Theatre : ಶಾಕುಂತಲಾ ಪಾತ್ರಕ್ಕೆ ದುಷ್ಯಂತನಾಗಿ ಚನ್ನಕೇಶವ ಮರುತಿರುಗಾಟದಲ್ಲಿ ಜೊತೆಯಾದರು. ಆ ಪಾತ್ರಕ್ಕೆ ಬೇಕಾದ ಕೆಂಪಾದ ಮೈಬಣ್ಣ, ಸಂಪಿಗೆ ಎಸಳಿನಂಥ ಮೂಗು, ಮುಂಗುರುಳು ನನಗೆ ಆಗಲೂ ಇರಲಿಲ್ಲ. ಶೃಂಗಾರದ ದೃಶ್ಯಗಳು ಬಂದಾಗಲಂತೂ ನಾಟಕ ಬಿಟ್ಟು ಓಡಿಹೋಗಿಬಿಡೋಣ ಎನ್ನಿಸುತ್ತಿತ್ತು. ದಯವಿಟ್ಟು ಸಂಭಾಷಣೆ ಬದಲಾಯಿಸಬಹುದಾ? ನನಗೆ ಈ ಸಂಭಾಷಣೆಗಳನ್ನು ಸ್ವೀಕರಿಸಲು ಕಷ್ಟವಾಗುತ್ತಿದೆ. ಯಾಕೆ ಕಪ್ಪು ಬಣ್ಣದ ಸೌಂದರ್ಯದ ಬಗ್ಗೆ ಸಂಭಾಷಣೆಗಳನ್ನು ರೂಪಿಸಲಾಗುವುದಿಲ್ಲ? ಎಂದು ನಿರ್ದೇಶಕ ರುಸ್ತುಂ ಭರೂಚ ಅವರಿಗೆ ಕೇಳುತ್ತಿದ್ದೆ. ಅಷ್ಟೊತ್ತಿಗೆ ನನ್ನ ಮತ್ತು ಚನ್ನಕೇಶವರ ಮಧ್ಯೆ ಪ್ರೀತಿ ಅರಳಿತ್ತು. ಅದಕ್ಕವರು, ‘ನಾನು ಗಿರಿಜಾಳನ್ನು ಪ್ರೀತಿಸುತ್ತಿದ್ದೇನೆ, ಅವಳನ್ನು ನೋಡಿಯೇ ಅಭಿನಯಿಸುತ್ತಿದ್ದೇನೆ. ರಂಗದ ಮೇಲಿರುವುದು ಶಾಕುಂತಲೆಯಲ್ಲ ನನ್ನ ಗಿರಿಜಾ, ಸಂಭಾಷಣೆ ಎಲ್ಲವೂ ನಿಮಿತ್ತ ಮಾತ್ರ. ನಾನು ಅಭಿನಯಿಸುವಾಗ ಗಿರಿಜಾಳ ಕಣ್ಣು, ತುಟಿ, ಮೂಗು, ಮುಗ್ಧತೆ ನೋಡುತ್ತಿರುತ್ತೇನೆ. ಗಿರಿಜಾಳನ್ನೇ ಆರಾಧಿಸುತ್ತಿರುತ್ತೇನೆ’ ಎಂದರು.
*
(ಭಾಗ – 2)
ನಮ್ಮ ಕಾಡಿನ ಮನೆಯಲ್ಲೇ ನಮ್ಮೊಂದಿಗೆ ಉಳಿದುಕೊಂಡ ಚನ್ನಕೇಶವ, ಬಹಳ ಸೂಕ್ಷ್ಮವಾಗಿ ನನ್ನ ಇಷ್ಟ, ಕಷ್ಟಗಳನ್ನು ಗಮನಿಸುತ್ತಿದ್ದರು. ಎರಡು ದಿನಗಳ ಕಾಲ ನಮ್ಮೊಂದಿಗಿದ್ದು, ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂದು ನನ್ನ ಅಪ್ಪನಿಗೆ ಹೇಳಿ ಹೋದರು.
ನಾನು ತಿರುಗಾಟದಲ್ಲಿ ಪಾಲ್ಗೊಂಡು ‘ಮಂತ್ರಶಕ್ತಿ’ ನಾಟಕದಲ್ಲಿ ದೊಡ್ಡಮ್ಮನ ಪಾತ್ರ ವಹಿಸಿದೆ. ಹಳೆಗನ್ನಡದಲ್ಲಿ ಮಾತನಾಡುವ ಸವಾಲು ಅದು. ಈ ನಾಟಕದ ಮೂಲಕ ಜನರ ಮನಸಲ್ಲಿ ಉಳಿದೆ. ಆಫ್ರಿಕಾದವರು ಇಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತಾರೆ ಎಂದು ಹೋದಲ್ಲೆಲ್ಲ ಜನ ಕುತೂಹಲದಿಂದ ಮಾತನಾಡಿಸಲು ನನ್ನನ್ನು ನೋಡಲು ಬರುತ್ತಿದ್ದರು. ಇದರಿಂದ ಬಹಳ ಬೇಜಾರಾಗುತ್ತಿತ್ತು. ದೇವರೇ, ಯಾಕಪ್ಪಾ ಹುಟ್ಟಿಸಿದೆ ನನ್ನ ಹೀಗೆ? ಎಂದುಕೊಳ್ಳುತ್ತಿದ್ದೆ. ನಾಟಕದ ನಂತರ ಜನ ನನ್ನ ಸುತ್ತುವರಿಯುವುದು ನೋಡಿ ಮುಜುಗರವಾಗುತ್ತಿತ್ತು. ಮ್ಯೂಸಿಯಂನಲ್ಲಿಟ್ಟ ವಸ್ತುವಿನಂತೆ ನನ್ನನಗೇ ಭಾಸವಾಗುತ್ತಿತ್ತು. ಆಗೆಲ್ಲಾ ಅಮ್ಮನನ್ನು ಬಯ್ದುಕೊಳ್ಳುತ್ತಿದ್ದೆ.
