Column: ವೈಶಾಲಿಯಾನ; ಸ್ವಾತಂತ್ರ್ಯ ಹೋರಾಟದ ಪುಟಗಳಿಂದ ಮರೆಯಾದ ಹನ್ನೆರಡು ಮಹಿಳಾ ಹೋರಾಟಗಾರ್ತಿಯರು

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಸಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಸರ್ವಸ್ವವನ್ನು ಮುಡಿಪಾಗಿಟ್ಟ ಹನ್ನೇರಡು ಮಹಿಳೆಯರನ್ನು ನೆನೆಯಲೇ ಬೇಕು

Column: ವೈಶಾಲಿಯಾನ; ಸ್ವಾತಂತ್ರ್ಯ ಹೋರಾಟದ ಪುಟಗಳಿಂದ ಮರೆಯಾದ ಹನ್ನೆರಡು ಮಹಿಳಾ ಹೋರಾಟಗಾರ್ತಿಯರು
Vaishaliyaana
Follow us
TV9 Web
| Updated By: ವಿವೇಕ ಬಿರಾದಾರ

Updated on: Aug 20, 2022 | 9:16 PM

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ಆಚರಣೆಗಳು ಎಲ್ಲೆಲ್ಲೂ ಕಳೆಗಟ್ಟುತ್ತಿರುವ ಈ ಸಂದರ್ಭದಲ್ಲಿ , ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದು, ಹುತಾತ್ಮರಾದ ಅನೇಕ ಧೀಮಂತ ವ್ಯಕ್ತಿಗಳನ್ನು ಸ್ಮರಿಸುತ್ತ, ಅವರಿಗೆ ನಮ್ಮ ಗೌರವಪೂರ್ವಕ, ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುವ ಪ್ರಕ್ರಿಯೆಯೂ ನಡೆದಿದೆ. ಈ ನಿಟ್ಟಿನಲ್ಲಿ ನಾವು ಅನೇಕ ಮಹಿಳೆಯರ ದಿಟ್ಟತನವನ್ನು, ದೇಶಪ್ರೇಮವನ್ನು, ಅವರ ಶ್ಲಾಘನೀಯ ಚಿಂತನೆಗಳನ್ನೂ ನೆನೆಸಿಕೊಳ್ಳಲೇಬೇಕು. ಕರ್ನಾಟಕದವರೇ ಆದ ಕಮಲಾದೇವಿ ಚಟ್ಟೋಪಾಧ್ಯಾಯ (೧೯೦೩-೧೯೮೮)ರವರ ಲೇಖನಗಳನ್ನು ತಿರುವಿ ಹಾಕುತ್ತಿದ್ದ ನನಗೆ ಅವರ The Awakening of Indian Women (೧೯೩೯) ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಯೆನ್ನಿಸಿತು. ೧೯೦೩ ರಲ್ಲಿ ಒಂದು ಶ್ರೀಮಂತ ಸಾರಸ್ವತ ದಕ್ಷಿಣ ಕನ್ನಡದ ಕುಟುಂಬದಲ್ಲಿ ಜನಿಸಿದ ಕಮಲಾದೇವಿಯವರು ಕ್ಯಾಥೊಲಿಕ್ ಕಾನ್ವೆಂಟು ಹಾಗೂ ಮಂಗಳೂರಿನ ಸೇಂಟ್ ಮೇರೀಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಎಳೆಯ ಪ್ರಾಯದಲ್ಲಿಯೇ ವಿವಾಹವಾಗಿ ಶಾಲೆಯಲ್ಲಿ ಓದುತ್ತಿರುವಾಗಲೇ ಬಾಲ ವಿಧವೆಯಾಗಿ, ನಂತರ ಕಟ್ಟುಪಾಡುಗಳ ಸಂಕೋಲೆಯನ್ನು ಮುರಿದು, ಸರೋಜಿನಿ ನಾಯ್ಡುರವರ ಸಹೋದರ ಕವಿ ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಪುನರ್ವಿವಾಹವಾದ ತರುವಾಯ ಆಕೆ ತನ್ನ ಪತಿಯೊಡನೆ ಇಂಗ್ಲೆಂಡಿಗೆ ತೆರಳಿ, ಲಂಡನ್ನಿನ ಬೆಡ್‌ಫೋರ್ಡ್ ಕಾಲೇಜಿನಲ್ಲಿ ಸಮಾಜ ಸೇವಾಶಾಸ್ತ್ರದ ಅಧ್ಯಯನ ಕೈಗೊಂಡರು.

