AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ‘ಗಾಳಿಯ ಬಲ ಯೆಚ್ಚಾದ್ರೆ ಯಾವುದು ತಾನೆ ನಿಲ್ತೈತೆ?’

Short Story of Palagummi Padmaraju : ‘ಬುದ್ದಿ ಯಾಕಷ್ಟು ಭಯ ಪಡ್ತೀರಿ’ ಎಂದಳು ಆಕೆ. ‘ಒಬ್ರು ಇರೋದಕ್ಕೆ ಬದ್ಲು ಇಬ್ರಿದ್ದೀವಲ್ಲ. ಟಿಕೆಟ್ ಕಲೆಕ್ಟರ್ ಕಳ್ನನ್ಮಗ. ರೈಲು ವೋತಿದ್ರೂ ನನ್ನನ್ನು ಕೆಳುಕ್ಕೆ ಇಳ್ಸಿಬಿಟ್ಟ. ಏನ್ಮಾಡ್ಲಿ. ಇಲ್ಲಿಗ್ ಬರ‍್ಬೇಕಾಯ್ತು. ಆದ್ರೂ ನಂಗೇನ್ ಚಿಂತೆ?

Literature: ನೆರೆನಾಡ ನುಡಿಯೊಳಗಾಡಿ; ‘ಗಾಳಿಯ ಬಲ ಯೆಚ್ಚಾದ್ರೆ ಯಾವುದು ತಾನೆ ನಿಲ್ತೈತೆ?’
ತೆಲುಗು ಕಥೆಗಾರ ಪಾಲಗುಮ್ಮಿ ಪದ್ಮರಾಜು, ಅನುವಾದಕ ರಾಜಣ್ಣ ತಗ್ಗಿ
ಶ್ರೀದೇವಿ ಕಳಸದ
|

Updated on: May 27, 2022 | 4:28 PM

Share

ನೆರೆನಾಡ ನುಡಿಯೊಳಗಾಡಿ | Nerenaada Nudiyolagaadi : ಬುದ್ದಿ… ಬಾಗಿಲು ಮುಚ್ಬಾರ್ದಾ? ಸೊಲ್ಪ ಬೆಚ್ಚಗಾದ್ರೂ ಇರ್ತೇತೆ’ ಎಂದಳು ಆಕೆ ಸ್ವಲ್ಪ ಜೋರು ದನಿಯಲ್ಲಿ. ಅವರು ಒಂದು ಯಂತ್ರದಂತೆ ಎದ್ದು ಹೋಗಿ ಬಾಗಿಲು ಮುಚ್ಚುವುದಕ್ಕೆ ಪ್ರಯತ್ನಿಸಿ ವಿಫಲವಾದರು. ಆಕೆ ಸಹಾಯ ಮಾಡಿದಳು. ಹೇಗೊ ಬಾಗಿಲು ಮುಚ್ಚಿ ಒಳಗಿನ ಚಿಲಕ ಹಾಕಿದರು. ಆದರೆ ಗಾಳಿ ಒಂದು ಸಲ ಜೋರಾಗಿ ತಳ್ಳಿತು. ಚಿಲಕ ಕಳಚಿಬಿತ್ತು. ಇಬ್ಬರೂ ಮತ್ತೆ ಬಾಗಿಲು ಮುಚ್ಚಿ ಕೋಣೆಯಲ್ಲಿದ್ದ ಕಟ್ಟಿಗೆ ಸಾಮಾನುಗಳನ್ನೂ, ಕೆಲವು ಕುರ್ಚಿಗಳನ್ನೂ, ಒಂದು ಅಲಮಾರು ಮತ್ತು ಭಾರವಾದ ಡ್ರಾವರ್ ಅನ್ನು ಬಾಗಿಲಿಗೆ ಅಡ್ಡವಾಗಿ ಇಟ್ಟರು. ಬಾಗಿಲು ಮುಚ್ಚಬೇಕೆಂದು ತನಗೆ ತೋಚದೆ ಹೋಗಿದ್ದು ರಾವ್ ಅವರಿಗೆ ವಿಚಿತ್ರವಾಗಿ ತೋರಿತು. ಕೋಣೆ ಈಗ ಸ್ವಲ್ಪ ಬೆಚ್ಚಗಿತ್ತು. ಭಯ ತಗ್ಗಿತು. ಏನೊ ಬಿದ್ದುಹೋದಂತೆ ಎಲ್ಲಿಯೊ ದೊಡ್ಡ ಸಪ್ಪಳವಾಯಿತು. ಸ್ಟೇಷನ್ ಒಳಗೇ ಬಿದ್ದಿರಬಹುದೇನೊ? ‘ಇದೇನ್ ಗಾಳಿ ಮಳೆ ಬುದ್ದಿ ನಾನು ಹುಟ್ದಾಗಿನಿಂದ ಇಂಥ ಗಾಳಿಮಳೆನ ನೋಡೇ ಇಲ್ಲ’ ಎಂದಳು ಭಿಕ್ಷುಕಿ ತನ್ನ ದನಿಯಲ್ಲಿ ಯಾವ ಹೆದರಿಕೆಯೂ ಇಲ್ಲದೆ.

ಕಥೆ : ಗಾಳಿ ಮಳೆ | ತೆಲುಗು ಮೂಲ : ಪಾಲಗುಮ್ಮಿ ಪದ್ಮರಾಜು | ಕನ್ನಡಕ್ಕೆ : ಟಿ.ಡಿ. ರಾಜಣ್ಣ ತಗ್ಗಿ

(ಭಾಗ 3)

