ಪೌರತ್ವ ತಿದ್ದುಪಡಿ ಕಾಯ್ದೆ ಸ್ವೀಕಾರಾರ್ಹವಲ್ಲ, ತಮಿಳುನಾಡಿನಲ್ಲಿ ಅದನ್ನು ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ತಮಿಳು ನಟ ದಳಪತಿ ವಿಜಯ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ಸಿಎಎ ಜಾರಿ ಮಾಡಿದ ಬಳಿಕ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿಜಯ್ ಸಿಎಎ ಜಾರಿಯನ್ನು ಒಪ್ಪಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ 2019ರಂತಹ ಯಾವುದೇ ಕಾನೂನನ್ನು ದೇಶದಲ್ಲಿ ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬಾಳುತ್ತಿರುವಾಗ ಇಂತಹ ಕಾನೂನಿನ ಅಗತ್ಯ ಏನಿದೆ ಎಂದಿದ್ದಾರೆ.
ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸದಂತೆ ತಮಿಳುನಾಡು ಸರ್ಕಾರಕ್ಕೆ ವಿಜಯ್ ಮನವಿ ಮಾಡಿದರು. ಈ ಸಮಯದಲ್ಲಿ ವಿಜಯ್ ಮಾತ್ರವಲ್ಲ ವಿರೋಧ ಪಕ್ಷದ ನಾಯಕರು ಸಿಎಎ ಅನುಷ್ಠಾನದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.
ಚುನಾವಣಾ ಲಾಭ ಪಡೆಯಲು ಮೋದಿ ಸರ್ಕಾರ ಚುನಾವಣೆಗೂ ಮುನ್ನ ಈ ಸಾಹಸ ಮಾಡುತ್ತಿದೆ ಎಂದು ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಇದು ವಿಭಜನೆಯ ರಾಜಕೀಯ, ಸಾರ್ವಜನಿಕರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಮತ್ತಷ್ಟು ಓದಿ: ಸಿಎಎ ಎಂದರೇನು? ಮುಸ್ಲಿಮರು ವಿರೋಧಿಸುತ್ತಿರುವುದು ಯಾಕೆ? ಎನ್ಆರ್ಸಿಗೂ ಅದಕ್ಕೂ ಏನು ಸಂಬಂಧ? ಇಲ್ಲಿದೆ ವಿವರ
ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ತಮ್ಮ ರಾಜ್ಯದಲ್ಲಿ ಸಿಎಎ ಜಾರಿಯಾಗಲು ಬಿಡುವುದಿಲ್ಲ, ಇದು ಧರ್ಮದ ಆಧಾರದಲ್ಲಿ ಒಡಕು ಮೂಡಿಸುವ ಕಾನೂನು ಎಂದಿದ್ದಾರೆ.
ಸಿಎಎ ಎಂದರೇನು?
ಪೌರತ್ವ ತಿದ್ದುಪಡಿ ಮಸೂದೆ ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮುಂಚೆ ಭಾರತಕ್ಕೆ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ. ಆ ಮೂರು ಮುಸ್ಲಿಮ್ ದೇಶಗಳಲ್ಲಿನ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಈ ಮನ್ನಣೆ ಕೊಡಲಾಗಿದೆ.
ಮಾಮೂಲಿಯ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಭಾರತೀಯ ಪೌರತ್ವ ಹೊಂದಬೇಕಾದರೆ 11 ವರ್ಷ ಇಲ್ಲಿ ವಾಸ ಮಾಡಿರಬೇಕು. ಸಿಎಎಯಲ್ಲಿ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಂದಷ್ಟು ವಿನಾಯಿತಿ ಕೊಡಲಾಗಿದೆ.
ಸಿಎಎಗೆ ಮುಸ್ಲಿಮರ ವಿರೋಧ ಯಾಕೆ?
ಸಿಎಎಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸ್ಲಿಮರಿಲ್ಲ. ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಯಾಕೆ ಪೌರತ್ವ ಕೊಡುತ್ತಿಲ್ಲ? ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬದು ಕೆಲ ವರ್ಗದ ಮುಸ್ಲಿಮರಿಂದ ಬರುತ್ತಿರುವ ಆಕ್ಷೇಪವಾಗಿದೆ.