ಗಂಡನನ್ನು ಕೊಂದು, ಬಾತ್​​ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಪತಿ ನಾಪತ್ತೆಯಾಗಿದ್ದಾನೆಂದು ನಾಟಕ

ಹಲವು ದಿನಗಳಿಂದ ಗಂಡ ಮನೆಗೇ ಬಂದಿಲ್ಲ ಎಂದು ಅಳುತ್ತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಮಹಿಳೆ ಪತಿಯ ನಾಪತ್ತೆಯ ಕುರಿತು ಕತೆ ಕಟ್ಟಿದ್ದಳು. ಆಕೆಯ ಗಂಡನನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಪೊಲೀಸರ ಅನುಮಾನ ಆ ಮಹಿಳೆಯ ಕಡೆಗೇ ತಿರುಗಿತ್ತು. ಈಕೆ ನಮ್ಮಿಂದ ಏನೋ ಮುಚ್ಚಿಡುತ್ತಿದ್ದಾಳೆ ಎಂದು ಅನುಮಾನಗೊಂಡ ಪೊಲೀಸರು ಆಕೆಯನ್ನು ತಮ್ಮ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ಆಕೆ ಹೇಳಿದ ಸಂಗತಿ ಕೇಳಿ ಶಾಕ್ ಆಗಿದ್ದಾರೆ. ಆಕೆಯ ಮನೆಯ ಬಾತ್​​ರೂಂನಡಿ ತನ್ನ ಗಂಡನ ಶವವನ್ನು ಮುಚ್ಚಿಟ್ಟು, ಆತ ನಾಪತ್ತೆಯಾಗಿದ್ದಾನೆ ಎಂದು ನಾಟಕವಾಡಿದ ಆಕೆಯ ರಹಸ್ಯ ಕೊನೆಗೂ ಬಯಲಾಗಿದೆ.

ಗಂಡನನ್ನು ಕೊಂದು, ಬಾತ್​​ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಪತಿ ನಾಪತ್ತೆಯಾಗಿದ್ದಾನೆಂದು ನಾಟಕ
Surendra Sharma And Ruby Sharma
Image Credit source: x

Updated on: Jul 04, 2026 | 8:09 PM

ಮುಖ್ಯಾಂಶಗಳು

  • ಗಂಡನನ್ನು ಕೊಂದು ನಾಪತ್ತೆಯ ನಾಟಕವಾಡಿದ ಪತ್ನಿ
  • ಬಾತ್​ರೂಂನಲ್ಲಿ ಗಂಡನ ಶವ ಹೂತಿಟ್ಟ ಹೆಂಡತಿ
  • ನಿದ್ರೆ ಮಾತ್ರೆ ಹಾಕಿ ಗಂಡನನ್ನು ಕೊಂದಿದ್ದ ಪತ್ನಿ

ಆಗ್ರಾ, ಜುಲೈ 4: ಉತ್ತರ ಪ್ರದೇಶದ ಆಗ್ರಾದಲ್ಲಿ (Agra) 40 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ತನ್ನದೇ ಮನೆಯ ಬಾತ್‌ರೂಂನಲ್ಲಿ ಹೂತಿಟ್ಟಿದ್ದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಮತ್ತು ಸಾಕ್ಷ್ಯ ನಾಶದ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಕೆಯ ಮನೆಯ ಬಾತ್‌ರೂಂ ನೆಲದ ಮೇಲಿದ್ದ ಪ್ಲಾಸ್ಟರ್ ಪದರವನ್ನು ಕಾರ್ಮಿಕರ ಸಹಾಯದಿಂದ ಒಡೆದು ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾದ ದಿನದಿಂದ ಕಳೆದ 45 ದಿನಗಳಿಂದ ಪೊಲೀಸರು ಈ ಪ್ರಕರಣದ ಬೆನ್ನುಬಿದ್ದಿದ್ದರು.

ಪೊಲೀಸರ ಜೊತೆಗೇ ಇದ್ದು ನಾಟಕವಾಡಿದ ಪತ್ನಿ!

ಈ ಪ್ರಕರಣದ ತನಿಖೆಯ ಅವಧಿಯಲ್ಲಿ, ರೂಬಿ ಶರ್ಮ ಎಂಬ ಈ ಆರೋಪಿ ಮಹಿಳೆ ತನ್ನ ಪತಿ ಸುರೇಂದ್ರ ಶರ್ಮನ ಪತ್ತೆಗಾಗಿ ಪೊಲೀಸರ ಜೊತೆಗೂಡಿ ಹುಡುಕುವಂತೆ ನಾಟಕವಾಡಿ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ. ಆದರೆ, ಕೊಲೆಯಾದ ಸುರೇಂದ್ರನ ಸಹೋದರನಿಗೆ ರೂಬಿಯ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ದೊಡ್ಡ ಸುಳಿವು ಸಿಕ್ಕಿತ್ತು.

