Shocking News: ಮಲಗಿದ್ದ 2 ತಿಂಗಳ ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದ ಕೋತಿಗಳು!
ಉತ್ತರ ಪ್ರದೇಶದ ಸೀತಾಪುರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮನೆಯ ವರಾಂಡದಲ್ಲಿ ಮಲಗಿಸಿದ್ದ ಎರಡು ತಿಂಗಳ ಮಗುವನ್ನು ಮಂಗಗಳ ಗುಂಪೊಂದು ಎತ್ತಿಕೊಂಡು ಹೋಗಿ, ನೀರಿನ ಡ್ರಮ್‌ನಲ್ಲಿ ಮುಳುಗಿಸಿರುವ ದಾರುಣ ಘಟನೆ ನಡೆದಿದೆ. ಇದರಿಂದ ಆ ಮಗು ಸಾವನ್ನಪ್ಪಿದೆ. ಮಗು ಎಲ್ಲಿ ಹೋಯಿತೆಂದು ಅಪ್ಪ-ಅಮ್ಮ ಹುಡುಕುವಾಗ ನೀರಿನ ಡ್ರಮ್ ಒಳಗೆ ಶಿಶುವಿನ ಶವ ಸಿಕ್ಕಿದೆ!

ಸೀತಾಪುರ, ಸೆಪ್ಟೆಂಬರ್ 5: ಸಾವು ಯಾರನ್ನು ಯಾವ ರೀತಿ ಕಾಡುತ್ತದೆ, ಯಾರು ಯಾವ ರೂಪದಲ್ಲಿ ನಮ್ಮ ಮೃತ್ಯುವಾಗಿ ಬರುತ್ತಾರೆ ಎಂದು ಹೇಳಲಾಗದು. ಉತ್ತರ ಪ್ರದೇಶದ ಸೀತಾಪುರದಲ್ಲಿ ನವಜಾತ ಶಿಶುವಿಗೆ ಸಾವು ಕೋತಿಗಳ ರೂಪದಲ್ಲಿ ಬಂದಿದೆ! ಮನೆಯಲ್ಲಿ ಮಲಗಿಸಿದ್ದ ಮಗುವನ್ನು ಎತ್ತಿಕೊಂಡು ಹೋದ ಮಂಗಗಳು (Monkeys) ನೀರು ತುಂಬಿದ್ದ ಡ್ರಮ್ ಒಳಗೆ ಆ ಮಗುವನ್ನು ಎಸೆದಿವೆ. ನೀರಿನಲ್ಲಿ ಮುಳುಗಿ ಮಗು ಪ್ರಾಣ ಬಿಟ್ಟಿದೆ. ಈ ಹೃದಯವಿದ್ರಾವಕ ಘಟನೆ ಸುತ್ತಮುತ್ತಲಿನವರಲ್ಲಿ ಆತಂಕ ಮೂಡಿಸಿದ್ದು, ಮನೆಯವರು ದುಃಖ ಹೇಳತೀರದಾಗಿದೆ. ಆದರೆ, ಈ ದುರಂತಕ್ಕೆ ಶಿಕ್ಷೆ ನೀಡುವುದಾದರೂ ಯಾರಿಗೆ?
ಮನೆಯ ವರಾಂಡದಲ್ಲಿ 2 ತಿಂಗಳ ಮಗುವನ್ನು ಮಲಗಿಸಲಾಗಿತ್ತು. ಸದ್ದಿಲ್ಲದೆ ಬಂದು ಮಂಚದಿಂದ ಮಗುವನ್ನು ಎತ್ತಿಕೊಂಡು ಹೋದ ಕೋತಿಗಳು ಮನೆಯ ಟೆರೇಸ್ ಮೇಲೆ ಹಾರಿ ಹೋಗಿವೆ. ಅಲ್ಲಿದ್ದ ನೀರಿನ ಡ್ರಮ್‌ನಲ್ಲಿ ಮಗುವನ್ನು ಬಿಸಾಡಿವೆ. ಇದರಿಂದ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಮಖ್ರೆಹ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ಸೂರಜ್‌ಪುರ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದ್ದು, ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ.