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಷ್ಟು ಪ್ರಶಾಂತವಾಗಿ ಆಕೆ ಹೇಗೆ ಮಾತಾಡಬಲ್ಲಳೊ ರಾವ್ ಅವರಿಗೆ ಅರ್ಥವಾಗಲಿಲ್ಲ. ಆಕೆಯ ಕಡೆ ಬ್ಯಾಟರಿ ದೀಪ ತಿರುಗಿಸಿ ನೋಡಿದರು. ಆಕೆ ಚಳಿಯಿಂದ ಕೈಗಳನ್ನು ಮುದುರಿಸಿಕೊಂಡು ನಡುಗುತ್ತ ಒಂದು ಮೂಲೆಯಲ್ಲಿ ಕುಳಿತಿದ್ದಳು. ರಾವ್ ಅವರು ಪೆಟ್ಟಿಗೆ ತೆರೆದು ಪಂಚೆಯೊಂದನ್ನು ತೆಗೆದು ಆಕೆಯ ಕಡೆ ಎಸೆದು, ‘ಒದ್ದೆಬಟ್ಟೆಯನ್ನು ಬಿಚ್ಚಿ ಇದನ್ನು ಕಟ್ಟಿಕೊ’ ಎಂದರು. ಅವರು ಹೇಳಿದ್ದು ಆಕೆಗೆ ಕೇಳಿಸಲಿಲ್ಲ. ಆದರೆ ಒಣಬಟ್ಟೆ ಕೊಟ್ಟಿದ್ದಕ್ಕೆ ಕೃತಜ್ಞತೆ ತೋರಿಸುತ್ತ, ಬಟ್ಟೆ ಬದಲಿಸಿಕೊಂಡು ಆ ಮೂಲೆಯಲ್ಲಿಯೇ ಒಣ ಜಾಗದಲ್ಲಿ ಕುಳಿತುಕೊಂಡಳು. ರಾವ್ ಅವರಿಗೆ ತನಗೆ ಹಸಿವಾಗುತ್ತಿರುವುದು ಅರಿವಿಗೆ ಬಂದಿತು. ಅವರು ತಮ್ಮ ಪೆಟ್ಟಿಗೆ ತೆರೆದು ಅದರಲ್ಲಿದ್ದ ಬಿಸ್ಕೆಟ್ ಪೊಟ್ಟಣ ತೆಗೆದರು. ಒಂದೊಂದರಂತೆ ಬಾಯಿಗೆ ಹಾಕಿಕೊಂಡು ತಿನ್ನತೊಡಗಿದರು. ಆ ಮೂಲೆಯಲ್ಲಿ ಕುಳಿತಿದ್ದ ಆಕೆಯ ಮುಖದ ಕಡೆ ನೋಡಿದರು. ಆಕೆಗೂ ಕೂಡ ಹಸಿವಾಗುತ್ತಿದೆಯೇನೊ ಎಂದು ಅನ್ನಿಸಿತು ಅವರಿಗೆ. ‘ಬಿಸ್ಕೆಟ್ ತಿಂತಿಯಾ ?’ ಎಂದು ಕೇಳಿದರು. ‘ಏನಂದ್ರಿ ?’ ಎಂದಳು ಜೋರಾಗಿ. ಆ ಗಾಳಿ ಹೋರಿನಲ್ಲಿ ಒಬ್ಬರು ಮಾತಾಡಿದ್ದು ಮತ್ತೊಬ್ಬರಿಗೆ ಕೇಳಿಸುತ್ತಿರಲಿಲ್ಲ. ರಾವ್ ಅವರೇ ಆಕೆಯ ಬಳಿ ಬಂದು ಒಂದಷ್ಟು ಬಿಸ್ಕೆಟ್‌ಗಳನ್ನು ಕೊಟ್ಟರು. ‘ತಿನ್ನೋದಕ್ಕೆ ಇವು ಮಾತ್ರವೆ ನನ್ಹತ್ರ ಇರೋದು’ ಎಂದರು ರಾವ್ ಅವರು ಯಾವುದೊ ತಪ್ಪು ಮಾಡಿದಂತೆ.

ಆದರೆ ಏನೂ ಇಲ್ಲದಿರುವುದಕ್ಕಿಂತ ಅದು ವಾಸಿ ತಾನೆ. ಮತ್ತೆ ತನ್ನ ಜಾಗಕ್ಕೆ ಹೋಗಿ ಪೆಟ್ಟಿಗೆಯ ಮೇಲೆ ಕುಳಿತುಕೊಂಡರು. ಕುರ್ಚಿಗಳು ಬಾಗಿಲಿಗೆ ಅಡ್ಡವಾಗಿ ಇಡಲ್ಪಟ್ಟಿದ್ದವು. ಆ ಕೋಣೆಯಲ್ಲಿ ಆಕೆ ಇದ್ದುದರಿಂದ ಸ್ವಲ್ಪ ಧೈರ್ಯ ಬಂದಿತ್ತು. ಯಾರೂ ಇಲ್ಲದಿರುವುದಕ್ಕಿಂತ ಆಕೆ ಇರುವುದು ಎಷ್ಟೊ ವಾಸಿ. ಆಕೆ ಯಾವುದರ ಬಗ್ಗೆಯೂ ಬಾಧೆ ಪಡುತ್ತಿರಲಿಲ್ಲ. ಗಾಳಿಮಳೆಯ ಬಗ್ಗೆಯೂ ಕೂಡ. ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಆಕೆಗೆ ಚೆನ್ನಾಗಿ ಅಭ್ಯಾಸಗೊಂಡಿದ್ದವು. ಆದ್ದರಿಂದ ಆಕೆ ಎಂಥ ಪರಿಸ್ಥಿತಿಯಾದರೂ ಕಂಗಾಲಾಗದೆ ಎದುರಿಸಬಲ್ಲವಳಾಗಿದ್ದಳು. ರಾವ್ ಅವರು ಗಡಿಯಾರದ ಕಡೆ ನೋಡಿದರು. ಒಂಬತ್ತು ಗಂಟೆಯಾಗಿತ್ತು. ಆದರೆ ರೈಲು ಇಳಿದ ನಂತರ ಕೆಲವು ಯುಗಗಳೇ ಕಳೆದವೇನೊ ಎಂದನ್ನಿಸಿತ್ತು. ಅವರು ಮುಂದಿನ ಸ್ಟೇಷನ್‌ವರೆಗೂ ಸಹ ಪ್ರಯಾಣಿಕರೊಂದಿಗೆ ಪ್ರಯಾಣ ಮಾಡಿದ್ದರೆ ಚೆನ್ನಾಗಿತ್ತು. ದೊಡ್ಡ ಗಾಳಿಮಳೆ ಕೆರಳುತ್ತದೆಂದೂ, ತಾನು ಇಳಿಯುವುದು ಒಂದು ಚಿಕ್ಕ ಸ್ಟೇಷನ್ ಎಂಬುದು ಆ ಕಳವಳದಲ್ಲಿ ಅವರಿಗೆ ಹೊಳೆಯಲೇ ಇಲ್ಲ. ಸ್ಟೇಷನ್‌ನಿಂದ ಊರು ಸುಮಾರು ಎರಡು ಮೈಲುಗಳಾದರೂ ಇರುತ್ತೆ. ಆ ಊರಿಗೆ ಮುಂದಿನ ಸ್ಟೇಷನ್‌ನಿಂದಲಾದರೂ ಸೇರಿಕೊಳ್ಳಬಹುದಿತ್ತು. ಎಲ್ಲ ವಿಷಯಗಳನ್ನೂ ಕೆಲವು ಸೂತ್ರಗಳಲ್ಲಿ ಬಂಧಿಸಿಡುವುದು ಅಭ್ಯಾಸವಾಗಿರುವ ಅವರ ಮನಸ್ಸು ಗಾಳಿಯ ವೇಗವನ್ನು ಕುರಿತು ಆಲೋಚಿಸಿತು. ಗಾಳಿಯ ವೇಗ ಬಹುಶಃ ಗಂಟೆಗೆ 80 ಇಲ್ಲವೆ 100 ಮೈಲಿಗಳು ಇರಬಹುದು. ಅವರ ಮನಸ್ಸಿಗೆ ದೊಡ್ಡ ಭೀತಿಯೊಂದು ಆವರಿಸಿತು. ಈ ಕೋಣೆ ಕುಸಿದು ಬೀಳಬಹುದು. ಹೊರಕ್ಕೆ ಹೋಗುವ ಒಂದೇ ಒಂದು ದಾರಿ ಕುರ್ಚಿಗಳಿಂದ, ಮೇಜುಗಳಿಂದ ಮುಚ್ಚಿ ಹಾಕಲಾಗಿತ್ತು. ಕಳವಳದಿಂದ ಅವರು ಭಿಕ್ಷುಕಿ  ಕುಳಿತಿದ್ದ ಜಾಗಕ್ಕೆ ಹೋದರು.