ಇದನ್ನೂ ಓದಿ: ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ನನ್ನ ಗಂಡ ನಾಪತ್ತೆಯಾದಾಗಿನಿಂದ ನನಗೆ ದಿಕ್ಕೇ ತೋಚದಂತಾಗಿದೆ ಎಂದು ಗೋಳಾಡುತ್ತಿದ್ದ ಆಕೆ ನೆರೆಹೊರೆಯವರ ಮುಂದೆ ಕಣ್ಣೀರಿಟ್ಟು ನಾಟಕವಾಡುತ್ತಿದ್ದಳು. ಆದರೆ, ಸುರೇಂದ್ರ ನಾಪತ್ತೆಯಾದ ಸಂದರ್ಭ ಮತ್ತು ಆಕೆ ನೀಡುತ್ತಿದ್ದ ಹೇಳಿಕೆಗಳ ನಡುವೆ ಹಲವಾರು ವ್ಯತ್ಯಾಸಗಳಿರುವುದನ್ನು ಸುರೇಂದ್ರನ ಕುಟುಂಬಸ್ಥರು ಗಮನಿಸಿದ್ದರು.

ನಿದ್ರೆ ಮಾತ್ರೆ ಬೆರೆಸಿದ ಪಾಯಸ ನೀಡಿದ್ದಳು:

ಆರೋಪಿ ರೂಬಿ ಶರ್ಮ ತನ್ನ 44 ವರ್ಷದ ಪತಿ ಸುರೇಂದ್ರ ಶರ್ಮನನ್ನು ಕೊಲೆ ಮಾಡಿ, ಶವವನ್ನು ಬಾತ್‌ರೂಂ ನೆಲದ ಅಡಿಯಲ್ಲಿ ಹೂತು, ಆ ಜಾಗವನ್ನು ಕಾಂಕ್ರೀಟ್ ಮತ್ತು ಹೊಸ ಟೈಲ್ಸ್‌ಗಳಿಂದ ಮುಚ್ಚಿದ್ದಳು. ಪತಿ ನಾಪತ್ತೆಯಾಗಿದ್ದಾನೆ ಎಂದು ಸುಳ್ಳು ಹೇಳುತ್ತಾ ಆಕೆ ಅದೇ ಮನೆಯಲ್ಲಿ ವಾಸ ಮುಂದುವರಿಸಿದ್ದಳು.

ಏನಿದು ಪ್ರಕರಣ?:

ಮೇ 26ರಂದು ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ಸುರೇಂದ್ರ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ತನಿಖೆ ನಡೆಸುತ್ತಿದ್ದ ಅಧಿಕಾರಿಗಳಿಗೆ ಕುಟುಂಬದ ಸದಸ್ಯರು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಅಲ್ಲದೆ, ಕುಟುಂಬದ ಬ್ಯಾಂಕ್ ಖಾತೆಯಿಂದ ಶಂಕಾಸ್ಪದವಾಗಿ ಹಣ ಡ್ರಾ ಆಗುತ್ತಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಯಿತು. ಈ ತನಿಖೆಯು ಅಂತಿಮವಾಗಿ ಪೊಲೀಸರನ್ನು ಆಗ್ರಾದ ದೇಹ್ಟೋರಾ ಪ್ರದೇಶದ ರೇಣುಕಾ ಧಾಮ್ ಕಾಲೋನಿಯಲ್ಲಿರುವ ದಂಪತಿಯ ಮನೆಗೆ ಕರೆದೊಯ್ದಿತು. ಅಧಿಕಾರಿಗಳು ಬಾತ್‌ರೂಂನ ಟೈಲ್ಸ್ ನೆಲವನ್ನು ಒಡೆದು ಸುರೇಂದ್ರನದ್ದೇ ಇರಬಹುದು ಎಂದು ಶಂಕಿಸಲಾದ ಅಸ್ಥಿಪಂಜರವನ್ನು ವಶಪಡಿಸಿಕೊಂಡರು. ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ಶವದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಗಲ್ಲು ಶಿಕ್ಷೆ!