ಇದನ್ನೂ ಓದಿ: ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ, ಮುತ್ತಿಟ್ಟು ಅಂತಿಮ ವಿದಾಯ ಹೇಳಿದ್ದು ಹೀಗೆ
ಗುರುವಾರ ಅನುಜ್ ಕುಮಾರ್ ಅವರ ಮಗು ಮನೆಯ ವರಾಂಡಾದಿಂದ ಕಾಣೆಯಾಗಿತ್ತು. ಅಲ್ಲೇ ಮಲಗಿಸಿದ್ದ ಮಗು ಎಲ್ಲೂ ಕಾಣದಿದ್ದಾಗ ಮನೆಯವರು ಗಾಬರಿಯಾಗಿ ಹುಡುಕಾಡಿದ್ದರು. ಮಗುವಿಗೆ ಸ್ನಾನ ಮಾಡಿಸಿ ಮಂಚದ ಮೇಲೆ ಮಲಗಿಸಿದ್ದ ತಾಯಿ ಸವಿತಾ ತಾನು ಸ್ನಾನ ಮಾಡಲೆಂದು ಬಾತ್ರೂಂಗೆ ಹೋಗಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ ಮಂಗಗಳು ಹಾಸಿಗೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿವೆ. ಮಗು ಕಾಣೆಯಾಗಿದೆ ಎಂದು ತಿಳಿದ ನಂತರ ಸವಿತಾ ಅವರ ಮನೆಯವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಬಹಳ ಸಮಯ ಹುಡುಕಾಟ ನಡೆಸಿದ ನಂತರ ಮಗುವಿನ ಶವ ಮನೆಯ ಟೆರೇಸಿನ ಮೇಲೆ ನೀರು ತುಂಬಿದ ಡ್ರಮ್‌ನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಮಂಗಗಳು ಮಗುವನ್ನು ಮಂಚದಿಂದ ತೆಗೆದುಕೊಂಡು ಡ್ರಮ್‌ನಲ್ಲಿ ಎಸೆದಿವೆ. ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದ ಆ ಮಗುವಿಗೆ ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಮಗುವಿನ ಅನಿರೀಕ್ಷಿತ ಸಾವು ಕುಟುಂಬವನ್ನು ದಂಗಾಗಿಸಿದೆ. ಆ ದಂಪತಿಗೆ ಇದು ಮೊದಲ ಮಗುವಾಗಿತ್ತು.
ಇದನ್ನೂ ಓದಿ: ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ದೃಶ್ಯ ನೋಡಿದ್ರೆ ಹೃದಯ ಹಿಂಡಿ ಬರುತ್ತೆ
ಮಗು ಸಾವನ್ನಪ್ಪಿದ ಬಳಿಕ ಪೊಲೀಸರಿಗೆ ತಿಳಿಸದೆ ಆ ಕುಟುಂಬವು ಅಂತ್ಯಕ್ರಿಯೆಗಳನ್ನು ನಡೆಸಿದೆ. ಇಂದು ಈ ಸುದ್ದಿ ಇಡೀ ಗ್ರಾಮದ ತುಂಬ ಹರಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಗುವಿನ ತಂದೆ ಅನುಜ್ ಕುಮಾರ್ ತಮ್ಮ ಮನೆಯ ಹೊರಗೆ ವಿದ್ಯುತ್ ಅಂಗಡಿಯನ್ನು ನಡೆಸುತ್ತಿದ್ದಾರೆ. ಇಲ್ಲಿಯವರೆಗೆ, ಆ ಕುಟುಂಬವು ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ ಸಾವಿನ ಸುತ್ತಲಿನ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಪ್ರಶ್ನಿಸಲು ಮತ್ತು ಹೇಳಿಕೆಗಳನ್ನು ದಾಖಲಿಸಲು ಪ್ರಾರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