‘ಈ ಮನೆ ಕುಸಿಯೊಲ್ಲ ತಾನೆ !’ ಎಂದು ಕೇಳಿದರು. ‘ಯಂಗೆ ಯೇಳಕ್ಕಾಕ್ಕೈತೆ? ಮನೆ ಭದ್ರವಾಗೇ ಇದ್ದಂಗೈತೆ. ಗಾಳಿಯ ಬಲ ಯೆಚ್ಚಾದ್ರೆ ಯಾವುದು ತಾನೆ ನಿಲ್ತೈತೆ?’ ಆಕೆಯ ಮಾತುಗಳಲ್ಲಿ ಧೈರ್ಯವನ್ನು ಉಂಟು ಮಾಡುವುದು ಯಾವುದೂ ಇಲ್ಲದಿದ್ದರೂ ಆಕೆಯ ದನಿಯಲ್ಲಿ ಯಾವುದೊ ಸಲುಗೆಯ ಧೈರ್ಯ ಧ್ವನಿಸಿತು. ರಾವ್ ಅವರು ತಮ್ಮ ಪೆಟ್ಟಿಗೆಯ ಬಳಿಗೆ ಹೋಗಿ ಕುಳಿತುಕೊಂಡರು. ಆತ ಕುಳಿತಿದ್ದ ಜಾಗಕ್ಕೆ ಆಕೆಯೂ ನಿಧಾನವಾಗಿ ಹೋಗಿ ಸೇರಿದಳು. ‘ಅಲ್ಲಿ ಕುತ್ಕಂಡ್ರೆ ಒಬ್ರು ಮಾತು ಒಬ್ರುಗೆ ಕೇಳ್ಸೊಲ್ಲ’ ಎಂದಳು.

‘ಗಾಳಿಮಳೆ ಹಿಂಗೆ ಹೆಚ್ಚಾಗುತ್ತೆ ಅಂತ ನಾನು ಅಂದ್ಕೊಂಡಿರಲಿಲ್ಲ’

‘ಬುದ್ದಿ ಯಾಕಷ್ಟು ಭಯ ಪಡ್ತೀರಿ’ ಎಂದಳು ಆಕೆ. ‘ಒಬ್ರು ಇರೋದಕ್ಕೆ ಬದ್ಲು ಇಬ್ರಿದ್ದೀವಲ್ಲ. ಟಿಕೆಟ್ ಕಲೆಕ್ಟರ್ ಕಳ್ನನ್ಮಗ. ರೈಲು ವೋತಿದ್ರೂ ನನ್ನನ್ನು ಕೆಳುಕ್ಕೆ ಇಳ್ಸಿಬಿಟ್ಟ. ಏನ್ಮಾಡ್ಲಿ. ಇಲ್ಲಿಗ್ ಬರ‍್ಬೇಕಾಯ್ತು. ಆದ್ರೂ ನಂಗೇನ್ ಚಿಂತೆ? ಬುದ್ದಿಯೋರು ಮೈಗೆ ಸುತ್ಕಳಾಕೆ ಒಂದು ಒಣ ಬಟ್ಟೆ ಕೊಟ್ಟವ್ರೆ. ಯೇನೊ ಸೊಲ್ಪ ಹೊಟ್ಟೆಗೆ ತಿನಸು ಕೊಟ್ಟವ್ರೆ. ಮುಂದಿನ ಟೇಷನ್‌ನಲ್ಲಿ ಇಂಥ ಸುಖ ರ‍್ತದೆ ಅಂತ ಯೆಂಗ್ ಅನ್ಕೊಳಕಾಯ್ತದೆ ? ಇರೋದ್ರೊಳ್ಗೆ ಸುಖವಾಗರ‍್ಬೇಕು ಬುದ್ದಿ…! ಅದಿಲ್ಲ ಇದಿಲ್ಲ ಅಂತ ಬ್ಯಾಸರ ಪಟ್ಕೊಂಡ್ರೆ ಯೇನ್ ಲಾಭ ?’

ಅವಳ ಗಂಟಲು ಹಾಗೆ ಮೊಳಗುತ್ತಿದ್ದರೆ ಅವರ ಮನಸ್ಸು ಸ್ವಲ್ಪ ಸ್ತಿಮಿತಕ್ಕೆ ಬಂದಿತು. ಆಕೆಯ ಭೌತಿಕ ದೇಹವನ್ನು ನೋಡಿದರೆ ಅವರಿಗೆ ಅಸಹ್ಯ. ಅವರ ಮನಸ್ಸಿಗೂ, ಆಕೆಯ ಮನಸ್ಸಿಗೂ ತುಂಬ ಅಂತರವಿತ್ತು. ಆದರೂ ಆ ಭಯಂಕರವಾದ ರಾತ್ರಿ ತನಗೆ ಜೊತೆಯಾಗಿ ಆಕೆ ಇರುವುದಕ್ಕೆ ಅವರ ಮನಸ್ಸಿನಲ್ಲಿ ಕೃತಜ್ಞತೆ ತುಂಬಿತ್ತು. ‘ನಿನಗೆ ಯಾರೂ ನೆಂಟರಿಷ್ಟರು ಇಲ್ವಾ?’ ಎಂದರು ರಾವ್. ಕೂಡಲೇ ಇಷ್ಟು ಸಲುಗೆಯಿಂದ ಪ್ರಶ್ನೆ ಕೇಳಿದ್ದಕ್ಕೆ ನೊಂದುಕೊಂಡರು. ತಾನು ರೈಲಿನಿಲ್ಲಿ ಆಕೆಗೆ ಒಂದು ಆಣೆ ಕೂಡ ಕೊಡದೆ ಹೋದುದಕ್ಕೆ ಆಕೆಗೆ ತನ್ನ ಮೇಲೆ ಏನಾದರೂ ಕೋಪವಿದೆಯೇನೊ ಎಂಬ ಅನುಮಾನ ಅವರದು. ಆದರೆ ಆಕೆಯ ಮಾತುಗಳಲ್ಲಾಗಲಿ, ಕೆಲಸಗಳಲ್ಲಾಗಲಿ ಕೋಪ ಕಾಣಿಸಲಿಲ್ಲ. ಜೋರು ದನಿಯಲ್ಲಿ ಮಾತಾಡಬೇಕಾದ ಅಗತ್ಯವೂ ಇಲ್ಲದಂತೆ ಆಕೆ ಅವರ ಹತ್ತಿರಕ್ಕೆ ಸರಿದಳು.

