AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ

Twist in Abhishek Banerjee Attack Case: ಪಶ್ಚಿಮ ಬಂಗಾಳದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ದಾಳಿಕೋರರಿಗೆ ಟಿಎಂಸಿ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರೊಂದಿಗೆ ನಿಕಟ ಸಂಪರ್ಕವಿರುವುದು ಬಹಿರಂಗಗೊಂಡಿದೆ. ಈ ಹಿಂದೆ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಆರೋಪಿಸಿತ್ತು. ಆದರೆ, ಈ ಬೆಳವಣಿಗೆಯಿಂದ ಟಿಎಂಸಿ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯದ ಕುರಿತು ತೀವ್ರ ಚರ್ಚೆಗಳು ಆರಂಭವಾಗಿವೆ, ತನಿಖೆ ಮುಂದುವರೆದಿದೆ.

ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣದಲ್ಲಿ ಟ್ವಿಸ್ಟ್; ಬಂಧಿತ ಆರೋಪಿಗಳಿಗೆ ಮಾಜಿ ಶಾಸಕಿ ಲವ್ಲಿ ಮೈತ್ರಾರೊಂದಿಗೆ ನಿಕಟ ಸಂಪರ್ಕ
ಹಲ್ಲೆ ಘಟನೆಯ ನಂತರ ಅಭಿಷೇಕ್ ಬ್ಯಾನರ್ಜಿ ಸುರಕ್ಷತೆಗೆ ಹೆಲ್ಮೆಟ್ ಧರಿಸಿರುವುದು.Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 31, 2026 | 2:51 PM

Share

ಕೋಲ್ಕತಾ, ಮೇ 31: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ತೃಣಮೂಲ ಕಾಂಗ್ರೆಸ್ (TMC) ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಮೇಲಿನ ದಾಳಿ ಪ್ರಕರಣಕ್ಕೆ (Abhishek Banerjee assault case) ಸಂಬಂಧಿಸಿದಂತೆ ಈಗ ಒಂದು ಹೊಸ ತಿರುವು ಲಭಿಸಿದೆ. ದಕ್ಷಿಣ 24 ಪರಗಣ (South 24 Pargana) ಜಿಲ್ಲೆಯ ಸೋನಾರ್‌ಪುರದಲ್ಲಿ ನಡೆದ ಈ ದಾಳಿಯ ಪ್ರಕರಣದಲ್ಲಿ ಬಂಧಿತರಾಗಿರುವ ಹಲವು ಆರೋಪಿಗಳು ಟಿಎಂಸಿ ಪಕ್ಷದ ಮಾಜಿ ಶಾಸಕಿ ಲವ್ಲಿ ಮೈತ್ರಾ (Lovely Maitra) ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬಹಿರಂಗವಾಗಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಕ್ತಾಯದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪಕ್ಷದ ಕಾರ್ಯಕರ್ತರ ಕುಟುಂಬಗಳನ್ನು ಭೇಟಿಯಾಗಲು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸೋನಾರ್‌ಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತ ಸ್ಥಳೀಯರು ಮತ್ತು ಪ್ರತಿಭಟನಾಕಾರರ ಗುಂಪು ಅವರ ಮೇಲೆ ಕಲ್ಲು, ಮೊಟ್ಟೆ ಹಾಗೂ ಶೂಗಳನ್ನು ಎಸೆದು ತೀವ್ರವಾಗಿ ದಾಳಿ ನಡೆಸಿತ್ತು.

ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ಅದರಲ್ಲಿರುವ ಕೆಲ ಆರೋಪಿಗಳು ಮಾಜಿ ಟಿಎಂಸಿ ಶಾಸಕಿ ಲವ್ಲಿ ಮೈತ್ರಾ ಅವರಿಗೆ ಅತ್ಯಂತ ಆಪ್ತನಾಗಿದ್ದಾರೆ ಎಂದು ನ್ಯೂಸ್18 ನಲ್ಲಿ ವರದಿಯಾಗಿದೆ. ಬಂಧಿತ ಐವರಲ್ಲಿ ತಪನ್ ಮೈತಿ, ನಿರ್ಮಲ್ಯ ಸೇನ್​ಗುಪ್ತ, ಕಾಜಲ್ ದಾಸ್ ಮತ್ತು ದೇವಶಿಷ್ ದತ್ತ ಅವರು ಮಾಜಿ ಶಾಸಕಿಗೆ ಆಪ್ತರೆನ್ನಲಾಗಿದೆ. ಹಾಗೆಯೇ, ಮತ್ತೊಬ್ಬ ಬಂಧಿತ ಆರೋಪಿ ಅಶೋಕ್ ಗಯಾನ್ ಕೂಡ ಟಿಎಂಸಿ ಕಾರ್ಯಕರ್ತ ಎನ್ನಲಾಗಿದೆ.

