ತಮಿಳುನಾಡು: ಆರು ಜನರ ಮೇಲೆ ದಾಳಿ ಮಾಡಿದ ಚಿರತೆ ತಿರುಪ್ಪೂರ್‌ನಲ್ಲಿ ಸೆರೆ

ತಮಿಳುನಾಡು: ಆರು ಜನರ ಮೇಲೆ ದಾಳಿ ಮಾಡಿದ ಚಿರತೆ ತಿರುಪ್ಪೂರ್‌ನಲ್ಲಿ ಸೆರೆ
ಚಿರತೆ (ಪ್ರಾತಿನಿಧಿಕ ಚಿತ್ರ)

ಸೋಮವಾರದಿಂದಲೇ ಈ ಚಿರತೆ ತಿರುಗಾಡುತ್ತಿತ್ತು.  ಚಿರತೆ ಆರಂಭದಲ್ಲಿ ಅವಿನಾಶಿ ಸಮೀಪದ ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ನಂತರ ತಿರುಪ್ಪೂರ್ ಪ್ರವೇಶಿಸಿದೆ.

TV9kannada Web Team

| Edited By: Rashmi Kallakatta

Jan 28, 2022 | 3:54 PM

ತಿರುಪ್ಪೂರ್‌: ತಮಿಳುನಾಡಿನ ತಿರುಪ್ಪೂರ್ (Tiruppur) ಜಿಲ್ಲೆಯಲ್ಲಿ ಗುರುವಾರ ಕನಿಷ್ಠ ಆರು ಜನರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು(Leopard) ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಸೆರೆ ಹಿಡಿಯುವ ವೇಳೆ ಚಿರತೆ ಭದ್ರತಾ ಸಿಬ್ಬಂದಿ ಮೇಲೆಯೂ ದಾಳಿ ಮಾಡಿದೆ. ಅದೃಷ್ಟವಶಾತ್, ಸಿಬ್ಬಂದಿ ದಾಳಿಯಿಂದ ಪಾರಾಗುವಲ್ಲಿ ಯಶಸ್ವಿಯಾದರು. ಸೋಮವಾರದಿಂದಲೇ ಈ ಚಿರತೆ ತಿರುಗಾಡುತ್ತಿತ್ತು.  ಚಿರತೆ ಆರಂಭದಲ್ಲಿ ಅವಿನಾಶಿ ಸಮೀಪದ ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ನಂತರ ತಿರುಪ್ಪೂರ್ ಪ್ರವೇಶಿಸಿದೆ. ‘ದಿ ಹಿಂದೂ’ ಪತ್ರಿಕೆಯ ವರದಿ ಪ್ರಕಾರ, ಅರಣ್ಯ ಸಿಬ್ಬಂದಿ ಬುಧವಾರ ಸಂಜೆ ತಿರುಪ್ಪೂರ್‌ನ ಹೊರವಲಯದಲ್ಲಿರುವ ಪೊಂಗುಪಾಳ್ಯಂನಲ್ಲಿ ಮೊಕ್ಕಾಂ ಹೂಡಿದ್ದರು. ನಂತರ, ತಿರುಪ್ಪೂರ್ ಸಿಟಿ ಪೊಲೀಸ್ ವ್ಯಾಪ್ತಿಯ ಅಮ್ಮಪಾಳ್ಯಂನಲ್ಲಿರುವ ಖಾಸಗಿ ಗಾರ್ಮೆಂಟ್ಸ್ ಕಂಪನಿಯ ಗೋಡೌನ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ.  ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ಥಳಕ್ಕೆ ಧಾವಿಸಿದರು. ಈ ನಡುವೆ ಗಾರ್ಮೆಂಟ್ಸ್ ಕಂಪನಿಯ 66 ವರ್ಷದ ಭದ್ರತಾ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿದೆ. ಆದರೆ, ಚಿರತೆ ಮತ್ತೆ ಅರಣ್ಯ ಸಿಬ್ಬಂದಿ ಕಣ್ತಪ್ಪಿಸಿ ಆ ಪ್ರದೇಶದ ಕೃಷಿ ಕ್ಷೇತ್ರಕ್ಕೆ ನುಗ್ಗಿದೆ. 

ಚಿರತೆ ಕಾಣಿಸುತ್ತಿದ್ದಂತೆ ಅಧಿಕಾರಿಗಳು ಪ್ರಾಣಿಗಳ ಮೇಲೆ ಟ್ರ್ಯಾಂಕ್ವಿಲೈಸರ್ ಭರ್ಜಿ ಹಾರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಈ ಹಿಂದೆ ಅರಣ್ಯ ಇಲಾಖೆಯೊಂದಿಗೆ ಸಹಕರಿಸಿದ ಪಶುವೈದ್ಯ ಸಹಾಯಕ ಶಸ್ತ್ರಚಿಕಿತ್ಸಕ ಇ ವಿಜಯರಾಘವನ್ ಅವರು ಮಧ್ಯಾಹ್ನ 1.30 ರ ಸುಮಾರಿಗೆ ಮೊದಲ ಭರ್ಜಿ ಅನ್ನು ಹಾರಿಸಿದರು. ಚಿರತೆಯ ಮೇಲೆ ಎರಡನೇ ಭರ್ಜಿ ಕೂಡ ಹಾರಿಸಲಾಯಿತು, ಇದು ಚಿರತೆಯನ್ನು ಬೋನಿನೊಳಗೆ ಇರಿಸಲು ಸಿಬ್ಬಂದಿಗೆ ಸಹಾಯ ಮಾಡಿತು. ಜನವರಿ 24 ರಂದು ಅವಿನಾಶಿ ತಾಲೂಕಿನ ಪಪ್ಪಂಕುಳಂ ಗ್ರಾಮದ ಜೋಳದ ಜಮೀನಿನಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಕಳೆದ ನಾಲ್ಕು ದಿನಗಳಲ್ಲಿ ಚಿರತೆ ದಾಳಿಗೆ ಮೂವರು ಕಳ್ಳಬೇಟೆ ತಡೆ ವೀಕ್ಷಕರು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ಕೆನಡಾ-ಅಮೆರಿಕ ಗಡಿ ಬಳಿ ತೀವ್ರ ಚಳಿಗೆ ಸಿಲುಕಿ ಸಾವಿಗೀಡಾದ ಭಾರತೀಯ ಕುಟುಂಬದ ಗುರುತು ಪತ್ತೆ

Follow us on

Most Read Stories

Click on your DTH Provider to Add TV9 Kannada