ಕತಾರ್ ಮೇಲ್ | Qatar Mail : ಹತ್ತೂವರೆ, ಹನ್ನೊಂದು ಗಂಟೆಗೆ ಬರುತ್ತಿದ್ದ ಎಚ್.ಆರ್. ಆ ದಿನ ದುಮುಗುಡುತ್ತಾ ಹತ್ತು ಗಂಟೆಗೇ ಬಂದು, ಗೇಟ್ ಪಾಸ್ ಮುಗಿದಿದೆ ಎಂದು ಹಿಂದಿನ ದಿನವೇ ಹೇಳಲು ಏನಾಗಿತ್ತು ಎಂದು ಆ ಸೆಕ್ಯೂರಿಟಿಯ ಮುಂದೆಯೇ ನನ್ನನ್ನು ತರಾಟೆಗೆ ತೆಗೆದುಕೊಂಡುಳು. ಎಡಿಟರ್ ಆಕೆಗೇ ನೇರವಾಗಿ ಕರೆ ಮಾಡಿರುವುದು ಅವಳ ಕೋಪದಲ್ಲಿ ನಿಚ್ಚಳವಾಗಿ ಕಾಣಿಸುತ್ತಿತ್ತು. ಬಳಿಕ ಆಕೆ ಒಳಗೆ ಹೋಗಿ ಗೇಟ್ ಪಾಸನ್ನು ಮಂಜೂರು ಮಾಡಿರುವ ಅರ್ಜಿಯನ್ನು ಸಂಬಂಧಪಟ್ಟವರಿಗೆ ಈಮೇಲ್ ಮಾಡಿರುವುದಾಗಿಯೂ, ಅದನ್ನು ತೆಗೆದುಕೊಂಡು ಆಫೀಸಿಗೆ ಬರಬಹುದೆಂದು ನನಗೆ ಕರೆ ಮಾಡಿದಳು. ಕೊನೆಗೆ, ಆ ಸುಡುಬಿಸಿಲಿನಲ್ಲಿ (50 ಡಿ.ಸೆ.ಗಿಂತ ಹೆಚ್ಚು) ಪರವಾನಗಿ ಆಫೀಸಿಗೆ ದೌಡಾಯಿಸಿ, ಗೇಟ್ ಪಾಸ್ ಪಡೆದು, ಬೆವರಿನಿಂದ ತೋಯ್ದು ತೊಪ್ಪೆಯಾಗಿ, ಏದುಸಿರು ಬಿಡುತ್ತಾ ಸೆಕ್ಯೂರಿಟಿಯ ಮುಂದೆ ಮತ್ತೆ ನಿಂತಾಗ ಗಂಟೆ ಹನ್ನೊಂದು. ಒಳಹೋಗುವ ಮುನ್ನ ಆತ ನಗುತ್ತಾ ಎಚ್ಚರಿಸಿದ, ‘ಮೇಡಂ, ಸಂಜೆ ಮನೆಗೆ ಹೋಗುವ ಮುನ್ನ ಗೇಟ್ ಪಾಸ್ ನವೀಕರಿಸಿಕೊಂಡು ಬಿಡಿ.’ ದಿನಾಂಕ ಮತ್ತೊಮ್ಮೆ ನೋಡಿದೆ, ಎಂದಿನ ಹಾಗೆ ಮೂರು ತಿಂಗಳ ಪಾಸ್ ಆಗಿರದೆ ಕೇವಲ ಒಂದು ದಿನದ ವ್ಯಾಲಿಡಿಟಿ ಇತ್ತು!
ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)
(ಪತ್ರ 6, ಭಾಗ 2)
ಆ ದಿನದ ಕೆಲಸ ಮುಗಿಸಿ, ಎಚ್.ಆರ್. ಬಳಿ ಹೋದಾಗ ಆಕೆ ಇನ್ನೂ ಕೋಪದಲ್ಲೇ ಇದ್ದಳು. ನನ್ನಿಂದಾಗಿ ಎಡಿಟರ್ ಆಕೆಯನ್ನು ಆ ದಿನ ಬೇಗ ಎಬ್ಬಿಸಿದ್ದರಿಂದ ಹಿಡಿದು, ಹೇಗೆ ಆಕೆ ತರಾತುರಿಯಲ್ಲಿ ತಯಾರಾಗಿ ಆಫೀಸಿಗೆ ಬರಬೇಕಾಯಿತು ಎನ್ನುವುದರ ಬಗ್ಗೆ ಸುದೀರ್ಘವಾಗಿ ಹೇಳಿ, ಮುಂದಿನ ಮೂರು ತಿಂಗಳ ಪಾಸ್ ಮಂಜೂರು ಮಾಡಿ ಸಂಬಂಧ ಪಟ್ಟ ಆಫೀಸಿಗೆ ಗೊಣಗಿಕೊಂಡು ನನ್ನೆದುರೇ ಈ-ಮೇಲ್ ಮಾಡಿದಳು. ಅಷ್ಟಕ್ಕೂ, ಗೇಟ್ ಪಾಸ್ ವ್ಯಾಲಿಡಿಟಿ ಮುಗಿದ ಮೇಲೂ ನನ್ನನ್ನು ಹೇಗೆ ಗೇಟಿನೊಳಗೆ ಬಿಟ್ಟರು, ಮುಖ್ಯ ದ್ವಾರದಲ್ಲಿರುವ ಸೆಕ್ಯೂರಿಟಿ ನನ್ನ ಪರವಾನಗಿಯನ್ನು ತಪಾಸಣೆ ಮಾಡಲಿಲ್ಲವೇ ಎಂದು ಆಕೆ ಕೇಳಿದಳು. ನನ್ನ ಗಂಡನೂ ಪಕ್ಕದ ಟಿವಿ ಚಾನೆಲಿನಲ್ಲಿ ಕೆಲಸ ಮಾಡುತ್ತಿರುದನ್ನು ನೆನಪಿಸಿ, ಕಾರಿನ ಮೇಲೆ ಅಂಟಿಸಿರುವ ಮೀಡಿಯಾ ಗೇಟ್ ಪಾಸ್ ಸ್ಟಿಕರ್ ನೋಡಿ ನಮ್ಮನ್ನು ಗೇಟಿನೊಳಗೆ ಬಿಟ್ಟ ವಿಚಾರ ತಿಳಿಸಿದಾಗ ತಲೆಯಾಡಿಸಿ ನಕ್ಕಳು.
