ಸ್ಮರಣೆ | ಎಲ್ಲಿ ಜಾರಿತೋ ಮನವು..ಭಾವಗಳನ್ನು ಎದೆಗಿಳಿಸಿದ ಕವಿ ಲಕ್ಷ್ಮೀನಾರಾಯಣ ಭಟ್ಟ
NS Lakshminarayan Bhat: ನಮಗೋ ಅವರ ನೂರಾರು ಭಾವಗೀತೆಗಳ ವ್ಯಾಮೋಹ ಅಮರಿಕೊಂಡಿದೆ. ಭಾವಗೀತೆಗಳಾಚೆಗಿನ ಭಟ್ಟರ ಅಪೂರ್ವ ಸಾಧನೆಯನ್ನು ನಾವು ಮರೆಯುವಂತಿಲ್ಲ. ತೊರೆದು ಹೋಗದಿರೋ ಜೋಗಿ, ನೀ ಸಿಗದೆ ಬಾಳೊಂದು ಬಾಳೆ? ಮುಂತಾದ ಮೀರಾ ಭಜನ್ ಅನುವಾದಗಳೇ ಭಟ್ಟರ ಸಾಮರ್ಥ್ಯವನ್ನು ಶ್ರುತಪಡಿಸಿವೆ. ಹಲವರಿಗೆ ಅವು ಭಾಷಾಂತರಗೊಂಡು ಕನ್ನಡಕ್ಕೆ ಬಂದವೆಂಬ ಸಂಗತಿಯೇ ಗಮನಕ್ಕೆ ಬಾರದಷ್ಟು ಚೆಂದವಿದೆ ಭಟ್ಟರ ಅನುವಾದ.
ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ… ಸಾಲು ತೇಲಿ ಬಂದಕ್ಷಣ ಥಟ್ಟನೆ ನೆನಪಾಗುವವರು ಸಮೃದ್ಧ ಭಾವಗೀತೆಗಳನ್ನು ಕನ್ನಡಿಗರಿಗೆ ಉಣಬಡಿಸಿದ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು. ಕನ್ನಡ ಸಾಹಿತ್ಯ ಲೋಕದಲ್ಲಿ, ಎನ್ನೆಸ್ಸೆಲ್ ಎಂದೇ ಮನೆಮಾತಾಗಿದ್ದ ಹಿರಿಯ ಕವಿ ಭೌತಿಕವಾಗಿ ನಮ್ಮನ್ನಗಲಿದ್ದಾರೆ. ಅವರ ಗೀತೆಗಳ ಭಾವ ಎಂದೆಂದಿಗೂ ನಮ್ಮ ಎದೆಯಲ್ಲಿ ಅಜರಾಮರವಾಗಿರುತ್ತದೆ. ಅವರೊಂದಿಗಿನ ಒಡನಾಟವನ್ನು ಇಲ್ಲಿ ನೆನೆದಿದ್ದಾರೆ ಸಾಹಿತಿ, ಪ್ರಾಧ್ಯಾಪಕ,ಡಾ.ಎಚ್.ಎಸ್.ಸತ್ಯನಾರಾಯಣ ಅವರು.
“ಭಾವಗಳನ್ನು ಎದೆಗಿಳಿಸಿದ ಕವಿ-ಎನ್ನೆಸ್ಸೆಲ್ ಭಟ್ಟರು” ಇನ್ನಿಲ್ಲವೆಂಬ ಸಂಗತಿ ಮನಸ್ಸನ್ನು ಮುಕ್ಕಾಗಿಸಿದೆ. ಬಹು ಅಂಗಾಂಗ ವೈಫಲ್ಯದಿಂದ ಅವರು ಆಸ್ಪತ್ರೆ ಸೇರಿರುವರೆಂಬ ಸುದ್ದಿ ತಿಳಿದಾಗಿಂದಲೂ ಈ ತರಹದ್ದೊಂದು ಸುದ್ದಿ ಕೇಳುವ ಭಯವಿತ್ತು. ವಯೋವೃದ್ಧರ ಅನಾರೋಗ್ಯ ಇಂತಹ ಆತಂಕವನ್ನು ತರುವುದು ತೀರ ಸಹಜವಾದರೂ ಭಟ್ಟರಂತಹ ಹಿರಿಯರ ಕಣ್ಮರೆ ದುಃಖ ಕಸಿವಿಸಿಗಳನ್ನು ಎದೆಗೆ ತುಂಬಿದೆ. ಅವರು ಬರೆದ ಭಾವಗೀತೆಗಳೆಲ್ಲ ಮಾರ್ದನಿಸುತ್ತಿವೆ.
