ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್

17 ಬಾರಿ ತಪ್ಪಿಸಿಕೊಂಡ ಸೈಫುಲ್ಲಾ ಸೇರಿದಂತೆ ಕಳೆದ 1 ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 7 ಭಯೋತ್ಪಾದಕರನ್ನು ಎನ್​ಕೌಂಟರ್ ಮಾಡಲಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಗೆಲುವು ದೊರೆತಿದೆ. ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಚತ್ರೂ ಅರಣ್ಯ ಪ್ರದೇಶದಲ್ಲಿ ಸಕ್ರಿಯರಾಗಿದ್ದ ಜೈಶ್-ಎ-ಮೊಹಮ್ಮದ್‌ನ ಉನ್ನತ ಕಮಾಂಡರ್ ಸೈಫುಲ್ಲಾ ಸೇರಿದಂತೆ 7 ಉಗ್ರರನ್ನು ಒಂದು ವರ್ಷದ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿವೆ.

ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್
Encounter
Image Credit source: iStock

Updated on: Feb 23, 2026 | 5:28 PM

ಶ್ರೀನಗರ, ಫೆಬ್ರವರಿ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲಗಳ ನಿರ್ಮೂಲನೆಯ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಕಳೆದ 1 ತಿಂಗಳಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ)ಗೆ ಸಂಬಂಧಿಸಿದ 7 ಉಗ್ರರನ್ನು ತಟಸ್ಥಗೊಳಿಸಿವೆ. ಇದರಲ್ಲಿ ಹಿಂದಿನ ದಾಳಿಗಳಿಗೆ ಸಂಬಂಧಿಸಿದ ಉನ್ನತ ಕಮಾಂಡರ್ ಕೂಡ ಸೇರಿದ್ದಾನೆ. ಕಿಶ್ತ್ವಾರ್‌ನಲ್ಲಿ ನಡೆದ ಭಾನುವಾರದ ಎನ್‌ಕೌಂಟರ್​ನಲ್ಲಿ (Encounter) ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿತ್ತು. ಇದಕ್ಕೂ ಮೊದಲು, ಫೆಬ್ರವರಿ 4ರಂದು ಉಧಂಪುರದಲ್ಲಿರುವ ರಾಮನಗರ ಕಾಡಿನಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಜನವರಿ 23ರಂದು ಕಥುವಾದ ಪರ್ಹೆತಾರ್ ಗ್ರಾಮದಲ್ಲಿ ಒಬ್ಬನನ್ನು ತಟಸ್ಥಗೊಳಿಸಲಾಗಿತ್ತು.

“ನಮ್ಮ ಪ್ರದೇಶಕ್ಕೆ ಯಾರೇ ಬಂದರೂ ಭಯೋತ್ಪಾದಕರನ್ನು ನಾವು ತಟಸ್ಥಗೊಳಿಸುತ್ತಲೇ ಇರುತ್ತೇವೆ. ಫೆಬ್ರವರಿಯಲ್ಲಿ ನಾವು 6 ಜೆಇಎಂ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಭಯೋತ್ಪಾದಕರಿಗೆ ಸಹಾಯ ಮಾಡಿದ ಸ್ಥಳೀಯರ ಬಗ್ಗೆಯೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥರನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಎನ್​ಕೌಂಟರ್​ನಲ್ಲಿ ಸಾವು

ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ತಟಸ್ಥಗೊಳಿಸಿದ ಮೂವರು ಭಯೋತ್ಪಾದಕರಲ್ಲಿ ಈ ಹಿಂದೆ ಹಲವಾರು ಎನ್‌ಕೌಂಟರ್‌ಗಳಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಜೆಇಎಂ ಕಮಾಂಡರ್ ಸೈಫುಲ್ಲಾ ಕೂಡ ಒಬ್ಬ. ಗುಂಡಿನ ಚಕಮಕಿಯ ಸಮಯದಲ್ಲಿ ಆತ ಅಡಗಿಕೊಂಡಿದ್ದ ಮಣ್ಣಿನ ಮನೆ ಬೆಂಕಿಗೆ ಆಹುತಿಯಾದ ಕಾರಣದಿಂದ ಹತ್ಯೆಗೀಡಾದ ಎಲ್ಲಾ ಭಯೋತ್ಪಾದಕರ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.


ಸೈಫುಲ್ಲಾ ಸುಮಾರು 5 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದನೆಂದು ತಿಳಿದು ಬಂದಿದೆ. ಅಂದಿನಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ. ಭದ್ರತಾ ಪಡೆಗಳ ಮೇಲೆ ಹಲವಾರು ಮಾರಕ ದಾಳಿಗಳ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಇದರಲ್ಲಿ ಜುಲೈ 2024ರಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು. ಅವನು 17 ಬಾರಿ ಸಿಕ್ಕಿಬಿದ್ದಿದ್ದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ 12 ನಕ್ಸಲರ ಎನ್‌ಕೌಂಟರ್‌, ಮೂವರು ಜವಾನರ ಸಾವು

ಈ ತಿಂಗಳ ಆರಂಭದಲ್ಲಿ, ಜೆಇಎಂನ ಇನ್ನೊಬ್ಬ ಕಮಾಂಡರ್ ಸೇರಿದಂತೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ತಟಸ್ಥಗೊಳಿಸಿದವು. ತಟಸ್ಥಗೊಂಡ ಭಯೋತ್ಪಾದಕರಿಂದ ಎಂ4 ಕಾರ್ಬೈನ್ ಮತ್ತು ಎಕೆ ಅಸಾಲ್ಟ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಪ್ರಮುಖ ಜೈಶ್ ಭಯೋತ್ಪಾದಕ ಆದಿಲ್‌ನನ್ನು ಛಾತ್ರೂ ಪ್ರದೇಶದಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದವು. ಆದಿಲ್ ಪಾಕಿಸ್ತಾನಿ ಪ್ರಜೆಯಾಗಿದ್ದು, ಸೈಫುಲ್ಲಾನ ಬಲಗೈ ಬಂಟ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