Agnipath Scheme: ಅಗ್ನಿಪಥ್ ಯೋಜನೆಯಡಿ ವಾಯುಪಡೆಗೆ ನಾಲ್ಕೇ ದಿನದಲ್ಲಿ 94,281 ಅರ್ಜಿ ಸಲ್ಲಿಕೆ
ಅಗ್ನಿಪಥ್ ಯೋಜನೆಯಡಿ ಸೋಮವಾರದವರೆಗೆ ಒಟ್ಟು 94,281 ಅಗ್ನಿವೀರ್ ವಾಯು ಆಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜುಲೈ 5ರಂದು ನೋಂದಣಿ ಮುಕ್ತಾಯವಾಗುತ್ತದೆ.
ನವದೆಹಲಿ: ದೇಶಾದ್ಯಂತ ಈಗಾಗಲೇ ಅಗ್ನಿಪಥ್ (Agnipath) ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಜೂನ್ 24ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ವಾಯುಪಡೆ (IAF) ಅಗ್ನಿಪಥ್ ನೇಮಕಾತಿ ಯೋಜನೆಯಡಿ 94,281 ಅರ್ಜಿಗಳನ್ನು ಸ್ವೀಕರಿಸಿದೆ. ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳ ವ್ಯಾಪಕ ಪ್ರತಿಭಟನೆಗಳ ಹೊರತಾಗಿಯೂ ಸೇನಾಪಡೆಗಳಿಗೆ ಸೇರಲು ಭಾರೀ ಪ್ರಮಾಣದ ಅರ್ಜಿಗಳು ಬರುತ್ತಿವೆ.
ಜೂನ್ 14ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಿದ ಅಗ್ನಿಪಥ್ ಯೋಜನೆಯ ಅನುಸಾರ 17ರಿಂದ 21ರ ವಯೋಮಾನದ ಯುವಕರನ್ನು 4 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಲ್ಲಿ 25% ಜನರನ್ನು ಸೇನೆಯಲ್ಲೇ ಉಳಿಸಿಕೊಳ್ಳಲು ಅವಕಾಶವಿದೆ. ಜೂನ್ 16ರಂದು ಸರ್ಕಾರವು 2022ರ ವರ್ಷಕ್ಕೆ ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಿತ್ತು.
ಸೋಮವಾರದವರೆಗೆ ಒಟ್ಟು 94,281 ಅಗ್ನಿವೀರ್ ವಾಯು ಆಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜುಲೈ 5ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Agnipath Scheme: ಅಗ್ನಿಪಥ್ ಯೋಜನೆ; ಭಾರತೀಯ ವಾಯುಪಡೆಗೆ ಇಂದಿನಿಂದ ಅಗ್ನಿವೀರ್ಗಳ ನೋಂದಣಿ ಆರಂಭ
ಭಾನುವಾರದವರೆಗೆ ಐಎಎಫ್ ಯೋಜನೆಯಡಿ 56,960 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸರ್ಕಾರವು ಅಗ್ನಿವೀರ್‌ಗಳಿಗೆ ಆದ್ಯತೆ ನೀಡುವಂತಹ ಸಮಾಧಾನಕರ ಕ್ರಮಗಳನ್ನು ಘೋಷಿಸಿದೆ. ಅಗ್ನಿಪಥ್ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡ ಸೈನಿಕರನ್ನು ಅಗ್ನಿವೀರ್ಗಳು ಎಂದು ಕರೆಯಲಾಗುತ್ತದೆ. ಅವರ ನಿವೃತ್ತಿಯ ನಂತರ ಕೇಂದ್ರ ಅರೆಸೇನಾ ಪಡೆಗಳು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದಾಗಿದೆ.
ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ ಮತ್ತು ಕರ್ನಾಟಕ ಸೇರಿದಂತೆ ಹಲವಾರು ಭಾರತೀಯ ಜನತಾ ಪಕ್ಷ (ಬಿಜೆಪಿ)ಆಡಳಿತ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಘೋಷಿಸಿವೆ.