Booker Prize 2022: ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ

Booker Prize 2022: ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
ಲಂಡನ್​ನಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಗೀತಾಂಜಲಿ ಶ್ರೀ ಮತ್ತು ಡೇಸಿ ರಾಕ್​ವೆಲ್

Geetanjali Shree : ‘ನಾನು ಬೂಕರ್ ಪ್ರಶಸ್ತಿಯ ಬಗ್ಗೆ ಕನಸೂ ಕಂಡಿರಲಿಲ್ಲ, ಯೋಚಿಸಿಯೂ ಇರಲಿಲ್ಲ. ಎಂಥ ದೊಡ್ಡ ಮನ್ನಣೆ ಇದು ಅಚ್ಚರಿಗೊಳಗಾಗಿದ್ದೇನೆ. ಅತ್ಯಂತ ಖುಷಿ ಇದೆ, ವಿನಮ್ರಳಾಗಿದ್ದೇನೆ’ ಎಂದಿದ್ದಾರೆ ಲೇಖಕಿ ಗೀತಾಂಜಲಿ ಶ್ರೀ.

ಶ್ರೀದೇವಿ ಕಳಸದ | Shridevi Kalasad

|

May 27, 2022 | 12:38 PM

Booker Prize 2022 : ಹಿಂದಿ ಲೇಖಕಿ ಗೀತಾಂಜಲಿ ಶ್ರೀ (Geetanjali Shree) ಅವರ ‘ಟಾಂಬ್ ಆಫ್ ಸ್ಯಾಂಡ್​’ (Tomb Of Sand) ಕಾದಂಬರಿಯು ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ಭಾರತೀಯ ಭಾಷೆಯೊಂದರಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗೆ ಈ ಪ್ರಶಸ್ತಿ ಮೊದಲ ಬಾರಿಗೆ ಸಂದಿದೆ. ಗೀತಾಂಜಲಿ ಅವರ ಈ ಕೃತಿಯನ್ನು ಡೇಸಿ ರಾಕ್​ವೆಲ್ (Daisy Rockwell)​ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ನಿನ್ನೆ ಲಂಡನ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ 50 ಸಾವಿರ ಪೌಂಡ್ ಪ್ರಶಸ್ತಿ ಮೊತ್ತ ಇಬ್ಬರಲ್ಲೂ ಹಂಚಿಕೆಯಾಗಿದೆ.  ‘ಗಟ್ಟಿಧ್ವನಿಯ ಮತ್ತು ಓದದೆ ಕೆಳಗಿರಿಸಲಾಗದ ಅದಮ್ಯ ಕೃತಿ’ ಎಂದು ತೀರ್ಪುಗಾರರು ಬಣ್ಣಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಶಸ್ತಿಗಾಗಿ ಈ ಕೃತಿಯೊಂದಿಗೆ ಪೈಪೋಟಿಗಿಳಿದಿದ್ದ ಕೃತಿಗಳು, ಬೋರಾ ಚುಂಗ್ ಅವರ ‘ಕರ್ಸ್ಡ್​ ಬನ್ನೀ’ (ಮೂಲ ಕೊರಿಯನ್​ನಿಂದ ಅನುವಾದಿಸಿದವರು ಆ್ಯಂಟನ್ ಹುರ್), ಜಾನ್ ಫಾಸ್ ಅವರ ‘ಎ ನ್ಯೂ ನೇಮ್-ಸೆಪ್ಟಾಲಜಿ V-VVI’ (ಮೂಲ ನಾರ್ವೆಜಿಯಯನ್​ನಿಂದ ಅನುವಾದಿಸಿರುವವರು ಡೇಮಿಯನ್ ಸೀರ್ಲ್ಸ್​), ‘ಮೀಲ್ಕೋ ಕಾವಾಕಾಮಿ’ ಅವರ ಹೆವೆನ್ (ಮೂಲ ಜಪಾನಿಯಿಂದ ಅನುವಾದಿಸಿದವರು ಸ್ಯಾಮ್ಯುಯೆಲ್ ಬೆಟ್ ಮತ್ತು ಡೇವಿಡ್ ಬಾಯ್ಡ್), ಕ್ಲಾಡಿಯಾ ಪೀರೋ ಅವರ ‘ಎಲೆನಾ ನೋಸ್’ (ಮೂಲ ಸ್ಪ್ಯಾನಿಶ್​ನಿಂದ ಅನುವಾದಿಸಿದವರು ಫ್ರಾನ್ಸಿಸ್ ರಿಡ್ಲ್) ಹಾಗೂ ಓಲ್ಗಾ ಟೊಕರ್ಜುಕ್ ಅವರ ‘ದಿ ಬಯಕ್ ಆಫ್ ಜೇಕಬ್’ (ಮೂಲ ಪೊಲಿಶ್ ಅನುವಾದಿಸಿದವರು ಜೆನ್ನಿಫರ್ ಕ್ರಾಫ್ಟ್).

