AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ

ಶಾಸ್ತ್ರಕಾರರು ಹೇಳಿದ್ದ ಅರ್ಥಗಳಿಗೆ ಅನುಗುಣವಾಗಿ ಜನರ ಮನಮುಟ್ಟುವಂತೆ ಶಾಸ್ತ್ರಗ್ರಂಥಗಳನ್ನು ವ್ಯಾಖ್ಯಾನ ಮಾಡುವುದು ಬಹಳ ಸೃಷ್ಟಿಶೀಲ ಕೆಲಸ. ಇದು ಬನ್ನಂಜೆಯವರಿಗೆ ಸಿದ್ಧಿಸಿತ್ತು ಎಂದು  ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ವಿದ್ವತ್​ ಬಗ್ಗೆ ನೆನಪಿಸಿಕೊಂಡರು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ.

ಸೃಷ್ಟಿಶೀಲ, ಸೃಜನಶೀಲ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ: ಲಕ್ಷ್ಮೀಶ ತೋಳ್ಪಾಡಿ
ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ (ಸಂಗ್ರಹ ಚಿತ್ರ)
ganapathi bhat
|

Updated on:Dec 14, 2020 | 12:54 PM

Share

ಶಾಸ್ತ್ರಕಾರರು ಹೇಳಿದ್ದ ಅರ್ಥಗಳಿಗೆ ಅನುಗುಣವಾಗಿ ಶಾಸ್ತ್ರಗ್ರಂಥಗಳನ್ನು ಜನರ ಮನಮುಟ್ಟುವಂತೆ ವ್ಯಾಖ್ಯಾನ ಮಾಡುವುದು ಬಹಳ ಸೃಷ್ಟಿಶೀಲ ಕೆಲಸ. ಇದು ಬನ್ನಂಜೆಯವರಿಗೆ ಸಿದ್ಧಿಸಿತ್ತು ಎಂದು  ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ವಿದ್ವತ್​ ಬಗ್ಗೆ ನೆನಪಿಸಿಕೊಂಡರು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ.

ಭಾರತೀಯತೆ ಎಂದರೆ ಏನು? ಅದನ್ನು ತಾನು ಅರ್ಥ ಮಾಡಿಕೊಂಡು ಮತ್ತೊಬ್ಬರಿಗೆ ಅರ್ಥ ಮಾಡಿಸಿಕೊಡಬೇಕಾದರೆ, ಹಾಗೆ ಮಾಡುವವರಿಗೆ ಅನೇಕ ಸಾಧನ ಸಾಮಾಗ್ರಿಗಳು ಬೇಕಾಗುತ್ತವೆ. ಮೊದಲನೆಯದಾಗಿ ಪಾಂಡಿತ್ಯ, ಅಂದರೆ ಗ್ರಂಥಗಳ ಅಧ್ಯಯನ ಬೇಕು. ಗ್ರಂಥಗಳನ್ನು ಅಧ್ಯಯನ ಮಾಡುವಾಗ ನಮ್ಮ ಸನ್ನಿವೇಶ, ಸಂದರ್ಭ, ವಾತಾವರಣದಲ್ಲಿ ಅಧ್ಯಯನ ನಡೆಸುತ್ತೇವೆ. ಎಲ್ಲರೂ ಕೂಡ ಹಾಗೆಯೇ. ಹೀಗೆ ಅಧ್ಯಯನ ನಡೆಸುವಾಗ ನಾವು ಭಾರತೀಯತೆಯ ಕುರಿತು ಅಧ್ಯಯನ ನಡೆಸುತ್ತಿದ್ದೇವೆ ಎಂದು ನಮಗೆ ಗೊತ್ತಿರುವುದಿಲ್ಲ. ನಮ್ಮ ಬಾಲ್ಯ, ಸಾಂಸ್ಕೃತಿಕ ಸನ್ನಿವೇಶ, ಸಂದರ್ಭದಲ್ಲಿ ನಮಗೆ ಯಾವುದು ಸಿಕ್ಕಿದೆಯೋ ನಾವದನ್ನು ಕಲಿಯುತ್ತೇವೆ. ನಮಗದು ಸಿಕ್ಕಿರುತ್ತದೆ. ಅಪ್ರಜ್ಞಾಪೂರ್ವಕವಾಗಿ ಆ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ.