ಶಾಕುಂತಲಾ ಪಾತ್ರಕ್ಕೆ ದುಷ್ಯಂತನಾಗಿ ಚನ್ನಕೇಶವ ಮರುತಿರುಗಾಟದಲ್ಲಿ ಜೊತೆಯಾದರು. ಆ ಪಾತ್ರಕ್ಕೆ ಬೇಕಾದ ಕೆಂಪಾದ ಮೈಬಣ್ಣ, ಸಂಪಿಗೆ ಎಸಳಿನಂಥ ಮೂಗು, ಮುಂಗುರುಳು ನನಗೆ ಆಗಲೂ ಇರಲಿಲ್ಲ. ಶೃಂಗಾರದ ದೃಶ್ಯಗಳು ಬಂದಾಗಲಂತೂ ನಾಟಕ ಬಿಟ್ಟು ಓಡಿಹೋಗಿಬಿಡೋಣ ಎನ್ನಿಸುತ್ತಿತ್ತು. ದಯವಿಟ್ಟು ಸಂಭಾಷಣೆ ಬದಲಾಯಿಸಬಹುದಾ? ನನಗೆ ಈ ಸಂಭಾಷಣೆಗಳನ್ನು ಸ್ವೀಕರಿಸಲು ಕಷ್ಟವಾಗುತ್ತಿದೆ. ಯಾಕೆ ಕಪ್ಪು ಬಣ್ಣದ ಸೌಂದರ್ಯದ ಬಗ್ಗೆ ಸಂಭಾಷಣೆಗಳನ್ನು ರೂಪಿಸಲಾಗುವುದಿಲ್ಲ? ಎಂದು ನಿರ್ದೇಶಕ ರುಸ್ತುಂ ಭರೂಚ ಅವರಿಗೆ ಕೇಳುತ್ತಿದ್ದೆ. ಅಷ್ಟೊತ್ತಿಗೆ ನನ್ನ ಮತ್ತು ಚನ್ನಕೇಶವರ ಮಧ್ಯೆ ಪ್ರೀತಿ ಅರಳಿತ್ತು. ಅದಕ್ಕವರು, ‘ನಾನು ಗಿರಿಜಾಳನ್ನು ಪ್ರೀತಿಸುತ್ತಿದ್ದೇನೆ, ಅವಳನ್ನು ನೋಡಿಯೇ ಅಭಿನಯಿಸುತ್ತಿದ್ದೇನೆ. ರಂಗದ ಮೇಲಿರುವುದು ಶಾಕುಂತಲೆಯಲ್ಲ ನನ್ನ ಗಿರಿಜಾ, ಸಂಭಾಷಣೆ ಎಲ್ಲವೂ ನಿಮಿತ್ತ ಮಾತ್ರ. ನಾನು ಅಭಿನಯಿಸುವಾಗ ಗಿರಿಜಾಳ ಕಣ್ಣು, ತುಟಿ, ಮೂಗು, ಮುಗ್ಧತೆ ನೋಡುತ್ತಿರುತ್ತೇನೆ. ಗಿರಿಜಾಳನ್ನೇ ಆರಾಧಿಸುತ್ತಿರುತ್ತೇನೆ’ ಎಂದರು. ಅವರು ನನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದದ್ದು ಅಮ್ಮಿ ಎಂದು.
ಒಮ್ಮೆ ಒಬ್ಬರು ಪತ್ರಕರ್ತರೊಬ್ಬರು ಕೇಳಿದ್ದರು. ನಿಮ್ಮ ಸಖಿಯರೆಲ್ಲ ಬೆಳ್ಳಗಿದ್ದಾರೆ. ಅವರಲ್ಲೇ ಒಬ್ಬರನ್ನು ಶಾಕುಂತಲೆಯ ಪಾತ್ರಕ್ಕೆ ಆಯ್ಕೆ ಮಾಡಬಹುದಿತ್ತಲ್ಲ ಎಂದು. ‘ಶಾಕುಂತಲೆ ಯಾರು, ನೀವು ನೋಡಿದ್ದೀರಾ? ನನಗಂತೂ ಗೊತ್ತಿಲ್ಲ. ಕಟ್ಟಿಕೊಟ್ಟ ಕಲ್ಪನೆಯಂತೆಯೇ ಅವಳಿದ್ದಳು ಎನ್ನುವುದಕ್ಕೆ ಏನು ಗ್ಯಾರಂಟಿ? ನನ್ನಂತೆ ಇದ್ದಿರಬಹುದಲ್ಲ ಆಕೆಯೂ ಕಾಡಿನಿಂದಲೇ ಬಂದವಳೇ’ ಎಂದಿದ್ದೆ. ಕ್ರಮೇಣ ನನಗೆ ಇಂಥ ಪ್ರಶ್ನೆಗಳು ಅಭ್ಯಾಸವಾಗುತ್ತಾ ಹೋದವು. ‘ಶಾಕುಂತಲೆ’ಯ ದೊಡ್ಡ ದೊಡ್ಡ ಪೋಸ್ಟರ್ಗಳು ನಿಲ್ಲುತ್ತಿದ್ದಂತೆ ಪ್ರಸಿದ್ಧಿಗೆ ಬರತೊಡಗಿದೆ ಎನ್ನುವುದನ್ನು ಈಗ ಹೇಳಬಲ್ಲೆ. ಆದರೆ ಆಗೆಲ್ಲ ಇದು ಅರಿವಿರಲಿಲ್ಲ.
ಮತ್ತೊಮ್ಮೆ ಚನ್ನಕೇಶವ, ಶ್ರೀಧರಣ್ಣ (ಭಿನ್ನಷಡ್ಜ)ನವರನ್ನು ಕರೆದುಕೊಂಡು ಹೆಣ್ಣು ಕೇಳಲು ನಮ್ಮ ಕಾಡಿಗೆ ಬಂದರು. ಇಡೀ ಕುಟುಂಬವನ್ನು ಸೇರಿಸಿದ್ದೆ. ಆದರೆ ನಾನು ಆ ಜಾಗದಲ್ಲಿರಲಿಲ್ಲ. ಅಪ್ಪನಿಗೆ ಈ ಸಂಬಂಧ ಇಷ್ಟವಾಗಲಿಲ್ಲ. ನೀವು ಕಲಾವಿದರು, ಒಮ್ಮೆ ಕೆಲಸವಿದ್ದರೆ ಇದ್ದೀತು ಇಲ್ಲವಾದರೆ ಇಲ್ಲ. ಒಟ್ಟಾರೆ ಅತಂತ್ರ ಬದುಕು ನಿಮ್ಮದು. ಹೀಗಿರುವಾಗ ನನ್ನ ಮಗಳನ್ನು ಬೆಂಗಳೂರಿನಲ್ಲಿ ಹೇಗೆ ನೋಡಿಕೊಳ್ಳುತ್ತೀರಿ? ಬೇರೆ ಏನೂ ಬೇಡ. ಆದರೆ, ಇರೋದಕ್ಕೆ ಒಂದು ಸ್ವಂತ ಮನೆಯಾದರೂ ಬೇಕಲ್ಲ ಎಂದರಂತೆ. ಕೊನೆಗೆ, ಇಷ್ಟು ಕೇಳಿಕೊಳ್ಳುತ್ತಿದ್ದಾರೆ ಎಂದರೆ ಇದು ಪ್ರೀತಿಗೆ ಸಂಬಂಧಿಸಿದ್ದು ಎಂದು, ಅಪ್ಪ ಒಪ್ಪಿಕೊಂಡರಂತೆ.
ನನಗಾಗ 21 ವರ್ಷ. ಚನ್ನಕೇಶವರ ಊರು ಮಂಡ್ಯ. ತಮ್ಮ ಅಕ್ಕನ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಮಂಡ್ಯದ ಗೌಡರ ಖದರಿನ ಪರಿಸರ. ಬಹಳ ವರ್ಷಗಳಿಂದ ತಮ್ಮ ಮನೆಯವರ ಸಂಪರ್ಕದಿಂದ ಚನ್ನಕೇಶವ ದೂರವಿದ್ದ ಕಾರಣ, ‘ಯಾರಯ್ಯ ನೀನು?’ ಎಂದುಬಿಟ್ಟರು. ಬಂದವನು ತನ್ನ ತಮ್ಮ ಎಂದು ಗೊತ್ತಾಗುತ್ತಿದ್ದಂತೆ ಆ ಮನೆಯಲ್ಲಿ ಅಳು, ಖುಷಿ ಎಲ್ಲವೂ ಒಮ್ಮೆಲೆ ಉಕ್ಕಿಹರಿಯಿತು. ನಂತರ ಅವರ ಅಕ್ಕ, ನಮ್ಮನ್ನು ಕಲ್ಲಳ್ಳಿಗೆ ಕರೆದುಕೊಂಡು ಹೋದರು. ಅಲ್ಲೊಂದು ಚಿಕ್ಕ ಕೋಣೆಯಲ್ಲಿ ಅವರಮ್ಮ ಒಬ್ಬರೇ ಬಾಡಿಗೆಗೆ ಇದ್ದರು. ಅವರೊಬ್ಬರೇ ಕುಳಿತುಕೊಳ್ಳುವಷ್ಟು ಜಾಗವಿದ್ದ ಅತೀ ಚಿಕ್ಕ ಕೋಣೆಯದು. ಅವರ ತಲೆಗೂದಲೆಲ್ಲ ಜಡೆಗಟ್ಟಿದ್ದವು. ‘ಏನೋ ಬದುಕಿದಿಯೇನೋ?’ ಅವರಮ್ಮ ಕೇಳಿದ ಮೊದಲ ಪ್ರಶ್ನೆ. ನಂತರ ನನ್ನೆಡೆ ನೋಡಿ, ‘ಇವರ್ಯಾರೋ ಬೂಬಮ್ಮನಾ?’ ಮರುಪ್ರಶ್ನೆ. ಚನ್ನಕೇಶವ ನನ್ನ ಬಗ್ಗೆ ಹೇಳುತ್ತ, ಮದುವೆ ವಿಷಯ ತಿಳಿಸಿದರು. ಸ್ವಲ್ಪ ಹೊತ್ತು ಸುಮ್ಮನಾದರು ಅವರಮ್ಮ. ಈಗ ಬಂದ ಮಗ ಮತ್ತೆ ದೂರ ಹೋದರೆ? ಎಂಬ ಆತಂಕಕ್ಕೆ ಇರಬೇಕು, ನಮ್ಮ ಮದುವೆಯನ್ನು ಒಂದೇ ಭೇಟಿಯಲ್ಲಿ ಅವರು ಒಪ್ಪಿಕೊಂಡುಬಿಟ್ಟರು. ಎರಡೂ ಸಂಪ್ರದಾಯಗಳಲ್ಲಿ ಎರಡು ಸಲ ನಮ್ಮ ಮದುವೆಯಾಯಿತು. ಒಂದು ಬಸ್ಸಿನ ತುಂಬಾ ಮಂಡ್ಯದ ಮಂದಿ ನಮ್ಮ ಕಾಡಿಗೆ ಮದುವೆಗೆ ಬಂದಿದ್ದರು.
ನಂತರ ಸಂಸಾರ ಹೂಡಲು ಜಾಗ ಬೇಕಲ್ಲ? ಮದುವೆಯಾದ ಮೇಲೆ ಗಂಡನ ಮನೆಗೆ ಹೋಗುವುದು ಸಂಪ್ರದಾಯ, ಆದರೆ ಚನ್ನಕೇಶವ ಆ ತನಕ ಬೆಂಗಳೂರಿನಲ್ಲಿ ಮನೆಯನ್ನೇ ಮಾಡಿರಲಿಲ್ಲವಲ್ಲ… ನಾನು ಅಮ್ಮನ ಮನೆಯಲ್ಲೇ ಸ್ವಲ್ಪ ದಿನ ಉಳಿದೆ. ಕೆಲ ದಿನಗಳ ನಂತರ ಬೆಂಗಳೂರಿನಲ್ಲಿ ಚನ್ನಕೇಶವರ ಸ್ನೇಹಿತರೊಬ್ಬರು ತಮ್ಮ ಸಣ್ಣ ಮನೆಯೊಂದನ್ನು ಬಾಡಿಗೆಗೆ ಕೊಟ್ಟರು. ಮನೆಗೆ ಬೇಕಾದ ಕೆಲ ಅತ್ಯವಶ್ಯಕ ಸಾಮಾನುಗಳನ್ನು ಜೋಡಿಸಿಟ್ಟುಕೊಂಡ ಚನ್ನಕೇಶವ ನನ್ನನ್ನು ಕರೆದುಕೊಂಡು ಬಂದರು. ಆ ದಿನ, ನನ್ನನ್ನು ಬಾಗಿಲಿನಾಚೆ ನಿಲ್ಲಿಸಿದ ಚನ್ನಕೇಶವ ಮತ್ತು ಅವರ ಸ್ನೇಹಿತ ಜಹಾಂಗೀರ್ (ಪಾಪ ಪಾಂಡು ಹಾಸ್ಯ ಧಾರಾವಾಹಿ ಖ್ಯಾತಿಯ ರಂಗಕಲಾವಿದ) ಸೇರಿನಲ್ಲಿ ಅಕ್ಕಿ, ಬೆಲ್ಲವನ್ನು ಜೋಡಿಸಿಟ್ಟರು. ಅದು ಬದುಕಿನಲ್ಲಿ ಮರೆಯಲಾಗದ ಭಾವನಾತ್ಮಕ ಸನ್ನಿವೇಶ. ಸೇರು ಒದ್ದು ಮನೆಯೊಳಬಂದೆ. ಆದರೆ ಮದುವೆಯಾಗಿ ನಮ್ಮದೇ ಒಂದು ಮನೆ ಅಂತಾದ ನಂತರವೂ ಮತ್ತೊಂದು ರೀತಿಯ ತೊಳಲಾಟಕ್ಕೆ ಬಿದ್ದೆ.
