Next Door : ಗೆದ್ದರೊಂದು ಅಭಿನಂದನೆ, ಸೋತರೊಂದು ಸಾಂತ್ವನ, ಸತ್ತರೊಂದು ಸಂತಾಪ…

|

Updated on: Jul 24, 2021 | 11:38 AM

Online Lifestyle : ‘ಮಗು ಒಂದು ಪ್ರಶ್ನೆ ಕೇಳಿದರೆ ಸ್ವಲ್ಪ ಸಮಯ ತೆಗೆದುಕೊಂಡು ಪುಸ್ತಕದಲ್ಲಿ ಹುಡುಕಿ ಹೇಳುತಿದ್ದ ಪೋಷಕರು ಈವತ್ತು ಥಟ್ಟನೆ ಗೂಗಲಿನಲ್ಲಿ ಟೈಪಿಸುತ್ತಾರೆ. ಯಾರೋ ಯಾವಾಗಲೋ ಹಾಕಿದ ಕೆಲವೊಮ್ಮೆ ಸಂಬಂಧವಿರದ ಮಾಹಿತಿಗಳು ಸಿಕ್ಕು, ಅಷ್ಟಕ್ಕೆ ಏನೋ ಸಿಕ್ಕಾಪಟ್ಟೆ ತಿಳಿದುಕೊಂಡೆ ಎಂದು ಬೀಗುತ್ತಾರೆ. ದೂರದಲ್ಲಿ ಎಲ್ಲೋ ಇರುವ, ತನಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಂದಿಗಿನ ವಾಟ್ಸಾಪು ಮತ್ತು ಫೇಸ್‍ಬುಕ್ ಮಾತುಕತೆ ಕೇವಲ ಮುಖಭಾವವಿಲ್ಲದ, ಆರ್ದ್ರ ಹೃದಯವಿಲ್ಲದ ಒಣ ಪದಗಳಾಗುತ್ತಿವೆ.’ ಸ್ವಾಮಿ ಪೊನ್ನಾಚಿ

Next Door : ಗೆದ್ದರೊಂದು ಅಭಿನಂದನೆ, ಸೋತರೊಂದು ಸಾಂತ್ವನ, ಸತ್ತರೊಂದು ಸಂತಾಪ...
ಕಥೆಗಾರ ಸ್ವಾಮಿ ಪೊನ್ನಾಚಿ
Follow us on

ವಾಟ್ಸಪ್ಪು, ಟ್ವಿಟರು, ಫೇಸ್​ಬುಕ್ಕು ಮತ್ತೀಗ ಕ್ಲಬ್​ಹೌಸಿನಲ್ಲೂ ಇಲ್ಲವಾ? ಉತ್ತರ ಇಲ್ಲವೆಂದಾದಲ್ಲಿ ಆನ್​ಲೈನ್​ ಸಂಸ್ಕೃತಿಯಲ್ಲಿ ನಾಗರಿಕ ಸಮಾಜ ಥಟ್ಟನೆ ನಮ್ಮನ್ನು ಒಂದು ಹಳೇ ಪಳಿಯುಳಿಕೆಯಂತೆ ಮೂಲೆಯಲ್ಲಿ ನಿಲ್ಲಿಸಿಬಿಡುತ್ತದೆ. ಉಸಿರಾಡಬೇಕೆಂದರೆ ಹರಿಯುವ ನೀರಿನೊಂದಿಗೆ ಹರಿಯಲೇಬೇಕು ಎಂಬ ತತ್ವದೊಂದಿಗೆ ನಮ್ಮ ನಮ್ಮ ವಯೋಮಾನ, ಆಸಕ್ತಿ, ಅನಿವಾರ್ಯಕ್ಕೆ ತಕ್ಕಂತೆ ನಮ್ಮ ಕಣ್ಣುಗಳನ್ನು ಬೆಳಕಿನಪರದೆಗಳಿಗೆ ಅಂಟಿಸುತ್ತ ಕಣ್ಣುಗಳನ್ನು ಅಗಲ ಮಾಡಿಕೊಳ್ಳುತ್ತ ಸಾಗುತ್ತಿದ್ದೇವೆ. ಗತಿಶೀಲ ಜಗತ್ತಿಗೆ ಕೊರೊನಾ ವೈರಾಣು ಮತ್ತಷ್ಟು ಚುರುಕು ನೀಡಿದ್ದೇ ಬೆಳಗಾಗುವುದರೊಳಗೆ ಕ್ಲಾಸುಗಳು, ಆಸ್ಪತ್ರೆಗಳು, ಅಂಗಡಿಗಳು, ಸಂತೆಗಳು-ಸಂತರುಗಳು, ಓಣಿಗಳು-ಕಟ್ಟೆಗಳು, ಗುಂಪುಗಳು, ಪರವಿರೋಧಗಳು, ಅಭಿವ್ಯಕ್ತಿಗಳು, ಸ್ವಾತಂತ್ರ್ಯ-ಸಂಸ್ಕೃತಿಗಳು, ಪರಂಪರೆ-ಪತಾಕೆಗಳು, ಗಾಳಿಪಟ-ಬಾಲಂಗೋಚಿಗಳ ಮೂಲಕ ಇಡೀ ಊರಿಗೆ ಊರನ್ನೇ ಜಾಲತಾಣಗಳ ಕೊಂಡಿಗೆ ಸಿಕ್ಕಿಸಿ ಕುಳಿತುಬಿಟ್ಟಿದ್ದೇವೆ.  

