ವೈಶಾಲಿಯಾನ : ಅನುವಾದ ಎನ್ನುವುದು ಸಂಕೀರ್ಣವಾದ ಸವಾಲು

Translation : ಈ ಸುಪ್ತ ಮನಸ್ಸಿನ ಭಾವನೆಗಳ ಸುತ್ತ ಪರಿಭ್ರಮಿಸುವ ಆರು ಕತೆಗಳನ್ನು ಕನ್ನಡಕ್ಕೆ ವಿಕ್ರಂರವರು ಮನಮುಟ್ಟುವಂತೆ ಅನುವಾದ ಮಾಡಿರುವುದಂತೂ ನಿಜ. ನಮ್ಮ ಸಮಕಾಲೀನ ಕಾಲಘಟ್ಟ ಇಲ್ಲಿನ ಕತೆಗಳ ಪ್ರಸ್ತುತತೆಯನ್ನು ಹೆಚ್ಚಿಸಿದೆ ಎನ್ನುವುದೂ ನಿರ್ವಿವಾದ.

ವೈಶಾಲಿಯಾನ : ಅನುವಾದ ಎನ್ನುವುದು ಸಂಕೀರ್ಣವಾದ ಸವಾಲು
ವಿಕ್ರಂ ಚದುರಂಗ ಅನುವಾದಿತ ಕೃತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 03, 2022 | 5:19 PM

ವೈಶಾಲಿಯಾನ | Vaishaliyaana : ಹೀಗೊಂದು ಅನಿಸಿಕೆಯಿತ್ತು: ಅನುವಾದಕರು ಒಂದು ಭಾಷೆ- ಸಂಸ್ಕೃತಿಯಿಂದ ಬೇಕಾದ ಪಠ್ಯವನ್ನು ಆಯ್ಕೆ ಮಾಡಿಕೊಂಡು, ಅದನ್ನು ಜಾಗರೂಕತೆಯಿಂದ ಅಖಂಡವಾಗಿ ಮತ್ತೊಂದು ಭಾಷೆಗೆ ವರ್ಗಾಯಿಸಿ, ಭಟ್ಟಿ ಇಳಿಸಿಬಿಡುತ್ತಾರೆ ಎಂದು. ಇಂಗ್ಲಿಷ್ ಕವಿ ಡ್ರೈಡನ್ ಅನುವಾದದ ಕ್ರಿಯೆಯೆಂದರೆ ಗುಲಾಮಗಿರಿ ಎಂದು ಖಿನ್ನನಾಗಿ ಉದ್ಗರಿಸಿದ್ದ. ಅದಕ್ಕೆ ಅವನು ದ್ರಾಕ್ಷಿ ತೋಟದಲ್ಲಿ ಬೆವರು ಸುರಿಸಿ ದುಡಿಯುವ ಆಳುಗಳ ಉಪಮೆಯನ್ನೂ ನೀಡಿದ್ದ. ಗಂಟೆಗಟ್ಟಲೇ ದುಡಿದರೂ, ಅದು ಮಾಲೀಕನ ತೋಟ. ದ್ರಾಕ್ಷಾರಸದ ರುಚಿಯನ್ನು ಕೊನೆಗೆ ಆಸ್ವಾದಿಸುವ ಹಕ್ಕು ಕೇವಲ ಯಜಮಾನನಿಗೇ ಎಂದು ವ್ಯಂಗ್ಯವಾಗಿ ಹೇಳಿದ್ದ. ಡ್ರೈಡನ್ ಕವಿಯ ಅಭಿಪ್ರಾಯ ಭಾಷಾಂತರದ ಬಗ್ಗೆ ಇರುವ ಒಂದು ಸಾಂಪ್ರದಾಯಿಕ ದೃಷ್ಟಿಕೋನಗಳಲ್ಲಿ ತುಂಬ ಪ್ರಚಲಿತವಾದದ್ದು. ಆದರೆ ವಾಸ್ತವದಲ್ಲಿ ನಡೆಯುವುದೇ ಬೇರೆ. ಅದರ ಬದಲು ನಡೆಯುವುದೇನೆಂದರೆ ರೂಪಾಂತರ, ಮರು ನಿರೂಪಣೆ, ಸಂಯೋಜನೆ (ಹೊಂದಿಸುವಿಕೆ, ಒಂದುಗೂಡಿಸುವಿಕೆ), ಪಠ್ಯವನ್ನು ತನ್ನದೇ ಭಾಷೆ ಮತ್ತು ತನ್ನದೇ ನಿಲುವಿನಲ್ಲಿ ಮರು- ನಿರ್ಮಿಸುವುದು ಇತ್ಯಾದಿ. ಡಾ. ಕೆ.ಎಸ್​. ವೈಶಾಲಿ (Dr. K.S. Vaishali) 