ಈ ದಂಪತಿ ಯೂರೋಪಿನಾದ್ಯಂತ ಸಂಚರಿಸಿ, ರಂಗ ಕರ್ಮಿಗಳೊಡನೆ ಒಡನಾಡಿ, ಭಾರತಕ್ಕೆ ಹಿಂದಿರುಗಿದ ಮೇಲೆ ಅನೇಕ ನಾಟಕಗಳನ್ನೂ ಪ್ರದರ್ಶಿಸಿದರು. ಕಟ್ಟಾ ರಾಷ್ಟ್ರೀಯತಾವಾದಿಯಾಗಿದ್ದ ಕಮಲಾದೇವಿ ಭಾರತದ ಮಹಿಳಾ ಚಳುವಳಿಗಳಲ್ಲಿ ಚರಿತ್ರಾರ್ಹ ಹೆಸರು. ಸಕ್ರಿಯವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಕಮಲಾದೇವಿ ೧೯೨೦ರ ದಶಕದಲ್ಲಿ ರಾಷ್ಟ್ರೀಯತಾವಾದಿ ಮಹಿಳಾ ಸಂಘಟನೆಗಳಲ್ಲಿ ಪಾಲ್ಗೊಂಡು, ಮೂರು ಬಾರಿ ತೆರವಾಡ, ಬೆಳಗಾವಿ ಮತ್ತು ವೆಲ್ಲೂರುಗಳಲ್ಲಿ ಕಾರಾಗೃಹವಾಸ ಅನುಭವಿಸಿದರು. ಅಖಿಲ ಭಾರತ ಕಾಂಗ್ರೆಸ್​ ಸೋಷಿಯಲಿಸ್ಟ್ ಪಕ್ಷದ ವ್ಯವಸ್ಥಾಪಕಿಯಾಗಿಯೂ ಅಹರ್ನಿಶಿ ದುಡಿದರು. ಸಮಾಜವಾದಿ ಪಕ್ಷದ ಪ್ರಮುಖರಾಗಿ ಅನೇಕ ಕಾರ್ಮಿಕ ಸಂಘಟನೆಗಳನ್ನು ಹುಟ್ಟುಹಾಕಿ, ೧೯೨೬ ರಲ್ಲಿ ಜರುಗಿದ ಅಖಿಲ ಬಾರತ ಮಹಿಳಾ ಅಧಿವೇಶನಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಿ, ಕಾರ್ಯದರ್ಶಿಯಾಗಿ ದುಡಿದು ಬಳಿಕ ಅಧ್ಯಕ್ಷೆಯೂ ಆದರು.

Inner Recesses , Outer Spaces ಎಂಬ ತಮ್ಮ ಆತ್ಮ ಚರಿತ್ರೆಯಲ್ಲಿ ಆಕೆ ತನ್ನ ಮೇಲೆ ಗಾಢ ಪ್ರಭಾವ ಬೀರಿದ ಅಸಮಾನ್ಯ ವ್ಯಕ್ತಿಗಳ ಪೈಕಿ ಪಂಡಿತಾ ರಮಾಬಾಯಿ, ರಮಾಬಾಯಿ ರಾನಡೆ, ಪ್ರೇಮ್‌ಲೀಲಾ ಬೆನ್, ಮಹರ್ಷಿ ಕರ್ವೆ, ಶ್ರೀ ಅರಬಿಂದೊ ಮೊದಲಾದವರನ್ನು ಹೆಸರಿಸುತ್ತಾರೆ. ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ ಕಮಲಾದೇವಿ ತಮ್ಮ ಕೃತಿ The Awakening of Indian Women ನಲ್ಲಿ ಓದುಗರಿಗೆ ಅನೇಕ ಅಂಕಿ- ಅಂಶಗಳನ್ನು, ಕಹಿ ಸತ್ಯಗಳ ವಿವರವನ್ನು, ಮಹಿಳೆಯರ ಬವಣೆಗಳ ಬಗ್ಗೆ ನೀಡುತ್ತಾರೆ. ಲಿಂಗತ್ವಕ್ಕಿಂತ ಹೆಚ್ಚಾಗಿ ಸಾಮಾಜಿಕ ವರ್ಗ ಮತ್ತು ಶ್ರೇಣೀಕೃತ ವ್ಯವಸ್ಥೆಗಳು ಮಹಿಳೆಯರ ಬದುಕನ್ನು ನಿಯಂತ್ರಿಸುತ್ತವೆಯೆಂಬುದು ಕಮಲಾದೇವಿಯವರ ಅಭಿಪ್ರಾಯವಾಗಿತ್ತು.

ಪುರುಷರು ತಮ್ಮ ಬಿಡುವಿನ ಸಮಯವನ್ನು ಹೊಸ-ಹೊಸ ಕ್ಷೇತ್ರಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಂಡು, ಬೌದ್ಧಿಕ ಚಟುವಟಿಕೆಗಳತ್ತ ಗಮನಹರಿಸುತ್ತಾರೆ, ಆದರೆ ಅವರು ಮಹಿಳೆಯರು ಈ ಸವಲತ್ತುಗಳಿಂದ ವಂಚಿತರಾಗುವಂತೆ ಮಾಡುತ್ತಾರೆ. ಮಹಿಳೆಯರು ಕೇವಲ ಹೆರುವ ಯಂತ್ರಗಳಾಗಿ ಬಿಡುತ್ತಾರೆ. ಪುರುಷರ ಕಾರ್ಯಕ್ಷೇತ್ರಗಳು ವಿಸ್ತಾರಗೊಳ್ಳುತ್ತಾ ಹೋದಂತೆ, ಮಹಿಳೆಯರ ಕಾರ್ಯಕ್ಷೇತ್ರಗಳು ಕ್ಷೀಣಿಸುತ್ತಾ ಹೋಗುತ್ತವೆ. ಎಂದು ಕಮಲಾದೇವಿ ಬರೆಯುತ್ತಾರೆ. ಗಂಡು-ಹೆಣ್ಣಿನ ಸಂಬಂಧವನ್ನು ಕುರಿತು ಅವರು ಪುರುಷನಿಗೆ ಹೆಚ್ಚು ಅಧೀನಳಾದಷ್ಟೂ, ಅವನ ಅಡಿಯಾಳಾಗಿ ಆಕೆ ಸಂಕಟಗಳನ್ನು ಅನುಭವಿಸುವುದು ಹೆಚ್ಚಾದಷ್ಟೂ, ಮಹಿಳೆಯು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗುವ ದಾರಿ ಸನ್ನಿಹಿತವಾಗುತ್ತದೆ. ಎಂದು ವ್ಯಂಗ್ಯವಾಗಿ ನುಡಿದಿದ್ದರು.