ಇದನ್ನೂ ಓದಿ: ಬಂಗಾಳದ ಲಕ್ಷ್ಮಿ ಭಂಡಾರ್ ಯೋಜನೆಯಲ್ಲಿ ಬೃಹತ್ ವಂಚನೆ; 30 ಲಕ್ಷ ಜನರಿಗೆ ಸಿಗಲ್ಲ ಸೌಲಭ್ಯ ಸಿಎಂ ಸುವೇಂದು ಘೋಷಣೆ

ದಾಳಿ ನಡೆಸಿದ ವ್ಯಕ್ತಿಗಳು ಪ್ರತಿಪಕ್ಷವಾದ ಬಿಜೆಪಿಗೆ ಸೇರಿದವರೆಂದು ಈ ಹಿಂದೆ ಟಿಎಂಸಿ ಆರೋಪಿಸಿತ್ತು. ಆದರೆ ಈಗ ಬಂಧಿತ ಆರೋಪಿಗಳು ಸ್ವಪಕ್ಷದ ಮಾಜಿ ಶಾಸಕಿಯ ಜೊತೆಗೇ ಸಂಪರ್ಕದಲ್ಲಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ದಾಳಿಯ ಸಮಯದಲ್ಲಿ ಅಭಿಷೇಕ್ ಬ್ಯಾನರ್ಜಿ ಅವರ ಬಟ್ಟೆಗಳನ್ನು ಹರಿದು ಹಾಕಲಾಗಿತ್ತು ಹಾಗೂ ಅವರ ಕನ್ನಡಕವೂ ಮುರಿದಿತ್ತು. ಭದ್ರತಾ ಸಿಬ್ಬಂದಿ ಅವರಿಗೆ ಹೆಲ್ಮೆಟ್ ಧರಿಸಿ ರಕ್ಷಣೆ ನೀಡಬೇಕಾಗಿ ಬಂದಿತ್ತು. ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, “ಅವರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು, ಈ ಇಡೀ ಘಟನೆಯ ವೀಡಿಯೊ ಸಾಕ್ಷ್ಯಗಳು ನಮ್ಮ ಬಳಿಯಿದ್ದು ನಾವು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ” ಎಂದು ಹೇಳಿದ್ದರು.

ಆರಂಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ನೇರವಾಗಿ ದೂರಿದ್ದರು. ಆದರೆ, ಬಂಧಿತ ಆರೋಪಿಯ ಟಿಎಂಸಿ ನಂಟಿನ ವಿವರಗಳು ಹೊರಬರುತ್ತಿದ್ದಂತೆ, ಇದು ಟಿಎಂಸಿ ಪಕ್ಷದ ಒಳಗಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯದ (Internal Feud) ಪರಿಣಾಮ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪ್ರಸ್ತುತ ಪಶ್ಚಿಮ ಬಂಗಾಳ ಪೊಲೀಸರು ಈ ಆಂತರಿಕ ನಂಟಿನ ಕುರಿತು ಹಾಗೂ ದಾಳಿಯ ಹಿಂದಿನ ನೈಜ ಪಿತೂರಿಯ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​​ ಠಾಣೆ ಸಮೀಪವೇ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆ ಹಲ್ಲೆ?

ಕಲ್ಯಾಣ್ ಬ್ಯಾನರ್ಜಿ ಮೇಲೂ ಹಲ್ಲೆ

ಇದೇ ವೇಳೆ, ಹೂಗ್ಲಿಯಲ್ಲಿ ಮತ್ತೊಬ್ಬ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲೆಯೂ ಹಲ್ಲೆಯಾಗಿರುವ ಘಟನೆ ವರದಿಯಾಗಿದೆ. ಚಂದಿತಾಲ ಪೊಲೀಸ್ ಠಾಣೆಗೆ ಹೋಗುತ್ತಿರುವ ವೇಳೆ ಈ ಹಲ್ಲೆ ನಡೆದಿದೆ. ಭದ್ರತಾ ಸಿಬ್ಬಂದಿ ಇದ್ದಾಗ್ಯೂ ಈ ಘಟನೆಯಾಗಿತ್ತು. ಇದು ಬಿಜೆಪಿಯವರು ಮಾಡಿರುವ ಕೆಲಸ ಎಂದು ಕಲ್ಯಾಣ್ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More