ಇಲ್ಲಿ ಒಂದು ಕಚೇರಿಯನ್ನು ಪ್ರವೇಶಿಸಬೇಕಾದರೆ ಎಂಟ್ರಿ ಪರ್ಮಿಟ್, ಗೇಟ್ ಪಾಸ್, ಅಪಾಯಿಂಟ್ಮೆಂಟ್ ಬಹಳ ಮುಖ್ಯ. ಪ್ರವೇಶ ಪರವಾನಗಿಯಿಲ್ಲದೆ ಸೆಕ್ಯೂರಿಟಿ ನಮ್ಮನ್ನು ಒಳಗೆ ಬಿಡುವುದಿಲ್ಲ. ಕಚೇರಿಗೆ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಬೇಕಾಗಿದ್ದಲ್ಲಿ ಅದಕ್ಕೂ ಬೇರೆ ಪರ್ಮಿಟ್ ಬೇಕು. ಇನ್ನು ಆಸ್ಪತ್ರೆಗಳ ಅಪಾಯಿಂಟ್ಮೆಂಟ್ ಬಗ್ಗೆ ಹೇಳುವುದೇ ಬೇಡ. ಜನರಲ್ ಫಿಸಿಷಿಯನ್, ನಮ್ಮ ಭಾಗ್ಯವಿದ್ದರೆ, ಒಂದೆರಡು ತಿಂಗಳು, ಇನ್ನು ತಜ್ಞ ವೈದ್ಯರು, ಸ್ಪೆಷಲ್ ವಿಭಾಗಗಳಾದ, ಕಣ್ಣು, ಮೂಗು, ದಂತ, ಸ್ತ್ರೀರೋಗತಜ್ಞರ ಅಪಾಯಿಂಟ್ಮೆಂಟ್ ಬೇಕೆಂದರೆ ಕಡಿಮೆಯೆಂದರೂ ಏಳೆಂಟು ತಿಂಗಳು ಕಾಯಲೇಬೇಕು!
ಇದನ್ನೂ ಓದಿ : Qatar Mail: ಬೇರೆ ವಾಟ್ಸಪ್ ಗ್ರೂಪ್ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು
ಈ ಗೇಟ್ ಪಾಸ್ ಎಷ್ಟು ಮುಖ್ಯ, ಇದರಿಂದ ಎಷ್ಟೆಲ್ಲಾ ತೊಂದರೆ, ಫಜೀತಿಗಳಾಗಿಬಿಡುತ್ತವೆ ಎನ್ನುವುದಕ್ಕೆ ಮತ್ತೊಂದು ಘಟನೆಯನ್ನು ಹೇಳುತ್ತೇನೆ. ಕತಾರಿನಲ್ಲಿ ತೈಲ ಮತ್ತು ಅದರ ಸಂಬಂಧಿತ ಉತ್ಪನ್ನಗಳ ಕಾರ್ಖಾನೆಗಳನ್ನು, ಸ್ಥಳಗಳನ್ನು ಚಿತ್ರೀಕರಣ ಮಾಡುವುದು ಅಪರಾಧ. ಅದಕ್ಕೆ ಬೇಕಾದ ಸೂಕ್ತ ಪರವಾನಗಿಯನ್ನು ಸರ್ಕಾರದಿಂದ ಛಾಯಾಗ್ರಾಹಕರು ಮೊದಲೇ ಪಡೆದು, ಆಯಾ ಕಂಪನಿಗಳಿಗೆ ಒದಗಿಸಬೇಕಾಗುತ್ತದೆ. ಪರವಾನಗಿಯಲ್ಲಿ ಛಾಯಾಗ್ರಾಹಕನ ಹೆಸರು, ಆತನ ವೃತ್ತಿ, ಕೆಲಸ ಮಾಡುತ್ತಿರುವ ಕಂಪನಿಯ ಹೆಸರು, ದಿನಾಂಕ ಮತ್ತು ಸಮಯವನ್ನು ನಮೂದಿಸಲಾಗಿರುತ್ತದೆ. ಹಾಗಾಗಿ ಹೆಸರಿರುವ ವ್ಯಕ್ತಿ, ನಮೂದಿಸಲಾಗಿರುವ ದಿನ ಮತ್ತು ಸಮಯಕ್ಕೆ ಹಾಜರಾಗದಿದ್ದರೆ ಪರವಾನಗಿ ರದ್ದಾಗುತ್ತದೆ.