ಇವರ ಭಾವಗೀತೆಗಳ ಸಂಖ್ಯೆ ಸುಮಾರು ನಾಲ್ಕುನೂರಾ ಐವತ್ತು. ಕನ್ನಡದಲ್ಲಿ ಸುಗಮ ಸಂಗೀತವು ಈ ಮಟ್ಟಿನ ಜನಾದರಣೀಯವೆನಿಸಲು ಈ ಕವಿಯ ಕೊಡುಗೆ ಅಪಾರ. ಎಳೆಯ ವಯಸ್ಸಿನಲ್ಲೆ ಭಟ್ಟರ ‘ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ’ ‘ಬಾರೆ ನನ್ನ ದೀಪಿಕಾ’ ‘ಎಲ್ಲಿ ಜಾರಿತೋ ಮನವು’ ಮುಂತಾದ ಹಾಡುಗಳನ್ನು ಕೇಳುತ್ತಲೇ ಬೆಳೆದ ನನಗೆ, ಅಧ್ಯಾಪನ ವೃತ್ತಿ ಆರಂಭಿಸಿದ ದಿನಗಳ ಆರಂಭದಲ್ಲಿಯೇ ಕಾಲೇಜಿನ ವಾರ್ಷಿಕೋತ್ಸವಕ್ಕಾಗಿ ಈ ಪ್ರಿಯಕವಿಯನ್ನು ಆಹ್ವಾನಿಸುವ ಜವಾಬ್ದಾರಿ ಸಿಕ್ಕಿತು.
ಅವರ ಭಾವಗೀತೆಗಳಿಗೆ ಮಕ್ಕಳಿಂದ ನೃತ್ಯ ಮತ್ತು ಅಂದು ಹೊಸವರ್ಷದ ದಿನವಾಗಿತ್ತಾದ್ದರಿಂದ ಭಟ್ಟರೆ ರಚಿಸಿದ್ದ ‘ಮೂಡಿ ಬರಲಿ ಹೊಸವರುಷದ ಹೊಸಕಾಂತಿಯ ತಾರೆ’ ಹಾಡನ್ನು ನಾನೂ ವಿದ್ಯಾರ್ಥಿಗಳೊಂದಿಗೆ ಸಮೂಹಗಾನದಲ್ಲಿ ಹಾಡುವ ಏರ್ಪಾಟು. ಬಹಳ ಸಂತೋಷದಿಂದ ಭಾಗವಹಿಸಿದರು.
ಕನ್ನಡದ ಖ್ಯಾತ ಕವಿ, ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ವಿಧಿವಶ
ಆಮೇಲೆ ನಮ್ಮ ಮನೆಯಲ್ಲೇ ಊಟಕ್ಕೆ ಬಂದರು. ನಾನು ಶುದ್ಧ ಸಸ್ಯಾಹಾರಿ ಎಂದು ಮೊದಲೇ ತಿಳಿಸಿದ್ದರು. ಊಟಕ್ಕೆ ಕುಳಿತಾಗ ನಾನೇ ತಯಾರಿಸಿದ್ದ ಕ್ಷೀರಾನ್ನವನ್ನು ಕೊಂಡಾಡಿದರು. ಸಿಹಿ ಎಂದರೆ ಪಂಚಪ್ರಾಣ, ಊಟ ಸಾಗಿದಾಗಲೂ ಮಾತೇ ಮಾತು! ಅವರು ಮದುವೆಯಾದ ಹೊಸತರಲ್ಲಿ ನಡೆದ ಒಂದು ಪ್ರಸಂಗವನ್ನು ನೆನಪು ಮಾಡಿಕೊಂಡಿದ್ದು ಹೀಗೆ; ಹಿರಿಯ ಕವಿ ಪುತಿನ ಮತ್ತು ತೀನಂಶ್ರೀಯವರನ್ನು ಊಟಕ್ಕೆ ಕರೆದಿದ್ದರಂತೆ. ಅನ್ನ ಹುಳಿ, ಪಲ್ಯ, ಕೋಸಂಬರಿ, ತೊವ್ವೆ, ಪಾಯಸ ಮುಂತಾದವನ್ನು ಭಟ್ಟರ ಪತ್ನಿ ತಯಾರಿಸಿದ್ದರು. ಹೆಚ್ಚುಗಟ್ಟಲೆ ಸಿಹಿಯೂ ಇರಲಿ ಎಂದು ಅಂಗಡಿಯಿಂದ ಮೈಸೂರುಪಾಕು ಕೊಂಡು ತಂದಿದ್ದರಂತೆ. ಆದರೆ ಆ ಹಿರಿಯರಿಬ್ಬರೂ ಊಟಕ್ಕೆ ಕುಳಿತಾಗ ಚುರುಕುಬುದ್ದಿಯ ತೀನಂಶ್ರೀಯವರು ‘ಭಟ್ಟ ಈ ಮೈಸೂರುಪಾಕು ಯಾರು ಮಾಡಿದ್ದು?’ ಎಂದು ಅದು ಅಂಗಡಿಯದೆಂಬುದನ್ನು ಕಂಡು ಹಿಡಿದವರಂತೆ ಕೇಳಲು, ಈ ದಂಪತಿಗಳಿಬ್ಬರೂ ‘ಮನೆಯಲ್ಲೆ ತಯಾರಿಸಿದ್ದು’ ಎಂದು ಸುಳ್ಳಾಡಿಬಿಟ್ಟರು. ಪುತಿನ “ನೋಡಿ ಈ ಪಲ್ಯ, ಈ ಕೋಸಂಬರಿ, ನೋಡಿ ಈ ಹುಳಿ- ಇವುಗಳ ತಾಜಾತನ ಈ ಪೆಡುಸುಪೆಡುಸಾಗಿರುವ ಮೈಸೂರುಪಾಕಿಗೆಲ್ಲಿದೆ?” ಎಂದು ನಸುನಗುತ್ತ ನುಡಿಯುತ್ತಲೇ ಇದು ಮನೆಯಲ್ಲಿ ಮಾಡಿದ್ದಲ್ಲವೆಂಬ ತೀನಂಶ್ರೀಯವರ ಅಭಿಪ್ರಾಯವನ್ನು ಸಮರ್ಥಿಸಿಬಿಟ್ಟರಂತೆ! ಆ ಹಿರಿಯರಿಬ್ಬರೂ ನಯವಾಗಿಯೇ ತಾವಾಡಿದ ಸುಳ್ಳನ್ನು ಪತ್ತೆಮಾಡಿ ಹೇಳಿದ ರೀತಿ ಎಂದಿಗೂ ಮರೆಯಲಾಗದ್ದೆಂದು ಭಟ್ಟರು ನೆನಪಿಸಿಕೊಂಡರು. ಸದ್ಯ ಅಂತಹ ತಪ್ಪನ್ನು ಭಟ್ಟರು ಬಂದಾಗ ನಾನು ಮಾಡಿರಲಿಲ್ಲ.
ಭಟ್ಟರ ಬತ್ತಳಿಕೆಯಲ್ಲಿ ಅನುಭವ ಕಥನಗಳು
ಭಟ್ಟರು ಹೇಳಿದ ಮತ್ತೊಂದು ಸ್ವಾರಸ್ಯಕರ ಘಟನೆಯನ್ನು ಮರೆಯಲಾಗದು. ತೀನಂಶ್ರೀ ಇವರಿಗೆ ಭಾಷಾವಿಜ್ಞಾನ ಬೋಧಿಸುತ್ತಿದ್ದರು. ತರಗತಿಯಲ್ಲಿ ಅವರ ಪಾಠದ ವೈಖರಿ ತುಂಬಾ ಗಂಭೀರವೂ ವಿಚಾರಪೂರ್ಣವೂ ಆಗಿರುತ್ತಿತ್ತು. ಪಾಠದ ಮಧ್ಯೆ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳನ್ನು ನೋಡುತ್ತಾ ಪಾಠಮಾಡುವುದು ಅವರ ಕ್ರಮ. ಹಾಗೊಮ್ಮೆ ಟಿಪ್ಪಣಿ ನೋಡಲೆಂದು ತೀನಂಶ್ರೀಯವರು ತಲೆತಗ್ಗಿಸಿದಾಗ ಭಟ್ಟರು ಪಕ್ಕನೆ ಜೋರಾಗಿ ನಕ್ಕುಬಿಟ್ಟರಂತೆ. ತರಗತಿಯ ಗಾಂಭೀರ್ಯಕ್ಕೆ ಭಂಗತಂದವರಾರೆಂದು ತೀನಂಶ್ರೀ ಅಸಮಾಧಾನದಿಂದಲೇ ತಲೆಯೆತ್ತಿದರು. ಏನು ಕಾದಿದೆಯೋ ಎಂದು ಆತಂಕದಿಂದ ನೋಡುತ್ತಿರುವಾಗ ತೀನಂಶ್ರೀಯವರು ‘ಏಯ್ ಭಟ್ಟ, ಯಾಕೆ ನಕ್ಕಿದ್ದು?’ಎಂದರು. ಭಟ್ಟರು’ ನೀವು ಬೈಯೋಲ್ಲ ಅಂದರೆ ಹೇಳ್ತೀನಿ ಸರ್!’ ‘ಇಲ್ಲ ಹೇಳು’ ಅಂಜುತ್ತಲೇ ಭಟ್ಟರು ಹೇಳಿದರು;” ಸಾರ್ ನೀವು ತಲೆತಗ್ಗಿಸಿದಾಗ ಮೇಲಿರೊ ಸೀಲಿಂಗ್ ಫ್ಯಾನು ನಿಮ್ಮ ತಲೆಯಲ್ಲಿ ಕಾಣಿಸಿತು, ನಗು ತಡೆಯಲಾಗಲಿಲ್ಲ, ಕ್ಷಮಿಸಿ ಸರ್” ಇದನ್ನು ಕೇಳಿ ತೀನಂಶ್ರೀಯವರಿಗೂ ನಗುತಡೆಯದಾಯ್ತು. ಎಲ್ಲರ ನಗೆಯೊಂದಿಗೆ ಅವರ ನಗೆಯೂ ಬೆರೆತುಹೋಯ್ತು. ತೀನಂಶ್ರೀಯವರ ಚಿತ್ರ ನೋಡಿದ್ದವರಿಗೆ ಮಾತ್ರ ಈ ಸಂದರ್ಭ ಚೆನ್ನಾಗಿ ವೇದ್ಯವಾಗುವುದು. ಭಟ್ಟರ ಬತ್ತಳಿಕೆಯಲ್ಲಿ ಈ ಬಗೆಯ ಅನುಭವ ಕಥನಗಳ ಒಟ್ಟಿಲೇ ಇದೆ..
ಅಹಂಕಾರದ ಹೊರತಾದ ವಿನಯ
ವಾಪಾಸ್ ಬೆಂಗಳೂರಿಗೆ ಹೋಗುವ ದಾರಿಯುದ್ದಕ್ಕೂ ಅವರ ಹಾಡುಗಳ ಬಗೆಗೇ ಮಾತು. ಮಾತಿನ ಯಜಮಾನಿಕೆಯೆಲ್ಲವೂ ಭಟ್ಟರದೇ. ‘ತಾಯೆ ನಿನ್ನ ಮಡಿಲಲಿ’ ಎಂಬ ಸುಂದರ ಹಾಡಿನ ಬಗ್ಗೆ ಕೇಳಿದಾಗ, ‘ಅದು ನನ್ನ ಅಭಿನಂದನ ಎನ್ನುವ ಕ್ಯಾಸೆಟ್ಟಿನಲ್ಲಿದೆ, ಗರ್ತಿಕೆರೆ ರಾಘಣ್ಣ ಎಂಬುವವರು ಅದನ್ನು ಕಂಪೋಸ್ ಮಾಡಿ ಹಾಡಿದ್ದು” ಎಂದವರೆ, ಗರ್ತಿಕೆರೆ ರಾಘಣ್ಣ ಎಂಬ ಶಿವಮೊಗ್ಗದ ಅದ್ಭುತ ಗಾಯಕನ ಬಗ್ಗೆ ವಿವರವಾಗಿ ತಿಳಿಸಿದರು. ನಾನು “ಸರ್, ಆ ಹಾಡಿನ ಕೊನೆಯಲ್ಲಿ ನೀವು ‘ಸೊನ್ನೆಯಾದ ಮಗುವಿಗೊಂದು ಸಣ್ಣಪಾಲು ನೀಡಿದೆ’ ಅಂತ ಬರೆದಿದ್ದೀರಲ್ಲ, ಅದು ಕವಿಯ ವಿನಯದ ಗುಣವನ್ನು ಬಿಂಬಿಸಲೆಂದೇ?” ಎಂದು ಕೇಳಿದೆ. “ನೋಡ್ರೀ, ಪರಂಪರೆಯ ಎದುರು ನಾವೆಲ್ಲ ಅಣುವಿನಷ್ಟು ಅಲ್ಪರು. ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶ, ಕುವೆಂಪು, ಬೇಂದ್ರೆಯಂತಹ ಮಹಿಮಾನ್ವಿತರ ಸಾಲಿನಲ್ಲಿ ಕನ್ನಡಮ್ಮ ನನಗೂ ಒಂದು ಪುಟ್ಟ ಸ್ಥಾನಮಾನ ನೀಡಿಲ್ಲವೆ? ಪರಂಪರೆಯ ಎದುರು ನಾವೆಲ್ಲ ಯಾವ ಲೆಕ್ಕ?” ಎಂದರು. ಪ್ರತಿಯೊಬ್ಬರಲ್ಲೂ ಅಹಂಕಾರದ ಹೊರತಾದ ಈ ಬಗೆಯ ವಿನಯ ಇರಬೇಕಾದ ಅಗತ್ಯವನ್ನು ಕವಿ ಈ ಮಾತಿನ ಮೂಲಕ ಅಂದು ಪ್ರತಿಪಾದಿಸಿದರೆಂಬದೇ ನನ್ನ ನಂಬುಗೆ. ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣರಂಥ ಮೇರುಗಾಯಕರ ಸಾಧನೆಗೆ ಜೀವಜಲವಾದವರು ಈ ಕವಿಯೆಂಬುದು ಹಲವರಿಗೆ ತಿಳಿದಿಲ್ಲ.
ಹಲವುಬಾರಿ ಭಟ್ಟರನ್ನು ಮತ್ತೆ ಮತ್ತೆ ಎದುರಾದರೂ ಸಾಹಿತ್ಯ ಕುರಿತು ಹರಟಲು ಸಾಧ್ಯವಾಗಿರಲಿಲ್ಲ. ಧಾರವಾಡದ ಸಾಹಿತ್ಯ ಸಂಭ್ರಮಕ್ಕೆ ಬೆಂಗಳೂರಿಂದ ರೈಲಿನಲ್ಲಿ ಹೊರಟಾಗ ಒಂದೇ ಬೋಗಿಯಲ್ಲಿ ಪ್ರಯಾಣಿಸುವ ಅವಕಾಶ ಒದಗಿತು. ಅಮೆರಿಕ, ಇಂಗ್ಲೆಂಡಿಗೆ ಹೋಗಿದ್ದಾಗ ಅಲ್ಲಿನ ಕನ್ನಡಿಗರು ತೋರಿದ ಪ್ರೀತಿ ಆದರಗಳನ್ನು ನೆನೆದರು. ಭೈರಪ್ಪನವರೊಂದಿಗಿನ ಸ್ನೇಹವನ್ನು ನೆನಪುಮಾಡಿಕೊಂಡರು. ಬೇಂದ್ರೆಯವರು ಮನೆಗೆ ಬಂದು ಹಾಲು ಕುಡಿದುಹೋಗಿದ್ದ ವಿವರವನ್ನೂ ಸ್ಮರಿಸಿದರು. ತುಂಬಾ ಬಡತನದಿಂದ ಮೇಲೆ ಬಂದಿದ್ದ ಅವರ ಜೀವನ ವಿವರದೊಂದಿಗೆ ತಮ್ಮ ತಾಯಿಯ ಪರಿಶ್ರಮವನ್ನೂ ಕೃತಜ್ಞತೆಯಿಂದ ನೆನಪಿಗೆ ತಂದುಕೊಂಡರು. ಮಾಗುವ ಜೀವದ ಕನವರಿಕೆಯಂತೆ ಆ ಹೊತ್ತಿನ ಅವರ ಮಾತುಗಳು ನನಗೆ ಕಂಡವು.
‘ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಹುಟ್ಟಿದ ಕಥೆ..
