ಅಭಿಷೇಕ್ ಬ್ಯಾನರ್ಜಿ ನನ್ನ ಮಗನಿದ್ದಂತೆ; ಯು-ಟರ್ನ್ ಹೊಡೆದ ಕಲ್ಯಾಣ್ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಶಾಸಕರು ಮತ್ತು ಸಂಸದರ ಬಂಡಾಯಕ್ಕೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೇ ಕಾರಣ ಎಂದು ದೂಷಿಸಿದ್ದ ಟಿಎಂಸಿ ಹಿರಿಯ ನಾಯಕ ಹಾಗೂ ಲೋಕಸಭೆಯ ಮುಖ್ಯ ಸಚೇತಕ ಕಲ್ಯಾಣ್ ಬ್ಯಾನರ್ಜಿ ಇದೀಗ ಯು-ಟರ್ನ್ ಹೊಡೆದಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ನನ್ನ ತಂದೆಯಿದ್ದಂತೆ, ಅವರು ಬಾಲ್ಯದಿಂದಲೂ ನನ್ನನ್ನು ನೋಡಿದ್ದಾರೆ. ಅವರಿಗೆ ನನ್ನನ್ನು ತಿದ್ದುವ ಹಕ್ಕಿದೆ ಎಂದು ನಿನ್ನೆ ಅಭಿಷೇಕ್ ಬ್ಯಾನರ್ಜಿ ಹೇಳಿದ್ದರು. ಅದರ ಬೆನ್ನಲ್ಲೇ ಇಂದು ಕಲ್ಯಾಣ್ ಬ್ಯಾನರ್ಜಿ ಕೂಡ ಅಭಿಷೇಕ್ ನನಗೆ ಮಗನಿದ್ದಂತೆ ಎಂದು ಹೇಳಿಕೆ ನೀಡಿದ್ದಾರೆ.

ಅಭಿಷೇಕ್ ಬ್ಯಾನರ್ಜಿ ನನ್ನ ಮಗನಿದ್ದಂತೆ; ಯು-ಟರ್ನ್ ಹೊಡೆದ ಕಲ್ಯಾಣ್ ಬ್ಯಾನರ್ಜಿ
Kalyan Banerjee
Image Credit source: PTI

Updated on: Jun 13, 2026 | 6:23 PM

ನವದೆಹಲಿ, ಜೂನ್ 13: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹಿರಿಯ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ವಿರುದ್ಧ ನಿನ್ನೆಯಷ್ಟೇ ವಾಗ್ದಾಳಿ ನಡೆಸಿದದರು. ನಿಮಗೆ ನಾನು ಬೇಕಾ ಅಥವಾ ಅಭಿಷೇಕ್ ಬ್ಯಾನರ್ಜಿ ಬೇಕಾ ಎಂದು ನಿರ್ಧರಿಸಿ ಎಂದು ಮಮತಾ ಬ್ಯಾನರ್ಜಿಗೆ ಸವಾಲು ಹಾಕಿದ್ದರು. ಆದರೆ, ಇಂದು ಯು-ಟರ್ನ್ ಹೊಡೆದಿರುವ ಅವರು ಅಭಿಷೇಕ್ ಬ್ಯಾನರ್ಜಿ ನನ್ನ ಮಗನಿದ್ದಂತೆ. ಆತ ತಪ್ಪು ಮಾಡಿದಾಗ ಕ್ಷಮಿಸುವುದು ನನ್ನ ಕರ್ತವ್ಯ ಎಂದಿದ್ದಾರೆ. ನಿನ್ನೆ ಅಭಿಷೇಕ್ ಬ್ಯಾನರ್ಜಿ ಕೂಡ ಕಲ್ಯಾಣ್ ಬ್ಯಾನರ್ಜಿಯ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಕಲ್ಯಾಣ್ ಬ್ಯಾನರ್ಜಿ ನನ್ನ ತಂದೆಯಿದ್ದಂತೆ. ನಾನು ತಪ್ಪು ಮಾಡಿದಾಗ ಗದರುವ ಹಕ್ಕು ಅವರಿಗಿದೆ ಎಂದಿದ್ದರು.