ಕಾಡಿನಲ್ಲಿ ಹುಟ್ಟಿನಿಂದ ನೀರಿನೊಂದಿಗೇ ಬೆಳೆದ ನನಗೆ ಬೆಂಗಳೂರಿನ ಲಗ್ಗೆರೆಯಲ್ಲಿ ಹದಿನೈದು ದಿನಕ್ಕೊಮ್ಮೆ ನೀರುವ ತುಂಬಿಟ್ಟುಕೊಳ್ಳುವ ಸಂಕಷ್ಟ ಎದುರಾಯಿತು. ಚಿಕ್ಕ ಚಿಕ್ಕ ಲೋಟ, ಚೊಂಬುಗಳಲ್ಲೂ ನೀರು ತುಂಬಿಟ್ಟುಕೊಳ್ಳಬೇಕಾಗುತ್ತಿತ್ತು. ನೀರೆಂದರೆ ಅಮೃತವೇ ಆಗಿಹೋಯಿತು. ಹೀಗಾಗಿ ನೆಂಟರನ್ನು ಮನೆಗೇ ಕರೆಯುತ್ತಿರಲಿಲ್ಲ. ಒಂದೊಮ್ಮೆಯಂತೂ ಈ ಬೆಂಗಳೂರನ್ನೂ ಚನ್ನಕೇಶವರನ್ನು ಬಿಟ್ಟು ವಾಪಾಸು ಕಾಡಿಗೆ ಹೋಗಿಬಿಡಬೇಕು ಎನ್ನಿಸುತ್ತಿತ್ತು. ಹಾಸಿಕೊಳ್ಳಲು ಇದ್ದದ್ದು ಅಮ್ಮ ಕೊಟ್ಟ ಒಂದು ಕಂಬಳಿ ಮಾತ್ರ. ಅದು ಈಗಲೂ ಇದೆ. ಇನ್ನು ಗ್ಯಾಸ್ ಹಚ್ಚುವುದೆಂದರೆ ನನಗೆ ಎಲ್ಲಿಲ್ಲದ ಭಯ. ಹೊರಗೆ ಹೋದ ಚನ್ನಕೇಶವ ಮನೆಗೆ ವಾಪಸಾದಾಗಲೇ ನನ್ನ ಅಡುಗೆ ಶುರುವಾಗಬೇಕು. ಅಮ್ಮನ ಬಳಿ ಹೋಗಿ ಇದೆಲ್ಲ ಹೇಳಿದರೆ ಆಕೆ ಬೇಜಾರು ಮಾಡಿಕೊಳ್ಳುತ್ತಾಳೆ. ಇನ್ನು ಅಪ್ಪನ ಬಳಿ ಹೇಳುವಂತೆಯೇ ಇಲ್ಲ!
ಹೀಗೆ ಒಂದು ಹಂತಕ್ಕೆ ಸ್ವಲ್ಪ ಗಟ್ಟಿಯಾದೆ. ಸಂಗೀತ ಕಲಿಯುವುದು ನನ್ನ ಗುರಿಯಾಗಿತ್ತು. ಮದುವೆಯಾಗಿ ಹದಿನೈದು ದಿನಗಳಾಗಿದ್ದವಷ್ಟೇ. ದತ್ತಾತ್ರೇಯ ಗರೂಡ ಅವರ ಬಳಿ ಗುರು ಶಿಷ್ಯ ಪರಂಪರೆಯಲ್ಲಿ ಸಂಗೀತ ಕಲಿಯಲು ನನ್ನನ್ನು ಸೇರಿಸಿ, ತಾವು ಫೆಲೋಶಿಪ್ ಮಾಡಲು ಲಂಡನ್ಗೆ ಹೋದರು ಚನ್ನಕೇಶವ. ಬಸ್ಗಳ ನಂಬರಗಳನ್ನು ಅವರು ಬರೆದಿಟ್ಟಿದ್ದರಿಂದ ಮತ್ತು ಅವರಿರುವ ತನಕ ನನ್ನನ್ನು ಕರೆದುಕೊಂಡೇ ಬಸ್ಸಿನಲ್ಲಿ ಓಡಾಡಿದ್ದರಿಂದ ಗುರುಗಳ ಮನೆಗೆ ಹೋಗಿಬರುವುದು ಅಷ್ಟೇನೂ ಕಷ್ಟವೆನ್ನಿಸುತ್ತಿರಲಿಲ್ಲ. ಆದರೆ ತಲುಪಲು ಬಸ್ ಏರಬೇಕಲ್ಲ! ಅದು ಹೊಸ ಆತಂಕ ಸೃಷ್ಟಿಸತೊಡಗಿತು. ಜನರನ್ನು ಕಂಡರೆ ಭಯ! ಈ ಆಫ್ರಿಕದವರು ಇಲ್ಲಿ ಬಂದು ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ. ಯಾಕಾದರೂ ಬರುತ್ತಾರೋ? ನೋಡಿ ಅವರ ಆಕಾರ, ನೋಡಿ ಅವರ ಬಣ್ಣ, ನೋಡಿ ಅವರ ಕೂದಲು… ಇಂಥ ಮಾತು ಕೇಳಿ ಕೇಳಿ ನಾನು ಬಾಯಿಬಿಡಲೇಬೇಕಾಗುತ್ತಿತ್ತು. ಬಸ್ಸು ಹತ್ತಿದರೆ ಸಾಕು ನನ್ನನ್ನು ನಾನು ಸಮರ್ಥಿಸಿಕೊಳ್ಳುವ ಸಂದರ್ಭಗಳು ಅನಾಯಾಸವಾಗಿ ಸೃಷ್ಟಿಯಾಗುತ್ತಿದ್ದವು. ನಾನೂ ನಿಮ್ಮ ಹಾಗೆ ಕನ್ನಡದವಳೇ ಎಂದು ಅರ್ಥ ಮಾಡಿಸಿದಾಗ ಸುಮ್ಮನಾಗುತ್ತಿದ್ದರು. ಆದರೆ ಬಸ್ ಎಂದರೆ ಪ್ರತೀ ಸಲ ಬೇರೆ ಬೇರೆ ಪ್ರಯಾಣಿಕರೇ ಅಲ್ಲವೆ?