ಭಾಷಾಂತರವು ಒಂದು ಯಾಂತ್ರಿಕ ಚಟುವಟಿಕೆಯಾಗಲು ಸಾಧ್ಯವೇ ಇಲ್ಲ. ಏಕೆಂದರೆ ಹೊರಗಿನ ಪಠ್ಯವೊಂದನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ, ಅನುವಾದಕಿ/ಅನುವಾದಕ ತನ್ನ ಸಂಚಿತ ಅನುಭವಗಳನ್ನು ಮತ್ತು ವ್ಯಕ್ತಿಗತವಾದ ತನ್ನದೇ ಬಹು ಸಂಸ್ಕೃತಿಯ ಆರ್ಜಿತ ಪ್ರಾಪ್ತಿಯ ನೆಲೆಗಳನ್ನು ಅವಲಂಬಿಸಿ ತನ್ನದಾಗಿ ರೂಪಿಸಿಕೊಳ್ಳುವುದು ಸೃಜನಶೀಲತೆಯಿಂದ ಕೂಡಿದ ಮರುಸೃಷ್ಟಿಯೇ ಸರಿ. ಅನುವಾದ ಕ್ರಿಯೆಯಲ್ಲಿ, ಮೂಲ ಆಕರ ಮತ್ತು ಅನುವಾದಗೊಳ್ಳುವ ಭಾಷೆ ಎರಡಕ್ಕೂ ಅನ್ವಯಿಸುವ ನಮನೀಯತೆ, ಬಾಗು-ಬಳುಕಿನ ಅನ್ವೇಷಣೆಯಲ್ಲಿ ತೊಡಗಿಕೊಂಡಾಗ, ವಿಷಯಕ್ಕೆ ಒಂದು ವಿನೂತನವಾದ ಜೀವಂತಿಕೆ ಲಬ್ಧವಾಗುತ್ತದೆ. – ಈ ರೀತಿಯಲ್ಲಿ ನನ್ನ ಯೋಚನಾ ಸರಣಿ ಸಾಗಿತ್ತು. ಅದಕ್ಕೊಂದು ಪ್ರಬಲ ಕಾರಣವೂ ಇತ್ತೆನ್ನಿ! ಬೆಂಗಳೂರಿನ ಕ್ರೈಸ್ಟ್  ವಿಶ್ವವಿದ್ಯಾನಿಲಯದ ಕನ್ನಡ ಸಂಘದ ಸುವರ್ಣ ವರ್ಷಾಚರಣೆಯಲ್ಲಿ ಭಾಗವಹಿಸಲು ನನಗೆ ಆಮಂತ್ರಣ ಬಂದಿತ್ತು. ಈ ಸಂಭ್ರಮದ ಆಚರಣೆಯ ಪ್ರಯುಕ್ತ ಕನ್ನಡ ಸಂಘದ ವತಿಯಿಂದ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಗೊಂಡ ಇಂದ್ರಜಿತ್ ಮತ್ತು ಇನ್ನಿತರ ಕತೆಗಳು ಎಂಬ ಕಥಾ ಸಂಕಲನದ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪುಸ್ತಕ ಪರಿಚಯ ಮಾಡಿಕೊಡಲು ಸಂತಸದಿಂದ ಒಪ್ಪಿಕೊಂಡಿದ್ದೆ.