ಟಿಎಂಸಿ ಪಕ್ಷದೊಳಗೆ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದೆ ಎಂಬ ವರದಿಗಳ ನಡುವೆ ಇಂದು ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, “ಅಭಿಷೇಕ್ ನನ್ನ ಮಗನಿದ್ದಂತೆ. ಮಗ ಮಾಡುವ ಎಲ್ಲಾ ತಪ್ಪುಗಳನ್ನು ಕ್ಷಮಿಸುವುದು ತಂದೆಯ ಕೆಲಸ” ಎಂದು ಹೇಳಿದ್ದಾರೆ. ಈ ಮೂಲಕ ತಾವು ರಾಜಿಯಾಗಿದ್ದೇವೆ ಎಂದು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ನಾನು ಬೇಕಾ, ಅಭಿಷೇಕ್ ಬ್ಯಾನರ್ಜಿ ಬೇಕಾ ನಿರ್ಧರಿಸಿ; ಮಮತಾಗೆ ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಸವಾಲು

ನಿನ್ನೆ ಮಾತನಾಡಿದ್ದ ಕಲ್ಯಾಣ್ ಬ್ಯಾನರ್ಜಿ, “ಅಭಿಷೇಕ್ ಅಹಂಕಾರದ ವ್ಯಕ್ತಿ. ಅವನಿಂದಾಗಿಯೇ ಇಂದು ಪಕ್ಷವು ನಾಶವಾಗುತ್ತಿದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಪ್ರತಿಯೊಬ್ಬರೂ ಇದನ್ನೇ ಹೇಳುತ್ತಿದ್ದಾರೆ. ನಾನು ಬೇಕಾ ಅಥವಾ ಅಭಿಷೇಕ್ ಬೇಕಾ ಎಂದು ಮಮತಾ ಬ್ಯಾನರ್ಜಿ ನಿರ್ಧರಿಸಬೇಕು” ಎಂದು ಕಲ್ಯಾಣ್ ಬ್ಯಾನರ್ಜಿ ಕಿಡಿಕಾರಿದ್ದರು.


ಕೊಲ್ಕತ್ತಾದ ಕಾಳೀಘಾಟ್‌ನಲ್ಲಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಅಪರಾಧ ತನಿಖಾ ಇಲಾಖೆ (CID) ಅಧಿಕಾರಿಗಳು ಶೋಧ ನಡೆಸಿದ ಕೆಲವು ಗಂಟೆಗಳ ನಂತರ ಕಲ್ಯಾಣ್ ಬ್ಯಾನರ್ಜಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಇಂದು ಮುಂಜಾನೆ ಸುಮಾರು 3 ಗಂಟೆಗೆ ಪೊಲೀಸರು ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಆಗಮಿಸಿದ್ದರು. ನಂತರ ಬೀಗಗಳನ್ನು ಒಡೆಯಲು ವಿಪತ್ತು ನಿರ್ವಹಣಾ ತಂಡವನ್ನು ಕರೆಯಿಸಲಾಯಿತು ಎಂದು ಟಿಎಂಸಿ ರಾಜ್ಯಸಭಾ ಸಂಸದ ಸಾಗರಿಕಾ ಘೋಷ್ ಆರೋಪಿಸಿದ್ದಾರೆ. ಸುಮಾರು 90 ನಿಮಿಷಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ ಎಂದು ಸಾಗರಿಕಾ ಘೋಷ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮಾತ್ರ ನಮ್ಮ ನಾಯಕಿ, ಅಭಿಷೇಕ್ ಅಲ್ಲ; ಟಿಎಂಸಿ ಬಂಡಾಯದ ನಡುವೆ ಶತ್ರುಘ್ನ ಸಿನ್ಹಾ ಹೇಳಿಕೆ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೋಮು ಪ್ರಚೋದಕ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆಯು ತಮ್ಮ ನಾಯಕತ್ವದ ಮೇಲೆ ಅವಲಂಬಿತವಾಗಿದೆ ಮತ್ತು ಬಿಜೆಪಿಯ ದಾರಿ ತಪ್ಪಿಸುವ ಹೇಳಿಕೆಗಳಿಗೆ ಮರುಳಾಗಬೇಡಿ ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us