮೇಲೆ ಒಬ್ಬ ಯುವತಿ ಮತ್ತು ಒಬ್ಬ ಯುವಕ ಕುಳಿತುಕೊಂಡಿದ್ದರು. ಯುವತಿ ಆ ಯುವಕನ ಹೆಂಡತಿ ಆಗಿರಬಹುದು. ಆ ಯುವಕ ಸೇದುತ್ತಿದ್ದ ಸಿಗರೇಟ್ ಹೊಗೆಯ ವಾಸನೆಯು ರಾವ್ ಅವರ ಮೂಗಿನ ರಂಧ್ರಗಳಿಗೆ ಗೊತ್ತಾಗದಂತೆ ಪ್ರವೇಶಿಸಿ ಒಂದುಕ್ಷಣ ಅವರನ್ನು ಕಕ್ಕಾಬಿಕ್ಕಿಯನ್ನಾಗಿಸಿತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ: ಚಂದ್ರಕಾಂತ ಪೋಕಳೆ ಅನುವಾದಿಸಿದ ಹಮೀದ ದಳವಾಯಿ ಕಥೆ ‘ಬಾಬುಖಾನನ ಗ್ರಾಮೋಫೋನ್’

ರೈಲುಬೋಗಿಯ ಆ ಸಿಗರೇಟ್ ವಾಸನೆಯ ಬಗ್ಗೆ ರಾವ್ ಅವರಿಗೆ ತೀವ್ರವಾದ ಭಿನ್ನಾಭಿಪ್ರಾಯಗಳಿದ್ದವು. ನಿಜ ಹೇಳಬೇಕೆಂದರೆ ಅವರೊಬ್ಬ ವೇದಾಂತಿ. ಅವರಿಗೊಂದು ಅಭಿಮಾನ ಸಿದ್ಧಾಂತವಿತ್ತು. ವೇದಾಂತವು ಜೀವನದೊಂದಿಗೂ, ಜೀವನ ವಿಧಾನದೊಂದಿಗೂ, ವ್ಯಕ್ತಿಗೂ ಸಮಾಜಕ್ಕೂ ನಡುವೆ ಏರ್ಪಡುವ ಬಗೆಬಗೆಯ ಸಮಸ್ಯೆಗಳೊಂದಿಗೂ ಅನುಬಂಧವನ್ನು ಹೊಂದಿರುತ್ತದೆಂಬುದು ಅವರ ವಾದ. ಅವರ ಪ್ರಕಾರ ವೇದಾಂತಕ್ಕೆ, ಜೀವನ ವಿಧಾನಕ್ಕೆ ಮತ್ತು ತೀಕ್ಷ್ಣವಾದ ಮಾನವಾನುಭವಗಳಿಗೆ ಅತೀತವಾದ ವಿಷಯಗಳೊಂದಿಗೆ ಯಾವ ಸಂಬಂಧವೂ ಇರುವುದಿಲ್ಲ. ಅವರ ಜೀವನ ಯಾವ ಏರುಪೇರುಗಳಿಲ್ಲದೆ ಸುಖವಾಗಿ ಸಾಗುತ್ತಿತ್ತು. ಆ ಸಂತೃಪ್ತಿಯ ಕಾರಣದಿಂದ ಜೀವನದ ಬಗ್ಗೆ ಅಮಿತ ಉತ್ಸಾಹದಿಂದಲೂ ಮತ್ತು ಪವಿತ್ರವಾದ ಉದ್ವೇಗದಿಂದಲೂ ಮಾತಾಡಬಲ್ಲವರಾಗಿದ್ದರು. ಒಬ್ಬ ವೇದಾಂತಿಯಾಗಿಯೇ ಅಲ್ಲದೆ, ಒಳ್ಳೆಯ ವಾಗ್ಮಿಯಾಗಿಯೂ ಪ್ರಖ್ಯಾತಿಯನ್ನು ಪಡೆದಿದ್ದರು. ಅವರು ತಮ್ಮ ವೇದಾಂತವನ್ನು ಅನುಪಮಾನದಂತೆ ಉದ್ವಿಗ್ನತೆಯಿಂದ ವಿವರಿಸುತ್ತಿದ್ದರು.