ನ್ಯೂಜಿಲ್ಯಾಂಡಿನಲ್ಲಿ ಹುಟ್ಟಿದರೂ ಯುರೋಪಿಯನ್ ಮೂಲದವಳಾದ ಕ್ಯಾಥರೀನ್ ಮ್ಯಾನ್ಸಿಫೀಲ್ಡ್, ಇಂಗ್ಲೆಂಡಿನ ಡಿ. ಹೆಚ್. ಲಾರೆನ್ಸ್ , ಅರ್ಜೆಂಟೀನಾದ ಜಾರ್ಜ್ ಲೂಯಿ ಬರ‍್ಹೆ, ಜರ್ಮನಿಯ ಥಾಮಸ್ ಮನ್, ರಷ್ಯಾದ ಮ್ಯಾಕ್ಸಿಂ ಗಾರ್ಕಿ ಮತ್ತು ಟಾಲ್‌ಸ್ಟಾಯ್‌ರವರ ಆಯ್ದ ಕಥೆಗಳ ಕನ್ನಡ ಅನುವಾದವಾದ ಈ ಕಥಾ ಸಂಕಲನವನ್ನು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕ ವಿಕ್ರಂ ಚದುರಂಗರವರು ತರ್ಜುಮೆ ಮಾಡಿದ್ದಾರೆ. ತಮ್ಮ ಪುಸ್ತಕವನ್ನು ಪ್ರಖ್ಯಾತ ಸರೋದ್ ಕಲಾವಿದ ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರೂ ಆದ ‘ಸರೋದ್ ಮಾಂತ್ರಿಕ’, ‘ಅಲ್ಲಮ ಪ್ರತಿಭೆ’ ಡಾ. ರಾಜೀವ್ ತಾರಾನಾಥರಿಗೆ ಅರ್ಪಿಸಿರುವ ವಿಕ್ರಂ ಚದುರಂಗ ಅವರ ಹೆಸರಿನಲ್ಲೇ ತಿಳಿಯುವಂತೆ ನಮ್ಮ ನಾಡಿನ ಹೆಸರಾಂತ ಕಾದಂಬರಿಕಾರ, ಸರ್ವಮಂಗಳ, ಉಯ್ಯಾಲೆ, ವೈಶಾಖ – ಮೊದಲಾದ ಮನೋಜ್ಞ ಕಾದಂಬರಿಗಳಿಂದ, ಮೊದಲು ಉಲ್ಲೇಖಿಸಿದ ಎರಡು ಕಾದಂಬರಿಗಳನ್ನಾಧರಿಸಿ ಮಾಡಿದ ಅದೇ ಹೆಸರಿನ ಜನಪ್ರಿಯ ಚಲನಚಿತ್ರಗಳಿಂದ ಮನೆ ಮಾತಾದ ಲೇಖಕ ಚದುರಂಗವರ ಪುತ್ರ.

“ನಾನು ಕನ್ನಡಕ್ಕೆ ತಂದಿರುವ ಈ ಆರು ಕತೆಗಳನ್ನು ನೀವು ಓದಿದಾಗ ಮನುಷ್ಯನ ಮೂಲ ಸ್ವಭಾವದಲ್ಲಿರುವ ಹಸಿವು, ಆಹಾರ, ಕಾಮ, ಕೇಡು, ಅಹಂಕಾರ, ಸೇಡು, ಹಣ, ಅಧಿಕಾರದ ಮದ ಎಂಬ ಅನೇಕ ನೀಚ ಭಾವನೆಗಳಿರುವುದು ಅರ್ಥವಾಗಬಹುದು. ಈ ಪ್ರವೃತ್ತಿಗಳು ಕರಗಿ ಅದರ ಬದಲು ನಿರ್ವ್ಯಾಜ್ಯ ನಿಷ್ಕಳಂಕ ಪ್ರೀತಿ, ವಿನಯ, ದಯೆ, ವಿಶ್ವಾಸ ಮತ್ತು ಅಂತಃಕರಣ ಇಡೀ ಬದುಕಿನಲ್ಲಿ ಉಸಿರಾಡುತ್ತಿವೆ ಎಂದು ನಿಮಗೆ ಅನಿಸಿದರೆ ನನಗೆ ಖುಷಿಯಾಗುತ್ತದೆ.” ಎಂದು ವಿಕ್ರಂ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಹೇಳುತ್ತಾರೆ. ಈ ಕಥೆಗಳಲ್ಲಿನ ಆಳವಾದ ವಿಷಾದ, ಮನುಷ್ಯನ ವ್ಯಕ್ತಿತ್ವದ ಕರಾಳ ಆಯಾಮಗಳು ನನ್ನನ್ನು ವಿಚಲಿತಗೊಳಿಸಿದವು. ಗಾಢವಾದ Psycho analytical ಮಾದರಿಯಲ್ಲಿ ಸಾಗುವ ಈ ಕತೆಗಳನ್ನು ವಿಕ್ರಂ ಏಕೆ ಆಯ್ಕೆ ಮಾಡಿಕೊಂಡರು? ಈ ಆಯ್ಕೆಗೂ, ಕೊವಿಡ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಎಲ್ಲರೂ ಅನುಭವಿಸಿದ ಖಿನ್ನತೆ, ಅನಿಶ್ಚಿತತೆ, ಏಕಾಂತವಾಸವೂ ಇದಕ್ಕೆ ಕಾರಣವಿರಬಹುದೆಂದು ನನಗೆ ಅನ್ನಿಸದೇ ಇರಲಿಲ್ಲ. ಆದರೆ ಈ ಸುಪ್ತ ಮನಸ್ಸಿನ ಭಾವನೆಗಳ ಸುತ್ತ ಪರಿಭ್ರಮಿಸುವ ಆರು ಕತೆಗಳನ್ನು ಕನ್ನಡಕ್ಕೆ ವಿಕ್ರಂರವರು ಮನಮುಟ್ಟುವಂತೆ ಅನುವಾದ ಮಾಡಿರುವುದಂತೂ ನಿಜ. ನಮ್ಮ ಸಮಕಾಲೀನ ಕಾಲಘಟ್ಟ ಇಲ್ಲಿನ ಕತೆಗಳ ಪ್ರಸ್ತುತತೆಯನ್ನು ಹೆಚ್ಚಿಸಿದೆ ಎನ್ನುವುದೂ ನಿರ್ವಿವಾದ.