ನನ್ನ ಪತಿ ಕೆಲಸ ಮಾಡುತ್ತಿದ್ದ ಹಳೆಯ ಕಂಪೆನಿಯ ಸಹೋದ್ಯೋಗಿ ರಿಚರ್ಡ್ (ಹೆಸರು ಬದಲಾಯಿಸದಲಾಗಿದೆ) ಒಮ್ಮೆ ಗುರುವಾರ ಚಿತ್ರೀಕರಣಕ್ಕೆಂದು ಹೋದವನು ಸಂಜೆಯಾದರೂ ಮರಳಿ ಆಫೀಸಿಗೆ ಬರಲಿಲ್ಲ. ಜರ್ಮನ್ ಪ್ರಜೆಯಾದ ಆತನ ಮದ್ಯ ವ್ಯಸನದ ಗುಟ್ಟು ಕಂಪನಿಯ ಎಲ್ಲರಿಗೂ ತಿಳಿದಿದ್ದುದ್ದರಿಂದ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಾಯಶಃ ಚಿತ್ರೀಕರಣ ಮುಗಿಸಿ ನೇರವಾಗಿ ಮನೆಗೆ ಹೋಗಿ, ಗುಂಡು ಹೊಡೆದು ಮಲಗಿರಬೇಕೆಂದು ಎಲ್ಲರೂ ಸುಮ್ಮನಾದರು. ವಾರಾಂತ್ಯ ಮುಗಿದು ಭಾನುವಾರ ಬಂದರೂ ಆಸಾಮಿ ಪತ್ತೆಯಿಲ್ಲ. ಮೊಬೈಲಿಗೆ ಕಾರ್ ಮಾಡಿದರೆ ಅದೂ ಬಂದ್. ಹುಷಾರು ತಪ್ಪಿ, ಅಥವಾ ಕುಡಿತ ಹೆಚ್ಚಾಗಿ ಮನೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾಯಿತೇನೋ ಎಂದು ಅವನ ಅಪಾರ್ಟ್ಮೆಂಟಿನಲ್ಲಿ ವಿಚಾರಿಸಿದರೆ ಆತ ಗುರುವಾರ ಬೆಳಗ್ಗೆ ಕೆಲಸಕ್ಕೆಂದು ಮನೆ ಬಿಟ್ಟವನು ಮರಳಿ ಬಂದೇ ಇರಲಿಲ್ಲ.
ಆತ ಹೋಗಿದ್ದದ್ದು ತೈಲೋತ್ಪನ್ನ ಕಂಪನಿಯೊಂದರ ಚಿತ್ರೀಕರಣಕ್ಕೆಂದು. ಅಲ್ಲೆಲ್ಲಾದರೂ ಕುಡಿದು, ಮರಳುಗಾಡಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾಯಿತೇನೋ ಎನ್ನುವ ದಿಗಿಲು ಆಫೀಸಿನಲ್ಲಿ ಎಲ್ಲರಿಗೂ. ಎಲ್ಲಾ ಕಡೆ ಹುಡುಕಿ, ವಿಚಾರಿಸಿ ಹತಾಶರಾದ ಸಹೋದ್ಯೋಗಿಗಳು ಕೊನೆಗೆ ರಿಚರ್ಡ್ ಕಾಣೆಯಾದ ಬಗ್ಗೆ ದೂರು ಕೊಡಲು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರು. ವಿಷಯ ಕೇಳಿದ ಪೊಲೀಸರು ಒಂದೆರಡು ಕರೆಗಳನ್ನು ಮಾಡಿದ ಮೇಲೆ ರಿಚರ್ಡ್ ಜೈಲಿನಲ್ಲಿರುವ ವಿಚಾರ ತಿಳಿಸಿದರು. ಆತನ ಬಳಿಯಿದ್ದ ಪ್ರವೇಶ ಪರವಾನಗಿ ಬುಧವಾರ ಮುಗಿದಿದ್ದದ್ದು ಆತನ ಗಮನಕ್ಕೆ ಬಂದಿರಲಿಲ್ಲ.
(ಮುಂದಿನ ಭಾಗವನ್ನು ನಿರೀಕ್ಷಿಸಿ)
ಭಾಗ 1 : Qatar Mail: ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಆತ ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/qatar-mail
Published On - 8:42 am, Fri, 18 March 22