ಅಸಲು ಅವರು ಈ ಪ್ರಯಾಣ ಮಾಡುತ್ತಿರುವುದೇ ಒಂದು ಉಪನ್ಯಾಸ ಕೊಡುವುದಕ್ಕಾಗಿ. ‘ಆಸ್ತಿಕ ಮಹಾಸಮಾಜ’ ಎಂಬ ಹೆಸರಿನ ಒಂದು ಸಂಸ್ಥೆಯ ಆಹ್ವಾನದ ಮೇರೆಗೆ ಅವರು ಹೊರಟಿದ್ದರು. ಅವರ ಉಪನ್ಯಾಸ ‘ಸಾಮ್ಯವಾದವೂ ರಮ್ಯರಸವಾದವೂ’ ಎಂಬ ವಿಷಯದ ಬಗ್ಗೆ. ಅವರ ಅಭಿಪ್ರಾಯ – ಸಾಮ್ಯವಾದದಲ್ಲಿ ಈ ರಮ್ಯರಸಾತ್ಮಕತೆ ಇದೆಯೆಂದೊ ಇಲ್ಲವೆ ಅವೆರಡೂ ಪರಸ್ಪರ ವಿರುದ್ಧವಾದ್ದರಿಂದ ಅವುಗಳಿಗೊಂದು ಸಮನ್ವಯ ಕಲ್ಪಿಸಬೇಕೆಂದೊ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಅವರ ಉಪನ್ಯಾಸವನ್ನು ಕೇಳಲೇಬೇಕು.

ರಾವ್ ಅವರು ಯುವ ದಂಪತಿಗಳ ಕಡೆ ನೋಡಿದರು. ಯುವತಿಯ ಮುಖ ತುಂಬ ಭಾರವಾಗಿತ್ತು. ಆಕೆಗೆ ಒಂದಷ್ಟು ಉತ್ಸಾಹ ಉಂಟುಮಾಡುವುದಕ್ಕೊ ಏನೊ ಆ ಯುವಕ ನಗುತ್ತ ಆಕೆಯ ಕಿವಿಯಲ್ಲಿ ಏನನ್ನೊ ಹೇಳಿದ. ಬಹುಶಃ ಆಕೆ ತನ್ನ ಗಂಡನೊಂದಿಗೆ ಆತ ಕೆಲಸ ಮಾಡುತ್ತಿರುವ ಯಾವುದೊ ದೂರದ ದೇಶಕ್ಕೆ ಮೊದಲ ಸಲ ಹೊರಟಂತಿತ್ತು. ರಾವ್ ಅವರಿಗೆ ಇತ್ತೀಚೆಗೆ ತಾನು ನೀಡಿದ್ದ ಉಪನ್ಯಾಸ ನೆನಪಿಗೆ ಬಂದಿತು. ‘ಸತ್ಯವೂ ತತ್ವವೂ’ ಎಂಬ ವಿಷಯದ ಮೇಲೆ ಆ ಉಪನ್ಯಾಸ. ಅವರ ಉಪನ್ಯಾಸದ ಶೀರ್ಷಿಕೆಗಳು ಶಬ್ದಾಲಂಕಾರಗಳನ್ನು ಆಧರಿಸಿ ನಿರ್ಧಾರಗೊಳ್ಳುತ್ತವೆಯೇ ಹೊರತು, ಅರ್ಥಸ್ಫುರಣೆಯನ್ನು ಆಧರಿಸಿ ಅಲ್ಲವೆಂದು ಅವರ ಸ್ನೇಹಿತರಲ್ಲಿ ಕೆಲವರು ಅವರನ್ನು ಹೀಯಾಳಿಸುತ್ತಿದ್ದುದೂ ಉಂಟು. ಅದು ನಿಜವಲ್ಲ ಎಂದು ರಾವ್ ಅವರು ಎಂದೂ ವಾದಿಸುತ್ತಿರಲಿಲ್ಲ. ಆದರೆ ಧ್ವನಿಯನ್ನು ಆಧರಿಸಿ ಅರ್ಥ ಅನುಸರಿಸುತ್ತದೆ ಎಂದು ಮಾತ್ರ ಉತ್ತರಕೊಡುತ್ತಿದ್ದರು. ಅವರು ಕೊಟ್ಟಿರುವ ಉಪನ್ಯಾಸಗಳಲ್ಲಿ ತುಂಬ ಮಹತ್ವವಾದುದು ‘ಪ್ರಕೃತಿ ಪರಿಷ್ಕೃತಿ’.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಇಡೀ ಲೋಕವೇ ನಿನ್ನನ್ನು ವಂಚಿಸುತ್ತಿದೆ, ಈಗ ನಿನ್ನ ಸರದಿ, ಲೋಕವನ್ನು ವಂಚಿಸು’