ಸಮಾಜದಲ್ಲಿ ವರ್ಗ ತಾರತಮ್ಯ ಎಷ್ಟು ಹಾಸುಹೊಕ್ಕಾಗಿರುತ್ತದೆ, ಇಂತಹ ವಿಷಮ ಪರಿಸರದಲ್ಲಿ ಮುಗ್ಧ ಮಕ್ಕಳೂ ಅನುಕರಣೆಯ ಮೂಲಕ ಉಚ್ಚ – ನೀಚ, ಬಡವ – ಶ್ರೀಮಂತ ಎಂಬ ವರ್ಗೀಕರಣವನ್ನು ಅನುಸರಿಸಿಕೊಂಡು ಹೋಗಲು ಕಲಿತರೂ, ಮಕ್ಕಳ ಪ್ರಪಂಚದಲ್ಲಿ ಅಬಾಧಿತವಾಗಿ ಉಳಿದುಕೊಳ್ಳುವ ಒಂದು ಅಕೃತ್ರಿಮವಾದ , ಸುಮನೋಹರ ಮುಗ್ಧತೆಯೊಂದಿಗೆ ನಮ್ಮನ್ನು ಮುಖಾ-ಮುಖಿಯಾಗಿಸುವ ಕ್ಯಾಥರೀನ್ ಮ್ಯಾನ್ಸಿಫೀಲ್ಡ್​ಳ  ಕತೆ ‘ಬೊಂಬೆ ಮನೆ’ ನನಗೆ ರೊಮ್ಯಾಂಟಿಕ್ ಕವಿ ವಿಲಿಯಂ ಬ್ಲೇಕ್‌ನ Songs of Innocence and Songs of Experience ಗಳನ್ನು ಜ್ಞಾಪಿಸಿತು.