ಇನ್ನು ಕಂಡಕ್ಟರ್ಗಳು, ಟಿಕೆಟ್ ಮಾತ್ರ ಕೊಡುತ್ತಿದ್ದರು, ಚಿಲ್ಲರೆ ವಾಪಾಸು ಮಾಡುತ್ತಲೇ ಇರಲಿಲ್ಲ. ಎಷ್ಟು ದಿನ ಸುಮ್ಮನಿರಲಿ? ಚಿಲ್ಲರೆ ವಾಪಾಸು ಮಾಡಿ ಎನ್ನತೊಡಗಿದೆ. ‘ಏನಮ್ಮಾ ನಿನಗೂ ಕನ್ನಡ ಬರುತ್ತಾ, ಅದು ಇಷ್ಟು ಸ್ಪಷ್ಟವಾಗಿ?’ ಎನ್ನುತ್ತಿದ್ದರು. ಹೌದು ನಾನು ಕನ್ನಡಿಗಳು, ನನಗೆ ಓದು ಬರಹವೂ ಗೊತ್ತು. ಆದರೆ ನಿಮ್ಮ ಈ ವರ್ತನೆಯಿಂದ ನನಗೆ ನಿಮ್ಮ ‘ಓದಿನ’ ಬಗ್ಗೆ ಅನುಮಾನ ಉಂಟಾಗುತ್ತಿದೆಯಲ್ಲ? ಎಂದು ಮರುಪ್ರಶ್ನಿಸಲು ಕಲಿತೆ. ಕ್ರಮೇಣ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಬೇಕೆಂದರೆ ಹೇಗಿರಬೇಕು, ಎದುರಾಗುವ ಪ್ರಶ್ನೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕಲಿತೆ.
ಸಂಗೀತ ಗುರು ಗರುಡರು ಬಹಳ ಶಿಸ್ತುಬದ್ಧ. ನಾಲ್ಕು ವರ್ಷ ಅಲಂಕಾರ, ಜಂಟಿಸರಳಿಗಳನ್ನೇ ಹೇಳಿಕೊಟ್ಟರು. ವರ್ಷಪೂರ್ತಿ ಒಂದೇ ರಾಗ. ಸ್ವತಂತ್ರವಾಗಿ ಆಲಾಪಿಸುವುದನ್ನು ಯಾವಾಗ ಕಲಿಯುತ್ತೇನೋ ಎಂಬ ಯೋಚನೆ ನನ್ನಲ್ಲಿ ಯಾವಾಗಲೂ ಇರುತ್ತಿತ್ತು. ಬೆಳಗಿನ ರಾಗವನ್ನು ಬೆಳಗ್ಗೆಯೇ ಕಲಿಸುತ್ತಿದ್ದರು, ಮಧ್ಯಾಹ್ನದ ರಾಗ ಮಧ್ಯಾಹ್ನ, ಸಂಜೆಯ ರಾಗ ಸಂಜೆಗೆ. ಅರ್ಧಗಂಟಗೆ ನೀನಿಲ್ಲಿರಬೇಕು ಎಂದು ಫರಮಾನು ಹೊರಡಿಸಿಬಿಟ್ಟರೆ ನಡುಗಿಹೋಗಿಬಿಡುತ್ತಿದ್ದೆ. ಹೇಗಪ್ಪಾ ಬಸ್ಸಿನಲ್ಲಿ ಅವರ ಮನೆ ತಲುಪುವುದು? ಈ ಬೆಂಗಳೂರು ಟ್ರಾಫಿಕ್ಕು ಬೇರೆ ಎಂದು. ವೇಳೆ ಓಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡಿರುತ್ತಿತ್ತು. ಸಮಯಕ್ಕೆ ಸರಿಯಾಗಿ ತಲುಪಿ ಗುರುಗಳ ಮೂಡ್ ಬದಲಾಗಂದಂತೆ ಇರಲಿ ಎಂದು ಮನಸ್ಸಿನೊಳಗೇ ದೇವರನ್ನು ಕೇಳಿಕೊಳ್ಳುತ್ತಿದ್ದೆ. ಒಮ್ಮೆ ನನಗೂ ಮಿರಜಿನಿಂದ ತಂಬೂರಿ ತರಿಸಿಕೊಟ್ಟರು. ನನ್ನದೇ ತಂಬೂರಿಯನ್ನು ಹೊಂದುವ ಆ ಅನುಭವ ನಿಜಕ್ಕೂ ಅಪೂರ್ವ. ನಂತರ ಅವರದೊಂದು ಭಜನೆಯ ಗುಂಪಿನಲ್ಲಿ ನನ್ನನ್ನೂ ಸೇರಿಸಿದರು. ನಮ್ಮೊಂದಿಗೆ ಇವಳೂ ಒಬ್ಬಳು ಎಂದು ಉಳಿದವರೆಲ್ಲ ನನ್ನನ್ನು ಕಾಣುತ್ತಾ ಹೋದಂತೆ ಆತ್ಮವಿಶ್ವಾಸ ಹೆಚ್ಚಿತು.
ಎರಡು ತಿಂಗಳ ನಂತರ ಚನ್ನಕೇಶವ ಲಂಡನ್ನಿಂದ ಬೆಂಗಳೂರಿಗೆ ವಾಪಾಸಾದರು. ಅಷ್ಟೊತ್ತಿಗೆ ಸ್ವತಂತ್ರವಾಗಿ ಬಸ್ಸಿನಲ್ಲಿ ಎಲ್ಲೆಂದರಲ್ಲಿ ಓಡಾಡುವುದನ್ನು ಕಲಿತಿದ್ದೆ. ಸಂಗೀತ ಕಛೇರಿಗಳನ್ನು ಕೇಳಲು ಹೋಗುವುದು, ಗುರುಗಳಿಗೆ ತಂಬೂರಿ ಸಾಥ ಕೊಡಲು ಕಾರ್ಯಕ್ರಮಗಳಿದ್ದಲ್ಲಿ ಹೋಗುವುದು ಹೀಗೆ. ಮಗ ಹುಟ್ಟಿದ. ಮನೆಯಲ್ಲೇ ರಿಯಾಝ್ ಮಾಡತೊಡಗಿದೆ. ಅಷ್ಟೊತ್ತಿಗೆ ಮಧ್ಯಲಯದಲ್ಲಿ ಖಯಾಲ್ಗಳನ್ನು ಹಾಡುತ್ತ ಆಲಾಪಿಸುವುದನ್ನು ಕಲಿತಿದ್ದೆ. ಒಂದಿಷ್ಟು ಠಪ್ಪಾ ಠುಮ್ರಿಗಳ ಪರಿಚಯ ಅದಾಗಲೇ ಆಗಿತ್ತು. ಇನ್ನು ಸಂಸಾರ ಕಟ್ಟಿಕೊಳ್ಳುವ ಭರದಲ್ಲಿ ನಾಟಕ ಉಳಿಯುತ್ತದೆಯೇ, ಕೈಹಿಡಿಯುತ್ತದೆಯೆ?
ನನ್ನದು ಬರೀ ಕನ್ನಡ ಮಾಧ್ಯಮ. ಮಗನದು ಇಂಗ್ಲಿಷ್ ಮಾಧ್ಯಮ. ಚನ್ನಕೇಶವ ಇದ್ದಾಗ ಹೋಂವರ್ಕ್ ಕಷ್ಟವೆನ್ನಿಸುತ್ತಿರಲಿಲ್ಲ. ಆದರೆ ನಾನೊಬ್ಬಳೇ ಇದ್ದಾಗ, ಇದರ ಅರ್ಥವೇನು ಎಂದು ಮಗ ಕೇಳಿದಾಗ ಬಹಳ ಸಂಕಟವಾಗುತ್ತಿತ್ತು. ಕೊನೆಗೆ ಅಸಹಾಯಕತೆ ಮಗನಿಗೂ ಅರ್ಥವಾಯಿತು. ಕಲಿಕೆಗೆ ಯಾವ ಹಂಗು? ನಿಧಾನಕ್ಕೆ ಇಂಗ್ಲಿಷ್ ಕಲಿಯತೊಡಗಿದೆ. ಈ ಕ್ಷಣ ಯೋಚಿಸಿದಾಗ ಅನ್ನಿಸುತ್ತಿದೆ, ಚನ್ನಕೇಶವ ನನ್ನನ್ನು ಹೂವಿನಂತೆ, ಮಗುವಿನಂತೆ ನೋಡಿಕೊಂಡಿದ್ದು ತುಸು ಹೆಚ್ಚೇ ಆಯಿತಾ? ಹೌದೇನೋ. ಅದು ಯಾವಾಗಲೂ ಅಪಾಯ! ಹೊರಗಿನ ಪ್ರಪಂಚದ ಅರಿವೇ ಇರುವುದಿಲ್ಲ ಹೀಗಾದಾಗ.
‘ದಿ ಟ್ರೇನ್’ ಎಂಬ ಕನ್ನಡ ಕಿರುಚಿತ್ರದಲ್ಲಿ ಅಮ್ಮನ ಪಾತ್ರ ಮಾಡುವ ಮೂಲಕ ಮೊದಲ ಸಲ ಕ್ಯಾಮೆರಾದ ಮುಂದೆ ನಿಂತೆ. ನಾನು ನಾಟಕದ ಹಿನ್ನೆಲೆಯವಳು, ಇದೆಲ್ಲ ಕಷ್ಟ ಅನ್ನಿಸುತ್ತದೆ ಎಂಬ ಹಿಂಜರಿಕೆಯಲ್ಲೇ ಪಾತ್ರ ನಿರ್ವಹಿಸಿದೆ. ಆದರೆ ಈ ಅವಕಾಶ ಒಂದು ರೀತಿ ಖುಷಿ ತಂದುಕೊಟ್ಟಿತು. ಇನ್ನು ತೆರೆಕಾಣಬೇಕಿರುವ ‘ಸಲಗ’ ಸಿನೆಮಾದ ಬಗ್ಗೆ ಹೇಳುವುದಾದರೆ, ಚನ್ನಕೇಶವ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರೌಡಿಯ ಪಾತ್ರ. ಈ ಸಿನೆಮಾದಲ್ಲಿ ನಾನು ಹಾಡು ಮತ್ತು ನೃತ್ಯದ ಮೂಲಕ ಪಾಲ್ಗೊಳ್ಳುವ ಹಿಂದೆ ಒಂದು ಕಥೆ ಇದೆ. ಒಮ್ಮೆ ದುನಿಯಾ ವಿಜಯ್ ಅವರು ಚನ್ನಕೇಶವರೊಂದಿಗೆ ಮಂಚೀಕೆರೆಗೆ ಬಂದು ಒಂದೆರಡು ದಿನ ನಮ್ಮೊಂದಿಗಿದ್ದರು. ಅತಿಥಿಗಳು ಬಂದಾಗ ನಾವೆಲ್ಲ ಹಾಡುವುದು ರೂಢಿ. ಅವರಿಗೆ ಇಷ್ಟವಾಯಿತು. ಸ್ಟುಡಿಯೋಗೆ ಬಂದು ಹಾಡಲು ಆಹ್ವಾನಿಸಿದರು. ನನ್ನ ಚಿಕ್ಕಮ್ಮನ ಮಗ ರಿದಮ್ ಸಾಥಿಗೆ ಬಂದ. ನನ್ನ ಕಸಿನ್ಗಳು ಹಾಡಲು ನೃತ್ಯಮಾಡಲು ಜೊತೆಯಾದರು. ಒಟ್ಟು 2-3 ಹಾಡುಗಳನ್ನು ಹಾಡಿಸಿದರು. ಪ್ರೊಮೋಷನಲ್ ಸಾಂಗ್ ಇದೆಯಲ್ಲ, ಇದನ್ನು ನನ್ನ ಮುತ್ತಜ್ಜಿ ಹಾಡುತ್ತಿದ್ದರಂತೆ. ಸಂದರ್ಭಕ್ಕೆ ತಕ್ಕಂತೆ ಊರುಗಳ ಹೆಸರನ್ನು ಬದಲಾಯಿಸಿಕೊಂಡಿದ್ದೇವಷ್ಟೇ. ಆದರೆ ಈತನಕವೂ ನಾವು ಸಿದ್ದಿಗಳು ಹೊಸ ಹಾಡನ್ನು ಕಟ್ಟಿದ್ದೇ ಇಲ್ಲ. ಕೊಂಕಣಿ, ಹಿಂದಿ, ಮರಾಠಿ, ಕನ್ನಡ ಮಿಶ್ರಿತ ಸಾಹಿತ್ಯ ನಮ್ಮ ಹಾಡುಗಳಲ್ಲಿರುತ್ತದೆ. ಇದರಲ್ಲಿ ಬರುವ ಟಿರಿಂಗ್ ಮಿರಿಂಗ್ ಟಿಶ್ಯಾ ಸಾಲು ಅದೊಂಥರಾ ಕಚಗುಳಿಯಂತೆ. ಅನುಭವಿಸಲು ಮಾತ್ರ, ಅರ್ಥಕ್ಕೆ ಸಿಗುವಂಥದ್ದಲ್ಲ.