ಕಮಲಾದೇವಿಯವರು ಕರಕುಶಲ ವಸ್ತುಗಳನ್ನು ತಯಾರಿಸುವ ಸಾಂಪ್ರದಾಯಿಕ ಗೃಹ ಕೈಗಾರಿಕೆಗಳಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಅವರಿಂದಲೇ ಎಷ್ಟೋ ಪರಂಪರಾನುಗತವಾಗಿ ಬಂದ ಕೈಕಸುಬುಗಳ ಜೀರ್ಣೋದ್ಧಾರ ನಡೆಯಿತೆಂದರೆ ಅತಿಶಯೋಕ್ತಿಯಾಗಲಾರದು. ಆರ್ಥಿಕವಾಗಿ ಸಮಾಜದ ಹಲವಾರು ವರ್ಗಗಳನ್ನು ಸಬಲೀಕರಣಗೊಳಿಸುವ ಬಗ್ಗೆ ಆಕೆ ತಮ್ಮ Breaking Barriers: Stories of Twelve Women ಎಂಬ ಲೇಖನದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ ಮನುಷ್ಯರ ಹೋರಾಟಗಳಲ್ಲಿ ಆರ್ಥಿಕ ಸ್ವಾವಲಂಬನೆಗಾಗಿ ನಡೆಸುವ ಹೋರಾಟ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆರ್ಥಿಕ ಬೇಡಿಕೆಗಳ ಮುಖಾಂತರವೇ ಅವರು ಸ್ವಾತಂತ್ರ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಈ ಸಂಘರ್ಷವೇ ಜನರು ರಾಜಕೀಯ ಅಧಿಕಾರ-ಸವಲತ್ತುಗಳಿಗಾಗಿ ನಡೆಸುವ ಹೋರಾಟಗಳಿಗೆ ನಾಂದಿಯಾಗುತ್ತದೆ. ಎಂದು ಕಮಲಾದೇವಿ ವಿಶ್ಲೇಷಿಸುತ್ತಾರೆ.

ಸ್ವಾತಂತ್ರ್ಯ ಪೂರ್ವ ಕಾಲದ ಮಹಿಳೆಯರ ಹೋರಾಟಗಳ ಬಗ್ಗೆ ಯೋಚಿಸುತ್ತಿದ್ದ ನನ್ನ ಗಮನವನ್ನು ಒಂದು ಕಿರುಪುಸ್ತಕ ಗಾಢವಾಗಿ ಸೆಳೆಯಿತು. ಸುಮಾರು ಒಂದು ದಶಕದ ಹಿಂದೆ ಕ್ರಿಯಾ ಪ್ರಕಾಶನದವರು ಹೊರತಂದ ಅಡ್ಡಗೋಡೆಗಳನ್ನೊಡೆದು ಮುನ್ನಡೆದ ಹನ್ನೆರಡು ಮಹಿಳೆಯರ ಕಥೆಗಳು ಎಂಬ ಅಪೂರ್ವವಾದ ಮಹಿಳಾ ಗಾಥೆಗಳ ಸಂಕಲನ. ಇದು ಇಂಗ್ಲಿಷಿನಲ್ಲಿ ಪಾರ್ವತಿ ಮೆನನ್‌ರವರು ಬರೆದ Breaking Barriers :Stories of Twelve Women ಪುಸ್ತಕದ ಅನುವಾದ. ಡಾ.ಎನ್ ಗಾಯತ್ರಿಯವರ ಕನ್ನಡ ತರ್ಜುಮೆ ಅಂತರರಾಷ್ಟ್ರೀಯ ಮಹಿಳಾ ದಿನದ ಶತಮಾನೋತ್ಸವದಂದು ಎರಡನೆಯ ಬಾರಿ ಮುದ್ರಣಗೊಂಡಿತ್ತು. ಲೇಖಕಿ ಪಾರ್ವತಿ ಮೆನನ್ ಹೇಳುವಂತೆ ಈ ಸಂಗ್ರಹದ ಕೇಂದ್ರ ಪಾತ್ರಗಳಾದ ಹನ್ನೆರಡು ಗಮನಾರ್ಹ ಮಹಿಳೆಯರೇ ಈ ಪುಸ್ತಕದ ನಿಜವಾದ ಲೇಖಕರು.

