ಸಿಜೆಪಿ ಪ್ರತಿಭಟನೆ: ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಜಿತ್ ದೀಪ್ಕೆ ವಿಮಾನದಲ್ಲೇ ಪೊಲೀಸ್ ವಶಕ್ಕೆ!
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಸಿಜೆಪಿ ಪ್ರತಿಭಟನೆಗೂ ಮುನ್ನ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿದಂತೆ ಮೂವರನ್ನು ವಿಮಾನದಲ್ಲೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧ್ರುವ್ ರಾಠಿ ಸೇರಿದಂತೆ ಇತರರನ್ನೂ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದ್ದು, ರಾಜಧಾನಿಯಲ್ಲಿ ಬಿಗಿ ಭದ್ರತೆ ಮತ್ತು ಸಂಚಾರ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.

ಮುಖ್ಯಾಂಶಗಳು
- ವಿಮಾನದಲ್ಲೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ವಶಕ್ಕೆ
- ‘ಅರೆಸ್ಟ್ ಮಾಡಿ, ನಮಗೆ ಭಯವಿಲ್ಲ’ ಎಂದ ದೀಪ್ಕೆ
- ದೆಹಲಿಯಲ್ಲಿ 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ
ನವದೆಹಲಿ, ಅಕ್ಟೋಬರ್ 10: ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (Cockroach Janta Party) ಆಯೋಜಿಸಿದ್ದ ಪ್ರತಿಭಟನೆಗೂ ಮುನ್ನವೇ ಪಕ್ಷದ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಿಮಾನದಲ್ಲೇ ವಶಕ್ಕೆ ಪಡೆದಿದ್ದಾರೆ. ಶನಿವಾರ ಬೆಳಗ್ಗೆ ದೆಹಲಿಗೆ ಬಂದಿಳಿದ ವಿಮಾನವನ್ನು ಪೊಲೀಸರು ಪ್ರವೇಶಿಸಿ, ದೀಪ್ಕೆ ಸೇರಿದಂತೆ ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ವಿಮಾನದೊಳಗೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಆ ಬಗ್ಗೆ ದೀಪ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ವಿಡಿಯೋ ಪ್ರಸಾರ ಮಾಡಿದ್ದಾರೆ.
ಅರೆಸ್ಟ್ ಮಾಡಿ, ನಮಗೆ ಭಯವಿಲ್ಲ: ದೀಪ್ಕೆ
ದೀಪ್ಕೆ ಹಂಚಿಕೊಂಡಿರುವ ವಿಡಿಯೋದಲ್ಲಿ ದೆಹಲಿ ಪೊಲೀಸರು ವಿಮಾನದೊಳಗೆ ಪ್ರವೇಶಿಸಿ ಸಿಜೆಪಿ ಸದಸ್ಯರನ್ನು ವಶಕ್ಕೆ ಪಡೆಯುತ್ತಿರುವ ದೃಶ್ಯಗಳಿವೆ. ಈ ವೇಳೆ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ದೀಪ್ಕೆ, ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುವವರೆಗೆ ಕಾಯಬಹುದಿತ್ತಲ್ಲವೇ ಎಂದು ಕೇಳಿದ್ದಾರೆ. ‘ನಾವು ಹೊರಬರುವವರೆಗೆ ಕಾಯಬಹುದಿತ್ತು. ಬನ್ನಿ, ನಮ್ಮನ್ನು ಬಂಧಿಸಿ. ನಮಗೆ ಭಯವಿಲ್ಲ’ ಎಂದು ಮಹಿಳಾ ಪೊಲೀಸ್ ಸಿಬ್ಬಂದಿಗೆ ದೀಪ್ಕೆ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ.
ದೀಪ್ಕೆ ವಿಮಾನದಲ್ಲೇ ಪೊಲೀಸ್ ವಶಕ್ಕೆ: ವಿಡಿಯೋ ಇಲ್ಲಿದೆ
#WATCH | Delhi Police personnel enter the aircraft that was carrying Cockroach Janta Party (CJP) Founder Abhijeet Dipke to Delhi. The flight landed at IGI Airport a few minutes ago.
“…I have come here to be arrested; arrest me,” Abhijeet Dipke tells Delhi Police
“No, this is not an arrest. Please cooperate,” Delhi Police personnel tell him.
— ANI (@ANI) October 10, 2026
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಮುನ್ನಡೆಸಲು ದಿಪ್ಕೆ ಶನಿವಾರ ಬೆಳಗ್ಗೆ ಮುಂಬೈನಿಂದ ದೆಹಲಿಗೆ ಪ್ರಯಾಣಿಸಿದ್ದರು.
ಸರ್ವಾಧಿಕಾರಿ ಕ್ರಮ ಎಂದ ಸಿಜೆಪಿ
ತಮ್ಮ ನಾಯಕ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ವಿಮಾನದಿಂದ ಇಳಿಯುವ ಮೊದಲೇ ವಶಕ್ಕೆ ಪಡೆದಿರುವುದನ್ನು ಸಿಜೆಪಿ ಖಂಡಿಸಿದೆ. ಈ ಕ್ರಮವನ್ನು “ಸರ್ವಾಧಿಕಾರಿ ಬಂಧನ” ಎಂದು ಬಣ್ಣಿಸಿರುವ ಪಕ್ಷ, ಪ್ರತಿಭಟನಾ ಸ್ಥಳ ತಲುಪುವ ಮುನ್ನವೇ ನಾಯಕರನ್ನು ತಡೆಯುವ ಮೂಲಕ ಶಾಂತಿಯುತ ಪ್ರತಿಭಟನೆಯ ನಾಯಕತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದೆ.
ಇದು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಹೇಳಿರುವ ಸಿಜೆಪಿ, ಮೂವರನ್ನೂ ಯಾವುದೇ ಷರತ್ತಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.
ಧ್ರುವ್ ರಾಠಿ, ರತ್ನಾ ಸಿಂಗ್ ಕೂಡ ವಶಕ್ಕೆ
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಯೂಟ್ಯೂಬರ್ ಧ್ರುವ್ ರಾಠಿ ಮತ್ತು ಸಿಜೆಪಿಯ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ಅವರ ಮನೆಗಳಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ ಶನಿವಾರದ ಪ್ರತಿಭಟನೆಗೂ ಮುನ್ನ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಶಂಕಿತ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಣೆ
ಸಿಜೆಪಿ ಪ್ರತಿಭಟನೆಗೆ ದೆಹಲಿ ಪೊಲೀಸರು ಶುಕ್ರವಾರ ಅನುಮತಿ ನಿರಾಕರಿಸಿದ್ದರು. ಪ್ರತಿಭಟನೆಗೆ ಅಗತ್ಯವಾದ ಅನುಮತಿಯನ್ನು ಸಾಕಷ್ಟು ಮುಂಚಿತವಾಗಿ ಕೋರಿರಲಿಲ್ಲ ಎಂಬ ಕಾರಣವನ್ನು ಪೊಲೀಸರು ನೀಡಿದ್ದರು.
ಸಿಜೆಪಿ ಪ್ರತಿಭಟನೆಗೂ ಮುನ್ನ ರಾಜಧಾನಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಪಕ್ಷದ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Sat, 10 October 26