ತೀರ್ಪುಗಾರರ ಸಮಿತಿಯ ಅಧ್ಯಕ್ಷ ಫ್ರ್ಯಾಂಕ್ ವೀನ್, ‘ಅನುವಾದವೆಂಬುದು ಸರಹದ್ದುಗಳು-ಸಂಸ್ಕೃತಿಗಳು ಹಾಗೂ ಭಾಷೆಗಳನ್ನು ದಾಟಿ ಸಾಗುವ ಅತ್ಯಾಪ್ತ ಕುಸುರಿ ಕೌಶಲ. ಬರಹಗಾರ್ತಿ-ಅನುವಾದಕಿಯ ಪಾರಂಗತ ಪರಿಪೂರ್ಣ ಜೋಡಿಯನ್ನು ಕಂಡುಹಿಡಿಯುವ ಈ ಕ್ರಿಯೆಯೇ ಬೆರಗಿನ ಮತ್ತು ಹರ್ಷದಾಯಕ ಕ್ರಿಯೆ. ಅಲ್ಲದೆ,  ತೀರ್ಪುಗಾರರಾಗಿ ಹಲವಾರು ಅಸಾಧಾರಣ ಕೃತಿಗಳನ್ನು ಓದುವ ಸಂತೋಷ ನಮ್ಮದು. ಅವುಗಳ ಪೈಕಿ ಆರಿಸಿ ಅಂತಿಮ ಪಟ್ಟಿಗೆ ಸೇರಿಸುವ ಮತ್ತು ಹೊರಗಿಡುವ ಕೆಲಸ ಹಲವು ಅತ್ಯಂತ ವೇದನೀಯ. ಈ ಆರು ಭಾಷೆಗಳ ಆರು ಕೃತಿಗಳು ಮಾನವ ಅನುಭವಲೋಕದ ಗಡಿಗಳನ್ನು ಶೋಧಿಸಿಬಿಡುತ್ತವೆ. ಈ ಕೃತಿಗಳು ವಿಶ್ವದ ನಾನಾ ಭಾಗಗಳ ಸಾಹಿತ್ಯದೃಶ್ಯಗಳನ್ನು ಕಟ್ಟಿಕೊಡುತ್ತವೆ, ಅಷ್ಟೇ ದಿಟ್ಟವಾಗಿ ಮತ್ತು ಉತ್ಕಟವಾಗಿ ತಮ್ಮ ಸ್ವಂತಿಕೆಯನ್ನು ಬಿಂಬಿಸುತ್ತವೆ. ಕಥನಕಲೆಯ ಸ್ವೋಪಜ್ಞತೆ ಅಂತ್ಯವಿಲ್ಲದಷ್ಟು ಅಪಾರವಾದದ್ದು ಎಂಬ ಸಂದೇಶವನ್ನು ಸಾರುತ್ತವೆ.’ ಎಂದಿದ್ದಾರೆ.

ಇದನ್ನೂ ಓದಿ : ಡಿಎಸ್ ನಾಗಭೂಷಣ ಅವರ ಗಾಂಧಿ ಕಥನ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಉತ್ತರಪ್ರದೇಶದ ಮೈನ್​ಪುರಿ ಮೂಲದ 64ರ ಗೀತಾಂಜಲಿ ಶ್ರೀ ದೆಹಲಿ ನಿವಾಸಿ, ಮೂರು ಕಾದಂಬರಿಗಳು ಮತ್ತು ಹಲವು ಸಣ್ಣಕಥಾ ಸಂಗ್ರಹಗಳ ಲೇಖಕಿ. ಇಂಗ್ಲಿಷ್, ಫ್ರೆಂಚ್, ಜರ್ಮನ್, ಸೆರ್ಬಿಯನ್ ಹಾಗೂ ಕೊರಿಯನ್ ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಮತ್ತು ಫೆಲೋಶಿಪ್​ಗಳ ಅಂತಿಮ ಪಟ್ಟಿಗಳಿಗೆ ಅವರ ಹೆಸರು ಸೇರಿದ್ದಿದೆ. ‘ಟಾಂಬ್ ಆಫ್ ಸ್ಯಾಂಡ್’ ಬ್ರಿಟನ್​ನಲ್ಲಿ ಪ್ರಕಟವಾಗಿರುವ ಅವರ ಮೊದಲ ಕೃತಿ. ಈ ಕೃತಿಯ ಅನುವಾದಕಿ ಡೇಸಿ ರಾಕ್ವೆಲ್ ಅವರು ಅಮೆರಿಕೆಯ ವರ್ಮಾಂಟ್​ನಲ್ಲಿ ನೆಲೆಸಿರುವ ಚಿತ್ರಕಲಾವಿದೆ, ಲೇಖಕಿ ಮತ್ತು ಅನುವಾದಕಿ. ಹಿಂದೀ ಮತ್ತು ಉರ್ದು ಭಾಷೆಯ ಅನೇಕ ಉತ್ಕೃಷ್ಟ ಕೃತಿಗಳನ್ನು ಇವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ತನ್ನ ಪತಿಯ ಮರಣದ ನಂತರ ಕಡು ಖಿನ್ನತೆಗೆ ಜಾರಿ ಪುನಾ ಹೊಸ ಬದುಕನ್ನು ಕಟ್ಟಿಕೊಳ್ಳಲು ತಲೆಯೆತ್ತುವ 80ರ ಉತ್ತರಭಾರತದ ಹೆಣ್ಣುಮಗಳ ಕತೆ ಈ ಕಾದಂಬರಿಯ ವಸ್ತು.

ಇದನ್ನೂ ಓದಿ : Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ

ಇದನ್ನೂ ಓದಿ

Follow us on

Most Read Stories

Click on your DTH Provider to Add TV9 Kannada