ಹನ್ನೆರಡು ಮಹಿಳೆಯರೂ ಅಸಾಮಾನ್ಯರೇ. ಆನಸಾಮಾನ್ಯರ ಅರಿವಿಗೇ ಬಾರದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರೋಚಕ ಇತಿಹಾಸ ಈ ಪುಸ್ತಕವನ್ನು ಓದುವಾಗ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಈ ಎಡಪಂಥೀಯ ಮಹಿಳೆಯರ ಧೈರ್ಯ – ಸಾಹಸಗಳು, ನಿಸ್ಪೃಹತೆ , ಪ್ರಾಮಾಣಿಕತೆಗಳು ನಮ್ಮನ್ನು ನಿಬ್ಬೆರಗಾಗುವಂತೆ ಮಾಡುತ್ತವೆ. ತಮ್ಮ ಮುನ್ನುಡಿಯಲ್ಲಿ ಬೃಂದಾ ಕರಟ್‌ರವರು ಜನವಾದಿ ಮತ್ತು ಭಾರತದಲ್ಲಿನ ಸಾಮ್ರಾಜ್ಯಶಾಹಿ ವಿರೋಧಿ ಚಳುವಳಿಗಳೊಂದಿಗೆ ಅದರ ಅಮೂಲ್ಯವಾದ ಸಂಬಂಧವನ್ನು ಈ ಸಂಗ್ರಹದಲ್ಲಿರುವ ಹನ್ನೆರಡು ಮಹಿಳೆಯರ ಜೀವನಾನುಭವವು ಪ್ರತಿನಿಧಿಸುತ್ತದೆ. ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಅದರ ಬೇಡಿಕೆಗಳ ಒಡಲಲ್ಲೇ ಲಿಂಗ ಅಸಮಾನತೆ ಮತ್ತು ದೌರ್ಜನ್ಯದ ವಿರುದ್ಧದ ಹೋರಾಟವನ್ನು ನಡೆಸಿದ್ದು ಭಾರತದ ಮಹಿಳಾ ಚಳುವಳಿಗಳ ಒಂದು ಮುಖ್ಯ ಚಾರಿತ್ರಿಕ ಅಂಶವಾಗಿದೆ. ಭಾರತ ಸ್ವಾತಂತ್ರ್ಯಗಳಿಸಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಮಹಿಳೆಯರ ಪ್ರತಿಭೆ ಮತ್ತು ಪರಿಣತಿಯನ್ನು ನಿರ್ಲಕ್ಷಿಸಿ ರಾಜಕೀಯ ಪಕ್ಷಗಳು ಅವರನ್ನು ಅಂಚಿಗೆ ತಳ್ಳಿದವು.