‘ನೆಂಟ್ರು ಯೆಲ್ರಿಗೂ ರ‍್ತಾರೆ. ಯೇನ್ ಲಾಭ ಬುದ್ದಿ? ನಮ್ಮಪ್ಪ ಕುಡಿತಾನೆ. ಅವ್ನೇ ನಮ್ಮಮ್ಮನ್ನ ಸಾಯಿಸ್ದ ಅಂತಾರೆ. ನಂಗೆ ಮದ್ವೆ ಆಗ್ಲಿಲ್ಲ. ಆದ್ರೆ ಒಬ್ಬ ಕಳ್ನನ್ಮಗನ ಜೊತೆ ಕೂಡಿಕೆ ಆಯ್ತು. ನಂಗೆ ಇಬ್ರು ಮಕ್ಳವ್ರೆ ಬುದ್ದಿ. ನನ್ನ ಕೂಡ್ಕೆ ಮಾಡ್ಕೊಂಡೋನಿಗೆ ಕುಡಿತ, ಜೂಜು ಅಭ್ಯಾಸ ಆಗೋಗೈತೆ. ದಿನವೂ ಸಾವ್ರ ಸಾವ್ರ ಸೋತು ಕಳಿತರ‍್ತಾನೆ. ಏನ್ ಮಾಡ್ಲಿ ಬುದ್ಧಿ? ಮನೇಲಿ ಉಣ್ಣಕ್ಕೆ ತಿನ್ನಕ್ಕೆ ನನ್ನ ಸಂಪಾದ್ನೆನೆ ಆಧಾರ. ಭಿಕ್ಷೆ ಕೇಳೋಕೆ ಕಳ್ಸೋಣ ಅಂದ್ರೆ ಮಕ್ಳಿನ್ನೂ ಸಣ್ಣವ್ರು ನನ್ನ ಕೂಡ್ಕೆ ಮಾಡ್ಕೊಂಡೋನಿಗೆ ಕುಡ್ಯಾಕಂತ ದಿನವೂ ನಾಕಾಣೆ ಕೊಡ್ತೀನಿ. ಅವ್ನಿಗೆ ನನ್ನನ್ನು ನೋಡುದ್ರೆ ಹೆದ್ರುಕೆ ಬುದ್ದಿ. ಕುಡ್ಯೋದು ಇಲ್ಲಾಂದ್ರೆ ನನ್ನ ಎದರ‍್ಗೆ ನಿತ್ಕಂಡು ತಲೆ ವೊಡ್ಕಂತಾನೆ ಬುದ್ಧಿ ! ಅಸಲು ಕುಡ್ಯೋದು ಎಲ್ರಿಗೂ ಹಂಗೇ ಅಭ್ಯಾಸ ಆಯ್ತದೆ ಕಣ್ರಿ !’

‘ನೀನು ಎಷ್ಟು ಸಂಪಾದಿಸ್ತಿ ?’ ‘ಒಂದೊಂದು ದಿನ ಐದು ರೂಪಾಯಿರ‍್ಗೂ ಸಿಕ್ತಂತೆ. ಒಂದೊಂದು ದಿನ ಒಂದಾಣೆ ಕೂಡ ಸಿಕ್ಕಲ್ಲ. ಆದ್ರೂ ಬುದ್ದಿ ! ನಾನು ಕೇಳುದ್ರೆ ಯಾರೂ ಇಲ್ಲ ಅಂದಿಲ್ಲ ಬಿಡ್ರಿ ನಿಮ್ಮನ್ನು ಬಿಟ್ಟು. ಸೊಲ್ಪ ಹೊತ್ತು ಅವ್ರ ಜೊತೆ ತಮಾಷೆಯಿಂದ ಮಾತಾಡುದ್ರೆ ಸಾಕು ಕೊಡ್ರಾರೆ…’

ರಾವ್ ಅವರು ತನಗೆ ಗೊತ್ತಿಲ್ಲದೆ ಆಕೆಯ ಮುಖದ ಮೇಲೆ ಬೆಳಕು ಬಿಟ್ಟರು. ಆಕೆ ಸ್ವಲ್ಪ ನಕ್ಕಳು. ಯಾರನ್ನೇ ಆದರೂ ಸರಿ ಆಕೆ ಅವರ ನಾಡಿ ಮಿಡಿತ ಹಿಡಿಯಬಲ್ಲಳು. ಆದರೆ ಆಕೆಯ ಮನಸ್ಸಿನಲ್ಲಿ ಅಷ್ಟೊಂದು ಆಳವಾಗಿ ಇಷ್ಟ ಅಯಿಷ್ಟಗಳು ಇಲ್ಲವೆಂದು ರಾವ್ ಅವರಿಗೆ ಅನ್ನಿಸಿತು. ನಡೆಯುತ್ತಿರುವ ಆ ಕ್ಷಣದೊಂದಿಗೇ ಆಕೆಯ ಸಜೀವವಾದ ಅನುಬಂಧ. ಕಳೆದ ಕಾಲದ ನೆನಪುಗಳ ಭಾರವಾಗಲಿ, ಮುಂಬರುವ ದಿನಗಳ ಬಗೆಗಿನ ಆಸೆಗಳಾಗಲಿ ಆಕೆಗಿರಲಿಲ್ಲ. ಆಕೆಯ ನಡವಳಿಕೆಯನ್ನು ನಿಯಂತ್ರಿಸುವ ಸೂತ್ರಗಳಿರಲಿಲ್ಲ. ಆ ಸೂತ್ರಗಳಲ್ಲಿ ನಿಷೇಧಗಳು ಇಲ್ಲವೇ ಇಲ್ಲ. ನಿತ್ಯವೂ ಧರ್ಮಾಧರ್ಮದ ಚಿಂತೆಯಿಂದ ಬಾಧೆಪಡುವ ಅಂತರಾತ್ಮವಾಗಲಿ, ನಾಗರಿಕರಿಗೆ ಸಹಜವಾದ ಸಂಕೀರ್ಣ ಮನಸ್ತತ್ವವಾಗಲಿ ಆಕೆಗಿರಲಿಲ್ಲ. ತಾನು ಎಂದೂ ನೋಡಿರದ ಗಂಡಸರಿಗೂ ಕೂಡ ತನ್ನ ಶರೀರವನ್ನು ಅರ್ಪಿಸಿ ತಿಳಿಯಾದ ಮನಸ್ಸಿನಿಂದ ಆಕೆ ಸುಖಿಸಬಲ್ಲಳು. ರಾವ್ ಅವರು ಆಕೆಯ ಕಿರು ನಗೆಯನ್ನು ಇನ್ನೂ ಹಾಗೇ ನೋಡುತ್ತ ಕುಳಿತಿದ್ದರು. ‘ಯೇನು ಬುದ್ದಿ, ನನ್ನನ್ನು ಹಂಗ್ ನೋಡ್ತಿದ್ದೀರಿ ?’ ಎಂದು ಮತ್ತೆ ‘ಮೊದ್ಲು ಇದ್ದಂಗೆ ಬೆಳ್ಳಗೆ ಈಗಿಲ್ಲ ಬಿಡ್ರಿ’ ಎಂದಳು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ

ತಕ್ಷಣವೇ ರಾವ್ ಅವರು ತನ್ನಲ್ಲಿಯೇ ಮುದುಡಿಕೊಂಡರು. ತನ್ನ ಮನಸ್ಸಿನಲ್ಲಿ ಅಶ್ಲೀಲಕರ ಮಾತುಗಳು ಇದ್ದಾವೆಂಬಂತೆ ಆಕೆ ಸೂಚಿಸಿದ್ದಕ್ಕೆ ಆಕೆಯ ಮೇಲೆ ಅಸಹ್ಯ ಉಂಟಾಯಿತು. ‘ನಾನು ನಿನ್ನ ಕಡೆ ನೋಡ್ತಿಲ್ಲ’ ಎಂದರು ಸ್ವಲ್ಪ ಜೋರು ದನಿಯಲ್ಲಿ. ‘ಬ್ಯಾಟರಿ ಆರಿಸುವುದನ್ನು ಮರೆತು ಹೋಗಿದ್ದೆ’ ಎಂದರು.

ಅಕಸ್ಮಾತ್ತಾಗಿ ದೊಡ್ಡ ಶಬ್ದವಾಯಿತು. ಬಾಗಿಲು ಒಂದೇ ತಳ್ಳಿಗೆ ತೆರೆದುಕೊಂಡಿತು. ಅಡ್ಡವಾಗಿ ಇಟ್ಟಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಹೋದವು. ಒಂದು ಬಾಗಿಲು ಪೂರ್ತಿಯಾಗಿ ಕಳಚಿ, ಒಂದು ಕುರ್ಚಿಯ ಮೇಲಿಂದ ಪಲ್ಟಿ ಹೊಡೆಯಿತು. ರಾವ್ ಅವರ ಹೃದಯ ಬಾಯಿಗೆ ಬಂದಂತಾಯಿತು. ತನ್ನ ಬಲವನ್ನೆಲ್ಲ ಉಪಯೋಗಿಸಿಕೊಂಡು ಒಂದು ಮೂಲೆಗೆ ಜಿಗಿದು ಹುಚ್ಚನಂತೆ ಭಿಕ್ಷುಕಿಯನ್ನು ಗಟ್ಟಿಯಾಗಿ ಅಪ್ಪಿಕೊಂಡರು. ತಕ್ಷಣವೇ ಚೇತರಿಸಿಕೊಂಡು ನಾಚಿಕೆಪಟ್ಟರು. ಆದರೆ ಆಕೆ ಅವರ ಕೈ ಹಿಡಿದು ನಡೆಸಿಕೊಂಡು ಹೋಗುತ್ತಿದ್ದರೆ ಮರುಮಾತಾಡದೆ ಸುಮ್ಮನೆ ಅವಳ ಹಿಂದೆ ಹೋದರು. ತಾನೂ ಕೂಡ ಹತ್ತಿರ ಕುಳಿತುಕೊಂಡು ಕೈಗಳನ್ನು ಅವರ ಸುತ್ತಲೂ ಹಾಕಿದಳು. ಆ ಅಪ್ಪುಗೆಯಲ್ಲಿ ಯಾವ ಸಂಕೋಚಗಳೂ ಇರಲಿಲ್ಲ. ರಾವ್ ಅವರ ಮನಸ್ಸಿನಲ್ಲಿ ಪ್ರಳಯದಂಥ ಮಥನ ನಡೆಯುತ್ತಿತ್ತು. ಆದರೆ ಆ ಬೆಚ್ಚನೆಯ ಹಿತ ಅವರ ಪ್ರಾಣಕ್ಕೆ ಅತ್ಯಗತ್ಯ. ಆದ್ದರಿಂದ ಅವರು ಬೇಡ ಅನ್ನಲಿಲ್ಲ.

‘ಸರಿಯಾಗಿ ಕೂತ್ಕಂಡು ನನ್ನ ಸುತ್ಲೂ ಕೈ ಹಾಕ್ರಿ. ಸೊಲ್ಪ ಬೆಚ್ಚಗಾಯ್ತದೆ. ಪಾಪ ! ಬುದ್ದಿಯೋರು ನಡುಗ್ತಾ ಇವ್ರಿ’ ಆ ಮಾತುಗಳು ತುಂಬ ಒರಟಾಗಿ ಕೇಳಿಸಿದವು ರಾವ್ ಅವರಿಗೆ. ಆಕೆ ಮತ್ತೂ ಹತ್ತಿರಕ್ಕೆ ಸರಿದು ರಾವ್ ಅವರ ಮೈಮೇಲೆ ವಾಲಿದಳು. ಆಕೆಯ ಮೊಲೆಗಳ ಭಾರ ಅವರ ಮೊಳಕಾಲ ಮೇಲೆ ಬಿತ್ತು. ಮೊಳಕಾಲುಗಳನ್ನು ಮತ್ತಷ್ಟು ಹತ್ತಿರಕ್ಕೆ ಮುದುಡಿಸಿಕೊಂಡು ದೀರ್ಘವಾಗಿ ಅವಮಾನಕರವಾದ ಆಲೋಚನಾ ಪರಂಪರೆಯಲ್ಲಿ ಮುಳುಗಿ ಹೋದರು. ಆಕೆ ಮಾತಾಡುತ್ತಲೇ ಇದ್ದಳು.

