Agnipath Scheme: ಅಗ್ನಿಪಥ್ ಪ್ರತಿಭಟನೆ; ಇಂದು ಮೂರೂ ಸೇನಾ ಮುಖ್ಯಸ್ಥರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ
ದೆಹಲಿಯಲ್ಲಿ ಇಂದು ಸೇನಾ ಪಡೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 'ಅಗ್ನಿಪಥ್' ನೇಮಕಾತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ನವದೆಹಲಿ: ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಮಧ್ಯಾಹ್ನದ ಬಳಿಕ ಮೈಸೂರಿನಿಂದ ದೆಹಲಿಗೆ ವಾಪಾಸಾಗಲಿದ್ದಾರೆ. ದೆಹಲಿಯಲ್ಲಿ ಇಂದು ಸೇನಾ ಪಡೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ‘ಅಗ್ನಿಪಥ್’ (Agnipath) ನೇಮಕಾತಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಗ್ನಿಪಥ್ ಯೋಜನೆಯು ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.
ಅಗ್ನಿಪಥ್ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೂ ಆಗಿರುವ 10 ಪ್ರಮುಖ ಬೆಳವಣಿಗೆಗಗಳು ಇಲ್ಲಿವೆ.
- ಮೂರು ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ಅಲ್ಪಾವಧಿಯ ನೇಮಕಾತಿ ಯೋಜನೆ ಕುರಿತು ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರೂ ಸೇವೆಗಳ ಮುಖ್ಯಸ್ಥರು ಮಾಹಿತಿ ನೀಡಲಿದ್ದಾರೆ.
- ಸಶಸ್ತ್ರ ಪಡೆಗಳಿಗೆ ಕೇಂದ್ರದ ಅಲ್ಪಾವಧಿಯ ನೇಮಕಾತಿ ಯೋಜನೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೇವಾ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ.
- ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯ ಬಗ್ಗೆ ಸೋಮವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿರ, ಕೆಲವು ನಿರ್ಧಾರಗಳು ಮೊದಲಿಗೆ ಅನ್ಯಾಯವೆಂದು ತೋರಬಹುದು. ಆದರೆ ನಂತರ ಅದು ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುತ್ತವೆ ಎಂದು ಹೇಳಿದ್ದರು.
- ‘ಅಗ್ನಿಪಥ್’ ಯೋಜನೆಗೆ ಸಂಬಂಧಿಸಿದಂತೆ ಪ್ರತಿಭಟನೆಗೆ ನೀರಸ ಪ್ರತಿಕ್ರಿಯೆ ದೊರೆತಿದ್ದರೂ, ‘ಭಾರತ್ ಬಂದ್’ ಭಾಗವಾಗಿ ಹಲವು ರಾಜ್ಯಗಳಲ್ಲಿ ಸೋಮವಾರ 600ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಕಳೆದ ವಾರದಿಂದ ನಡೆದ ಬೆಂಕಿ ಮತ್ತು ಗಲಭೆಯಿಂದಾಗಿ ರೈಲ್ವೆ ಇಲಾಖೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ.
- ಭಾನುವಾರದಂದು ಸೇನೆಯ ಮೂರು ಸೇವೆಗಳು ‘ಅಗ್ನಿಪಥ್’ ಯೋಜನೆಯಡಿ ದಾಖಲಾತಿಗಳ ವೇಳಾಪಟ್ಟಿಯನ್ನು ಹೊರತಂದಿವೆ. ಮುಂದಿನ ತಿಂಗಳು ನೇಮಕಾತಿ ಯೋಜನೆಯಡಿ ಸೈನಿಕರ ಸೇರ್ಪಡೆ ಆರಂಭವಾಗಲಿದೆ ಎಂದು ಸೇನೆ ಹೇಳಿದೆ.
- ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಸಶಸ್ತ್ರ ಪಡೆಯಲ್ಲಿ ನಾಲ್ಕು ವರ್ಷಗಳ ಅಧಿಕಾರಾವಧಿಯ ನಂತರ ‘ಅಗ್ನಿಪಥ್’ ನೇಮಕಾತಿಗಳಿಗೆ ಉದ್ಯೋಗಗಳಲ್ಲಿ ಹೊಸ ಶೇ.10ರಷ್ಟು ಕೋಟಾಗಳನ್ನು ನೀಡುವ ಭರವಸೆ ನೀಡಿವೆ.
- ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು 3 ವರ್ಷಗಳವರೆಗೆ ಹೆಚ್ಚಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.
- ಕಳೆದ ಮಂಗಳವಾರ ಕೇಂದ್ರವು ‘ಅಗ್ನಿಪಥ’ ಯೋಜನೆಯನ್ನು ಅನಾವರಣಗೊಳಿಸಿದ ನಂತರ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ಯೋಜನೆಯಡಿ 17.5 ಮತ್ತು 21 ವರ್ಷಗಳ ನಡುವಿನ ಜನರನ್ನು ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ. ನಂತರ ಗ್ರಾಚ್ಯುಟಿ ಮತ್ತು ಪಿಂಚಣಿ ಪ್ರಯೋಜನಗಳಿಲ್ಲದೆ ಹೆಚ್ಚಿನವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.
- ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ ಸರ್ಕಾರವು 2022ರಲ್ಲಿ ನೇಮಕಾತಿಯಲ್ಲಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸುವುದಾಗಿ ಘೋಷಿಸಿತ್ತು.
- ‘ಅಗ್ನಿಪಥ್’ ಯೋಜನೆಯಡಿಯಲ್ಲಿ ನೇಮಕಗೊಳ್ಳುವ ಸೈನಿಕರನ್ನು ‘ಅಗ್ನಿವೀರ್‌ಗಳು’ ಎಂದು ಕರೆಯಲಾಗುತ್ತದೆ. ಹಲವಾರು ವಿರೋಧ ಪಕ್ಷಗಳು, ಮತ್ತು ಕೆಲವು ಮಿಲಿಟರಿ ಪರಿಣತರು ಈ ಯೋಜನೆಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Tue, 21 June 22