ಒಂದರ್ಥದಲ್ಲಿ ಈ ಅನಿವಾರ್ಯ ಬೇರೊಂದು ರೀತಿಯ ಪ್ರಯೋಗ, ಅವಿಷ್ಕಾರ, ಕ್ರಾಂತಿಗಳಿಗೆ ಸಂದರ್ಭಾನುಸಾರ ಕಾರಣವಾಯಿತು. ಆದರೆ ಆಳದಲ್ಲಿ? ಹಳ್ಳಿಗಳಿಗೂ, ನಗರ-ಮಹಾನಗರಗಳಿಗೂ ಅವುಗಳದ್ದೇ ಆದ ಸ್ವಭಾವ-ಸಂಸ್ಕೃತಿಗಳಿವೆ. ಅಲ್ಲೆಲ್ಲ ಜೀವಿಸುತ್ತಿರುವವರು ನಾವುನಾವುಗಳೇ. ತಂತ್ರಜ್ಞಾನ ಮತ್ತು ನಾಗರಿಕತೆಯ ಚೌಕಟ್ಟಿನಡಿ ನಮ್ಮನಮ್ಮ ಆಸೆ, ಆಶಯ, ನಿರ್ಧಾರಗಳನ್ನು ಬಂಧಿಸಿಡುತ್ತ, ಮಾನವ ಸಂಬಂಧಗಳನ್ನು ನಿಸ್ತಂತುಗೊಳಿಸುತ್ತ ಬರುತ್ತಿದ್ದೇವೆಯೇ? ಯಾವೆಲ್ಲ ಸಂದರ್ಭ, ಹಂತಗಳಲ್ಲಿ ಈ ಸಂಬಂಧಗಳು ಹೆಚ್ಚು ಆಪ್ತವಾಗಬೇಕಿತ್ತೋ ಅಲ್ಲೆಲ್ಲ ವ್ಯಾವಹಾರಿಕತೆಯ ಪರಿಧಿ ಆವರಿಸಿ ಭಾವಶೂನ್ಯರಾಗುತ್ತಿದ್ದೇವೆಯೇ? ಪರಸ್ಪರ ಸಹಕಾರ ತತ್ವ ಮರೆತ ಪರಿಣಾಮವಾಗಿ ಸಾಮುದಾಯಿಕ ಸ್ಪರ್ಶ, ಸೌಂದರ್ಯ, ಪ್ರಜ್ಞೆಯ ಬಿಸುಪನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆಯೇ? ಇದೆಲ್ಲವೂ ನಮ್ಮ ಮುಂದಿನ ಪೀಳಿಗೆ ಅಥವಾ ಮಾನವವಿಕಾಸದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅದಕ್ಕೆ ನಾವು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ?

ಹೀಗೆ ಯೋಚಿಸುತ್ತಲೇ ಹುಟ್ಟಿಕೊಂಡ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನೆಕ್ಸ್ಟ್ ಡೋರ್ (Next Door)’ ನಿಮ್ಮ ಸ್ವಾನುಭಗಳೊಂದಿಗೆ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪದಮಿತಿ ಸುಮಾರು 800. ಉತ್ತಮ ಗುಣಮಟ್ಟದ ನಿಮ್ಮ ಭಾವಚಿತ್ರವೂ ಇರಲಿ. ಈ ಸರಣಿ ಪ್ರತೀ ಶನಿವಾರಕ್ಕೊಮ್ಮೆ ಪ್ರಕಟವಾಗುವುದು. ಇ-ಮೇಲ್ tv9kannadadigital@gmail.com

*
‘ಹಾಡು ಎಲ್ಲಿ ಹುಟ್ಟಿಕೊಳ್ಳುತ್ತದೆ? ಕಲೆ ಎಲ್ಲಿ ಬೆಳೆಯತೊಡಗುತ್ತದೆ? ಸಹಜತೆ ಎಲ್ಲಿ ಕಾಣುತ್ತದೆ?’ ಕಥೆಗಾರ ಸ್ವಾಮಿ ಪೊನ್ನಾಚಿ ಅವರ ಬರಹ ನಿಮ್ಮ ಓದಿಗೆ.

*

ಪ್ರೊಫೆಸರ್ ಕೃಷ್ಣೇಗೌಡರು ಪ್ರಸ್ತಾಪಿಸಿದ ಒಂದು ಘಟನೆಯನ್ನು ನಾನಿಲ್ಲಿ ಹಂಚಿಕೊಳ್ಳಬಯಸುತ್ತೇನೆ. ಒಳ್ಳೆಯ ಸರ್ಕಾರಿ ಹುದ್ದೆಯಲ್ಲಿದ್ದು ಸ್ಥಿತಿವಂತರಾಗಿದ್ದ ಕೃಷ್ಣೇಗೌಡರು ತಮ್ಮ ಸ್ವಂತ ಊರಿಗೆ ಕಾರಿನಲ್ಲಿ ಹೋಗಿ ಬಂದು ಅಜ್ಜಿಯನ್ನು ಮಾತನಾಡಿಸುತ್ತಾರೆ. ಏನಜ್ಜಿ ಚೆನ್ನಾಗಿದ್ದೀಯಾ ಎಂದು. ನಿನ್ನಂಗಲ್ಲ ಕಣ್ ಬಾ ನಾನು ಅದ್ಭುತವಾಗಿದ್ದೀನಿ ಅಜ್ಜಿಯ ಉತ್ತರ. ಕೃಷ್ಣೇಗೌಡರಿಗೆ ಆಶ್ಚರ್ಯವಾಗಿ ಅಲ್ಲ ಈಪಾಟಿ ಸೂಟುಬೂಟು ಹಾಕೊಂಡು ಕಾರಿನಲ್ಲಿ ಬಂದಿಳಿದ ನನ್ನ ನೀನು ಚೆನ್ನಾಗಿಲ್ಲ, ನಾನೇ ಅದ್ಭುತವಾಗಿದ್ದೀನಿ ಅಂತ ಈ ಕೊಂಪೇಲಿರೋ ಅಜ್ಜಿ ಹೇಳುತ್ತದಲ್ಲ. ಇರು, ಮತ್ತಷ್ಟು ಕೇಳುವಾ ಎಂದು, ನೋಡಜ್ಜಿ ನನಗೇನಾಗಿದೆ? ಎಂಥಾ ಸೂಟು ಹಾಕಿದ್ದೀನಿ. ಕಾರಲ್ಲಿ ಓಡಾಡಿಕೊಂಡಿದ್ದೇನೆ. ಬೆಂಗಳೂರಿನಲ್ಲಿ ಮನೆ ಕಟ್ಟಿಸಿದ್ದೇನೆ. ಚೆನ್ನಾಗಿರೋದು ಅಂದ್ರೆ ಹಿಂಗೆ ಅಲ್ವ ಎಂದಾಗ, ಅದಕ್ಕೆ ಅಜ್ಜಿ ಕೊಟ್ಟ ಉತ್ತರ ಎಷ್ಟೊಂದು ಮಾರ್ಮಿಕವಾಗಿತ್ತೆಂದರೆ ಅಲ್ಲಾ ಕಣಪ್ಪಾ ತಿನ್ನೋದು ನಾಕ್ ತುತ್ತ್ ಅನ್ನಕ್ಕೆ ಹುಟ್ಟೂರು ಬಿಟ್ಟು ದೇಶಾಂತರಕ್ಕೆ ಹೋಗಿದ್ದೀಯಲ್ಲ. ಹೋಗಿ ಏನು ಸಾಧನೆ ಮಾಡಿದೆ ಹೇಳು. ನೆಟ್ಗೆ ನಾಕ್ ಜನ ಸಂಬಂಧಿಕರ ಜೊತೆ ಇರ್ಲಿಲ್ಲ. ಕಡೆಗಾಲದಲ್ಲಿ ಅವ್ವ ಅಪ್ಪನ ನೋಡ್ಕಲಿಲ್ಲ. ಊರವರ ಜೊತೆ ಬೆರೆತು ನಾಕು ಮಾತಾಡ್ಲಿಲ್ಲ. ನಿಂದು ಒಂದು ಜೀವನನಾ ತಗಾ. ಬೆಂಗ್ಳೂರಲ್ಲಿ ಆಸ್ತಿ ಮಾಡಿದೆ. ಮನೆ ಮಾಡಿದೆ, ಸರಿ. ನೀನು ಸತ್ತಾಗ ನಿನ್ ಹೆಣವ ಹುಟ್ಟೂರಿಗೆ ತಾನೆ ತಂದು ಮಣ್ಣು ಮಾಡೋದು ಈ ಬಾಳಿಗೆ ಯಾಕೆ ಊರ್ಬಿಟ್ಟು ಹೋಗ್ಬೇಕು ಇಲ್ಲೇ ಇದ್ದು ಏನಾರ ಮಾಡೋದಲ್ವ ಅಂತ.

