‘ಮೇಡೇ’ ಎಂದಿದ್ದಷ್ಟೇ ಅಲ್ಲ! ಏರ್ ಇಂಡಿಯಾ ವಿಮಾನ ಪೈಲಟ್ ಎಟಿಸಿಗೆ ಕಳುಹಿಸಿದ್ದ ಕೊನೆಯ ಸಂದೇಶ ಬಯಲು
ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದ ಅತಿ ದೊಡ್ಡ ಮಾಹಿತಿ ಬೆಳಕಿಗೆ ಬಂದಿದೆ. ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಎಟಿಸಿಗೆ ಕಳುಹಿಸಿದ ಕೊನೆಯ ಸಂದೇಶ ಏನೆಂಬುದು ಗೊತ್ತಾಗಿದೆ. ಪೈಲಟ್ ಸುಮಿತ್ ಸಭರ್ವಾಲ್ ಅವರ ಆಡಿಯೋ ಸಂದೇಶ ರಿವೀಲ್ ಆಗಿದೆ. ಹಾಗಾದರೆ ಅವರು ಕೊನೆಯ ಸಂದೇಶದಲ್ಲಿ ಹೇಳಿದ್ದೇನು? ಇಲ್ಲಿದೆ ವಿವರ.

ಅಹಮದಾಬಾದ್, ಜೂನ್ 14: ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಪತನಗೊಂಡ (Ahmedabad plane crash) ಘಟನೆ ಸಂಬಂಧ ಅತಿದೊಡ್ಡ ಮಾಹಿತಿಯೊಂದು ಇದೀಗ ಬೆಳಕಿಗೆ ಬಂದಿದೆ. ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಎಟಿಸಿಗೆ (ATC) ಕಳುಹಿಸಿದ್ದ ಸಂದೇಶ ಬೆಳಕಿಗೆ ಬಂದಿದೆ. ಪೈಲಟ್ ಸುಮಿತ್ ಸಭರ್ವಾಲ್ ‘ಮೇಡೇ’ ಸಂದೇಶ ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಹೇಳಿದ್ದರು ಎಂಬುದು ಆಡಿಯೋ ಸಂದೇಶದಿಂದ ಗೊತ್ತಾಗಿದೆ.
ಜೂನ್ 12 ರಂದು ಸಂಭವಿಸಿದ್ದ ವಿಮಾನ ಅಪಘಾತದಲ್ಲಿ, ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ 241 ಜನರು ಸಾವನ್ನಪ್ಪಿದರು. ಅಲ್ಲದೆ, ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿದ್ದವರೂ ಮೃತಪಟ್ಟಿದ್ದರು. ಒಟ್ಟಾರೆಯಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನ ಪತನವಾಗುವ ಮೊದಲು ಪೈಲಟ್ ಎಟಿಸಿಗೆ ‘ಮೇಡೇ’ ಸಂದೇಶ (ಅಪಾಯವನ್ನು ಸೂಚಿಸುವ ಸಂದೇಶ) ಕಳುಹಿಸಿದ್ದರು.
ಅಪಘಾತಕ್ಕೀಡಾದ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಕಮಾಂಡರ್ ಕ್ಲೈವ್ ಕುಂದರ್ ನಿರ್ವಹಿಸುತ್ತಿದ್ದರು. ವಿಮಾನವು ಅಹಮದಾಬಾದ್ ರನ್ವೇ 23 ರಿಂದ ಮಧ್ಯಾಹ್ನ 1:39 ಕ್ಕೆ ಹೊರಟಿತ್ತು. ಕೆಲವೇ ನಿಮಿಷಗಳಲ್ಲಿ ಎಟಿಸಿಗೆ ‘ಮೇಡೇ’ ಸಂದೇಶ ಬಂದಿತು.
ಏರ್ ಇಂಡಿಯಾ ವಿಮಾನ ಪೈಲಟ್ ಕೊನೆಯ ಸಂದೇಶವೇನು?
ಪೈಲಟ್ ಸುಮಿತ್ ಸಭರ್ವಾಲ್ ಅವರು ಕೊನೆಯದಾಗಿ, ‘ಮೇಡೇ, ಮೇಡೇ, ಮೇಡೇ’ ಎಂದು ಸಂದೇಶ ಕಳುಹಿಸಿದ್ದರು. ಅಲ್ಲದೆ, ‘ಟೇಕಾಫ್ಗೆ ಸಾಕಷ್ಟು ಪ್ರೆಷರ್ ಸಿಗುತ್ತಿಲ್ಲ. ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರು.
ಆದರೆ ನಂತರ ವಿಮಾನವು ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್ಪೋರ್ಟ್ ಪರಿಧಿಯ ಹೊರಗೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಬರುತ್ತಿರುವುದು ಕಂಡುಬಂದಿತು. ಪೈಲಟ್ ಅವರ ಕೊನೆಯ ಮಾತುಗಳ ನಂತರ ವಿಮಾನ ಅಪಘಾತಕ್ಕೀಡಾಯಿತು. ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರಿಗೆ 8,200 ಗಂಟೆಗಳ ವಿಮಾನ ಹಾರಾಟದ ಅನುಭವವಿದೆ ಎಂಬುದು ಗಮನಾರ್ಹ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ, ತನಿಖೆಗೆ ಸಮಿತಿ ರಚನೆ
ಮತ್ತೊಂದೆಡೆ, ವಿಮಾನ ಪತನ ಸಂಬಂಧ ತನಿಖೆ ಚುರುಕುಗೊಂಡಿದೆ. ವಿಮಾನ ದುರಂತ ಸ್ಥಳಕ್ಕೆ ಭೇಟಿ ನೀಡಿರುವ ಡಿಜಿಸಿಎ (ನಾಗರಿಕ ವಿಮಾನಯಾನ) ಅಧಿಕಾರಿಗಳು ಇಂಚಿಂಚೂ ಶೋಧ ನಡೆಸಿ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Sat, 14 June 25