ಗಾಳಿ ಹೆಚ್ಚಾಗತೊಡಗಿ, ಕಿಟಿಕಿ ಬಾಗಿಲುಗಳ ಮೇಲೆ ಜೋರಾಗಿ ಬಡಿಯುತ್ತಿತ್ತು. ಇದ್ದಕ್ಕಿದ್ದಂತೆ ಬೋಗಿ ಪೂರಾ ಕತ್ತಲಮಯವಾಗಿ ಹೋಯಿತು. ಇನ್ನೂ ಸಾಯಂಕಾಲ ಕೂಡ ಆಗಿರಲಿಲ್ಲ. ರಾವ್ ಅವರ ಪಕ್ಕದಲ್ಲಿ ಕುಳಿತಿದ್ದ ಹಿರಿಯ ವ್ಯಕ್ತಿ ಕಂಡೂ ಕಾಣದಂತಿದ್ದ ದೀಪದ ಬೆಳಕಿನಲ್ಲಿ ಪತ್ತೆದಾರಿ ಕಾದಂಬರಿಯೊಂದನ್ನು ತದೇಕ ಚಿತ್ತದಿಂದ ಓದುತ್ತಿದ್ದ. ಆತ ಟಕ್ಕನೆ ಮುಖ ಎತ್ತಿ, ‘ಟೈಂ ಎಷ್ಟಾಗಿದೆ ?’ ಎಂದು ರಾವ್ ಅವರನ್ನು ಕೇಳಿದ. ರಾವ್ ಅವರು ಒಂದು ಕ್ಷಣ ಆಲೋಚಿಸಿದರು. ಕೈಯಲ್ಲಿ ಗಡಿಯಾರ ಇದ್ದರೂ ಕೂಡ ‘ಮೂರು ಗಂಟೆ ಆಗಿರಬಹುದು’ ಎಂದರು.
‘ತುಂಬ ಕತ್ತಲೆಯಾಗೋಯ್ತಲ್ಲ!’ ಎಂದ ಆ ಹಿರಿಯ ವ್ಯಕ್ತಿ. ರಾವ್ ಅವರು ಉತ್ತರ ಹೇಳದೆ ಆ ಹಿರಿಯ ವ್ಯಕ್ತಿಯ ಕಡೆ ನೋಡಿದರು. ಆತನಿಗೆ ರಾವ್ ಅವರ ವಯಸ್ಸಿರಬಹುದು. ಆ ಐವತ್ತು ವರ್ಷದ ವ್ಯಕ್ತಿ ಪತ್ತೆದಾರಿ ಕಾದಂಬರಿಗಳನ್ನು ಓದಿ ಆನಂದಿಸುತ್ತಿರುವುದು ರಾವ್ ಅವರಿಗೆ ವಿಚಿತ್ರವಾಗಿ ತೋರಿತು. ಎದುರಲ್ಲಿ ಕುಳಿತಿದ್ದ ಮುದುಕನೊಬ್ಬ ಗಂಭೀರವಾಗಿ ಚುಟ್ಟ ಸೇದುತ್ತ ಅದರ ರುಚಿಯನ್ನು ಆಸ್ವಾದಿಸುತ್ತಿದ್ದ. ಎಲ್ಲ ಮನುಷ್ಯರ ಸ್ವಭಾವವೇ ಇಷ್ಟು ಎಂದು ಅಂದುಕೊಂಡರು. ರಾವ್ ಅವರ ಎದುರಲ್ಲಿ ಕುಳಿತಿದ್ದ ಮುದುಕ ರಾವ್ ಅವರಿಗಿಂತಲೂ ವಯಸ್ಸಿನಲ್ಲಿ ಹಿರಿಯನಿರಬಹುದು. ಆದರೆ ಆತನ ಮುಖದಲ್ಲಿ ಯುವಕರ ಸಹಜವಾದ ಚುರುಕುತನವಿತ್ತು. ಆದರೂ ಆ ಮುಖ ತನ್ನ ವಯಸ್ಸನ್ನು ಮರೆಮಾಚಿರಲಿಲ್ಲ. ಜೋತುಬಿದ್ದಿದ್ದ ಗದ್ದ, ಸುಕ್ಕು ಬಿದ್ದಿದ್ದ ಹಣೆ ಆತನ ವಯಸ್ಸನ್ನು ಎತ್ತಿ ತೋರಿಸುತ್ತಿದ್ದವು. ರಾವ್ ಅವರಿಗೆ ಉಪನ್ಯಾಸಕ್ಕೆ ಇನ್ನೊಂದು ವಿಷಯ ಸಿಕ್ಕಂತಾಯಿತು. ‘ವಯೋ ಶರೀರವೂ ಮನೋ ವಿವೇಕವೂ’.