‘ಕುರುಡು ಕಾಂಚಾಣ ಕುಣಿಯುತಲಿತ್ತೋ, ಕಾಲಿಗೆ ಬಿದ್ದವರ ತುಳಿಯುತಲಿತ್ತೋ’ ಎಂಬಂತೆ ಹಣದ ದುರಾಸೆಯಿಂದ ಬಂದೆರಗುವ ಭೀಕರ ದುರಂತವನ್ನು ಮಾರ್ಮಿಕವಾಗಿ ಬಿಂಬಿಸುವ ಲಾರೆನ್ಸ್​ನ ‘ಮರದ ಕುದುರೆ’ ಮುನ್ನುಡಿಯಲ್ಲಿ ಎಸ್. ಆರ್. ವಿಜಯಶಂಕರ ಅವರು ಬರೆಯುವಂತೆ ‘ಭ್ರಮೆಯ ಕುದುರೆಯ ಮೇಲೆ ಕೂತು ಜೂಜಿನ ಕುದುರೆ ಮೇಲೆ ಹಣ ಕಟ್ಟಿ ಗೆಲ್ಲುವ ಪಾಲ್‌ನದು ಕನಸೋ, ನನಸೋ ತಿಳಿಯದಂತ ಕನಸು- ವಾಸ್ತವಗಳ ಲೋಕ.’ ಯಾವಾಗಲೂ ಹೆಚ್ಚು ಹಣ ಬೇಕೆಂದು ಹಪಹಪಿಸುವ ತಾಯಿಯ ಹಣದ ಅವಶ್ಯಕತೆಯನ್ನು ನೀಗಲು ಅವಳ ಮಗ, ಪುಟ್ಟ ಹುಡುಗ ಪಾಲ್ ಕುದುರೆ ಜೂಜಿನಲ್ಲಿ ಬಾಜಿ ಕಟ್ಟಿ, ತನ್ನ ಆಟದ ಮರದ ಕುದುರೆಯ ಮೇಲೆ ಆವೇಶ ಭರಿತನಾಗಿ ಸವಾರಿ ಮಾಡುತ್ತ ಯಾವ ಕುದುರೆ ಗೆಲ್ಲುವುದೆಂದು ಭವಿಷ್ಯ ನುಡಿದು, ತಾಯಿಗೆ ಹಣ ದೊರಕುವಂತೆ ಮಾಡಿ ಜ್ವರಪೀಡಿತನಾಗಿ ಸಾಯುವ ದಾರುಣ ಕತೆ ನಮ್ಮನ್ನು ದಿಗ್ಭ್ರಾಂತರನ್ನಾಗಿಸುತ್ತದೆ. ನೀರಡಿಕೆಯಾಗಿದೆಯೆಂದು ಹೊರಬಂದು ನೀರಿನ ತೊಟ್ಟಿಯಿಂದ ನೀರನ್ನು ಹೀರುತ್ತಿದ್ದ ಹಾವಿನ ಮೇಲೆ ಆಕ್ರಮಣ ಮಾಡುವ ಮನುಷ್ಯನ ನೀಚತನದ ಬಗ್ಗೆ ಲಾರೆನ್ಸ್ ಬರೆದ ಅಮೋಘ ಕವನದಂತೆ ಈ ಕತೆ ನಮ್ಮನ್ನು ಗಾಢವಾಗಿ ಕಲಕುತ್ತದೆ. ಕಾಡಿನಲ್ಲಿ ಒಬ್ಬಂಟಿಯಾಗಿ ಮರ ಕಡಿದು ಜೀವನ ಸಾಗಿಸುತ್ತಿದ್ದ ವ್ಯಕ್ತಿ, ತನ್ನ ಮನೆಗೆ ಹಿಮ ಕವಿದ ರಾತ್ರಿಯಲ್ಲಿ ಮುಂದೆ ದಾರಿ ಕ್ರಮಿಸಲಾಗದೇ ಬಂದ ವಯಸ್ಸಾದ ಅಪರಿಚಿತ ವ್ಯಕ್ತಿಯನ್ನು, ಅವನ ಬಳಿ ಇರುವ ಗುಂಡಾದ ಪ್ರಕಾಶ ಬೀರುವ ಬಿಲ್ಲೆಯನ್ನು ಅಪಹರಿಸುವ ಸಲುವಾಗಿ ನಿರ್ದಯವಾಗಿ ಕೊಲೆ ಮಾಡಿ ಬಳಿಕ ಆ ಬಿಲ್ಲೆಯನ್ನು ಹುಡುಕಲಾಗದೆ ಪರಿತಪಿಸುವ ಜಾರ್ಜ್ ಬರ‍್ಹೆಯ ಕತೆ ಸಾಂಕೇತಿಕವಾದ ಹೊಳಹುಗಳಿಂದ ಮಹಾಯಾನ ಬೌದ್ಧ ಪಂಥದ ಲಂಕಾವತಾರ ಸೂತ್ರವನ್ನು ನೆನಪಿಸುತ್ತದೆ. ಅದೃಶ್ಯವಾಗಿ ಬಿಡುವ ಓಡಿನ್‌ನ ಬಿಲ್ಲೆ ‘ವಸ್ತುಗಳು ಹೊರನೋಟಕ್ಕೆ ಕಂಡುಬರುವಂತೆ ಇರುವುದಿಲ್ಲ, ಭಿನ್ನವಾಗಿರುತ್ತವೆ’ ಎಂಬ ಗ್ರಹಿಕೆಯಂತಿದೆ.

ಎಳೆಯ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥನಾಗಿ ತನ್ನ ಅಜ್ಜನ ಸುಪರ್ದಿಗೆ ಬಂದು ಅವನ ದಬ್ಬಾಳಿಕೆಯನ್ನು ಸಹಿಸಲಾಗದೇ, ಎಂಟು ವರ್ಷಕ್ಕೇ ಕೆಲಸ ಮಾಡಲು ಪ್ರಾರಂಭಿಸಿದ ಗಾರ್ಕಿ ಸಹಿಸಿದ ಹೊಡೆತ ಬಡಿತಗಳೆಷ್ಟೋ! ಷೂಗಳನ್ನು ತಯಾರಿಸುವವನ ಸೇವಕನಾಗಿ, ಹಡಗಿನಲ್ಲಿ ಅಡುಗೆ ಮಾಡುವವನ ಸಹಾಯಕನಾಗಿ ದುಡಿದ ಬಾಲ ಕಾರ್ಮಿಕ ಗಾರ್ಕಿಗೆ, ನಿರ್ಗತಿಕರ, ಅಲೆಮಾರಿಗಳ ಜೀವನದ ಬವಣೆ ಅರ್ಥವಾಗಿತ್ತು. ಗಾರ್ಕಿ (ಕಹಿಯಾದದ್ದು) ಎಂಬ ಅಡ್ಡ ಹೆಸರಿನಿಂದಲೇ ಪ್ರಸಿದ್ಧನಾದ ಗಾರ್ಕಿಯ ‘ಹುಲ್ಲುಗಾವಲು’ ಕತೆಯಲ್ಲಿ ಬರುವ ಹಸಿವು-ಬಳಲಿಕೆ, ಬಡತನದಿಂದ ಕಂಗೆಟ್ಟ ಅಲೆಮಾರಿಗಳ ಮೃಗೀಯ ವರ್ತನೆ ನಮ್ಮನ್ನು ವಿಚಲಿತರನ್ನಾಗಿಸುತ್ತದೆ. ಹಲವಾರು ಬಾರಿ ಅನುವಾದಗೊಂಡಿರುವ ಟಾಲ್‌ಸ್ಟಾಯ್‌ರವರ ಕಥೆ ‘ಫಾದರ್ ಸೆರ್ಗಿಯಸ್’ ನಮ್ಮನ್ನು ಆಳವಾಗಿ ಸೆಳೆಯುತ್ತದೆ.