೧೯೫೨ ರಲ್ಲಿ ಸ್ವತಂತ್ರ ಭಾರತದಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಲೋಕಸಭೆಗೆ ಚುನಾಯಿತರಾದ ಮಹಿಳೆಯರು ಕೇವಲ ನಾಲ್ವರು. ರಾಜಕೀಯದಲ್ಲಿ ಕಾಣಿಸಿಕೊಳ್ಳುವ ಪಿತೃ ಪ್ರಾಧಾನ್ಯತೆಯ ಸ್ವರೂಪವು ಸ್ವತಂತ್ರ್ಯ ಭಾರತದ ಹೆಗ್ಗುರುತಾಗಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲವೇ? ಸ್ವಾತಂತ್ರ್ಯೋತ್ತರ ಎಡ ಚಳುವಳಿಗೆ ಸೇರಿದ ಮಹಿಳೆಯರೇ ಸ್ವಾತಂತ್ರ್ಯ ಹೋರಾಟದ ಪರಂಪರೆಯ ಕನಸುಗಳನ್ನು, ಸದಾಶಯಗಳನ್ನು ಮತ್ತು ಕ್ರಾಂತಿಕಾರಿ ರಾಜಕೀಯವನ್ನು ಉಳಿಸಿ ಬೆಳೆಸಿದವರು. ಸ್ವಾತಂತ್ರ್ಯ ನಂತರ ತಕ್ಷಣವೇ ಕೆಲವೇ ವರ್ಷಗಳಲ್ಲಿ ಎಡ ಚಳುವಳಿಯ ಮಹಿಳೆಯರು ಹಿಂದೂ ಕಾಯಿದೆಯಲ್ಲಿ ಸುಧಾರಣೆಯನ್ನು ವಿರೋಧಿಸುತ್ತಿದ್ದ ಮತಾಂಧತೆ ಮತ್ತು ಕಂದಾಚಾರದ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳೆಲ್ಲವನ್ನೂ ಬಳಸಿದರು. ಈ ದೇಶದ ಎಡ ಮತ್ತು ಪ್ರಜಾಪ್ರಭುತ್ವವಾದಿ ಚಳುವಳಿಯ ಹೋರಾಟಗಳ ಮುಂಚೂಣಿಯಲ್ಲಿದ್ದ ಈ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವಿಸಬೇಕಿದೆ. ಮಹಿಳಾ ಚಳುವಳಿಯೂ ಈ ಬೃಹತ್ ಚಳುವಳಿಯ ಭಾಗವೇ ಆಗಿದೆ. ಅವರ ಶ್ರೀಮಂತ ಅನುಭವಗಳು ಮತ್ತು ಒಳನೋಟಗಳು ನಮಗೆ ಜನವಾದಿ ಮಹಿಳಾ ಸಂಘಟನೆಗೆ ನಿರಂತರ ಸಂಪನ್ಮೂಲವಾಗಿ ಉಳಿಯುತ್ತದೆ ಎಂದು ಬರೆಯುತ್ತಾರೆ. ಈ ಪ್ರಸ್ತಾವಿಕ ನುಡಿಗಳನ್ನು ದಾಟಿ ಹನ್ನೆರಡು ಮಹಿಳೆಯರಲ್ಲಿ ಒಬ್ಬೊಬ್ಬರ ಜೀವನವನ್ನು ಕುರಿತು ಓದುತ್ತಿದ್ದಂತೆಯೇ ಮೈ ನವಿರೇಳುತ್ತದೆ. ಅನೇಕ ವಿಸ್ಮಯಕಾರಿ, ಸ್ವಾರಸ್ಯಕರ ಸನ್ನಿವೇಶಗಳೊಂದಿಗೆ ನಾವು ಮುಖಾ-ಮುಖಿಯಾಗುತ್ತೇವೆ. ಅಹಲ್ಯಾ ರಂಗ್ಣೇಕರ್, ಇಳಾ ಭಟ್ಟಾಚಾರ್ಯ, ಕನಕ ಮುಖರ್ಜಿ, ಲಕ್ಷ್ಮಿ ಸೆಹೆಗಲ್, ಮಲ್ಲು ಸ್ವರಾಜ್ಯಂ, ಮಂಗಳೇಶ್ವರಿ ದೇಬ್ ಬರ್ಮಾ, ಮಂಜರಿ ಗುಪ್ತ, ಮೋಟೂರು ಉದಯಂ, ಪಂಕಜ ಆಚರ್ಯ, ಪಾಪ ಉಮಾನಾಥ್, ಸುಶೀಲಾ ಗೋಪಾಲನ್, ವಿಮಲ ರಣದಿವೆಯರ ಸ್ಫೂರ್ತಿದಾಯಕ ಜೀವನಗಾಥೆ ಡಾ. ಎನ್ ಗಾಯತ್ರಿಯವರ ಅತ್ಯುತ್ತಮ ಕನ್ನಡ ಅನುವಾದದಲ್ಲಿ ಅರಳಿ ತನ್ನ ಕಂಪನ್ನು ಸೂಸಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಇಂತಹ ಅಸಾಧಾರಣ ಹೋರಾಟಗಾರ್ತಿಯರು, ಪ್ರತಿಭಾನ್ವಿತೆಯರೂ ಆದ ಈ ಹನ್ನೆರಡು ಮಹಿಳೆಯರು ಹೇಗೆ ನೇಪಥ್ಯಕ್ಕೆ ಸರಿದರು? ಅವರೇಕೆ ನಮಗೆ ಮಾದರಿಯಾಗಿ ನಮ್ಮ ನಡುವೆ ಅವರ ಆದರ್ಶ ಜೀವನ ಗಾಥೆಗಳು, ಜಾಜ್ವಲ್ಯಮಾನವಾದ ಪ್ರೇರಕ ಶಕ್ತಿಯಾಗಿ ಕಂಗೊಳಿಸುತ್ತಿಲ್ಲ? ಒಂದಾದರೂ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಇಂತಹ ಧೀಮಂತ ಮಹಿಳೆಯರ ಉಲ್ಲೇಖವಿಲ್ಲವಲ್ಲಾ ಎಂದು ಹಳಹಳಿಸುತ್ತ, ತಲೆ ತಗ್ಗಿಸುವಂತೆ, ಮುಜುಗರ ಪಟ್ಟುಕೊಳ್ಳುವಂತೆ ಮಾಡುತ್ತದೆ. ಈ ಹನ್ನೆರಡು ಮಹಿಳೆಯರ ಜೀವನದ ಪುಟಗಳಿಂದ ಕೆಲವೇ ಕೆಲವು ಘಟನೆಗಳನ್ನಾದರೂ ಓದುಗರ ಮುಂದಿಡುವ ಅಪೇಕ್ಷೆ ನನ್ನದು. ಈ ಮಹಿಳೆಯರನ್ನು ಸ್ಮರಿಸಿಕೊಳ್ಳದೇ ಅಮೃತ ಮಹೋತ್ಸವದ ಆಚರಣೆ ಅರ್ಥಪೂರ್ಣವಾಗಲು ಹೇಗೆ ಸಾಧ್ಯ? ಎಂದು ನನಗನಿಸತೊಡಗಿತು. ಆದ್ದರಿಂದ ಅವುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಅಮೃತ ಮಹೋತ್ಸವದ ಶುಭ ಸಂದರ್ಭದಂದು ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು, ಸಂಭ್ರಮಾಚರಣೆಗಳ ಸಾಲಿನಲ್ಲಿ ‘ಹರ್ ಘರ್ ತಿರಂಗಾ’ ಕೂಡ ಒಂದು. ಇಪ್ಪತ್ತರ ಹರೆಯದ ಕಾಲೇಜು ತರುಣಿ ಅಹಲ್ಯಾ ಪುಣೆಯಲ್ಲಿ ಅಗಾಖಾನ್ ಸೆರೆಮನೆಯಲ್ಲಿದ್ದ ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿ, ಗಾಂಧೀಜಿಯವರ ಬಹುಕಾಲದ ಕಾರ್ಯದರ್ಶಿಯಾಗಿದ್ದ ಮಹದೇವ ದೇಸಾಯಿಯವರು ಸೆರೆಮನೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರೆಂಬ ವಾರ್ತೆಯನ್ನು ಕೇಳಿದ ನಂತರ ತಮ್ಮ ಕಾಲೇಜಿನ ಸಹಪಾಠಿಗಳೊಡನೆ ಒಂದು ಪ್ರತಿಭಟನಾತ್ಮಕ ಮೆರವಣಿಗೆಯಲ್ಲಿ ಭಾಗವಹಿಸಿದರು. ಪೊಲೀಸರು ಅಹಲ್ಯಾ ಮತ್ತು ಅವರ ಗೆಳತಿಯರನ್ನು ಬಂಧಿಸಿ ಅಗಾಖಾನ್ ಸೆರೆಮನೆಗೇ ಎಳೆದೊಯ್ದರು. ಸೆರೆಯಲ್ಲಿದ್ದಾಗ ಅಹಲ್ಯಾರವರು ಒಂದು ಅದ್ವಿತೀಯ ಸಾಹಸವನ್ನೇ ಮಾಡಿಬಿಟ್ಟರು. ಜೈಲಿನ ಕಟ್ಟಢದ ಮೇಲೆ ಕಾಂಗ್ರೆಸ್ ಬಾವುಟಗಳನ್ನು ಹಾರಿಸಿದ್ದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಬಂಧನದಲ್ಲಿದ್ದ ಮಹಿಳೆಯರ ಹಸಿರು ಮತ್ತು ಬಿಳಿ ಸೀರೆಗಳನ್ನು ಹೇಗೋ ಹೊಂದಿಸಿ, ಅವನ್ನು ಹರಿದು, ಹೊಲಿದು ಬಾವುಟ ಮಾಡಲು ಸಿದ್ಧರಾದರು. ಕೇಸರಿ ಬಣ್ಣದ ಸೀರೆ ಸಿಗದಿದ್ದಾಗ, ಬಂಧನಕ್ಕೊಳಗಾಗಿದ್ದ ವೇಶ್ಯೆಯೊಬ್ಬಳು ಅವಳ ಬಳಿಯಿದ್ದ ಕೇಸರಿ ಸೀರೆಯನ್ನು ದಾನ ಮಾಡಿದಳು. ಎಲ್ಲರೂ ಒಟ್ಟಾಗಿ ತ್ರಿವರ್ಣದ ಸೀರೆಯ ತುಂಡುಗಳನ್ನು ಹೊಲಿದು, ಮಧ್ಯದಲ್ಲಿ ಇಜ್ಜಲಿನ ಚೂರಿನಿಂದ ಚರಕವನ್ನು ಬರೆದು, ಅಹಕ್ಯಾ ಮತ್ತು ಆಕೆಯ ಗೆಳತಿ ಇಂದೂ ಕೇರ್ಕರ್ ಬಾವುಟ ಹಾರಿಸಲು ಮುಂದಾದರು ಆದರೆ ಜೈಲಿನ ಎತ್ತರದ ಗೋಡೆಯನ್ನು ಹತ್ತುವುದು ಹೇಗೆ? ಎಂಬ ಸಮಸ್ಯೆ ತಲೆದೋರಿತು.

ಆಗ ಅಲ್ಲಿದ್ದ ಮಹಿಳೆಯರು ಧೃತಿಗೆಡದೇ ಒಂದು ತಂತ್ರವನ್ನು ರೂಪಿಸಿದರು. ಎಂಟು ಸದೃಢರಾದ ಮಹಿಳೆಯರು ತಮ್ಮ ತೋಳುಗಳನ್ನು ಒಂದು ಮೆಟ್ಟಿಲಂತೆ ಜೋಡಿಸಿಕೊಂಡು ನಿಂತರು. ಆರು ಜನ ಮಹಿಳೆಯರು ಅವರ ತೋಳುಗಳ ಮೇಲೆ ಹತ್ತಿ ನಿಂತರು. ಮತ್ತೆ ನಾಲ್ಕು ಮಹಿಳೆಯರು ಇನ್ನೊಂದು ಅಂತಸ್ತು ಮಾಡಿ ನಿಂತರು. ತುತ್ತತುದಿಯಲ್ಲಿ ಇಬ್ಬರು ಕೃಶ ಮಹಿಳೆಯರು ನಿಲ್ಲಲು ಅಣಿ ಮಾಡಿದರು. ಅಹಲ್ಯಾ ಮತ್ತು ಇಂದೂ ಈ ಮಹಿಳೆಯರ ಪಿರಮಿಡ್‌ಅನ್ನು ಹತ್ತಿ ಬಾವುಟ ಹಾರಿಸಿಯೇ ಬಿಟ್ಟರು. ಇದಕ್ಕೆ ಏಳುದಿನಗಳ ಕಾಲ ಕಠಿಣ ಶಿಕ್ಷೆಯನ್ನು ಅನುಭವಿಸಿದರೂ ಧೃತಿಗೆಡಲಿಲ್ಲ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಬಾಪಟ್‌ರವರ ತಲೆಗೆ ಪೊಲೀಸನೊಬ್ಬ ಗುರಿಯಿಟ್ಟು ಲಾಠಿ ಹೊಡೆಯಲು ಹೋದಾಗ, ಅದನ್ನು ಗಮನಿಸಿದ ಅಹಲ್ಯಾ ರಂಗ್ಣೇಕರ್ ಅವರನ್ನು ತಡೆಯಲು ಹೋಗಿ ತಾನೇ ಲಾಠಿ ಏಟು ತಿಂದರು. ಅಂದಿನ ಮರಾಠಿಯ ಹೆಸರಾಂತ ಪ್ರಗತಿಪರ ಕವಿ ಆಚಾರ್ಯ ಅತ್ರೆ ಈ ದೃಶ್ಯವನ್ನು ನೆನಪಿಸಿಕೊಂಡು, ತಮ್ಮ ಒಂದು ಕವನದಲ್ಲಿ ‘ರಣ ರಾಗಿಣಿ ಅಹಲ್ಯಾ’ರ ಗುಣಗಾನ ಮಾಡಿದರಂತೆ!