ನವನಾಗರೀಕತೆಯ ಹೆಸರಿನಲ್ಲಿ ಮುಂದುವರಿಯುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಹೊಸಹೊಸ ಆವಿಷ್ಕಾರಗಳನ್ನು, ಪ್ರಯೋಗಗಳನ್ನು ಮಾಡುತ್ತಾ ಪ್ರಕೃತಿಯೊಂದಿಗೆ ಸಹಜವಾಗಿ ಬದುಕಬೇಕಾಗಿದ್ದ ಜೀವನವನ್ನು ಅಗತ್ಯಕ್ಕಿಂತ ಹೆಚ್ಚಾಗಿ ತಂತ್ರಜ್ಞಾನದ ಜೀವನಕ್ಕೆ ಒಗ್ಗಿಸಿಕೊಂಡಿದ್ದೇವೆ. ಸೇವೆಗಳ ಹೆಸರಿನಲ್ಲಿ ತಂತ್ರಜ್ಞಾನದ ಅಭಿವೃದ್ಧಿ ಎಂದು ಹೇಳಿಕೊಂಡು ಮುದ್ದೆ ಮಾಡುವ ಯಂತ್ರದಿಂದ ಹಿಡಿದು ಅಂಡು ತೊಳೆದು ಡೈಪರ್ ಹಾಕುವ ಯಂತ್ರದ ತನಕ ಎಲ್ಲವನ್ನು ಕಂಡುಹಿಡಿದು; ನಮ್ಮೆಲ್ಲಾ ಯೋಚನೆಗಳನ್ನು, ಭಾವನೆಗಳನ್ನು ನಾಲ್ಕಿಂಚು ಪರದೆಗೆ ಸೀಮಿತಗೊಳಿಸಿಕೊಂಡಿದ್ದೇವೆ. ಜಗತ್ತೇ ಒಂದು ಕುಟುಂಬ ಎಲ್ಲರೂ ಕೈಗೆಟುಕುತ್ತಾರೆಂಬ ಸ್ಲೋಗನ್ ಹೇಳಿಕೊಂಡು ನಮ್ಮ ಜತೆಗಿರಬೇಕಾದ ನಮ್ಮ ಕುಟುಂಬವನ್ನ ತೊರೆದು ಕಾಂಕ್ರಿಟ್ ಕಾಡಿನಲ್ಲಿ ರೋಬೋಗಳಂತೆ ದುಡಿಯುತ್ತಾ ಬದುಕುತ್ತಿದ್ದೇವಲ್ಲ! ನಾಗರೀಕತೆಯೆಂದರೆ ಇದೇನಾ? ಅಭಿವೃದ್ಧಿ ಎಂದರೆ ಕಟ್ಟಡ ಕಟ್ಟುವುದಾ? ಮುಂದುವರೆಯುವುದು ಎಂದರೆ ಹೃದಯ ವೈಶಾಲ್ಯತೆಯನ್ನು ಮೈನಸ್ ಮಾಡಿಕೊಳ್ಳುತ್ತಾ ವ್ಯವಹಾರಿಕ ಬುದ್ದಿಯನ್ನು ಹೆಚ್ಚಿಸಿಕೊಳ್ಳುವುದಾ ?

ಹಾಗಂತ ಆದಿಮಾನವರಂತೆ ಇನ್ನೂ ಗೆಡ್ಡೆ ಗೆಣಸು ತಿಂದು ಗುಹೆಗಳಲ್ಲಿ ವಾಸ ಮಾಡುವುದು ಅಂತಲ್ಲ. ಕೆಲಸವನ್ನು ಸುಲಭ ಮಾಡಿಕೊಳ್ಳದೆ ಕತ್ತೆ ದುಡಿದ ಹಾಗೆ, ಗಾಣದ ಎತ್ತು ಸುತ್ತಿದ ಹಾಗೆ ಸುತ್ತಬೇಕು ಅಂತಾನು ಅಲ್ಲ. ಈ ಸುಲಭೀಕರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಎಷ್ಟು ಆರೋಗ್ಯವಾಗಿಟ್ಟುಕೊಂಡಿದ್ದೇವೆ ಎಂಬುದರ ಮೇಲೆ ನಮ್ಮ ಮುಂದುವರೆಯುವಿಕೆ ನಿಂತಿದೆ ಎಂದು ಹೇಳಬಹುದು. ಹಾಗೆ ನೋಡಿದರೆ ಆ ಜೀವನದ ಗುಣ ಮಟ್ಟದ ಸ್ಥಿರತೆಯನ್ನ ನಾವು ಕಳೆದುಕೊಳ್ಳುತ್ತಾ ಬರುತಿದ್ದೇವೆ.