ಧನಿಕ ವರ್ಗಕ್ಕೆ ಸೇರಿದ ಸ್ಟೀಫನ್ ಕಸಾಟ್‌ಸ್ಕಿ, ಸ್ಫುರದ್ರೂಪಿ, ಸೈನ್ಯದ ತುಕಡಿಯ ಕಮಾಂಡರ್ ಹುದ್ದೆಗೇರಿದ ಉತ್ತಮ ಭವಿಷ್ಯವಿರುವ ತರುಣ. ಆದರೆ ತನಗೆ ನಿಶ್ಚಯವಾಗಿದ್ದ ಹುಡುಗಿ ಝಾರ್‌ನ ಪ್ರೇಯಸಿಯಾಗಿದ್ದಳೆಂದು ತಿಳಿದು ನಿಶ್ಚಿತಾರ್ಥವನ್ನು ಮುರಿದು ಕ್ರೈಸ್ತ ಸನ್ಯಾಸಿಯಾಗುತ್ತಾನೆ. ಸನ್ಯಾಸಿಯಾದವನಿಗೆ ಕೀರ್ತಿಯ ಹುಚ್ಚು ಕಾಡುತ್ತದೆ. ಕೊನೆಗೆ ಜನರ ಕಣ್ಣಲ್ಲಿ ಸಂತನಾಗಬೇಕೆಂಬ ಬಯಕೆ ಎಷ್ಟು ಅಹಮಿಕೆಯಿಂದ ಕೂಡಿದೆಯೆಂದು ಆಶ್ರಮವನ್ನೇ ತೊರೆದು ಹೋಗುವಾಗ, ಆತನಿಗೆ ಸ್ವಪ್ನದಲ್ಲಿ ತನ್ನ ಬಾಲ್ಯದ ದಿನಗಳಲ್ಲಿ ಎಲ್ಲರ ಮೂದಲಿಕೆಯನ್ನು ಸಹಿಸುತ್ತ ವಿಧೇಯಳಾಗಿ ಕೆಲಸ ಮಾಡುತ್ತಿದ್ದ ಕೆಲಸದ ಹುಡುಗಿ ಪಾಶಂಕಳನ್ನು ನೋಡಬೇಕೆಂಬ ಪ್ರೇರಣೆಯಾಗುತ್ತದೆ. ತನ್ನ ಮಗಳು, ಮೊಮ್ಮಕ್ಕಳೊಂದಿಗೆ ಸಂಗೀತ ಪಾಠ ಹೇಳುತ್ತ, ಜೀವನ ಸಾಗಿಸುವ ಪಾಶಂಕಳನ್ನು ನೋಡಿದಾಗ ಕಸಾಟ್‌ಸ್ಕಿಗೆ ಜ್ಞಾನೋದಯವಾಗುತ್ತದೆ.