ರೈಲಿನಲ್ಲಿ ಹೋಗುವಾಗ ಭಟ್ಟರು ಹೇಳಿದ ಹಾಡೊಂದರ ಕಥೆ ಇದು; ಮೃಚ್ಛಕಟಿಕ ನಾಟಕವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದ ಭಟ್ಟರು ನಾಲ್ಕು ಹಾಡುಗಳನ್ನೂ ಬರೆದು ಸೇರಿಸಿದ್ದರು. ಹಾಡಿಗೆ ಸ್ವರಸಂಯೋಜಿಸಿದ್ದವರು ಸಿ ಅಶ್ವತ್ಥ್. ಇಬ್ಬರೂ ನಾಟಕ ತಂಡದೊಂದಿಗೆ ದೆಹಲಿಯ ಪ್ರದರ್ಶನಕ್ಕೆ ಹೊರಟಿದ್ದರು. ರಾತ್ರಿ ಹನ್ನೆರಡರ ಹೊತ್ತು, ಎರಡು ಪೆಗ್ ಏರಿಸಿ ರಂಗೇರಿದ್ದ ಅಶ್ವತ್ಥ್ ತಾಳ ತಟ್ಟುತ್ತಾ ಈ ತಾಳಕ್ಕೊಂದು ಹೊಸಹಾಡು ಬರೆದುಕೊಟ್ಟರೆ, ಈಗಲೇ ಅದಕ್ಕೆ ಜರತಾರಿ ಪತ್ತಲ ಉಡಿಸಿಬಿಡುತ್ತೇನೆ ಎಂದು ಒತ್ತಾಯಿಸಿದರು. ಭಟ್ಟರು ಚಲಿಸುತ್ತಿದ್ದ ರೈಲಿನೊಳಗಿಂದ ಕಿಟಕಿಯತ್ತ ಕಣ್ಣುಹಾಯಿಸಿದರು. ಬುದ್ಧಿಗೆ ಮರುಳು ಕವಿಸುವ ಮೋಹಕ ರಾತ್ರಿ, ಸುತ್ತಲ ವಾತಾವರಣವನ್ನು ತೋಯಿಸಿಬಿಡುವಂತೆ ಹಾಲುಬೆಳದಿಂಗಳು ಸುರಿಯುತ್ತಿತ್ತು. ಯಾವುದೋ ಅಪರಿಚಿತ ಮರುಳು ಕಾಡುಗಳ ನಡುವೆ ಇರುಳಿನ ನಿಗೂಢತೆಯನ್ನು ಸೀಳಿ ರೈಲುಗಾಡಿ ಓಡುತ್ತಿತ್ತು. ಕೈಲಿದ್ದ ಸಿಗರೇಟು ಪ್ಯಾಕಿನ ತುಂಡುಕಾಗದದ ಮೇಲೆ ಕವಿ ‘ಎಂಥಾ ಮರುಳಯ್ಯ ಇದು ಎಂಥಾ ಮರುಳು’ ಎಂಬ ಗೀತೆಯನ್ನು ಚಿತ್ತುಮಾಡದಂತೆ ಒಂದೇ ಏಟಿಗೆ ಬರೆದುಮುಗಿಸಿದರು. ಅದನ್ನು ಅಶ್ವತ್ಥ್ ಓದಿದ ಎರಡೇ ನಿಮಿಷದಲ್ಲಿ ತಾರಕ ಸ್ವರದಲ್ಲಿ ಹಾಡಲಾರಂಭಿಸಿದರು! ಎಲ್ಲ ಎದ್ದು ಕುಳಿತು ತಲೆದೂಗಿದಾಗ ಮಧ್ಯರಾತ್ರಿಯಾಗಿತ್ತು. ಆಮೇಲೆ ಆ ಹಾಡು ‘ಸ್ಪಂದನ’ ಚಿತ್ರದಲ್ಲಿ ಸೇರಿ ಜನಮನಸೂರೆಗೊಂಡಿದ್ದು ಈಗ ಚರಿತ್ರೆ. ಇಂತಹ ಹಲವು ಪ್ರಸಂಗಗಳನ್ನು ರೈಲುಪ್ರಯಾಣದಲ್ಲಿ ಹೇಳಿದ್ದರು.
ಶರೀಫರ ಗೀತೆಗಳನ್ನು ಕನ್ನಡಿಗರಿಗೆ ಅತ್ಯದ್ಭುತವಾಗಿ ಭಟ್ಟರು ಸಂಪಾದಿಸಿಕೊಟ್ಟಿದ್ದು ಗೊತ್ತಿದೆ. ಆದರೆ, ಅವು ಹಾಡಾಗಿ ಜನಪ್ರೀತಿ ಗಳಿಸಲೂ ಭಟ್ಟರೆ ಕಾರಣವೆಂಬುದು ಹಲವರಿಗೆ ತಿಳಿದಿಲ್ಲ. ಯಾವುದೋ ಕ್ಯಾಸೆಟ್ ಮಾಡಲು ಅಶ್ವತ್ಥ್ ಭಟ್ಟರ ಹೊಸ ಕವಿತೆಗಳನ್ನು ಕೇಳಲು, ಭಟ್ಟರು ಅವರ ಕೈಗಿತ್ತಿದ್ದು ಶರೀಫರ ಸಾಹಿತ್ಯವಿದ್ದ ಕಲ್ಲುಸಕ್ಕರೆ ಕೊಳ್ಳಿರೋ ಎಂಬ ಪುಸ್ತಕವನ್ನು. ತಿರುವಿಹಾಕಿದ ಅಶ್ವತ್ಥ್ ಬಿದ್ದಿಯಬ್ಬೆ ಮುದುಕಿ ಪದ್ಯದಲ್ಲಿದ್ದ ‘ಕೆಟ್ಟಗಂಟಿ ಚೌಡೇರು ಬಂದು ಉಟ್ಟುದನ್ನು ಕದ್ದಾರು ಜೋಕಿ’ ಎಂಬುದನ್ನು ತೋರಿಸಿ ‘ಇದು ಯಾವನಿಗೆ ಅರ್ಥವಾಗುತ್ತೆ?’ ಅಲ್ಲದೆ, ಅಳಬೇಡ ತಂಗಿ ಗಾಡಿನಲ್ಲಿ ಬರುವ ‘ರಂಡೆ ಎಂಬ ಬೈಗುಳ ಶಬ್ದವನ್ನು ಹಾಡಿದರೆ ಜನ ಕಲ್ಲಲ್ಲಿ ಹೊಡಿತಾರೆ’ ಎಂದು ಹೇಳಿ ಇವನ್ನೆಲ್ಲ ಬಿಲುಕುಲ್ ಹಾಡಲಾಗದೆಂದುಬಿಟ್ಟರಂತೆ. ಭಟ್ಟರು ಶರೀಫರ ಪ್ರತಿಭೆಯ ಬಗ್ಗೆ ಅಶ್ವತ್ಥರಿಗೆ ತಿಳಿಹೇಳಿ ಅವರ ಕವಿತೆಗಳ ಪಾಠಮಾಡಿದ ಪರಿಣಾಮ, ಮರುದಿನ ಸಂಜೆಯೇ ಮೂಡಿತು ಅಶ್ವತ್ಥರ ಗಾಯನದ ಚಿರಗೀತೆ ‘ತರವಲ್ಲ ತೆಗಿ ನಿನ್ನ’ ಮತ್ತು ಉಳಿದ ಕೆಲವು ಹಾಡುಗಳು. ಬಿದ್ದಿಯಬ್ಬೆ, ಅಳಬೇಡ ತಂಗಿಯನ್ನು ಸುಬ್ಬಣ್ಣನವರಿಂದ ಹಾಡಿಸಿದರು. ಶರೀಫಜ್ಜ ನಮ್ಮ ಎದೆಗೆ ಇಳಿಯಲು ಭಟ್ಟರ ಈ ಪ್ರಯತ್ನ ಬೆಲೆಯುಳ್ಳದಲ್ಲವೆ?
ಭಾವಗೀತೆಗಳಾಚೆಗಿನ ಅಪೂರ್ವ ಸಾಧನೆ ಮರೆಯುವಂತಿಲ್ಲ
ಮತ್ತೊಮ್ಮೆ ಅವರ ಅನುವಾದ ಸಾಹಿತ್ಯದ ಬಗ್ಗೆ ಮಾತು ಬಂತು. ಬಿಎಂಶ್ರೀ ಪ್ರತಿಷ್ಠಾನದಲ್ಲಿ ವಸುಧೇಂದ್ರರ ಎವರೆಸ್ಟ್ ಅನುವಾದ ಕೃತಿಗೆ ಪ್ರಶಸ್ತಿ ಪ್ರದಾನ ಮಾಡಲು ಬಂದಿದ್ದರು. ತೀರ್ಪುಗಾರರ ಪರವಾಗಿ ಎರಡು ಮಾತಾಡಲು ನಾನೂ ಅಲ್ಲಿದ್ದೆ. ಸಭೆ ಆರಂಭಕ್ಕೂ ಮುನ್ನ ಕಾಫಿ ಹೀರುತ್ತಾ ಭಟ್ಟರು ತಮ್ಮ ಅನುವಾದದ ಬಗ್ಗೆ ಮಾತು ಶುರುವಿಟ್ಟರು. ಯೇಟ್ಸ್ ಕವಿತೆಗಳನ್ನು ‘ಚಿನ್ನದ ಹಕ್ಕಿ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಾಗ, ಭಟ್ಟರ ಮಗಳ ಮದುವೆಗೆ ಬಂದಿದ್ದ ಅನಂತಮೂರ್ತಿಯವರು ಮದುವೆಮನೆಯಲ್ಲೆ ಅನುವಾದವನ್ನು ಮೆಚ್ಚಿ, ತಿದ್ದುಪಡಿ ಸೂಚಿಸಿದ್ದು, ಅಭ್ಯಾಸಯೋಗ್ಯವಾದ ಮುನ್ನುಡಿ ಬರೆದುಕೊಟ್ಟಿದ್ದು, ವಿಮರ್ಶಕರು ಮೆಚ್ಚಿಕೊಂಡಿದ್ದು ಇತ್ಯಾದಿ ಇತ್ಯಾದಿ. 