ಹಿಂದೆ ಹೆಂಗಸರು ಮನೆಯಲ್ಲೇ ಕೂತು ರಾಗೀಕಲ್ಲಿನಿಂದ ಕಾಳು ಬೀಸುತ್ತಿದ್ದರು. ಈ ಬೀಸುವಿಕೆಯಿಂದ ಸೊಂಟದ ಬೊಜ್ಜು ಎಂಬುದೇ ಇರುತ್ತಿರಲಿಲ್ಲ. ಸೊಂಟದ ಮಾಂಸ ಖಂಡಗಳಿಗೆ ಸರಿಯಾದ ವ್ಯಾಯಾಮ ಬಿದ್ದು ಹೆರಿಗೆ ಕೂಡ ಸಹಜವಾಗಿ ಆಗಿಬಿಡುತ್ತಿತ್ತು. ಬಾವಿಯಿಂದ ನೀರು ಸೇದುತ್ತಾ ನಾಲ್ಕಾರು ಪರ್ಲಾಂಗು ನೀರು ತರುತ್ತಿದ್ದರಿಂದ ದೇಹ ಸದೃಢವಾಗಿ ಒಂದು ನಿಲುವಿರುತ್ತಿತ್ತು. ಮನೆಗೆ ನಲ್ಲಿ ಬಂದು, ಹಿಟ್ಟಿನ ಗಿರಣಿ ಹುಟ್ಟಿಕೊಂಡು, ಮಿಕ್ಸಿ, ಕುಕ್ಕರ್ ಅಂತೆಲ್ಲಾ ಬಂದ ಮೇಲೆ ನಿಧಾನಕ್ಕೆ ದೈಹಿಕ ಶ್ರಮ ಕಡಿಮೆಯಾಗಿ ದೇಹ ಅಸಮತೋಲನದಿಂದ ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿತು. ಯಾವುದೇ ಸ್ಕ್ಯಾನಿಂಗ್ ಇಲ್ಲದೆ ನಾರ್ಮಲ್ ಹೆರಿಗೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡುತ್ತಿದ್ದ ಹೆಣ್ಣು, ಈವತ್ತು ಸ್ಕ್ಯಾನಿಂಗ್ ಇಲ್ಲದೆ, ಸಿಜೇರಿಯನ್ ಇಲ್ಲದೆ ಮಗು ಹೆರಲಾರದ ಸ್ಥಿತಿಗೆ ತಲುಪಿದ್ದಾಳೆ.
ಕಾಡಿನಲ್ಲಿ ಸೌದೆ ತರುವುದರಿಂದ ಹಿಡಿದು ಹಗಲೆಲ್ಲಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಂಡಸರಿಗೆ ಟ್ಯಾಕ್ಟರ್ ಬಂದ ಮೇಲೆ ಉಳುವುದು ನಿಂತಿತು. ಬೇರೆ ಬೇರೆ ಕೆಲಸಗಳು ಸುಲಭವಾಗುವಂತೆ ಯಂತ್ರಗಳು ಬಂದವು. ಹೆಚ್ಚು ಸಮಯ ಉಳಿಯತೊಡಗಿತು. ಟೀವಿ ಮುಂತಾದವು ಬಂದು ಆರಾಮ ಹೆಚ್ಚಾಯಿತು. ದೈಹಿಕ ಕಸರತ್ತು ಹೆಚ್ಚು ಕಡಿಮೆ ನಿಂತು ಹೋಯಿತು. ರೋಗಿಷ್ಟನಾದ.

ಇದು ಸುಮ್ಮನೆ ಉದಾಹರಣೆಯಷ್ಟೇ. ಇದಕ್ಕೆ ಬೇರೆ ಬೇರೆ ಕಾರಣಗಳೂ ಇವೆ. ಪ್ರತಿಯೊಂದನ್ನೂ ಬೆಳೆದುಕೊಂಡು ಕಚ್ಚಾ ಪದಾರ್ಥಗಳನ್ನು ಆಹಾರವಾಗಿ ಬಳಸುತ್ತಿದ್ದಾಗ ಆರೋಗ್ಯ, ದೈಹಿಕ ಸ್ಥಿತಿ ಉತ್ತಮವಾಗೇ ಇತ್ತು. ಯಾವಾಗ ತಂತ್ರಜ್ಞಾನ ಮುಂದುವರೆದು ಸಂಸ್ಕರಿಸಿದ ಆಹಾರಗಳು ಮತ್ತು ಆಹಾರ ಕೆಡದಂತೆ ರಸಾಯನಿಕಗಳ ಬಳಕೆ ಹೆಚ್ಚಾಯಿತೋ ಅಲ್ಲಿಂದಲೇ ಆರೋಗ್ಯ ಹದಗೆಡುತ್ತಾ ಹೋಗಿ ಜೀವಿತಾವದಿಯೇ ಕಡಿಮೆಯಾಗಿ ಬೀಪಿ, ಶುಗರ್, ಹೃದಯಾಘಾತ ಇಲ್ಲದೆ ಅರವತ್ತು ವರ್ಷ ನೀಟಾಗಿ ಬದುಕಿ ಬಿಟ್ಟರೆ ಸಾಕು ಎನ್ನುವಷ್ಟರ ಹಂತಕ್ಕೆ ಬದುಕು ಬಂದು ನಿಂತಿದೆ. ಹಾಗಂತ ಹಿಂದೆ ಅನಾರೋಗ್ಯ ಇರಲಿಲ್ಲ, ಎಲ್ಲರೂ ನೂರು ವರುಷವೇ ಬದುಕುತ್ತಿದ್ದರು ಎಂತಲ್ಲ. ಈವತ್ತಿನ ತಂತ್ರಜ್ಞಾನದಿಂದ, ಸಾಂಕ್ರಾಮಿಕ ರೋಗ ಹರಡಿ ಜನಾಂಗಗಳೇ ಸಾಯುವ, ಹುಟ್ಟುವಾಗಲೇ ನ್ಯೂನತೆಯಾಗಿ ಹುಟ್ಟುವ ಕಾಯಿಲೆಗಳಿಂದ ಮುಕ್ತಿ ಸಿಕ್ಕಿದೆ. ಒಟ್ಟಾರೆ ಜನಜೀವನದ ಗುಣಮಟ್ಟದ ಸರಾಸರಿಯನ್ನು ತೆಗೆದುಕೊಂಡರೆ ಹೆಚ್ಚಿದ ತಂತ್ರಜ್ಞಾನದಿಂದ ಜೈವಿಕವಾಗಿ ಹಾನಿಯಾಗಿರುವುದೇ ಹೆಚ್ಚು. ಇದನ್ನು ಮತ್ತಷ್ಟು ವಿಶದವಾಗಿ ಹೇಳುವ ಅಗತ್ಯವಿಲ್ಲ. ವಿಸ್ತಾರವಾಗಿ ಚರ್ಚೆ ಮಾಡಿದರೆ ಇದೊಂದು ಮುಗಿಯದ ಚರ್ಚೆ. ಸಾಂಕೇತಿಕವಾಗಿ ಉದಾಹರಣೆ ಕೊಟ್ಟಿದ್ದೇನೆ ಅಷ್ಟೇ.