ತಾನು ತುಂಬ ಆರೋಗ್ಯವಂತನೆಂಬುದು ರಾವ್ ಅವರಿಗೆ ಹೆಮ್ಮೆಯ ವಿಷಯ. ಅವರ ಕೂದಲು ಈಗಲೂ ಒತ್ತಾಗಿಯೂ ಮತ್ತು ಕಪ್ಪಾಗಿಯೂ ಇತ್ತು. ಅವರ ಹೆಂಡತಿ ಅವರಿಗಿಂತಲೂ ದೊಡ್ಡವಳಂತೆ ಕಾಣಿಸುತ್ತಿದ್ದಳು. ಗೊತ್ತಿಲ್ಲದವರು ಆಕೆಯನ್ನು ಅವರ ಅಕ್ಕನೊ, ತಾಯಿಯೊ ಎಂದು ಭ್ರಮೆಪಡುತ್ತಿರುತ್ತಾರೆಂದು ಆಗಾಗ ತಮಾಷೆಯೆಂಬಂತೆ ಅವರು ಹೇಳಿಕೊಳ್ಳುತ್ತಿದ್ದರು. ಅವರಿಗೊಬ್ಬ ಇಪ್ಪತ್ತೈದು ವರ್ಷ ವಯಸ್ಸಿನ ಮಗನಿದ್ದಾನೆಂದೂ, ಆ ಮಗನಿಗೆ ಇಬ್ಬರು ಅಂದವಾದ ಮಕ್ಕಳಿದ್ದಾರೆಂದೂ, ಆ ಮಗ ಇತ್ತೀಚೆಗಷ್ಟೇ ತನ್ನ ತಂದೆಯ ವಕೀಲಿ ವೃತ್ತಿಯೆಲ್ಲವನ್ನು ತಾನೇ ನೋಡಿಕೊಳ್ಳುತ್ತಿದ್ದಾನೆಂದು ರಾವ್ ಅವರನ್ನು ನೋಡಿದರ‍್ಯಾರೂ ಅಂದುಕೊಳ್ಳುವುದಿಲ್ಲ. ರಾವ್ ಅವರಷ್ಟು ಸಂಪಾದನೆ ಇರುವವರಾರೂ ವಕೀಲಿ ವೃತ್ತಿಯಿಂದ ವಿರಮಿಸುವುದಿಲ್ಲ. ರಾವ್ ಅವರು ತಮ್ಮ ಜೀವನದಲ್ಲಿ ಕೆಲ ಸಂಕಲ್ಪಗಳನ್ನು ಅನುಸರಿಸಬೇಕೆಂದು ನಿರ್ಧರಿಸಿಕೊಂಡಿದ್ದರು. ಅವುಗಳನ್ನು ಅತಿಕ್ರಮಿಸದಂತಹ ಆತ್ಮಸ್ಥೈರ್ಯ ಅವರಿಗಿತ್ತು. ನೀತಿ ನಿಯಮಗಳ ಬಗ್ಗೆ ಅವರಿಗೆ ಹುಚ್ಚು ಹಠಮಾರಿತನವಿರಲಿಲ್ಲ. ಆದರೆ ವ್ಯಕ್ತಿಯ ನಡವಳಿಕೆಯನ್ನು ತಿದ್ದುವುದಕ್ಕೆ ಕೆಲವು ನಿಯಮಗಳು ಇರಲೇಬೇಕೆಂಬುದು ಅವರ ಅಭಿಪ್ರಾಯ. ಅವರು ತಮ್ಮ ಮಕ್ಕಳನ್ನು ತಿಂಗಳಿಗೊಂದು ಸಲ ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಸದಾ ಹೋಗುವುದಕ್ಕೆ ಅನುಮತಿ ಕೊಡುತ್ತಿರಲಿಲ್ಲ. ಹುಡುಗರ ಮನಸ್ಸಿನಲ್ಲಿ ಇರುವ ಆಸೆಗಳ ಬಗೆಗೆ ಅವರಿಗೆ ಸಹಾನುಭೂತಿಯಿತ್ತು. ಆ ಆಸೆಗಳನ್ನು ತೀರಿಸುವುದು ಕೂಡ ಮಕ್ಕಳ ಮಾನಸಿಕ ಪರಿಪಕ್ವತೆಗೆ ಅತ್ಯಗತ್ಯವೆಂಬುದು ಅವರ ನಂಬಿಕೆ. ಆದರೂ ಆಸೆಗಳು ಅವರ ಆತ್ಮವನ್ನು ಹಿಡಿದಿಡುವಷ್ಟು ಬಲವಾಗಿ ಇರಕೂಡದು ಎಂಬ ಅಭಿಪ್ರಾಯವೂ ಇತ್ತು. ಅವರು ತಮ್ಮ ಮನೆಯಲ್ಲಿ ತಪ್ಪದೆ ಶಿಸ್ತನ್ನು ತುಂಬ ಶ್ರಮಪಟ್ಟು ಜಾರಿಗೆ ತಂದಿದ್ದರು. ಆ ಶಿಸ್ತು ಅವರ ಮನಸ್ಸಿಗೆ ಮತ್ತು ಶರೀರಕ್ಕೆ ತುಂಬ ಶಾಂತಿ ಮತ್ತು ಸಮಾಧಾನವನ್ನು ತಂದುಕೊಡುತ್ತಿತ್ತು.

ಎಲ್ಲ ಕಿಟಕಿಗಳೂ ಮುಚ್ಚಿದ್ದವು. ಹೊರಗೆ ಗಾಳಿ ಹೋರೆಂದು ಅರಚುತ್ತಿತ್ತು. ಮಳೆಹನಿ ಕೂಡ ಬೀಳುವುದಕ್ಕೆ ಪ್ರಾರಂಭಿಸಿತು. ಮಳೆಯ ಹನಿಗಳು ಗಾಳಿಯ ರಭಸಕ್ಕೆ ಕಿಟಕಿ ಸಂದುಗಳಿಂದ ನುಗ್ಗಿ ಬರುತ್ತಿದ್ದವು. ಅವು ತಾಕಿದರೆ ತುಂಬ ತಣ್ಣಗೆನಿಸುತ್ತಿತ್ತು. ಯುವಕ ಆ ಯುವತಿಯ ಹತ್ತಿರಕ್ಕೆ ಸರಿಯ ಹೋದ. ಯುವತಿ ಅತ್ತಿತ್ತ ನೋಡಿ ಸ್ವಲ್ಪ ದೂರ ಸರಿದಳು.

ಇದನ್ನೂ ಓದಿ : Booker Prize 2022: ‘ಇದು ಭಾರತೀಯ ಭಾಷೆಯ ಗೆಲುವು’ ಕೆ. ಎಸ್. ವೈಶಾಲಿ

‘ದಾರುಣವಾಗಿದೆಯಲ್ಲ ಈ ಗಾಳಿಮಳೆ’ ಎಂದ ಯುವಕ. ರಾವ್ ಅವರ ಪಕ್ಕದಲ್ಲಿದ್ದ ಹಿರಿಯ ವ್ಯಕ್ತಿ ಮುಖ ಮೇಲೆತ್ತಿ ಏನನ್ನೊ ಹೇಳ ಹೋಗಿ, ಅದನ್ನು ಕೈಬಿಟ್ಟು ಮತ್ತೆ ಪತ್ತೆದಾರಿ ಕಾದಂಬರಿ ಓದುವುದಕ್ಕೆ ಪ್ರಾರಂಭಿಸಿದ. ಯುವಕ ಸಿಗರೇಟ್ ಹೊತ್ತಿಸಿಕೊಂಡ. ಯುವತಿ ಮುಖ ಸಿಂಡರಿಸಿಕೊಂಡು ಮತ್ತಷ್ಟು ದೂರ ಸರಿದಳು. ಯುವಕ ಮಂದಹಾಸ ಬೀರಿ ಸಿಗರೇಟ್ ಸೇದುತ್ತಲೇ ಕುಳಿತಿದ್ದ. ಅಂದವಾಗಿ ಬಾಚಿದ್ದ ಯುವತಿಯ ಬೈತಲೆಯಿಂದ ಕೆಲ ಮುಂಗುರುಳು ಇಳಿಬಿದ್ದು ಆಕೆಯ ಹಣೆಯ ಮೇಲೆ ಮತ್ತು ಕೆನ್ನೆಯ ಮೇಲೆ ಕದಲುತ್ತಿದ್ದವು. ತನ್ನ ಹೆಣ್ಣು ಮಕ್ಕಳು ತಲೆ ಬಾಚಿಕೊಳ್ಳುವ ಪದ್ಧತಿಯನ್ನು ರಾವ್ ಅವರೇ ನಿರ್ಧರಿಸಿದ್ದರು. ಆ ವಿಷಯ ಅವರಿಗೆ ನೆನಪಿಗೆ ಬಂದಿತು. ತಮ್ಮ ಅಭ್ಯಾಸಗಳ ಕಾರಣದಿಂದ ನೋಂಬು, ವ್ರತ, ಸ್ನೇಹ, ಬಟ್ಟೆ ಧರಿಸುವ ಪದ್ಧತಿ ಎಲ್ಲವೂ ಅಂದದ ಬಗೆಗೆ ಮತ್ತು ಮರ್ಯಾದೆಯ ಬಗೆಗೆ ರಾವ್ ಅವರಿಗಿರುವ ಅಭಿಪ್ರಾಯಗಳಿಗೆ ಅನುಗುಣವಾಗಿಯೇ ನಿರ್ಧಾರವಾಗಿದ್ದವು.
ಎದುರಲ್ಲಿ ಕುಳಿತಿದ್ದ ಮುದುಕ ತನ್ನ ಬಟ್ಟೆ ಗಂಟಿನಿಂದ ಬೂದು ಬಣ್ಣದ ಪ್ಲಾನಿಲ್ ಅಂಗಿ ತೆಗೆದು ತೊಟ್ಟುಕೊಂಡ. ಆತ ತಾನು ತೊಟ್ಟಿದ್ದ ಅಂಗಿಯಲ್ಲಿ ಮತ್ತು ದೊಗಳೆ ಪೈಜಾಮದಲ್ಲಿ ನಿಜವಾಗಿಯೂ ವಿಚಿತ್ರವಾಗಿ ಕಾಣಿಸುತ್ತಿದ್ದ. ಆತ ತನ್ನ ಫ್ಲಾಸ್ಕಿನೊಳಗಿನಿಂದ ಒಂದು ಕಪ್ಪು ಬಿಸಿ ಬಿಸಿ ಚಹಾ ಸುರುವಿಕೊಂಡು ಕುಡಿಯುವುದಕ್ಕೆ ಪ್ರಾರಂಭಿಸಿದ. ರಾವ್ ಅವರಿಗೆ ತನ್ನ ಪೆಟ್ಟಿಗೆಯಲ್ಲಿದ್ದ ಓವಲ್ಟಿನ್ ಫ್ಲಾಸ್ಕ್ ನೆನಪಿಗೆ ಬಂದಿತು. ಫ್ಲಾಸ್ಕ್ ತೆಗೆದು ಓವಲ್ಟಿನ್ ಅನ್ನು ಆಪ್ಯಾಯತೆಯಿಂದ ಚಪ್ಪರಿಸುವುದಕ್ಕೆ ಪ್ರಾರಂಭಿಸಿದರು. ರಾವ್ ಅವರಿಗೆ ಓವಲ್ಟಿನ್ ಎಂದರೆ ತುಂಬ ಇಷ್ಟ. ಆದರೆ ಆ ಇಷ್ಟ ಎಂದೂ ಅವರನ್ನು ಮಿತಿಮೀರುವಂತೆ ಮಾಡಲಿಲ್ಲ. ಆ ಮಧುರವಾದ ಪಾನೀಯವನ್ನು ಅವರು ಒಂದೊಂದು ಕಪ್ಪಿನಂತೆ ದಿನಕ್ಕೆ ಎರಡು ಸಲ ಕುಡಿಯುತ್ತಿದ್ದರು.

(ಭಾಗ 1 : ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 2:32 pm, Fri, 27 May 22