1999ರಲ್ಲಿ ‘ಎಲಿಯೆಟ್ ಕಾವ್ಯ ಸಂಪುಟ’ ಹೊರಬರುವಾಗಲೂ ಅನಂತಮೂರ್ತಿ ಬೆನ್ನುಡಿ ಬರೆದು ಹರಸಿದ್ದರಂತೆ. ಕನ್ನಡಿಗರಿಗೆ ಏಟ್ಸ್ ಮತ್ತು ಎಲಿಯೆಟ್ ದರ್ಶನವನ್ನು ಭಟ್ಟರು ಸೊಗಸಾಗಿ ಮಾಡಿದ್ದಾರೆಂಬುದು ಅವರನ್ನು ಗೌರವಿಸಲು ಇರುವ ಬಲವಾದ ಕಾರಣಗಳು. ಭಟ್ಟರು ಗ್ರಂಥಸಂಪಾದನಾ ಶಾಸ್ತ್ರದ ಬಗ್ಗೆ ಬರೆದ ಕೃತಿಯನ್ನು ಸ್ವತಃ ತೀನಂಶ್ರೀ ಮೆಚ್ಚಿ ಬರೆದಿದ್ದರು. ಇವರ ಅನುವಾದ, ನವ್ಯಕವಿತೆ, ನಾಟಕಗಳನ್ನು ವಿವರವಾದ ಅಧ್ಯಯನಕ್ಕೊಳಪಡಿಸುವುದು ನಮ್ಮ ಮುಂದಿರುವ ಜವಾಬ್ದಾರಿ.
ನಮಗೋ ಅವರ ನೂರಾರು ಭಾವಗೀತೆಗಳ ವ್ಯಾಮೋಹ ಅಮರಿಕೊಂಡಿದೆ. ಭಾವಗೀತೆಗಳಾಚೆಗಿನ ಭಟ್ಟರ ಅಪೂರ್ವ ಸಾಧನೆಯನ್ನು ನಾವು ಮರೆಯುವಂತಿಲ್ಲ. ತೊರೆದು ಹೋಗದಿರೋ ಜೋಗಿ, ನೀ ಸಿಗದೆ ಬಾಳೊಂದು ಬಾಳೆ? ಮುಂತಾದ ಮೀರಾ ಭಜನ್ ಅನುವಾದಗಳೇ ಭಟ್ಟರ ಸಾಮರ್ಥ್ಯವನ್ನು ಶ್ರುತಪಡಿಸಿವೆ. ಹಲವರಿಗೆ ಅವು ಭಾಷಾಂತರಗೊಂಡು ಕನ್ನಡಕ್ಕೆ ಬಂದವೆಂಬ ಸಂಗತಿಯೇ ಗಮನಕ್ಕೆ ಬಾರದಷ್ಟು ಚೆಂದವಿದೆ ಭಟ್ಟರ ಅನುವಾದ.
ನಮ್ಮ ಹಿರಿ-ಕಿರಿಯ ಲೇಖಕರ ನಡುವಿನ ಬೆಸುಗೆಯಂತಿರುವ ಭಟ್ಟರ ‘ನಿಲುವುಗನ್ನಡಿಯ ಮುಂದೆ’ ಎಂಬ ಆತ್ಮಕಥೆ ಬೆಂಗಳೂರಿನಲ್ಲಿ ಬಿಡುಗಡೆಯಾದಾಗ ಅದನ್ನು ಪರಿಚಯಿಸುವ ಭಾಗ್ಯ ನನ್ನದಾಗಿತ್ತು. ಭಟ್ಟರ ಸಾಹಿತ್ಯವನ್ನು ಕುರಿತ ವಿಮರ್ಶೆ ಅಷ್ಟು ಸಮಾಧಾನ ತರುವ ಹಾಗಿಲ್ಲ. ಅವರ ಅಗಲಿಕೆಯಾದರೂ ಅಂಥ ಒತ್ತಾಸೆಯನ್ನು ನಮ್ಮೊಳಗೆ ಮೂಡಿಸಲಿ.
“ಎಲ್ಲ ನಿನ್ನ ಲೀಲೆ ತಾಯೆ, ಎಲ್ಲ ನಿನ್ನ ಮಾಯೆ!” ಹಾಡು ನೆನಪಾಗುತ್ತಿದೆ!
ಬರಹ: ಡಾ ಎಚ್ ಎಸ್ ಸತ್ಯನಾರಾಯಣ
ಇದನ್ನೂ ಓದಿ: ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್
ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ
Published On - 11:45 am, Sat, 6 March 21