‘ಈ ಮೂಲೆಯಲ್ಲಿ ಭಯ ಇಲ್ಲ ಬಿಡ್ರಿ. ಬುದ್ಧಿಯರ‍್ಗೆ ಮನೇಲಿ ಅಂದವಾದ ಹೆಣ್ಮಕ್ಳರ‍್ತಾರೆ. ಬುದ್ದಿ ಅವರನ್ನು ನೆನಪು ಮಾಡ್ಕೊಳ್ತಿದ್ದಂಗಿದೆ. ನಮ್ಮ ಗುಡಿಸಲು ಹಾರಿ ವೋಗ್ತದಂತೆ. ನಮ್ಮ ಮಕ್ಳು ಯೇನಾಗವ್ರೊ. ಅಕ್ಕ ಪಕ್ಕ ಇರೋರು ನೋಡ್ಕೊಳ್ತಾರೆ ಬಿಡು. ನನ್ನ ಕೂಡ್ಕೆ ಮಾಡ್ಕೊಂಡೋನು ಬರೀ ದಂಡಪಿಂಡ. ಯಾವ ಕೆಲಸಕ್ಕೂ ಬರೊಲ್ಲ. ಕಂಟಮಟ ಕುಡ್ದು ಬಿದ್ದಿದ್ರೆ ಗುಡಿಸ್ಲು ಹಾರೋದ್ರೆ ಅವ್ನಿಗೇನ್ ಗೊತ್ತಾಯ್ತದೆ ? ಮಕ್ಳು ಯೆಂಗವ್ರೊ ಏನೊ ?’ ಒಂದು ಮಾನವ ಹೃದಯದಿಂದ ಹೊರಬಿದ್ದ ಈ ವೇದನೆಯನ್ನು ಕೇಳುತ್ತಿದ್ದರೆ ರಾವ್ ಅವರ ಹೃದಯದ ಸುತ್ತಲೂ ಹಿಡಿದಿದ್ದ ಗೋಡೆಗಳೆಲ್ಲವೂ ಮಾಯವಾಗಿ ಹೋದವು. ದೊಡ್ಡ ಆವೇದನೆಯಿಂದ ಆ ಭಿಕ್ಷುಕಿಯನ್ನು ಗಟ್ಟಿಯಾಗಿ ಹತ್ತಿರಕ್ಕೆ ಎಳೆದುಕೊಂಡು ಅದುಮಿಕೊಂಡರು. ಅವರ ಆವೇದನೆ ತನಗೆ ಅರ್ಥವಾದಂತೆ ಆಕೆ ಆತನ ಮೊಳಕಾಲ ಮೇಲೆ ನಿಧಾನವಾಗಿ ತಟ್ಟಿದಳು. ಕ್ರಮೇಣ ರಾವ್ ಅವರ ಮನಸ್ಸು ಆಲೋಚಿಸುವುದನ್ನು ನಿಲ್ಲಿಸಿಬಿಟ್ಟಿತು. ಗಾಳಿ ಮಾಡುತ್ತಿದ್ದ ಅಂತ್ಯವಿಲ್ಲದ ಗದ್ದಲವು ಮನಸ್ಸಿನ ಸರಹದ್ದಿಗೆ ಹೋಯಿತು. ರಾವ್ ಅವರ ಕಾಲಿನ ಮೇಲೆ, ಎದೆಯ ಮೇಲೆ ಆನಿಕೊಂಡಿದ್ದ ಮಾನವ ಶರೀರದ ಬೆಚ್ಚನೆಯ ಹಿತವೊಂದೇ ಅವರಿಗೆ ನೆನಪಿನಲ್ಲಿದ್ದುದು.

ಕಾಲ ಅತಿ ನಿಧಾನವಾಗಿ ಸಾಗುತ್ತಿತ್ತು. ಆದರೆ ಆ ವಿಷಯ ರಾವ್ ಅವರಿಗೆ ಗೊತ್ತಾಗಲಿಲ್ಲ. ಗಾಳಿಮಳೆಯ ಬಲ ಇನ್ನೂ ಹೆಚ್ಚಾಯಿತು. ಎಲ್ಲ ಕಡೆಯಿಂದಲೂ ದೊಡ್ಡ ದೊಡ್ಡ ಶಬ್ದಗಳು ಕೇಳಿಬರುತ್ತಿದ್ದವು. ಬೆಳಗಾಗುವ ಹೊತ್ತಿಗೆ ಒಂದಾದ್ರೂ ಮರ ಉಳ್ಕೊಂಡು ನಿಂತಿರುತ್ತಾ ಅನ್ನಿಸುತ್ತಿತ್ತು. ಸ್ವಲ್ಪ ಸ್ವಲ್ಪವಾಗಿ ಮೇಲಿನ ಹೊದಿಕೆಯ ಹೆಂಚುಗಳು ಹಾರಿ ಹೋಗುತ್ತಿದ್ದವು. ಆದರೆ ಜೋರು ಗಾಳಿಯಿಂದ ಮಳೆಯು ಅವರಿಂದ ಸ್ವಲ್ಪ ದೂರಕ್ಕೇ ಹಾರಿ ಇನ್ನೊಂದು ಪಕ್ಕಕ್ಕೆ ಬೀಳುತ್ತಿತ್ತು.

ಸ್ವಲ್ಪ ಹೊತ್ತಿಗೆ ರಾವ್ ಅವರ ಕಾಲುಗಳು ಜೋಮು ಹಿಡಿದವು. ಮಲಗಿದ್ದ ಆ ಮೂರ್ತಿ ಕದಲದಂತೆ ನಿಧಾನವಾಗಿ ಅವರು ತಮ್ಮ ಕಾಲನ್ನು ಕದಲಿಸಿದರು. ನಿಧಾನವಾಗಿ ಮನಸ್ಸು ಎಚ್ಚರಗೊಂಡಿತು. ಬ್ಯಾಟರಿ ಬೆಳಗಿಸಿ ಆಕೆಯ ಮುಖದ ಕಡೆ ನೋಡಿದರು. ನಿದ್ದೆಯಲ್ಲಿ ಆ ಮುಖ ಅಮಾಯಕವಾಗಿ ನಿಶ್ಚಿಂತೆಯಾಗಿತ್ತು. ಸ್ವಚ್ಛವಾದ ಪ್ರಕೃತಿದತ್ತವಾದ ಶೋಭೆಯೊಂದು ಆಕೆಯ ಮುಖದಲ್ಲಿ ದಿವ್ಯತ್ವವನ್ನು ಸ್ಫುರಿಸುವಂತೆ ಮಾಡಿತ್ತು. ಗಾಳಿಮಳೆಯ ಜೋರಾಯಿತು. ಆದರೆ ಅವರ ಮನಸ್ಸಿನಲ್ಲಿ ಅಮಿತವಾದ ಶಾಂತಿ ತುಂಬಿತ್ತು. ಶರೀರ ಆಯಾಸದಿಂದ ವಿಶ್ರಾಂತಿಯನ್ನು ಬಯಸುತ್ತಿತ್ತು. ಕ್ರಮೇಣ ಅವರು ಪರಿಸರವನ್ನು ಮರೆತು ಹೋಗಿ ನಿದ್ದೆಗೆ ಜಾರಿದರು. ಅವರಿಗೆ ಮತ್ತೆ ಎಚ್ಚರ ಆಗುವ ಹೊತ್ತಿಗೆ ಮಳೆ ತಗ್ಗಿತ್ತು. ಗಾಳಿ ಮಾತ್ರ ಜೋರಾಗಿ ಬೀಸುತ್ತಿತ್ತು. ಭಿಕ್ಷುಕಿ ಎದ್ದು ಹೊರಟು ಹೋಗಿದ್ದಳು. ಗಡಿಯಾರದ ಕಡೆ ನೋಡಿದರು. ಐದು ಗಂಟೆಯಾಗಿತ್ತು.