ಫೋಟೋ : ಸ್ವಾಮಿ ಪೊನ್ನಾಚಿ

ಇನ್ನು ಮಾನಸಿಕವಾಗಿ ಭಾವನಾತ್ಮಕ ಸ್ಥಿತಿಗತಿಗಳು, ಸೃಜನಶೀಲತೆ, ಬುದ್ಧಿಮತ್ತೆಗಳು ಹೇಗೆಲ್ಲಾ ತಂತ್ರಜ್ಞಾನದ ಪರಿಣಾಮಕ್ಕೆ ಸಿಕ್ಕಿ ಸೊರಗುತ್ತವೆಯೆಂದರೆ, ಒಂದು ಕಾಲವಿತ್ತು, ಮಳೆಗಾಲದಲ್ಲಿ ಜಮೀನು ಉತ್ತು ಬಿತ್ತಿ, ಫಸಲು ಬರುವ ತನಕ ಕಾದು, ಒಕ್ಕಣೆ ಮಾಡಿಬಿಟ್ಟರೆ ಮತ್ತೆ ಮಳೆಗಾಲದವರೆಗೆ ಏನೂ ಕೆಲಸವಿರುತ್ತಿರಲಿಲ್ಲ. ಬಿಡುವಾಗಿದ್ದ ಜನ ಕಲೆ, ಸಂಗೀತ, ನಾಟಕ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಪುಸ್ತಕ ಓದು, ಬರಹ ಕಾವ್ಯ ಅಂತೆಲ್ಲಾ ಬರೆಯಲು ಶುರುಮಾಡಿದರು. ಇದ್ಯಾವುದರಲ್ಲೂ ಆಸಕ್ತಿ ಇಲ್ಲದವರು ಇವರ ಚಟುವಟಿಕೆಗಳನ್ನು ನೋಡಿ ಆಸ್ವಾದಿಸುತ್ತಿದ್ದರು. ಅರಳೀಕಟ್ಟೆಯ ಮೇಲೆ ಸಾಯಂಕಾಲದ ಹೊತ್ತು ಲೋಕಾಭಿರಾಮವಾಗಿ ಹರಟುವಾಗ, ಜನಪದ ಹಾಡು ಹುಟ್ಟಿಕೊಳ್ಳುತ್ತಿತ್ತು. ಕುಣಿತ ಹುಟ್ಟಿಕೊಳ್ಳುತ್ತಿತ್ತು. ಯಕ್ಷಗಾನ, ಬೀದಿನಾಟಕ, ಪ್ರಸಂಗ ಹುಟ್ಟಿಕೊಳ್ಳುತ್ತಿತ್ತು. ಗಂಡುಹೆಣ್ಣೆಂಬ ಬೇಧವಿಲ್ಲದೆ ಹಾಡು ಕಟ್ಟುತ್ತಿದ್ದರು. ಯಾವಾಗ ಈ ಸಾಂಸ್ಕೃತಿಕ ವಲಯಕ್ಕೆ ರೇಡಿಯೋ ಕಾಲಿಟ್ಟಿತೋ ಒಂದಷ್ಟು ಚಟುವಟಿಕೆ ಕಡಿಮೆಯಾಗಿ ಕೇಳುವುದಕ್ಕೆ ಸಮಯ ಮೀಸಲಾಯಿತು. ಅದಾಗಿ ಸ್ವಲ್ಪ ದಿನಕ್ಕೆ ಟೀವಿ ಬಂದು ದಾರಾವಾಹಿ, ಚಲನಚಿತ್ರ, 24/7 ವಾರ್ತೆಗಳು ಹುಟ್ಟಿಕೊಂಡವೋ ಬಹುತೇಕ ಬಿಡುವಿನ ಸಮಯವನ್ನು ಇವೇ ತಿಂದು ಹಾಕಿದವು. ಇದಾದ ನಂತರ ರಾಕ್ಷಸನಂತೆ ಬಂದ ಮೊಬೈಲ್ ತಂತ್ರಜ್ಞಾನ, ಪುಸ್ತಕ, ಓದುಬರಹ ಕಾವ್ಯ ಕಟ್ಟುವುದಿರಲಿ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನೇ ಬಹುತೇಕ ತಿಂದು ಹಾಕಿಬಿಟ್ಟಿತು.