ಮರಣೋತ್ತರ ಪರೀಕ್ಷೆಗೆ ಶವ ರವಾನೆ:

ಸದ್ಯಕ್ಕೆ ಸುರೇಂದ್ರನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶವವನ್ನು ಹೂತುಹಾಕಲು ರೂಬಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರೆಯೇ? ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸುರೇಂದ್ರ ಕೆಲವು ಸಮಯದಿಂದ ನಿರುದ್ಯೋಗಿಯಾಗಿದ್ದ ಮತ್ತು ಮದ್ಯದ ವ್ಯಸನಿಯಾಗಿದ್ದ. ಆತ ಮದ್ಯ ಖರೀದಿಸಲು ರೂಬಿ ಬಳಿ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಮತ್ತು ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

ಈ ದಂಪತಿಗೆ ಮದುವೆಯಾಗಿ ಸುಮಾರು 16 ವರ್ಷಗಳಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುರೇಂದ್ರನ ದಿವಂಗತ ತಂದೆಯ ಪೆನ್ಷನ್ (ಪಿಂಚಣಿ) ಹಣವೇ ಇವರ ಪ್ರಾಥಮಿಕ ಆದಾಯದ ಮೂಲವಾಗಿತ್ತು. ಇದನ್ನು ಸುರೇಂದ್ರ ಮತ್ತು ಆತನ ಸಹೋದರ ಅನಿಲ್ ಶರ್ಮಾ ಹಂಚಿಕೊಳ್ಳುತ್ತಿದ್ದರು. ಈ ಕೊಲೆ ಮೇ 18 ರಂದು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಖೀರ್‌ನಲ್ಲಿ ನಿದ್ದೆ ಮಾತ್ರೆ:

ರೂಬಿ ತನ್ನ ಪತಿಗೆ ನೀಡುವ ಮುನ್ನ ಒಂದು ಬೌಲ್ ಖೀರ್‌ನಲ್ಲಿ ಭಾರಿ ಪ್ರಮಾಣದ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದಳು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಆತ ಮಲಗಿದ್ದಾಗ ಯಾವುದೇ ಚಲನೆ ಇಲ್ಲದಿರುವುದನ್ನು ಕಂಡ ಅವರ ಹೆಣ್ಣು ಮಕ್ಕಳಿಗೆ ಯಾವುದೇ ಅನುಮಾನ ಬರಲಿಲ್ಲ. ಏಕೆಂದರೆ ಆತ ಮದ್ಯ ಸೇವಿಸಿದರೆ ಇದೇ ರೀತಿ ದಿನಗಟ್ಟಲೆ ಮಲಗಿರುತ್ತಿದ್ದರು. ಸುರೇಂದ್ರನಿಗೆ ಪ್ರಜ್ಞೆ ತಪ್ಪಿದ ನಂತರ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಕೊಲೆ ನಡೆದ ಮರುದಿನ ಬೆಳಗ್ಗೆ ರೂಬಿ ತನ್ನ ಹೆಣ್ಣು ಮಕ್ಕಳನ್ನು ಮೈದುನನ ಮನೆಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದಳು. ನಂತರ ಬಾತ್‌ರೂಂನೊಳಗೆ ಹೊಂಡ ತೋಡಿ, ಸುರೇಂದ್ರನ ಶವವನ್ನು ನೆಲದ ಅಡಿಯಲ್ಲಿ ಹೂತು, ಕಾಂಕ್ರೀಟ್‌ನಿಂದ ಮುಚ್ಚಿ, ಅಪರಾಧವನ್ನು ಮರೆಮಾಚಲು ಅದರ ಮೇಲೆ ಹೊಸ ಟೈಲ್ಸ್‌ಗಳನ್ನು ಹಾಕಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದು ಆಕೆ ತಾನೇ ಹೋಗಿ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ಸುರೇಂದ್ರ ನಾಪತ್ತೆಯಾದ ನಂತರವೂ ಕುಟುಂಬದ ಪೆನ್ಷನ್ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸುರೇಂದ್ರನ ಸಹೋದರ ಅನಿಲ್ ಶರ್ಮಾ ಗಮನಿಸಿದಾಗ ತನಿಖೆ ಮಹತ್ವದ ತಿರುವು ಪಡೆಯಿತು. ಸುರೇಂದ್ರ ತನ್ನ ಬಳಿಯೇ ಎಟಿಎಂ ಕಾರ್ಡ್ ಹೊಂದಿದ್ದರಿಂದ ಅನಿಲ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಇದರಿಂದ ತನಿಖಾಧಿಕಾರಿಗಳ ಅನುಮಾನ ರೂಬಿ ಕಡೆಗೆ ತಿರುಗಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us