Tamil Nadu: ಬಿರ್ಯಾನಿ ತಿಂದ ಕೆಲಹೊತ್ತಲ್ಲೇ 10 ವರ್ಷದ ಬಾಲಕಿ ಸಾವು; 40ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಬಿರ್ಯಾನಿ ತಿಂದು ಮೃತಪಟ್ಟ ಬಾಲಕಿಯ ಹೆಸರು ಲೋಕ್ಷಣಾ. ಈಕೆ ತನ್ನ ಕುಟುಂಬದವರೊಂದಿಗೆ ಉಪಾಹಾರಗೃಹಕ್ಕೆ ಹೋಗಿ ಬಿರ್ಯಾನಿ ತಿಂದಿದ್ದಳು. ಆದರೆ ಕೆಲವೇ ಹೊತ್ತಲ್ಲಿ ವಾಂತಿ ಶುರುವಾಗಿದೆ.
ತಿರುವನಣ್ಣಮಲೈ: ತಮಿಳುನಾಡಿನ (Tamil Nadu) ತಿರುವಣ್ಣಾಮಲೈ ಜಿಲ್ಲೆ ಅರ್ಣಿ ಎಂಬಲ್ಲಿರುವ 7ಸ್ಟಾರ್ ಹೋಟೆಲ್ವೊಂದರಲ್ಲಿ ಚಿಕನ್ ತಂದೂರಿ ಬಿರ್ಯಾನಿ (Chicken Tandoori Biryani) ತಿಂದ 10 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹಾಗೇ, 40ಕ್ಕೂ ಹೆಚ್ಚು ಮಂದಿ ಆರೋಗ್ಯ ಹಾಳಾಗಿದ್ದು, ಅದರಲ್ಲಿ 10 ಮಂದಿಯ ಪರಿಸ್ಥಿತಿ ತುಸು ಗಂಭೀರವಾಗಿಯೇ ಇದೆ. ಅದರಲ್ಲೂ ಮೂರು ಜನ ಮೃತ ಬಾಲಕಿಯ ಕುಟುಂಬದವರೇ ಆಗಿದ್ದಾರೆ.
ಇಲ್ಲಿ ಚಿಕನ್ ತಂದೂರಿ ಬಿರ್ಯಾನಿ ತಿಂದವರಿಗೆಲ್ಲ ವಾಂತಿ, ವಾಕರಿಕೆ, ಅತಿಸಾರ ಶುರುವಾಗಿದೆ. ಎಲ್ಲರನ್ನೂ ಅರ್ಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕನ್ ಪೀಸ್ ಹಳಸಿತ್ತು ಮತ್ತು ಕಲುಷಿತವಾಗಿತ್ತು. ಅದನ್ನು ಪರಿಶೀಲನೆ ಮಾಡದೆ ತಂದೂರಿ ಚಿಕನ್ ಬಿರ್ಯಾನಿ ಮಾಡಿ ಗ್ರಾಹಕರಿಗೆ ಬಡಿಸಿದ್ದಾರೆ. ಅದು ಫುಡ್ ಪಾಯ್ಸನ್ ಆಗಿದ್ದರಿಂದ ತಿಂದವರ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿಯ ಹೆಸರು ಲೋಕ್ಷಣಾ. ಈಕೆ ತನ್ನ ಕುಟುಂಬದವರೊಂದಿಗೆ ಉಪಾಹಾರಗೃಹಕ್ಕೆ ಹೋಗಿ ಬಿರ್ಯಾನಿ ತಿಂದಿದ್ದಳು. ಆದರೆ ಕೆಲವೇ ಹೊತ್ತಲ್ಲಿ ವಾಂತಿ ಶುರುವಾಗಿದೆ. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಬಾಲಕಿಯ ಸಾವಿನಿಂದ ಸ್ಥಳೀಯರು ತುಂಬ ಕಂಗಾಲಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ಜಂಟಿ ತಂಡ ಆ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಆ ಬಿರ್ಯಾನಿ ಪರೀಕ್ಷೆಗೆಂದು ಸ್ಯಾಂಪಲ್ ತೆಗೆದುಕೊಂಡಿದ್ದಾರೆ. ಹಾಗೇ, ಅಲ್ಲಿದ್ದ ಸುಮಾರು 15 ಕೆಜಿ ಚಿಕನ್ಗಳು ಹಳಸಿವೆ ಎಂದು ಮೇಲ್ನೋಟಕ್ಕೇ ಗೊತ್ತಾಗಿದ್ದು, ಅದನ್ನೆಲ್ಲ ಜಪ್ತಿ ಮಾಡಲಾಗಿದೆ. ಸದ್ಯ ಆ ಉಪಾಹಾರ ಗೃಹವನ್ನೇ ಪೊಲೀಸರು ಸೀಲ್ ಮಾಡಿದ್ದಾರೆ. ಹಾಗೇ, ನಗರದಲ್ಲಿ ಇರುವ ಎಲ್ಲ ನಾನ್ ವೆಜ್ ಹೋಟೆಲ್ಗಳಲ್ಲಿ ಸಂಗ್ರಹಿಸಡಲಾದ ಚಿಕನ್ ಮತ್ತಿತರ ಮಾಂಸಗಳ ಕ್ವಾಲಿಟಿ ಚೆಕ್ ಮಾಡುವ ಅಭಿಯಾನ ಕೂಡ ಪ್ರಾರಂಭವಾಗಿದೆ.
ಇದನ್ನೂ ಓದಿ: 120 ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
(10 year old Girl dies 40 hospitalised after consuming biryani In Tamil Nadu)