ಪರಿಸ್ಥಿತಿ ಹೀಗಿರುವಾಗ ಇನ್ನು ಹಾಡು ಎಲ್ಲಿ ಹುಟ್ಟಿಕೊಳ್ಳುತ್ತದೆ? ಕಲೆ ಎಲ್ಲಿ ಬೆಳೆಯತೊಡಗುತ್ತದೆ? ಸಹಜತೆ ಎಲ್ಲಿ ಕಾಣುತ್ತದೆ? (ಈಗಿನ ಕಾಲಘಟ್ಟದಲ್ಲಿ ಹುಟ್ಟಿಕೊಳ್ಳುವ ಸೃಜನಶೀಲ ಚಟುವಟಿಕೆಗಳು ಈ ಕಾಲದ ಅಗತ್ಯತೆಗೆ ತಕ್ಕ ಹಾಗೇ ಇರುತ್ತವೆ . ಅದು ಬೇರೆ ವಿಷಯ. ಎಲ್ಲಾ ಕಾಲದಲ್ಲೂ ಒಂದೇ ರೀತಿ ಯೋಚಿಸಬೇಕೆಂದೇನೂ ಇಲ್ಲ) ಅಕ್ಕ ಪಕ್ಕದವರೊಂದಿಗೆ ಮಾತುಕತೆ ಕಡಿಮೆಯಾಗಿದೆ. ಲೋಕಾಭಿರಾಮದ ಹರಟೆಯಿಲ್ಲ. ಜನಪದ, ನಾಟಕಗಳಂತಹ ಸೃಜನಶೀಲ ಚಟುವಟಿಕೆಗಳು ಒಂದಷ್ಟು ಮಂದಿಗೆ, ಸಂಸ್ಥೆಗಳಿಗೆ, ಮೀಸಲಾಗಿ ಜನ ಸಮಾನ್ಯನಿಂದ ದೂರವಾಗಿಬಿಟ್ಟಿದೆ. ಮನೆಮನೆಗಳಲ್ಲಿ ಪುಸ್ತಕ ಇಡುತ್ತಿದ್ದ ಕಾಲ ಹೋಗಿ, ಪುಸ್ತಕ ಓದುವ, ಬರೆಯುವ ಎಂಬ ಒಂದು ಗುಂಪು ಸೃಷ್ಟಿಯಾಗಿದೆ ಅಷ್ಟೇ. ಭಿನ್ನ ಆಲೋಚನೆಗಳು ದೂರವಾಗಿ, ಸಿದ್ದ ಸೂತ್ರಗಳು ತಯಾರಾದವು. ಬೇಟೆ ಆಡುವುದರಿಂದ ಹಿಡಿದು ತಿನ್ನುವವರೆಗೆ ಒಟ್ಟಿಗೆ ಇರುತ್ತಿದ್ದ ಮಾನವಕುಲ; ಸಂಪಾದಿಸುವುದರಿಂದ ಹಿಡಿದು ಅನುಭವಿಸುವವರೆಗೆ ಏಕಾಂಗಿಯಾಗಿಬಿಟ್ಟಿತು. ಮತ್ತೆ ಮತ್ತೆ ಮನುಷ್ಯ ಗುಂಪಿನಿಂದ ಹೊರಹೋಗುತ್ತಾ ಒಂಟಿಯಾಗತೊಡಗಿದ. ತನ್ನ ಭಾವನಾತ್ಮಕ ಸಂಬಂಧವನ್ನು, ತನ್ನ ಆತ್ಮಸಂಗಾತಿಗಳನ್ನು ನಿರ್ಜೀವ ವಸ್ತುಗಳಲ್ಲಿ ಹುಡುಕತೊಡಗಿದ. ನಾವೆಲ್ಲರೂ ಮಾತ್ರ ನಾಗರೀಕತೆ ಬೆಳೆದಿದೆ.

ಮುಂದುವರಿದ ರಾಷ್ಟ್ರ, ಜನ ಎಂದು ಎದೆ ತಟ್ಟಿಕೊಳ್ಳುತ್ತಾ ತಂತ್ರಜ್ಞಾನದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ತಾನೇ ತಾನಾಗಿ ಬೆಳೆದಿದ್ದ ಮರಗಳನ್ನು ಕತ್ತರಿಸುತ್ತಿದ್ದೇವೆ. ಹಕ್ಕಿಗೂಡು ಕಿತ್ತಿದ್ದೇವೆ. ಕಾಡುಪ್ರಾಣಿಗಳು ಮನೆ ಬಾಗಿಲಿಗೆ ನುಗ್ಗುವಂತೆ ಮಾಡಿಕೊಂಡಿದ್ದೇವೆ. ನಾಗರೀಕತೆ ಎಂದರೇನೆಂದು ಗೊತ್ತಿರದ ಪ್ರಾಣಿ ಪರಪಂಚ ಸ್ವಸ್ಥವಾಗಿ, ತನ್ನ ತಾಜಾತನವನ್ನು ಈವತ್ತಿಗೂ ಹಾಗೇ ಉಳಿಸಿಕೊಂಡಿದ್ದರೆ ನಾಗರೀಕರಾದ ನಾವೋ ಸುಂದರವಾದ ಪರಿಸರವನ್ನು ಗಲೀಜು ಮಾಡಿ ಶತಶತಮಾನಗಳು ಕಳೆದರೂ ಕೂಡ ಸ್ವಚ್ಚ ಮಾಡಲಾಗದಷ್ಟು ವಿಷವನ್ನ,ತ್ಯಾಜ್ಯವನ್ನ ಸುರಿದಿದ್ದೇವೆ.ಇಡೀ ಭೂಮಂಡಲವನ್ನೇ ಒಂದು ಸುತ್ತು ರಾಸಾಯನಿಕ ವಿಷಪದಾರ್ಥಗಳಿಂದ ಸುತ್ತಿಬಿಟ್ಟಿದ್ದೇವೆ. ಅನ್ನ ಬೆಳೆಯುವ ಕಡೆ ಗಮನ ಹರಿಸದೆ, ಎಣಿಸುವ ನೋಟಿನ ಕಡೆ ಗಮನ ಹರಿಸಿದ್ದೇವೆ. ಹೆಣ ಎತ್ತಲು ನಾಲ್ಕು ಜನ ಇಟ್ಟುಕೊಳ್ಳದೆ; ಹೂಳಲು ಜಾಗವಿಲ್ಲದೆ ನಮ್ಮ ನಮ್ಮ ಹೆಣಗಳನ್ನು ನಾವೇ ಕರೆಂಟಿನಲ್ಲಿ ಸುಟ್ಟುಕೊಂಡಿದ್ದೇವೆ. ಕುಂತಲ್ಲಿಗೆ ಎಲ್ಲವೂ ಬರುತ್ತದೆ. ನಿಂತಲ್ಲಿಯೇ ಎಲ್ಲವೂ ಆಗುತ್ತದೆ. ಜೀವನದ ಬಹುಭಾಗ ಆಸ್ಪತ್ರೆಗಳಲ್ಲೇ ಕಳೆಯುತ್ತಿದ್ದೇವೆ. ಹೆಸರಿಗೆ ಮಾತ್ರ ಮುಂದುವರೆಯುತ್ತಿದ್ದೇವೆ. ಮತ್ತೆ ಇವೆಲ್ಲವೂ ಅಭಿವೃದ್ಧಿ ಎನ್ನವ ಹೆಸರಿನಲ್ಲೇ ಆಗಿರುವುದು.

