ಛತ್ತೀಸ್ಗಢದಲ್ಲಿ ನಕ್ಸಲ್ ನಾಯಕ ಸೇರಿ 10 ನಕ್ಸಲರ ಎನ್‌ಕೌಂಟರ್
ಛತ್ತಿಸ್ ಗಢದಲ್ಲಿ ಹಿರಿಯ ನಕ್ಸಲ್ ನಾಯಕ ಸೇರಿದಂತೆ 10 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಮೈನ್‌ಪುರ ಬಳಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ. ನಕ್ಸಲರ ಹಿರಿಯ ನಾಯಕ ಸೇರಿದಂತೆ 10 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೈನ್‌ಪುರ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಉಪಸ್ಥಿತಿಯ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

ರಾಯ್‌ಪುರ, ಸೆಪ್ಟೆಂಬರ್ 11: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿರಿಯ ಮಾವೋವಾದಿ ಕಮಾಂಡರ್ ಮೋಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್ ಮತ್ತು ಇತರ 9 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಕೌಂಟರ್ (Naxal encounter) ಇನ್ನೂ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಈ ಎನ್‌ಕೌಂಟರ್ ಬಗ್ಗೆ ವಿವರ ನೀಡಿದ ರಾಯ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮರೇಶ್ ಮಿಶ್ರಾ, ಈ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಹೇಳಿದರು. “ವಿಶೇಷ ಕಾರ್ಯಪಡೆ (STF), CoBRA (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ – CRPF ನ ಗಣ್ಯ ಘಟಕ) ಮತ್ತು ಇತರ ರಾಜ್ಯ ಪೊಲೀಸ್ ಘಟಕಗಳಿಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ” ಎಂದು ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: Operation Mahadev: ಹೋಗಿ ಮೋದಿಗೆ ಹೇಳು ಎಂದಿದ್ದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎನ್‌ಕೌಂಟರ್
ನಕ್ಸಲೀಯರ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ಪಡೆಗಳು ಅನೇಕ ಕಾರ್ಯಾಚರಣೆಗಳನ್ನು ನಡೆಸಿವೆ. 2026ರ ಮಾರ್ಚ್ 31ರೊಳಗೆ ನಕ್ಸಲ್ ಭಯೋತ್ಪಾದನೆಯನ್ನು ಕೊನೆಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇದರ ನಡುವೆ, ನಾರಾಯಣಪುರ ಜಿಲ್ಲೆಯಲ್ಲಿ 16 ನಕ್ಸಲೀಯರು ಶರಣಾಗಿದ್ದಾರೆ.
“ನಕ್ಸಲ್ ನಾಯಕರು ನೀರು, ಅರಣ್ಯ ಮತ್ತು ಭೂಮಿ, ಸಮಾನತೆ ಮತ್ತು ನ್ಯಾಯವನ್ನು ರಕ್ಷಿಸುವ ಸುಳ್ಳು ಭರವಸೆಗಳೊಂದಿಗೆ ಸ್ಥಳೀಯರನ್ನು ದಾರಿ ತಪ್ಪಿಸುತ್ತಾರೆ. ಅವರ ಮೇಲೆ ಶೋಷಣೆ ಮಾಡುತ್ತಾರೆ. ಸ್ಥಳೀಯ ಕಾರ್ಯಕರ್ತರು ತೀವ್ರ ಶೋಷಣೆಯನ್ನು ಎದುರಿಸುತ್ತಿದ್ದಾರೆ ಮತ್ತು ಮಹಿಳಾ ಮಾವೋವಾದಿಗಳ ಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ಪಿಟಿಐಗೆ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