ತ್ರಿಪುರಾದ ಮೊದಲ ಪ್ರಗತಿ ಪರ ಮಹಿಳಾ ಸಂಘಟನೆಯಾದ ಗಣತಾಂತ್ರಿಕ ನಾರಿ ಸಮಿತಿಯ ಪ್ರಮುಖರಾಗಿ ರಾಜಕೀಯ ಚಳುವಳಿಗಳಲ್ಲಿ ಧುಮುಕಿ, ಗಿರಿಜನ ಮಹಿಳೆಯರ ಪರವಾಗಿ ಊಳಿಗಮಾನ್ಯ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದ ಇಳಾ ಭಟಾಚರ‍್ಯ, ಮಂಗಳೇಶ್ವರಿ ದೇಬ್ ವರ್ಮರವರ ನಿಷ್ಠೆ ಮನಕಲಕುತ್ತದೆ. ತಮ್ಮ ಎಳೆಯ ವಯಸ್ಸಿನಲ್ಲಿ ದೃಢ ಚಿತ್ತದಿಂದ ಪರ್ವತದ ಇಳಿಜಾರುಗಳಲ್ಲಿ ದಟ್ಟ ಕಾಡಿನ ಭಯಾನಕ ವಾತಾವರಣದಲ್ಲಿ ನಡೆಯುತ್ತಾ, ಬುಡಕಟ್ಟು ಮಹಿಳೆಯರನ್ನು ನಾರಿ ಸಮಿತಿಗಾಗಿ ಸಂಘಟಿಸುತ್ತಾ, ಓಡಾಡಿದ ದಿನಗಳನ್ನು ಮಂಗಳೇಶ್ವರಿ ಸಂದರ್ಶನವೊದರಲ್ಲಿ ಮೆಲುಕು ಹಾಕಿದ ವಿವರಗಳು ಕಣ್ಣಿಗೆ ಕಟ್ಟುವಂತಿವೆ. ಆಂಧ್ರಪ್ರದೇಶದಲ್ಲಿ ಕಮ್ಯೂನಿಸ್ಟ್ ಪಕ್ಷದ ಸಂಘಟಕರಾಗಿ, ಗೆರಿಲ್ಲಾ ತಂತ್ರಪಟುವಾಗಿ ಮತ್ತು ಕಮಾಂಡರ್ ಆಗಿ ತೆಲಂಗಾಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಗಟ್ಟಿಗಿತ್ತಿ ಮಲ್ಲು ಸ್ವರಾಜ್ಯಂ, ಕಮ್ಯೂನಿಸ್ಟ್ ಚಳುವಳಿಕಾರ್ತಿಯಾಗಿ, ಸುಭಾಷ್ ಚಂದ್ರ ಬೋಸರ ರಾಣಿಝಾನ್ಸಿ ರೆಜಿಮೆಂಟಿನ ಪ್ರಮುಖ ಅಧಿಕಾರಿಯಾಗಿ, ವೈದ್ಯೆಯಾಗಿ, ಬರ್ಮಾದ ಕಾಡುಗಳಲ್ಲಿ ನಿರ್ಭಿಡೆಯಿಂದ ಸಂಚರಿಸುತ್ತ ಬ್ರಿಟಿಷರಿಂದ ಬಂಧನಕ್ಕೊಳಗಾಗ ದಿಟ್ಟೆ ಲಕ್ಷ್ಮಿ ಸೆಹಗಲ್ಲರ ಅಸಾಮಾನ್ಯ ಶರ‍್ಯ ಸಾಹಸಗಳು ನನ್ನನ್ನು ಸ್ತಂಭೀಭೂತಗೊಳಿಸಿದವು. ಆಕೆ ಅಬ್ದುಲ್​ ಕಲಾಂರವರ ಸಮಯದಲ್ಲಿ ರಾಷ್ಟಪತಿ ಸ್ಥಾನಕ್ಕೆ ಉಮೇದುವಾರರಾಗಿದ್ದನ್ನು ಸ್ಮರಿಸಬಹುದಾಗಿದೆ.

ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಪೊನ್ನುಮಲೈನಲ್ಲಿ ಕಾರ್ಮಿಕರೊಡಗೂಡಿ ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗಿ, ಪುಟ್ಟ ಬಾಲಕಿಯೆನ್ನುವ ಕಾರಣದಿಂದ ಬಂಧಮುಕ್ತಳಾದ ಪಾಪ ಉಮಾನಾಥ್, ಬಂಗಾಳದ ಎಡಪಂಥೀಯ ಮಹಿಳಾ ಚಳುವಳಿಯ ಇತಿಹಾಸದಲ್ಲಿ ಬಹುಮುಖ್ಯ ಮೈಲಿಗಲ್ಲಾದ ಮಹಿಳಾ ಆತ್ಮ ರಕ್ಷಾ ಸಮಿತಿಯ ಸದಸ್ಯೆಯಾಗಿ, ೧೯೪೩ ರಲ್ಲಿ ಕ್ಷಾಮ ಮತ್ತು ಕೋಮುಗಲಭೆಗಳಲ್ಲಿ ಬಲಿಪಶುಗಳಾದವರಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿ, ಜಪಾನೀಯರ ಬಾಂಬಿನ ದಾಳಿಗೆ ತುತ್ತಾದವರ ಹೌಸಿಂಗ್ ಕಾಲನಿಗಳಲ್ಲಿ, ನ್ಯಾಯಯುತ ಬೆಲೆ ಅಂಗಡಿಗಳ ಸಾಲುಗಳಲ್ಲಿ ಜನರಿಗೆ ನ್ಯಾಯವನ್ನು ದೊರಕಿಸಲು, ಕೋಮುಗಲಭೆಯಲ್ಲಿ ನೊಂದ ನೋಕಾಲಿಯಂತಹ ಹಳ್ಳಿಗಳಲ್ಲಿ ಕೋಮುವಾದದ ವಿರುದ್ಧ ಕೆಲಸ ಮಾಡಲು ಎಲ್ಲೆಂದರಲ್ಲಿ ಧಾವಿಸುತ್ತಿದ್ದ ಕನಕ ಮುಖರ್ಜಿ ನಮ್ಮನ್ನು ದಂಗು ಬಡಿಸುತ್ತಾರೆ.

ಆತ್ಯಂತ ಕಠಿಣವಾದ ಮಾರ್ಗವನ್ನು ಆಯ್ಕೆಮಾಡಿಕೊಂಡು, ಯಾವ ಅಳುಕು, ಅಂಜಿಕೆ ಇಲ್ಲದೆ, ತಮ್ಮ ಪುಟ್ಟ ಕಂದಮ್ಮಗಳನ್ನು ಬಂಧುಗಳ ಆಶ್ರಯದಲ್ಲಿ ಬಿಟ್ಟು, ಕಾಡು-ಮೇಡುಗಳನ್ನದೆ, ನ್ಯಾಯಕ್ಕಾಗಿ , ದಮನಿತ ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಿ, ಮಹಿಳಾ ವಿಮೋಚನೆಯ ಭವ್ಯ ಬುನಾದಿಗೆ ನೀರೆರೆದ ಈ ಹನ್ನೆರಡು ಧೀರ ವನಿತೆಯರನ್ನು ಹೃದಯಾಂತರಾಳದಿಂದ ಸ್ಮರಿಸಿಕೊಳ್ಳುತ್ತಿದ್ದೇನೆ. ಕ್ರಿಯಾ ಪ್ರಕಾಶನದವರು ಹೇಳಿರುವಂತೆ ಈ ಧೀರ ಪಥಪ್ರದರ್ಶಕಿಯರ ಭಾವಚಿತ್ರಗಳನ್ನು ಒದಗಿಸಿ ಕೆ. ಎಸ್ ವಿಮಲಾರವರು ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಮೃತ ಮಹೋತ್ಸವದ ಐತಿಹಾಸಿಕ ಗಳಿಗೆಯಲ್ಲಿ ಓದಲೇ ಬೇಕಾದ ನಿಮ್ಮ ಪುಸ್ತಕಗಳ ಪಟ್ಟಿಯಲ್ಲಿ ಈ ಕಿರುಹೊತ್ತಗೆಯೂ ಇರಲಿ.

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