ಈ ಎಲ್ಲಾ ವಿಶ್ಲೇಷಣೆಗಳನ್ನು ಬಿಟ್ಟು ವಾಸ್ತವಕ್ಕೆ ಬರುವುದಾದರೆ ಈ ಮಧ್ಯವಯಸ್ಸಿನಲ್ಲಿರುವ ತಲೆಮಾರಿಗೆ ಎರಡು ರೀತಿಯ ಜನರ ಬದುಕುಗಳನ್ನು ತಳಕು ಹಾಕಿ ನೋಡುವ ಅನುಭವವಿದೆ. ಹಾಗಾಗಿ ಚೂರುಪಾರು ಪ್ರಜ್ಞೆ, ಸಂವೇದನೆ, ಪರಂಪರೆ ಅಂತೆಲ್ಲಾ ಮಾತನಾಡಲು ಸಾಧ್ಯವಾಗುತಿದೆ. ತಂತ್ರಜ್ಞಾನ ಹೆಚ್ಚು ಬಳಕೆಯಲ್ಲಿ ಇಲ್ಲದ ಮತ್ತು ಈಗ ಅತೀ ಹೆಚ್ಚು ಬಳಕೆಯಾಗುವ ಎರಡೂ ಕಾಲಘಟ್ಟವನ್ನೂ ಕಂಡಿದ್ದಾರೆ. (ನೆನಪಿರಲಿ ಯಂತ್ರೋಪಕರಣಗಳಿಗಿಂತ ವಿದ್ಯುನ್ಮಾನ ಉಪಕರಣಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಎನ್ನುತ್ತಿರುವುದು) ಆದರೆ ಇತ್ತೀಚಿನ ತಲೆಮಾರು ಇದೆಯಲ್ಲಾ! ಇವರ ಮುಂದಿನ ಭವಿಷ್ಯವನ್ನು ನೆನೆಸಿಕೊಂಡರೆ ಮಾತ್ರ ಭಯವಾಗಿಬಿಡುತ್ತದೆ. ಮೊನ್ನೆ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದಾಗ 7ನೇ ತರಗತಿ ಓದುತ್ತಿದ್ದ ಹುಡುಗಿಗೆ ಡೈರಿ ಬರೆಯುವ ಹವ್ಯಾಸವಿತ್ತು. ಪರವಾಗಿಲ್ಲ, ಈ ವಯಸ್ಸಿಗೆ ಡೈರಿ ಬರೆಯುತ್ತಿದೆಯಲ್ಲಾ ಎಂದು ಕುತೂಹಲದಿಂದ ಡೈರಿ ಗಮನಿಸಿದಾಗ ಬೆಚ್ಚಿಬಿದ್ದೆ ಇಷ್ಟವಾಗುವ ಸಂಗತಿಗಳೆಂದರೆ ಟಿವಿ, ಮೊಬೈಲ್ ಅಂತೆ, ಅತ್ಯಂತ ಇಷ್ಟವಾಗದ ಕಿರಿಕಿರಿಯ ಸಂಗತಿಯೆಂದರೆ ಅವರ ಮನೆಗೆ ಸಂಬಂಧಿಕರು ಬರುವುದಂತೆ.

ಎಂತಹ ಮನಸ್ಥಿತಿಯನ್ನು ಈ ತಂತ್ರಜ್ಞಾನ ಹುಟ್ಟು ಹಾಕುತ್ತಿದೆ ಎಂದರೆ ಈಗಿನ ಮಕ್ಕಳಿಗೆ ಮಲಗುವಾಗ ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುವ ಅಜ್ಜಅಜ್ಜಿ ಹೇಳುವ ಕಥೆಗಳು ಇಷ್ಟವಾಗುವುದಿಲ್ಲ. ಅಪ್ಪ, ಅವ್ವ ಎದೆ ಮೇಲೆ ಮಲಗಿಸಿಕೊಂಡು ಹೇಳುವ ಹಾಡು ಕೇಳುವ ಸೌಭಾಗ್ಯವಿಲ್ಲ. ಬೆಳಿಗ್ಗೆಯಿಂದ ಸಂಜೆತನಕ ವಾರಗೆಯ ಹುಡುಗರೊಂದಿಗೆ ಆಟವಾಗುವ ಅವಕಾಶವಿಲ್ಲ, ಮುಕ್ತವಾಗಿ ಸಂಬಂಧಿಕರೊಂದಿಗಿನ ನೆಂಟತನ ಆಪ್ತವಾಗುವುದಿಲ್ಲ. ಕೆಲವರಿಗೆ ಈ ಎಲ್ಲಾ ಅವಕಾಶವಿದ್ದರೂ ಈ ಟಿವಿ ಮೊಬೈಲುಗಳ ಹಾವಳಿಯಿಂದಾಗಿ ಅದನ್ನು ಅನುಭವಿಸುವ, ಕಾರ್ಯರೂಪಕ್ಕೆ ತಂದುಕೊಳ್ಳುವ ಸನ್ನಿವೇಶ ಸೃಷ್ಟಿಯಾಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರಜ್ಞೆ ಎಲ್ಲಿ ಬರಬೇಕು. ಸಮಾಜದೊಂದಿಗೆ ಬೆರೆತು ಉಂಟಾಗುವ ಸಾಮಾಜೀಕರಣವನ್ನು ಯಾರು ಮಾಡಬೇಕು. ಇವೆಲ್ಲವನ್ನು ತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ಮಾಡಿದರೆ ಅಡ್ಡಿಯಿಲ್ಲ. ವಾಸ್ತವದಲ್ಲಿ ಆಗುತ್ತಿದೆಯೆ? ಇಲ್ಲ. ಅನುಭವದ ಕೊರತೆಯಿಂದಾಗಿ ಬಹುತೇಕ ಮಕ್ಕಳು ಫಸ್ಟ್ ರ್ಯಾಂಕ್ ರಾಜು ಆಗುತ್ತಿದ್ದರೆ ಪೋಷಕರಾದ ನಾವು ಏನು ಮಾಡಬೇಕೆಂಬುದು ಗೊತ್ತಾಗದೆ ಪೆಚ್ಚರಂತೆ ಸುಮ್ಮನಿದ್ದೇವೆ.

