ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಐವರು ಸಾವು, 30 ಮನೆಗಳು ಬೆಂಕಿಗಾಹುತಿ

ಮಣಿಪುರದ ಕಾಮ್‌ಜೊಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಇಂದು ಭುಗಿಲೆದ್ದ ಭೀಕರ ಹಿಂಸಾಚಾರದಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಕಾಮ್‌ಜೊಂಗ್‌ನ ಛಸ್ಸಾದ್ ಪ್ರದೇಶದಲ್ಲಿ 10 ಮನೆಗಳು ಮತ್ತು 20 ಅಂಗಡಿಗಳನ್ನು ಬೆಂಕಿಗೆ ಆಹುತಿ ಮಾಡಲಾಗಿದೆ. ಮಣಿಪುರದಲ್ಲಿ ಇತ್ತೀಚಿನ ದಿನಗಳಲ್ಲಿ ನಾಗಾ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಹಿಂಸಾಚಾರ ತೀವ್ರಗೊಂಡಿದ್ದು, ಇದರ ಹಿನ್ನೆಲೆಯಲ್ಲಿ ‘ಕಮಿಟಿ ಆನ್ ಟ್ರೈಬಲ್ ಯೂನಿಟಿ’ ಸಂಘಟನೆಯು ಇಂದು ಸಂಜೆ 6 ಗಂಟೆಯಿಂದ ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ 24 ಗಂಟೆಗಳ ಕಾಲ ಸಂಪೂರ್ಣ ಬಂದ್‌ಗೆ ಕರೆ ನೀಡಿದೆ.

ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಐವರು ಸಾವು, 30 ಮನೆಗಳು ಬೆಂಕಿಗಾಹುತಿ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ
Image Credit source: TV9

Updated on: Oct 10, 2026 | 10:23 PM

ಇಂಫಾಲ, ಅಕ್ಟೋಬರ್ 10: ಕುದಿಯುತ್ತಿರುವ ಮಣಿಪುರದಲ್ಲಿ ಇಂದು ಮತ್ತೊಮ್ಮೆ ಸಶಸ್ತ್ರ ಗುಂಪುಗಳ ನಡುವೆ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, 5 ಜನರು ಕೊಲೆಯಾಗಿದ್ದಾರೆ ಹಾಗೂ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ರಾಜ್ಯದ ಕಾಮ್‌ಜೊಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಈ ತಾಜಾ ಘರ್ಷಣೆಗಳು ನಡೆದಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾಮ್‌ಜೊಂಗ್ ಜಿಲ್ಲೆಯ ಛಸ್ಸಾದ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ವೇಳೆ ನಡೆದ ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ಛಸ್ಸಾದ್‌ನಲ್ಲಿ ಗುಂಡಿನ ದಾಳಿ:

ಕಾಮ್‌ಜೊಂಗ್ ಜಿಲ್ಲೆಯ ಛಸ್ಸಾದ್‌ನಲ್ಲಿ ಇಂದು ಬೆಳಿಗ್ಗೆ ಶಂಕಿತ ಸಶಸ್ತ್ರ ಗುಂಪುಗಳು ನಡೆಸಿದ ಗುಂಡಿನ ದಾಳಿಯಲ್ಲಿ 23 ವರ್ಷದ ಮೈಕೆಲ್ ಂಗಮ್ಮಿನ್‌ಲೆನ್ ಹಾವೊಕಿಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ 9.40ರ ಸುಮಾರಿಗೆ 5 ಮಕ್ಕಳ ತಾಯಿಯಾದ ಕುಕಿ ಮಹಿಳೆ ಡೋಮ್ಖೋನೇ ತೌಥಾಂಗ್ ಎಂಬುವವರು ಗುಂಡೇಟಿನಿಂದ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ

ಉಖ್ರುಲ್ ಜಿಲ್ಲೆಯಲ್ಲಿ ಹತ್ಯೆ:

ಉಖ್ರುಲ್ ಜಿಲ್ಲೆಯ ಟಿ. ಕಾಸೋಮ್ ಸಮೀಪದ ಯಾವೋಲೆನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ 40 ವರ್ಷದ ಸಂದೀಪ್ ರಾಯ್ ಅವರ ಮೇಲೆ ಶಂಕಿತರು ಗುಂಡಿನ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.


ಗಡಿಯಲ್ಲಿ ಇಬ್ಬರು ನಾಗಾ ಗ್ರಾಮಸ್ಥರ ಹತ್ಯೆ:

ಕಾಮ್‌ಜೊಂಗ್ ಜಿಲ್ಲೆಯ ಮಣಿಪುರ-ಮ್ಯಾನ್ಮಾರ್ ಗಡಿಯಲ್ಲಿರುವ ನಿಂಗ್ಚೌ ಗ್ರಾಮದಲ್ಲಿ ಇಂದು ಬೆಳಿಗ್ಗೆ 9.30ರ ಸುಮಾರಿಗೆ ಇಬ್ಬರು ನಾಗಾ ಗ್ರಾಮಸ್ಥರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇವರನ್ನು 35 ವರ್ಷದ ಂಗಚಾನ್ಸೊ ನಿಂಗ್ಷೆನ್ ಮತ್ತು 48 ವರ್ಷದ ಲೀಶಿಶಾನ್ ಲೀಶಿಡಾಂಗ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ನಿಷೇಧಾಜ್ಞೆ ಜಾರಿ:

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಾಮ್‌ಜೊಂಗ್ ಜಿಲ್ಲಾ ಆಡಳಿತವು ಛಸ್ಸಾದ್ ಪೊಲೀಸ್ ಗೇಟ್ ಜಂಕ್ಷನ್ ಸುತ್ತಮುತ್ತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ. ಜಂಕ್ಷನ್‌ನ 400 ಮೀಟರ್ ಸುತ್ತಳತೆಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

 

ಮೈತೇಯಿ ಮತ್ತು ಕುಕಿ-ಜೋ ಸಮುದಾಯಗಳ ನಡುವೆ ಕಳೆದ ಮೇ 2023ರಿಂದ ಆರಂಭವಾದ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ 260ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಪ್ರಸ್ತುತ ಉಖ್ರುಲ್, ಕಾಮ್‌ಜೊಂಗ್, ಕಾಂಗ್‌ಪೋಕ್ಪಿ ಸೇರಿದಂತೆ ಬೆಟ್ಟದ ಸಾಲಿನ ಜಿಲ್ಲೆಗಳಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us