
ನವದೆಹಲಿ, ಅಕ್ಟೋಬರ್ 10: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿಗೆ ಬಂದ ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅದೇ ವಿಮಾನದಲ್ಲಿದ್ದ ಸಹಪ್ರಯಾಣಿಕರೊಬ್ಬರ ಹೇಳಿಕೆ ಇದೀಗ ಗಮನ ಸೆಳೆದಿದೆ. ಮುಂಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನ ಇಳಿದ ಬಳಿಕವೂ ಪ್ರಯಾಣಿಕರು ಕಾಯಬೇಕಾಯಿತು. ಈ ಸಂದರ್ಭದಲ್ಲಿ ವಿಮಾನದ ಮುಂಭಾಗದಿಂದ ‘ಇನ್ಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಕೇಳಿಬಂದವು ಎಂದು ಅವರು ಹೇಳಿದ್ದಾರೆ.
“ನಾವು ಮುಂಬೈನಿಂದ ಪ್ರಯಾಣಿಸುತ್ತಿದ್ದೆವು. ವಿಮಾನ ಇಳಿದ ಬಳಿಕವೂ ಕಾಯಬೇಕಾಯಿತು. ವಿಮಾನದ ಮುಂಭಾಗದಿಂದ ‘ಇನ್ಕ್ವಿಲಾಬ್ ಜಿಂದಾಬಾದ್’ ಘೋಷಣೆಗಳು ಕೇಳಿಸುತ್ತಿದ್ದವು. ಅಭಿಜೀತ್ ದೀಪ್ಕೆ ಯಾರು ಎಂಬುದೇ ನನಗೆ ಗೊತ್ತಿಲ್ಲ” ಎಂದು ಪ್ರಯಾಣಿಕರೊಬ್ಬರು ಹೇಳಿರುವ ವಿಡಿಯೋವನ್ನು ‘ಎಎನ್ಐ’ ಸುದ್ದಿಸಂಸ್ಥೆ ಎಕ್ಸ್ ತಾಣದಲ್ಲಿ ಹಂಚಿಕೊಂಡಿದೆ.
ಪ್ರತಿಭಟನಾಕಾರರ ವರ್ತನೆಯಿಂದ ಸಾಮಾನ್ಯ ಪ್ರಯಾಣಿಕರಿಗೆ ಅನಾನುಕೂಲವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 36 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಎಲ್ಲೆಡೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯಿಂದ ಕೆಲವರ ಹೆಸರುಗಳನ್ನು ತಪ್ಪಾಗಿ ತೆಗೆದುಹಾಕಿದ್ದರೆ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಪರಿಶೀಲಿಸಬಹುದು ಎಂದು ಸಹಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. “ಪ್ರತಿಭಟನಾಕಾರರು ಈ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಸಾರ್ವಜನಿಕರೇ ಎಲ್ಲವನ್ನೂ ಮಾಡಲು ಮುಂದಾದರೆ ನ್ಯಾಯಾಲಯಗಳನ್ನು ಮುಚ್ಚಿಬಿಡಬೇಕೇ? ಸಮಸ್ಯೆ ಇದ್ದರೆ ಅದನ್ನು ಪರಿಹರಿಸಲು ಒಂದು ವ್ಯವಸ್ಥೆ ಇದೆ. ಅದನ್ನು ಅನುಸರಿಸಬೇಕು” ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ: ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಜಿತ್ ದೀಪ್ಕೆ ವಿಮಾನದಲ್ಲೇ ಪೊಲೀಸ್ ವಶಕ್ಕೆ!
ಪ್ರತಿಭಟನೆ ನಡೆಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಜೀತ್ ದೀಪ್ಕೆ ಅವರನ್ನು ವಿಮಾನದಲ್ಲೇ ವಶಕ್ಕೆ ಪಡೆದ ಘಟನೆಯ ಬೆನ್ನಲ್ಲೇ ಸಹಪ್ರಯಾಣಿಕರ ಈ ಹೇಳಿಕೆ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Sat, 10 October 26