ಮಗು ಒಂದು ಪ್ರಶ್ನೆ ಕೇಳಿದರೆ ಸ್ವಲ್ಪ ಸಮಯ ತೆಗೆದುಕೊಂಡು ಪುಸ್ತಕದಲ್ಲಿ ಹುಡುಕಿ ಹೇಳುತಿದ್ದ ಪೋಷಕರು ಈವತ್ತು ಥಟ್ಟನೆ ಗೂಗಲಿನಲ್ಲಿ ಟೈಪಿಸುತ್ತಾರೆ. ಯಾರೋ ಯಾವಾಗಲೋ ಹಾಕಿದ ಕೆಲವೊಮ್ಮೆ ಸಂಬಂಧವಿರದ ಮಾಹಿತಿಗಳು ಸಿಕ್ಕು, ಅಷ್ಟಕ್ಕೆ ಏನೋ ಸಿಕ್ಕಾಪಟ್ಟೆ ತಿಳಿದುಕೊಂಡೆ ಎಂದು ಬೀಗುತ್ತಾರೆ. ದೂರದಲ್ಲಿ ಎಲ್ಲೋ ಇರುವ, ತನಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಂದಿಗಿನ ವಾಟ್ಸಾಪು ಮತ್ತು ಫೇಸ್‍ಬುಕ್ ಮಾತುಕತೆ ಕೇವಲ ಮುಖಭಾವವಿಲ್ಲದ, ಆರ್ದ್ರ ಹೃದಯವಿಲ್ಲದ ಒಣ ಪದಗಳಾಗುತ್ತಿವೆ. ಇಲ್ಲಿ ದುಃಖ ದುಮ್ಮಾನ, ಖುಷಿ, ಸಂಕಟ ಎಲ್ಲದಕ್ಕೂ ಒಂದೇ ಮನಸ್ಥಿತಿ. ಪದಗಳಷ್ಟೆ ಹೊರಬರುತ್ತಿರುತ್ತವೆ. ಆತ್ಮೀಯವಾಗಿ ವರ್ತಿಸಲೇಬೇಕಾದ; ನಮ್ಮ ಮಾತಿನ ಅಗತ್ಯವಿರುವ ನೆರೆಹೊರೆಯವರೊಂದಿಗೆ ನೆಟ್ಟಗಿಲ್ಲದ ಪರಿಸ್ಥಿತಿ ನಮ್ಮದು. ಇಲ್ಲಿ ಕ್ಲಬ್‍ಹೌಸಿನಲ್ಲಿ ಬಂದು ಜಗತ್ತಿನ ಕಷ್ಟಸುಖ ಮಾತಾಡತೊಡಗುತ್ತೇವೆ. ಮನೆಗೆ ಬರುವ ನೆಂಟನಿಗೆ ಆತ್ಮೀಯವಾಗಿ ಅಡಿಗೆ ಮಾಡಿ ಬಡಿಸಿ ನಾಕು ಮಾತನಾಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ನಾವು ಫೇಸ್‍ಬುಕ್ಕಿನಲ್ಲಿ ಮೃಷ್ಟಾನ್ನದ ಫೋಟೋ ಹಾಕಿ ಔತಣಕ್ಕೆ ಆಮಂತ್ರಿಸುತ್ತಿದ್ದೇವೆ. ಗೆದ್ದರೊಂದು ಅಭಿನಂದನೆ, ಸೋತರೊಂದು ಸಾಂತ್ವನ, ಸತ್ತರೊಂದು ಸಂತಾಪ ಸೂಚಿಸಿ ನಮ್ಮ ಜವಾಬ್ದಾರಿ ಇಷ್ಟೇ ಎಂದು ತೆಪ್ಪಗಿರುತ್ತಿದ್ದೇವೆ. ಹೆಸರಿಗೆ ನಾವು ಮುಂದುವರಿಯುತ್ತಿದ್ದೇವೆ. ಪಾಪ ಇದ್ಯಾವುದೂ ಗೊತ್ತಿಲ್ಲದ ವ್ಯಕ್ತಿ ಅನಕ್ಷರಸ್ಥ ಮತ್ತು ಅನಾಗರೀಕ ಹಾಗೂ ಹಿಂದುಳಿದಿರುವವ. ಎಂದು ನಾವು ತೀರ್ಮಾನಿಸಿಬಿಟ್ಟಿರುತ್ತೇವೆ.

ಹಾಗಂತ ಇಲ್ಲಿ ಎಲ್ಲವೂ ಸರಿಯಿಲ್ಲ ಎನ್ನಲಾಗುವುದಿಲ್ಲ. ಹಂಚಿಕೊಂಡು ತಿನ್ನುವುದು ಮತ್ತು ಕೂಡಿ ಬಾಳುವುದ ಕಲಿತದ್ದೇ ಮಾನವ ಕುಲದ ಕಲ್ಯಾಣ ಸಿದ್ದಿ ಎನ್ನುವಂತೆ ಈ ವ್ಯವಹಾರಿಕ ಜಗತ್ತಿನಲ್ಲಿ ಕೃತಕ ಮುಖವಾಡದ ಬದುಕಿನಲ್ಲಿ ಒಂದಷ್ಟು ಸೂಕ್ಷ್ಮ ಪ್ರಜ್ಞೆ ಮತ್ತು ಒಳಿತನ್ನು ಮಾಡುವ ಮನಸ್ಥಿತಿಯನ್ನು ಉಳಿಸಿಕೊಂಡರೆ ಮಾತ್ರ ನಿಜವಾಗಿಯೂ ನಾವು ಮುಂದುವರಿಯುತ್ತೇವೆ ಎಂದು ಎದೆತಟ್ಟಿ ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಇದನ್ನೂ ಓದಿ : ಏಸೊಂದು ಮುದವಿತ್ತು: ಕೌದಳ್ಳಿಯ ಬಳೆಗಾರ ಶೆಟ್ಟಿಯನ್ನು ನೆನೆಯುತ್ತಿರುವ ‘ಧೂಪದ ಮಗ’

Published On - 11:09 am, Sat, 24 July 21