ಗ್ರಂಥಗಳ ಅಧ್ಯಯನದ ಸಾರಗ್ರಹಣದಿಂದ ಪಾಂಡಿತ್ಯ ಬೆಳೆಯುತ್ತದೆ. ಎಷ್ಟೋ ಮಂದಿ ಈ ಪಾಂಡಿತ್ಯದ ಮಟ್ಟಿಗೆ ತೃಪ್ತರಾಗಿರುತ್ತಾರೆ. ಅದರಿಂದ ಮುಂದಕ್ಕೆ ಸಂಶೋಧನಾ ಪ್ರವೃತ್ತಿ ಜಾಗೃತವಾಗಿಸಿ, ಪ್ರಜ್ಞೆಯನ್ನು ವಿಕಾಸಗೊಳಿಸಿಕೊಳ್ಳಲು ಮುನ್ನಡೆಯುವುದಿಲ್ಲ. ಸಂಶೋಧನಾ ಪ್ರವೃತ್ತಿ ಜಾಗೃತವಾಗದಿದ್ದರೆ ಸನ್ನಿವೇಶಕ್ಕೆ ಮಾತ್ರ ಬದ್ಧರಾಗಿರುತ್ತೇವೆ. ಬನ್ನಂಜೆ ಗೋವಿಂದಾಚಾರ್ಯರಂಥವರು ಇಲ್ಲಿ ಭಿನ್ನರಾಗಿ ಕಾಣುತ್ತಾರೆ.

ಬನ್ನಂಜೆಯಂಥವರು ತಾವು ಒಂದು ವಿಚಾರವನ್ನು ಆಳವಾಗಿ ಅಧ್ಯಯನ ನಡೆಸಿದ್ದು ಮಾತ್ರವಲ್ಲ, ಅದಕ್ಕಿಂತಲೂ ಮುಂದೆ ಸಾಗಿದವರು. ಅಂದರೆ ಪರಸ್ಪರ ವಿರುದ್ಧವಾಗಿರುವ ಸಂಗತಿಗಳಿಂದ ಪ್ರಶ್ನೆಗಳನ್ನು ಹುಟ್ಟಿಸಿಕೊಂಡವರು. ಹಕ್ಕಿಯ ಮರಿಗಳಿಗೆ ನಾವು ಆಕಾಶದಲ್ಲಿ ಹಾರಬಲ್ಲೆವು ಎಂದು ಗೊತ್ತಾಗಿರುವುದಿಲ್ಲ. ಅದು ಗೊತ್ತಾಗಬೇಕು. ಬನ್ನಂಜೆಯವರಿಗೆ ಅದು ಗೊತ್ತಾಗಿದೆ. ಆದ್ದರಿಂದ ಅವರು ಎಷ್ಟು ಪಂಡಿತರೋ ಅಷ್ಟೇ ಸಂಶೋಧಕರು. ಸಂಶೋಧನಾ ಪ್ರವೃತ್ತಿಯ ಮೂಲಕ ಪ್ರಜ್ಞೆಯ ವಿಕಾಸವನ್ನು ಸಾಧಿಸುವುದೇ ಭಾರತೀಯತೆಯನ್ನೂ ಸೂಚಿಸುತ್ತದೆ.

ರಸಪೂರ್ಣ ವ್ಯಕ್ತಿತ್ವದ ಬನ್ನಂಜೆ ಬನ್ನಂಜೆಯವರದ್ದು ರಸಪೂರ್ಣ ವ್ಯಕ್ತಿತ್ವ. ಅವರ ಜೊತೆ ಕುಳಿತರೆ ಯಾವುದೋ ಒಣ ಪಾಂಡಿತ್ಯದ ಮಾತು ಬರುವುದೇ ಇಲ್ಲ. ಅವರಿಗೆ ಸಾಹಿತ್ಯದ ಸಂಪರ್ಕ ಇದ್ದದ್ದೂ ಇದಕ್ಕೆ ಕಾರಣ. ಸಾಹಿತ್ಯ ಮತ್ತು ವೇದಾಂತ, ಕಾವ್ಯ ಮತ್ತು ವೇದಾಂತ ಬನ್ನಂಜೆಯವರಿಗೆ ಎರಡು ಕಣ್ಣುಗಳಿದ್ದಂತೆ. ಅವರು ಮೂಲತಃ ಚಿತ್ರಕಾರ. ಕಲೆ, ಸಂಗೀತ ಅವರಿಗೆ ಆಪ್ತವಾಗಿದ್ದ ವಿಷಯಗಳು. ಬನ್ನಂಜೆಯವರಿಂದ ಯಾವುದೂ ಕೂಡ ಹೊರತಲ್ಲ.

ಅವರು ಗಾಢವಾಗಿ ಅಧ್ಯಯನ ನಡೆಸಿದ ಗ್ರಂಥ ‘ಮಾಧ್ವ ವಾಙ್ಮಯ’ ಎಲ್ಲಿಯೋ ಬಂದ ಪ್ರಶ್ನೆಗೆ ಇನ್ನೆಲ್ಲೋ ಉತ್ತರ ಸಿಗುತ್ತದೆ ಎನ್ನುತ್ತದೆ. ಅಂದರೆ ಪ್ರಜ್ಞೆಯ ವಿಕಾಸ, ನೆನಪಿನ ವಿಕಾಸ, ವಿಸ್ತಾರ ಆಗುತ್ತದೆ. ಈ ಕಾರಣ ಇಟ್ಟುಕೊಂಡರೆ ನಮಗೆ ಯಾವುದೂ ಹೊರತಲ್ಲ. ಎಲ್ಲವೂ ಮುಖ್ಯ. ಇದು ಮಧ್ವರ ಕೊಡುಗೆ. ಈ ವಿಚಾರವನ್ನು ಬಹಳ ಗಾಢವಾಗಿ ತನ್ನ ಪ್ರಜ್ಞೆಯಲ್ಲಿ ಅಳವಡಿಸಿಕೊಂಡು ಅರ್ಥಮಾಡಿದ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು.

ಯಾವ ಆಚಾರ್ಯರನ್ನೇ ಆಗಲಿ ಅವರನ್ನು ಸೃಷ್ಟಿಶೀಲವಾಗಿ ಅರ್ಥೈಸಿಕೊಳ್ಳುವುದು ಒಂದು ಬಗೆ. ಕೇವಲ ಪಾಂಡಿತ್ಯಪೂಣರ್ವಾಗಿ ಅರ್ಥಮಾಡಿಕೊಳ್ಳುವುದು ಮತ್ತೊಂದು ಬಗೆ. ಈ ಕಾರಣದಿಂದ ಗೋವಿಂದಾಚಾರ್ಯರ ಬಹಳದೊಡ್ಡ ಕೃತಿ ಅಂದರೆ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯದ ವ್ಯಾಖ್ಯಾನ. ಅದರ ಎರಡು ಸಂಪುಟಗಳು ಬಂದಿವೆ. ಮಧ್ವಾಚಾರ್ಯರ ಮಾತನ್ನು ಜನರು/ಮಾಧ್ವರು ಹೇಗೆ ತಿಳಿದುಕೊಳ್ಳಬೇಕು ಎಂದು ಮಧ್ವರು ಹೇಳಿದ್ದರ ಅರ್ಥವನ್ನು ತಮ್ಮ ಪಾಂಡಿತ್ಯದಲ್ಲಿ ತರುವುದು ಬಹಳ ಸೃಷ್ಟಿಶೀಲ ಕೆಲಸ. ಮಧ್ವಾಚಾರ್ಯರ ಮನಸ್ಸು ಯಾವ ರೀತಿ ಕೆಲಸ ಮಾಡುತ್ತಿತ್ತೋ ತನ್ನ ಮನಸ್ಸು ಕೂಡ ಅದೇ ರೀತಿ ಕೆಲಸ ಮಾಡುವ ಹಾಗೆ ಆಗಲಿ ಎನ್ನುವ ಪ್ರಯತ್ನವದು.

ಬನ್ನಂಜೆಯವರದ್ದು, ಪಾಂಡಿತ್ಯ, ಸಂಶೋಧನೆ, ಸೃಷ್ಟಿಶೀಲತೆ ಈ ಮೂರೂ ವಿಚಾರಗಳು ಮಿಳಿತವಾಗಿದ್ದಂಥ ಹಿರಿಯ ವ್ಯಕ್ತಿತ್ವ. ಅದು ಈ ಶತಮಾನದ ಒಂದು ವಿಸ್ಮಯ. ಈ ಶತಮಾನದಲ್ಲಿ ಶಾಸ್ತ್ರ ಸಾಹಿತ್ಯಕ್ಕೆ ಈ ಮಟ್ಟದ ಕೊಡುಗೆ ಕೊಟ್ಟವರು ಬನ್ನಂಜೆಯವರು ಮಾತ್ರ. ಹಿಂದಿನ ವ್ಯಾಖ್ಯಾನಕಾರರಿಗೆ ಸರಿಸಮನಾಗಿ, ಕೆಲವೊಮ್ಮೆ ಅದನ್ನೂ ಮೀರಿಸುವಂತೆ ಕಂಡವರು ಗೋವಿಂದಾಚಾರ್ಯರು. ಅಧ್ಯಯನ ಪರಂಪರೆ ಇದ್ದವರಿಗೆ ಅವರ ಕೊಡುಗೆ ಏನು, ಅವರ ಮೌಲ್ಯವೇನು ಎಂಬುದು ಗೊತ್ತು.