ಎದ್ದು ನಿಂತರು. ಮೊಳಕಾಲುಗಳು ಹಿಡಿದುಕೊಂಡಿದ್ದವು. ಹಾಗೆ ಸುಮ್ಮನೆ ಜೇಬನ್ನು ತಡವಿ ನೋಡಿಕೊಂಡರು. ಅವರ ಬಾಯಿಂದ ಹೊರಟ ಮೊದಲ ಮಾತು, ‘ಕಳ್ಳಮುಂಡೆ !’ ಆದರೆ ಆಕೆ ಹಾಗೆ ಕಳ್ಳತನ ಮಾಡಿರುತ್ತಾಳೆ ಎಂದುಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ಕೋಣೆಯ ನಾಲ್ಕು ಮೂಲೆಯಲ್ಲಿ ಹುಡುಕಾಡಿದರು. ಕಾಣಿಸಲಿಲ್ಲ. ಕಳೆದ ರಾತ್ರಿಯ ಕಂಗಾಲಿನಲ್ಲಿ ಎಲ್ಲಿಯಾದರೂ ಬಿದ್ದು ಹೋಗಿರಬಹುದು ಎಂದುಕೊಂಡರು. ಕೋಣೆಯಿಂದ ಹೊರಗೆ ಬಂದರು. ಹೊರಗಿನ ದೃಶ್ಯ ಭೀಭತ್ಸವಾಗಿತ್ತು. ಪ್ಲಾಟ್‌ಫಾರಂನ್ನು ಹೊರತುಪಡಿಸಿ ಸುತ್ತಮುತ್ತಲ ಪ್ರದೇಶ ನೀರುಮಯವಾಗಿತ್ತು. ಕೆಲವರು ದೂರದಲ್ಲಿ ರೈಲುಹಳಿಯ ಗುಂಟ ನಡೆದು ಬರುತ್ತಿದ್ದರು. ಬಹುಶಃ ಊರಿನಿಂದ ಬರುತ್ತಿರಬಹುದು. ಕೆಲವರು ಮಳೆಯ ಪೆಟ್ಟು ತಿಂದವರು ಸ್ಟೇಷನ್‌ನ ಇನ್ನೊಂದು ಕಡೆ ಕೆಳಗೆ ಮಲಗಿಕೊಂಡಿದ್ದರು. ದೂರದಿಂದ ನೋಡಿ ರಾವ್ ಅವರು ಮುಖವನ್ನು ತಿರುಗಿಸಿಕೊಂಡರು. ಯಾವುದೊ ಆಸ್ಪತ್ರೆಯಲ್ಲಿ ಬೆಳ್ಳಗೆ ಶುಭ್ರವಾಗಿ ಸಾಲಾಗಿ ಮಲಗಿಸಿದಾಗಲ್ಲದೆ ಹಾಗೆ ನಗ್ನವಾಗಿ ಮನುಷ್ಯ ಬಾಧೆ ಪಡುತ್ತಿದ್ದುದನ್ನು ಅವರೆಂದೂ ನೋಡಿರಲಿಲ್ಲ. ಅವರಿಗೆ ವಿಕಾರವೆನಿಸಿ ಹಿಂದಕ್ಕೆ ತಿರುಗಿದರು.

ಟಿಕೆಟ್ ಕೌಂಟರ್ ಕೋಣೆ ಪೂರ್ತಿಯಾಗಿ ಕುಸಿದುಬಿದ್ದಿತ್ತು. ಕೋಣೆಯ ಬಾಗಿಲುಗಳು ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಒಳಗೆ ಯಾವುವೊ ಕುರ್ಚಿ, ಮೇಜುಗಳು ಅಸ್ತವ್ಯಸ್ತವಾಗಿ ಬಿದ್ದಿದ್ದವು. ತಾನಿದ್ದ ವೆಯಿಟಿಂಗ್ ರೂಮ್ ಕುಸಿದು ಹೋಗಿದ್ದರೆ ಏನಾಗಿರುತ್ತಿತ್ತು ಎಂದು ಅವರು ಅಂದುಕೊಂಡರು. ಆ ಕಲ್ಲೋಲವನ್ನು ಶೂನ್ಯದೃಷ್ಟಿಯಲ್ಲಿ ನೋಡುತ್ತ ಅವರು ಅಲ್ಲಿಯೇ ನಿಂತುಬಿಟ್ಟರು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಹೆಂಗಸರಿಗೆ ಹೆರಳು ಉದ್ದವೇ ಹೊರತು ಬುದ್ಧಿ ಗಿಡ್ಡ

ಒಳಗಿನ ಕತ್ತಲೆಗೆ ಕಣ್ಣುಗಳು ಸ್ವಲ್ಪ ಅಭ್ಯಾಸಗೊಂಡ ನಂತರ ಆ ಸಾಮಾನುಗಳ ಕೆಳಗೆ ಯಾವುದೊ ಶರೀರ ಅಸ್ಪಷ್ಟವಾಗಿ ಒರಗಿದ್ದುದು ಕಾಣಿಸಿತು. ಬ್ಯಾಟರಿ ಹೊತ್ತಿಸಿ ನೋಡಿದರು. ಭಿಕ್ಷುಕಿ!

ಆತ ದುಃಖ ತಡೆದುಕೊಳ್ಳಲಾರದೆ ಹೋದರು. ಬಗ್ಗಿ ಹಣೆಯನ್ನು ಮುಟ್ಟಿ ನೋಡಿದರು. ತಣ್ಣಗಿತ್ತು. ಆಕೆ ಸತ್ತು ಹೋಗಿದ್ದಳು. ಕೈಗಳೆರಡೂ ಹೊರಗಿದ್ದವು. ಒಂದು ಕೈಯಲ್ಲಿ ಅವರ ಪರ್ಸ್ ಇತ್ತು. ಎರಡನೇ ಕೈಯಲ್ಲಿ ಕೆಲವು ನೋಟುಗಳು ಮತ್ತು ಒಂದಷ್ಟು ಚಿಲ್ಲರೆ ಇತ್ತು. ಬಹುಶಃ ಅದು ಟಿಕೆಟ್ ಹಣ ಆಗಿರುತ್ತದೆ. ಗುಮಾಸ್ತ ಆ ದುಡ್ಡನ್ನು ಡ್ರಾವರ್‌ನಲ್ಲಿಟ್ಟು ರಾತ್ರಿ ಅವಸರದಲ್ಲಿ ಮನೆಗೆ ಹೊರಟು ಹೋಗಿರುತ್ತಾನೆ.