ನಮ್ಮ ಹಾಡು, ನಮ್ಮ ಕುಣಿತ, ಆ ಧಾಟಿ, ಆ ಹೆಜ್ಜೆ, ಆ ಸಾಹಿತ್ಯ ಒಟ್ಟಾರೆ ಆ ಮೂಲಕ್ಕೆ ಧಕ್ಕೆ ಬಾರದ ಹಾಗೆ ಪ್ರಸ್ತುತಪಡಿಸುವ ಅವಕಾಶವನ್ನು ದುನಿಯಾ ವಿಜಯ್ ಅವರು ಕಲ್ಪಿಸಿಕೊಟ್ಟಿದ್ದಾರೆ. ಈ ದೊಡ್ಡ ಪರದೆ ಮೇಲೆ ನಾನು ಕಾಣಿಸಿಕೊಂಡ ನಂತರ ನಮ್ಮ ಜನ ನನ್ನನ್ನು ನೋಡುವ ರೀತಿಯನ್ನು ಬದಲಾಯಿಸಿಕೊಂಡಿದ್ದಾರೆ ಎನ್ನುವುದು ಅವರ ಬೆರಗಿನ ಮಾತುಗಳನ್ನು ಫೋನಿನಲ್ಲಿ ಕೇಳುವಾಗ ಅನುಭವಕ್ಕೆ ಬರುತ್ತದೆ. ಅವರಿಗೆಲ್ಲ ನನ್ನದು ಒಂದೇ ಉತ್ತರ; ಹೌದು, ಮೊದಲಿನಿಂದಲೂ ಮಿಂಚುತ್ತಲೇ ಬಂದಿದ್ದೀನಿ. ಈಗ ಪರದೆ ಮೇಲಷ್ಟೇ ಅಲ್ಲ. ಈ ಮಿಂಚಿನ ಹಿಂದೆ ಭೂಮಿ-ಆಕಾಶದಂತಿದ್ದವರು ನನ್ನ ಚನ್ನಕೇಶವ. ಆ ದಿನ ಸ್ಟೂಡಿಯೋಗೆ ಹೋಗುವ ಮೊದಲು, ‘ನನಗಿದೆಲ್ಲ ಇಷ್ಟವಿಲ್ಲ. ಈ ದುನಿಯಾದ ಸಹವಾಸವೇ ಬೇಡ ಎಂದೆ. ಆದರೆ ಅವರು ಒತ್ತಾಯ ಮಾಡಿ, ಅಕ್ಷರಶಃ ಕೈಹಿಡಿದು ಎಳೆದುಕೊಂಡು ಹೋದರು.’ ಒಂದರ್ಥದಲ್ಲಿ ಒಂದು ಹಂತದಲ್ಲಿ ನನಗಿದ್ದ ಸಂಕೋಚವನ್ನು ಅವರು ಈ ಮೂಲಕ ತೊಡೆದರೇನೋ ಎನ್ನಿಸುತ್ತದೆ.
ಈ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸುತ್ತಿದೆ. ನಾಲ್ಕು ವರ್ಷಗಳ ಹಿಂದೆ ಚನ್ನಕೇಶವರೊಂದಿಗೆ ಅಮೆರಿಕದ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಬೇರೆ ಬೇರೆ ದೇಶಗಳಲ್ಲಿರೋ ಸಿದ್ದಿ ಜನಾಂಗದವರನ್ನೆಲ್ಲ ಒಂದುಗೂಡಿಸಿ ಸಮಾಲೋಚನೆ ನಡೆಸುವ ಕಾರ್ಯಕ್ರಮ ಅದಾಗಿತ್ತು. ಭಾರತದಲ್ಲಿ ಸಿದ್ದಿಗಳೆಂದರೆ ಉತ್ತರ ಕನ್ನಡದ ಕಾಡಿನಲ್ಲಿರುವ ನಾವುಗಳು ಮಾತ್ರ. ಒಂದು ಸೆಷನ್ನಲ್ಲಿ ಎಲ್ಲರೂ ಅವರವರ ಕಥೆಗಳನ್ನು ಹೇಳಿಕೊಳ್ಳಬೇಕಿತ್ತು. ಕರಿಯರ ಗುಲಾಮಿತನಕ್ಕೆ ಇರುವ ಇತಿಹಾಸ ಒಂದುಕಡೆ. ಆದರೆ, ಇತ್ತೀಚಿನ ವರ್ಷಗಳಲ್ಲೂ ಬಿಳಿಯರು ಕರಿಯರನ್ನು ಅಸ್ಪೃಶ್ಯರಂತೆ ಕಾಣುತ್ತ ಬಂದ ಘಟನೆಗಳನ್ನು ಕೇಳಿ ನಿಜಕ್ಕೂ ಬಹಳ ಬೇಸರವಾಯಿತು; ಬಸ್ಸಿನಲ್ಲಿ ಓಡಾಡಿದಾಗ, ಬೀದಿಯಲ್ಲಿ ಓಡಾಡಿದಾಗ ಬಿಳಿಯರು ನೀರು ಎರಚಿ ಶುದ್ಧಿ ಮಾಡುತ್ತಿದ್ದ ಪ್ರಸಂಗಗಳು ಇತ್ಯಾದಿ. ನಮಗೆ ಇಲ್ಲಿ ಬಡತನವಿದ್ದರೂ ಎಷ್ಟೋ ಪಾಲು ನೆಮ್ಮದಿಯಿಂದ ಇದ್ದೇವೆ. ಆದರೆ ವರ್ಣಭೇದಕ್ಕೆ ವಿದೇಶದಲ್ಲಿ ಇನ್ನೂ ಇಷ್ಟೊಂದು ಆಳ ಬೇರುಗಳಿವೆಯೇ? ಮನಸ್ಸು ತಲ್ಲಣಿಸಿತು.