Vaishaliyaana column by Dr KS Vaishali

ಅನುವಾದಕ ವಿಕ್ರಂ ಚದುರಂಗ

‘ನಾನು ಇಷ್ಟು ಕಾಲವೂ ದೇವರ ಹೆಸರಿನಲ್ಲಿ ಸೋಗು ಹಾಕಿಕೊಂಡು ಚೆನ್ನಾಗಿ ನಟನೆ ಮಾಡಿದೆ. ಮನುಷ್ಯನಿಗಾಗಿ ಬದುಕಬೇಕೆಂಬುದು ಪಾಶಂಕಳ ಆಸೆ. ಆದರೆ ಮನುಷ್ಯನಿಗೋಸ್ಕರ ಅವಳು ಜೀವನ ಸಾಗಿಸುತ್ತಿಲ್ಲ. ಅವಳು ನಿಜವಾಗಿ ದೇವರಿಗಾಗಿ ಬದುಕಿದ್ದಾಳೆ. ಹೌದು. ನನ್ನ ಕೀರ್ತಿಶನಿ ನಾನು ಸೇವೆ ಮಾಡದಂತೆ ಕಟ್ಟಿಹಾಕಿತ್ತು. ನನಗೆ ದೇವರಿಲ್ಲ. ಕೀರ್ತಿಗೋಸ್ಕರ, ಗೌರವ ಸಂಪಾದನೆಗೋಸ್ಕರ ಸಂತನಾಗಲೇಬೇಕು ಎಂಬ ಆಮಿಷದಿಂದ ದೇವರ ಸೇವೆ ಮಾಡುತ್ತಿದ್ದೆ. ನಾನು ಗರ್ವದಿಂದ, ಮದದಿಂದ, ಅಹಂಕಾರದಿಂದ , ಬೀಗಬೇಕಾಗಿತ್ತು. ಹೌದು ಒಪ್ಪಿಕೊಂಡೆ . ಈಗ ದೇವರನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ.’ ಎನ್ನುವ ಕಸಾಟ್‌ಸ್ಕಿ ನಮ್ಮನ್ನು ಕಾಡುತ್ತಾನೆ. ಸಂತನಾಗಿ ಹುತಾತ್ಮನಾಗಬೇಕೆಂಬ ಅಮಲಿನಲ್ಲಿದ್ದ ಟಿ.ಎಸ್ ಎಲಿಯಟ್ಟನ ನಾಟಕ ‘ಮರ್ಡರ್ ಇನ್ ದಿ ಕಥೀಡ್ರಲ್’ ನ ನಾಯಕ ಬೆಕೆಟ್‌ನ ನೆನಪಾಗುತ್ತದೆ . ವಿಕ್ರಂರವರ ಅನುವಾದ ಪರಿಣಾಮಕಾರಿಯಾಗಿ ಓದಿಸಿಕೊಳ್ಳುತ್ತದೆ. ನಮ್ಮನ್ನು ತೀವ್ರವಾದ ಆತ್ಮಾವಲೋಕನಕ್ಕೆ ಪ್ರೇರೇಪಿಸುವ ಈ ಆರ್ಕಿಟೈಪಲ್ ಮಾದರಿಯ ಕತೆಗಳು ನಮ್ಮ ಈಗಿನ ಪರಿಸ್ಥಿತಿಯಲ್ಲಿ ಅತ್ಯಂತ ಮಹತ್ವದವು ಎಂದೆನಿಸುತ್ತದೆ.

ಅನುವಾದದ ಬಗ್ಗೆ ಇನ್ನೂ ಒಂದೆರಡು ವಿಚಾರಗಳನ್ನು ಹಂಚಿಕೊಳ್ಳಲೇಬೇಕು . ಈ ಪದಶಃ ಅನುವಾದದ ಗೀಳು ಕೆಲವೊಮ್ಮೆ ಎಷ್ಟು ಅಸಂಬದ್ಧವಾಗಿ ಬಿಡಬಲ್ಲದೆಂದರೆ, ಪದಗಳ ಜೋಡಣೆಯ ಭರದಲ್ಲಿ ವಾಕ್ಯಸರಣಿಯೇ ಗೋಜಲಾಗಿಬಿಡಬಹುದು. ಬೈಬಲಿಲ್ಲನ ಲ್ಯಾಟಿನ್ ಆವತರಣಿಕೆಯ ಕರ್ತೃವಾದ ಜೆರೋಮ್‌ನ ಆದರ್ಶವಾದ ಈ Metaphrase ನ ತತ್ವ, ಪವಿತ್ರ ಗ್ರಂಥವನ್ನು ಅನುವಾದಿಸಬೇಕಾದರೆ, ದೈವವಾಣಿಗೆ ಅಪಚಾರವೆಸಗದಂತೆ ಒಂದೊಂದು ಶಬ್ದವನ್ನೂ ಅಪಾರ ನಿಷ್ಠೆಯಿಂದ ಅನುವಾದ ಮಾಡಬೇಕೆಂಬ ಪರಿಕಲ್ಪನೆಯಿಂದ ಬಂದಿದೆ. ಇಂದು ಎಲ್ಲಾ ವಿಷಯದಲ್ಲೂ ಈ ತತ್ವವೇ ಅನುವಾದವನ್ನು ನಿಯಂತ್ರಿಸುತ್ತಿದೆ. ಆದರೆ ಈ ಬಗೆಯ ಪರಿಕಲ್ಪನೆಗೆ ಅದರದೇ ಆದ ಇತಿಮಿತಿಗಳಿವೆ. ಅನುವಾದವೆನ್ನುವುದು ಒಂದು ಅನುಸಂಧಾನ ಕೂಡ ಹೌದು. ಅದು ಎರಡು ಸಂಸ್ಕೃತಿಗಳ ನಡುವೆ ಸೇತುವೆಯೂ ಹೌದು. ಫ್ರೆಡರಿಕ್ ಶ್ಲೀರ್‌ಮ್ಯಾಕರ್ ಹೇಳುವಂತೆ ಮೂಲ ಭಾಷೆಯ ಸಾಂಸ್ಕೃತಿಕ ತಳಹದಿಯನ್ನೂ ಅನುವಾದಿತ ಕೃತಿಯಲ್ಲಿ ಸೆರೆಹಿಡಿಯಬೇಕಾದ್ದೂ ಕೂಡ ಅನುವಾದದ ಮುಖ್ಯ ಅಂಶಗಳಲ್ಲೊಂದು. ಹಾಗೆ ನೋಡಿದರೆ ನಾವೆಲ್ಲರೂ ಅನುವಾದಕರೇ. ಒಂದು ಭಾಷೆಯಲ್ಲಿ ನಾವು ಎಷ್ಟೋ ಬಾರಿ ಮೂಲ ಕೃತಿಗಳನ್ನು ಓದದೆ, ಅದರ ಸಾರಾಂಶವನ್ನು ಬೇರೆ ಮೂಲಗಳಿಂದ ತಿಳಿದುಕೊಂಡಿರುತ್ತೇವೆ. ಇವೆಲ್ಲ ಒಂದು ರೀತಿಯಲ್ಲಿ ಅನುವಾದಗಳೇ ಆಗಿರುತ್ತವೆ. ಹೀಗಾಗಿ ಈ ಎಲ್ಲ ಅಂಶಗಳನ್ನೂ ಸಮನ್ವಯಗೊಳಿಸಿ ಅನುವಾದವನ್ನು ಮಾಡುವುದು ಸಂಕೀರ್ಣವಾದ ಸವಾಲಾಗಿ ಪರಿಣಮಿಸುತ್ತದೆ.