ರಾವ್ ಅವರು ತಕ್ಷಣವೇ ಚಿಕ್ಕಮಗುವಿನ ರೀತಿ ಅಳುವುದಕ್ಕೆ ಪ್ರಾರಂಭಿಸಿದರು. ತಣ್ಣನೆಯ ಆ ಹಣೆಗೆ ಮುತ್ತಿಟ್ಟರು. ಕಳೆದ ರಾತ್ರಿಯ ಪ್ರತಿ ವಿಷಯವೂ ಅವರಿಗೆ ಮತ್ತೆ ಮತ್ತೆ ನೆನಪಿಗೆ ಬಂದಿತು. ತನಗೆ ಆತ್ಮಸ್ಥೈರ್ಯವನ್ನು,  ಶಾಂತಿಯನ್ನೂ, ಗಾಳಿಮಳೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ತಂದುಕೊಟ್ಟ ಆ ಮೂರ್ತಿ ಅಲ್ಲಿ ನಿಸ್ತೇಜವಾಗಿ ಬಿದ್ದಿತ್ತು. ಆ ಗಾಳಿಮಳೆಗೆ ಆಕೆ ಬಲಿಯಾಗಿ ಹೋಗಿದ್ದಳು. ಅವರ ಹೃದಯ ತುಫಾನಿನಲ್ಲಿ ಸಿಕ್ಕ ಸಮುದ್ರದಂತೆ ಆವೇದನೆಯಿಂದ ಉಕ್ಕಿ ಹರಿಯಿತು. ತನಗೆ ಜೀವನದಲ್ಲಿ ಉಳಿದ ಒಂದು ಆನಂದವೂ ಶಾಶ್ವತವಾಗಿ ಹೊರಟು ಹೋದಂತೆ ಅವರಿಗೆ ಅನ್ನಿಸಿತು. ತನ್ನ ಪರ್ಸ್ ಕದ್ದಿದ್ದಕ್ಕಾಗಲಿ, ಅಷ್ಟೊಂದು ಗಾಳಿಮಳೆಯಲ್ಲೂ ದುಡ್ಡೇನಾದರೂ ಸಿಕ್ಕರೆ ತೆಗೆದುಕೊಳ್ಳಬೇಕೆಂದು ಟಿಕೆಟ್ ಕೋಣೆಗೆ ಹೋಗಿದ್ದಕ್ಕಾಗಲಿ ಅವರು ಅವಳನ್ನು ಮನಸ್ಸಿನಲ್ಲಿಯೂ ದೂಷಿಸಲಿಲ್ಲ. ಆಕೆಯ ಕೊನೆಯ ತತ್ವ ಅವರಿಗೆ ಗೊತ್ತು. ಈಗ ಆಕೆಯ ತುಂಟುತನಗಳು, ಕುಚೇಷ್ಟೆಗಳು ಅವರಿಗೆ ಪ್ರೇಮಪಾತ್ರಗಳಾಗಿದ್ದವು. ಅವರಲ್ಲಿ ಆಳವಾಗಿ ಬೇರೂರಿದ್ದ ಮಾನವತ್ವವನ್ನು ಈ ಜೀವಿಯು ವಿಕಸಿತಗೊಳ್ಳುವಂತೆ ಮಾಡಿದ್ದಳು. ಅವರ ಹೆಂಡತಿಯಾಗಲಿ, ಅವರ ಮಕ್ಕಳಲ್ಲಿ ಯಾರೊಬ್ಬರಾಗಲಿ ಈಕೆ ಬಂದಷ್ಟು ಹತ್ತಿರಕ್ಕೆ ಯಾರೂ ಬಂದಿರಲಿಲ್ಲ. ಈಕೆಗೆ ಒಂದು ವೇಳೆ ಪ್ರಾಣ ತುಂಬಲು ಸಾಧ್ಯವಾಗುವುದೇ ಆದರೆ ಅವರು ತಮ್ಮ ಮೌಲ್ಯಗಳು, ನಿಯಮಗಳು, ಧರ್ಮಚಿಂತನೆ, ವೇದಾಂತ ಎಲ್ಲವನ್ನೂ ತ್ಯಜಿಸಲು ಸಿದ್ಧವಾಗಿದ್ದರು. ಹೊರಗೆ ಮನುಷ್ಯರು ಬರುತ್ತಿರುವ ಸದ್ದು ಕೇಳಿಸಿತು.

ರಾವ್ ಅವರು ಕಣ್ಣುಗಳನ್ನು ಒರೆಸಿಕೊಂಡು ಒಂದು ಕ್ಷಣ ಆಲೋಚಿಸುತ್ತ ನಿಂತರು. ನಂತರ ಒಂದು ನಿರ್ಧಾರಕ್ಕೆ ಬಂದು ಆಕೆಯ ಬೆರಳ ಸಂದಿನಿಂದ ದುಡ್ಡನ್ನು ತೆಗೆದು ತೆರೆದಿದ್ದ ಡ್ರಾವರ್‌ನೊಳಕ್ಕೆ ಹಾಕಿ ಡ್ರಾವರ್ ಮುಚ್ಚಿದರು. ಆದರೆ ತನ್ನ ಪರ್ಸನ್ನು ಮಾತ್ರ ಕೈಯಿಂದ ಬೇರ್ಪಡಿಸುವುದಕ್ಕೆ ಅವರ ಮನಸ್ಸು ಒಪ್ಪಲಿಲ್ಲ. ತನಗೆ ಸಂಬಂಧಿಸಿದ್ದು ಯಾವುದೊ ಒಂದು ಕುರುಹಾಗಿ ಅವಳ ಶರೀರದ ಜೊತೆ ಇದ್ದುಬಿಡಬೇಕೆಂದು ಅವರಿಗೆ ಅನ್ನಿಸಿತು. ಆದರೆ ಇತರರು ಆಕೆ ಕಳ್ಳತನ ಮಾಡಿದ್ದಾಳೆಂದು ಅಂದುಕೊಂಡರೆ ಅವರು ಭರಿಸಲಾರರು. ಆದ್ದರಿಂದ ಜಾಗ್ರತೆಯಿಂದ ಆ ಪರ್ಸಿನೊಳಗಿಂದ ತನ್ನ ಹೆಸರಿದ್ದ ಕಾರ್ಡನ್ನು ತೆಗೆದುಕೊಂಡು ಭಾರವಾದ ಹೃದಯದೊಂದಿಗೆ ಅಲ್ಲಿಂದ ಹೊರಟು ಹೋದರು.

(ಮುಗಿಯಿತು)

ಈ ಕಥೆಯ ಎಲ್ಲ ಭಾಗಗಳನ್ನೂ ಓದಲು : https://tv9kannada.com/tag/nerenaada-nudiyolagaadi

ಪ್ರತಿಕ್ರಿಯೆಗಾಗಿ : tv9kannadadigital@gmail.com