ನಮಗಿಲ್ಲಿ ಬಣ್ಣ ಮತ್ತು ಕೂದಲು ಮಾತ್ರ ದೊಡ್ಡ ಸಮಸ್ಯೆ. ಆದರೆ ಅವರಿಗೆ? ಪ್ರತಿಯೊಂದೂ ಸಮಸ್ಯೆಯೇ. ಹಾಗಿದ್ದರೆ ನೀವು ಹೇಗೆ ಬಲಗೊಳ್ಳುತ್ತ ಬಂದಿರಿ ಎಂದು ಕೇಳಿದಾಗ, ‘ಯಾವುದು ಬೇಡ ಎಂದು ಬಿಳಿಯರು ಹೇಳುತ್ತ ಬಂದರೋ ಅದನ್ನೇ ಮಾಡುತ್ತ ಬಂದೆವು. ಅಂದರೆ, ಶಿಕ್ಷಣ ಪಡೆದುಕೊಂಡೆವು. ಶಿಕ್ಷಣ ಎನ್ನುವುದು ಬಹಳ ದುಬಾರಿ ನಿಮಗಿದೆಲ್ಲ ಕೈಗಟಕುವುದಿಲ್ಲ ಎಂದು ಅವರು ಹೇಳಿದಾಗಲೂ ನಾವು ಧೃತಿಗೆಡಲಿಲ್ಲ. ಹಾಗಾಗಿಯೇ ನಮ್ಮ ಮನೆಗಳಲ್ಲೂ ಈಗ ಡಾಕ್ಟರುಗಳಿದಾರೆ, ಎಂಜನಿಯರುಗಳಿದಾರೆ, ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರು ಇದ್ದಾರೆ’ ಎಂದರು. ಈ ಅನುಭವವಂತೂ ನನಗೆ ನಿಜಕ್ಕೂ ಕಣ್ಣುತೆರೆಯಿಸಿತು.
ಕಲೆ ಎನ್ನುವುದು ಧೈರ್ಯ ತಂದುಕೊಡುತ್ತದೆ. ಇದರಲ್ಲಿ ಹಣ ಸಿಗುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಚನ್ನಕೇಶವ ನನಗೆ ಕಲೆಯ ಮೂಲಕ ಹೊಸ ಜಗತ್ತನ್ನು ತೋರಿಸಿದರು. ಈ ಎಲ್ಲ ಜೀವನಾನುಭವಗಳೊಂದಿಗೆ ಮತ್ತು ನಾಟಕಗಳಲ್ಲಿ ದೊರೆಯುತ್ತಿದ್ದ ಮುಖ್ಯ ಪಾತ್ರಗಳೊಂದಿಗೆ ನನ್ನನ್ನು ನಾ ಮಂಥನಕ್ಕಿಳಿಸಿಕೊಂಡು ನನ್ನೊಳಗನ್ನು ವಿಶಾಲಗೊಳಿಸಿಕೊಳ್ಳುವ ಅವಕಾಶ ಅವರಿಂದ ದೊರೆತಿದ್ದು ಭಾಗ್ಯ. ಯಾರಿಗೇ ಆಗಲಿ, ಅಂಥ ಒಬ್ಬ ವ್ಯಕ್ತಿ ಜೊತೆಗಿದ್ದರೆ ಸಾಕು ಏನನ್ನೂ ಸಾಧ್ಯವಾಗಿಸಿಕೊಳ್ಳಬಹುದು ಎನ್ನುವ ಆತ್ಮವಿಶ್ವಾಸ ನಮಗರಿವಿಲ್ಲದೇ ಹುಟ್ಟಿಬಿಡುತ್ತದೆ. ಈಗ ಅವರಿಲ್ಲ. ಅವರು ಕಟ್ಟಿ ಹೋದ ‘ಲೋಕಚರಿತ’ ತಂಡವಿದೆ. ಸಂಗೀತ ಮತ್ತು ಫ್ಯಾಷನ್ ಡಿಸೈನಿಂಗ್ನಲ್ಲಿ ಮಾಡಿದ ಡಿಪ್ಲೋಮಾ ಕೋರ್ಸ್ ಕಲಿಕೆಯ ಅನುಭವ ನನ್ನೊಂದಿಗಿದೆ. ಸಾಕಷ್ಟು ಮಕ್ಕಳಿಗೆ ಸಂಗೀತ ಕಲಿಸಿಕೊಡುತ್ತಿದ್ದೆ, ಸದ್ಯಕ್ಕೆ ಕೊರೋನಾದಿಂದ ಸ್ಥಗಿತ. ಚನ್ನಕೇಶವ ತೋರಿಸಿದ ಕಲೆಯೊಂದೇ ನನ್ನೆದುರಿಗಿರುವುದು. ಅವರು ಯಾವತ್ತೂ ಗಂಡ ಎನ್ನಿಸಲೇ ಇಲ್ಲ, ಯಜಮಾನತನ ತೋರಿಸಲೇ ಇಲ್ಲ. ಗೆಳೆಯನಂತೆ ಇದ್ದರು.
ಆ ಶಾಕುಂತಲೆಯ ಕೆಂಬಣ್ಣ, ನೀಳಗೂದಲು, ಸಂಪಿಗೆಯೆಸಳಿನಂಥ ಮೂಗು ನನಗೆ ಬೇಕೆ?
(ಮುಗಿಯಿತು)
ಮೊದಲ ಭಾಗ : Kannada New Movie : ‘ಅಂದರ್ ಮಂಚೋಕೋಂಬೋ ಟಿಣಿಂಗ್ ಮಿಣಿಂಗ್ ಟಿಷ್ಯಾ!’
Published On - 1:56 pm, Wed, 11 August 21