ಭಾಷಾ ಸಂಸಾರಿ ಗೋವಿಂದಾಚಾರ್ಯರು ಗೋವಿಂದಾಚಾರ್ಯರು ಭಾಷಾ ಸಂಸಾರಿ. ಭಾಷೆಗಳ ಬಗ್ಗೆ ಅಪಾರ ಒಲವಿದ್ದಂಥ ವ್ಯಕ್ತಿ. ಕನ್ನಡ, ತುಳು, ಸಂಸ್ಕೃತ ಈ ಮೂರು ಭಾಷೆಗಳ ಜಾಯಮಾನ ಬಲ್ಲವರು. ಕನ್ನಡ ಸಾಹಿತ್ಯಕ್ಕೂ ದೊಡ್ಡ ಕೊಡುಗೆ ನೀಡಿದವರು. ಅವರ ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಕನ್ನಡಾನುವಾದ ಬೇಂದ್ರೆಯವರಿಗೆ ಇಷ್ಟವಾಗಿದೆ. ಅವರು ‘ಭಗವಂತನ ನಲ್ನುಡಿ’ ಎಂಬ ಹೆಸರಿನಲ್ಲಿ ಭಗವದ್ಗೀತೆಯ ಕನ್ನಡಾನುವಾದ ಮಾಡಿದ್ದಾರೆ. ಅದು ಕನ್ನಡದಲ್ಲೇ ಕೃಷ್ಣಾರ್ಜುನರು ಮಾತನಾಡಿದರೋ ಎನ್ನುವ ಹಾಗೆ ಇದೆ. ಸಂಸ್ಕೃತದಿಂದ ಕನ್ನಡಕ್ಕೆ ತರುವಾಗ ಅದು ಕನ್ನಡದ್ದೇ ಅನಿಸುವಂತೆ ಬರೆದಿದ್ದಾರೆ.

ಪ್ರವಚನಕಾರ ಬನ್ನಂಜೆಯವರು ಪ್ರವಚನದ ಮೂಲಕ ಅವರು ಕ್ರಾಂತಿಯನ್ನೇ ಮಾಡಿದರು. ದಕ್ಷಿಣ ಕನ್ನಡದಲ್ಲಂತೂ ಪ್ರವಚನ ಎಂಬ ಕಲೆಯನ್ನು ರೂಪಿಸಿದವರೇ ಬನ್ನಂಜೆಯವರು ಎಂದು ಹೇಳಬಹುದು. ಶಾಸ್ತ್ರ, ಭಾಗವತ ಪ್ರವಚನ ಅಂತ ಇತ್ತು. ಆದರೆ ಬನ್ನಂಜೆಯವರ ಪ್ರವಚನವು ಶಾಸ್ತ್ರವನ್ನು ಎಲ್ಲಾ ರಸಗಳ ಜೊತೆಗೆ ಜನರಿಗೆ ತೆರೆದಿಟ್ಟಿತು. ತನ್ಮೂಲಕ, ಭ್ರಾಮಕ ಕಲ್ಪನೆಯಲ್ಲಿರುವ ಜನರ ಮುಂದೆ ಶಾಸ್ತ್ರವನ್ನು ಕಾಣಿಸಿತು. ಶಾಸ್ತ್ರದ ಉದ್ದೇಶ ನಮ್ಮನ್ನು ಮೂಢರಾಗಿಸುವುದಲ್ಲ. ನಾವು ಮೂಢರಾಗಿದ್ದರೆ ನಮ್ಮನ್ನು ಮೌಢ್ಯದಿಂದ ಬಿಡಿಸಿ ನಿಜವಾಗಿ ಎಚ್ಚರಿಸುವುದೇ ಶಾಸ್ತ್ರದ ಉದ್ದೇಶ ಎಂದು ಪ್ರವಚನಗಳ ಮೂಲಕ ತಿಳಿಸಿಕೊಟ್ಟರು. ಅವರ ವಾಙ್ಮಯ ಸೇವೆಗೆ ಪದಗಳಿಲ್ಲ.

ತಾವು ಗ್ರಹಿಸಿದ್ದಕ್ಕೆ ಒಳಜೀವನವನ್ನು ಕೂಡ ಮುಡಿಪಾಗಿಟ್ಟವರು ಗೋವಿಂದಾಚಾರ್ಯರು. ಅವರು ಪಂಡಿತ, ಪ್ರವಚನಕಾರ ಮಾತ್ರ ಅಲ್ಲ. ಪರಿಪೂರ್ಣ ಆಧ್ಯಾತ್ಮ ಸಾಧಕ.

ಲಕ್ಷ್ಮೀಶ ತೋಳ್ಪಾಡಿ

ನಿರೂಪಣೆ: ಗಣಪತಿ ದಿವಾಣ

ಬನ್ನಂಜೆ ಗೋವಿಂದಾಚಾರ್ಯರಿಗೆ ನೆಟ್ಟಿಗರಿಂದ ಶ್ರದ್ಧಾಂಜಲಿ; ಟ್ವಿಟರ್​​ನಲ್ಲಿ ಮೋದಿ ಸಂತಾಪ

Published On - 5:46 pm, Sun, 13 December 20

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