253 ಕನ್ನಡ ಪುಸ್ತಕಗಳನ್ನು ಇಲ್ಲಿಯವರೆಗೆ ಪ್ರಕಟಿಸಿ, ಸುವರ್ಣ ಮಹೋತ್ಸವವನ್ನು ಆಚರಿಸಿದ ಕ್ರೈಸ್ಟ್  ವಿಶ್ವವಿದ್ಯಾನಿಲಯದ ಕನ್ನಡ ಸಂಘದ ಕೊಡುಗೆ ಅನುಪಮ ಸಾಹಸವೇ ಸರಿ. ಇದೊಂದು ಅತ್ಯಂತ ಶ್ಲಾಘನೀಯ ಕೊಡುಗೆ. ಬಿಡುಗಡೆಯ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿದ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಕುಲಸಚಿವ , ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಕನ್ನಡ- ಕೊಂಕಣಿ ಸಾಹಿತ್ಯದ ಬಗ್ಗೆ ವಿಶೇಷವಾದ ಆಸಕ್ತಿ – ಕಾಳಜಿಗಳನ್ನು ಹೊಂದಿರುವ ಡಾ . ಅನಿಲ್ ಪಿಂಟೋರವರು, ತಮ್ಮ ಭಾಷಣದಲ್ಲಿ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಹಿತ್ಯ – ಸಾಮಾಜಿಕ ಶಾಸ್ತ್ರಗಳ ಜೊತೆಯಲ್ಲಿ ವಿಜ್ಞಾನ ಕ್ಷೇತ್ರದಿಂದಲೂ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದ ಮಾಡುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು. ಉತ್ತಮ ಅನುವಾದಿತ ಕೃತಿಯನ್ನು ನೀಡಿದ ಡಾ. ವಿಕ್ರಂ ಚದುರಂಗ ಹಾಗೂ ಕನ್ನಡ ಸಾಹಿತ್ಯ ಜಗತ್ತಿಗೆ 253 ಕೃತಿಗಳನ್ನು ನೀಡಿದ ಕ್ರೈಸ್ಟ್  ವಿಶ್ವವಿದ್ಯಾಲಯದ ಕನ್ನಡ ಸಂಘದ ಈಗಿನ ಸಂಚಾಲಕಿ ರತಿ, ಕುಲಸಚಿವ ಡಾ. ಅನಿಲ್ ಪಿಂಟೋರವರಿಗೆ ಹಾರ್ದಿಕ ಅಭಿನಂದನೆಗಳು.

(ಮುಂದಿನ ಯಾನ 13.9.2022)

ಅಂಕಣದ ಎಲ್ಲಾ ಭಾಗಗಳನ್ನು ಓದಲು ಕ್ಲಿಕ್ ಮಾಡಿ

Published On - 5:17 pm, Sat, 3 September 22

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