Air Force Day: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ, ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರ್​ಗಳ ನೇಮಕ; ಐಎಎಫ್​ ಮುಖ್ಯಸ್ಥ ಘೋಷಣೆ

ಈ ಸಂದರ್ಭದಲ್ಲಿ ವಾಯುಪಡೆಯ ಮುಖ್ಯಸ್ಥರು ಐಎಎಫ್ ಸಿಬ್ಬಂದಿಗೆ ಹೊಸ ಮಾದರಿಯ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದ್ದಾರೆ.

Air Force Day: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ, ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರ್​ಗಳ ನೇಮಕ; ಐಎಎಫ್​ ಮುಖ್ಯಸ್ಥ ಘೋಷಣೆ
ಏರ್ ಚೀಫ್ ಮಾರ್ಷಲ್
Follow us
| Updated By: ಸುಷ್ಮಾ ಚಕ್ರೆ

Updated on: Oct 08, 2022 | 11:38 AM

ನವದೆಹಲಿ: ವಾಯುಪಡೆ ದಿನದ (Air Force Day) ಸಂದರ್ಭದಲ್ಲಿ ಚಂಡೀಗಢದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಭಾರತೀಯ ವಾಯುಪಡೆಯ (IAF) ಪರಾಕ್ರಮವನ್ನು ಪ್ರದರ್ಶಿಸಲು 80 ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಇಂದು ಸಜ್ಜಾಗಿವೆ. ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಸುಖ್ನಾ ಲೇಕ್ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ ಫ್ಲೈ-ಪಾಸ್ಟ್‌ನಲ್ಲಿ ಭಾಗವಹಿಸಲಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಸುಖನಾ ಸರೋವರದ ಬಳಿ ಆಗಮಿಸಲಿದ್ದಾರೆ.

ಈ ವೇಳೆ ಮಾತನಾಡಿದ ಐಎಎಫ್ ಮುಖ್ಯಸ್ಥ ವಿಆರ್ ಚೌಧರಿ, ಅಗ್ನಿಪಥ್ ಯೋಜನೆಯ ಮೂಲಕ ಭಾರತೀಯ ವಾಯುಪಡೆಗೆ ವಾಯು ಯೋಧರನ್ನು ಸೇರ್ಪಡೆಗೊಳಿಸುವುದು ನಮ್ಮ ಮುಂದಿರುವ ಒಂದು ಸವಾಲಾಗಿದೆ ಎಂದು ಹೇಳಿದರು. ಮುಖ್ಯವಾಗಿ, ಇದು ಭಾರತದ ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಆ ಸೇವೆಯನ್ನು ರಾಷ್ಟ್ರದ ಸೇವೆಗೆ ಬಳಸಿಕೊಳ್ಳಲು ನಮಗೆ ಒಂದು ಅವಕಾಶವಾಗಿದೆ ಎಂದಿದ್ದಾರೆ. ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ, ಮಹಿಳಾ ಅಗ್ನಿವೀರ್‌ ಸೇರ್ಪಡೆ, ಆತ್ಮನಿರ್ಭರತೆಗೆ ಒತ್ತು ನೀಡುವುದಾಗಿ ಭಾರತೀಯ ವಾಯುಪಡೆ ದಿನದಂದು ಏರ್ ಚೀಫ್ ಮಾರ್ಷಲ್ ಘೋಷಣೆ ಮಾಡಿದ್ದಾರೆ.

ಐಎಎಫ್‌ನಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಪ್ರತಿಯೊಬ್ಬ ಅಗ್ನಿವೀರ್ ಸರಿಯಾದ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕಾರ್ಯಾಚರಣೆಯ ತರಬೇತಿ ವಿಧಾನವನ್ನು ಬದಲಾಯಿಸಿದ್ದೇವೆ. ಈ ವರ್ಷದ ಡಿಸೆಂಬರ್‌ನಲ್ಲಿ ನಾವು ಆರಂಭಿಕ ತರಬೇತಿಗಾಗಿ 3,000 ಅಗ್ನಿವೀರ್​ಗಳನ್ನು ಸೇರಿಸಿಕೊಳ್ಳುತ್ತೇವೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ ಎಂದಿದ್ದಾರೆ.

ಇದನ್ನೂ ಓದಿ: Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ

ವಾಯುಪಡೆ ದಿನದಂದು ವಾಯು ಯೋಧರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ವಾಯುಪಡೆಯ ಈ ದಿನದಂದು, ಧೈರ್ಯಶಾಲಿ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳು. ‘ನಭಃ ಸ್ಪೃಶಂ ದೀಪ್ತಂ’ ಎಂಬ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಭಾರತೀಯ ವಾಯುಪಡೆಯು ದಶಕಗಳಿಂದ ಅಸಾಧಾರಣ ಕೌಶಲ್ಯವನ್ನು ತೋರಿಸಿದೆ. ಅವರು ರಾಷ್ಟ್ರವನ್ನು ಸುರಕ್ಷಿತಗೊಳಿಸಿದ್ದಾರೆ ಮತ್ತು ವಿಪತ್ತುಗಳ ಸಮಯದಲ್ಲಿ ಮಾನವೀಯತೆಯನ್ನು ತೋರಿಸಿದ್ದಾರೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

IAF ಮುಖ್ಯಸ್ಥ ಚೌಧುರಿ ಅವರು ಹೊಸ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆಯನ್ನು ಘೋಷಿಸಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತೀಯ ವಾಯುಪಡೆಯಲ್ಲಿನ ಅಧಿಕಾರಿಗಳಿಗೆ ವೆಪನ್ ಸಿಸ್ಟಮ್ ಶಾಖೆಯನ್ನು ರಚಿಸಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ ಎಂದು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಚಂಡೀಗಢದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Indian Air Force Day: ಭಾರತೀಯ ವಾಯುಪಡೆ ದಿನ; ಅ. 8ರಂದು 80 ಐಎಎಫ್ ವಿಮಾನಗಳಿಂದ ಚಂಡೀಗಢದಲ್ಲಿ ವೈಭವದ ಪ್ರದರ್ಶನ

ಭಾರತೀಯ ವಾಯುಪಡೆಯ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 8ರಂದು ಆಚರಿಸಲಾಗುತ್ತದೆ. IAF ತನ್ನ ವಾರ್ಷಿಕ ಏರ್ ಫೋರ್ಸ್ ಡೇ ಪರೇಡ್ ಅನ್ನು ಆಯೋಜಿಸಲು ಮೊದಲ ಬಾರಿಗೆ ನಿರ್ಧರಿಸಿದೆ ಮತ್ತು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದ ಹೊರಗೆ ಫ್ಲೈ-ಪಾಸ್ಟ್ ಮಾಡಲು ನಿರ್ಧರಿಸಿದೆ. ವಾಯುಸೇನೆ ದಿನಾಚರಣೆ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ವಾಯುಪಡೆಯ ಮುಖ್ಯಸ್ಥರು ಐಎಎಫ್ ಸಿಬ್ಬಂದಿಗೆ ಹೊಸ ಮಾದರಿಯ ಯುದ್ಧ ಸಮವಸ್ತ್ರವನ್ನು ಅನಾವರಣಗೊಳಿಸಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಸ್ವದೇಶಿ ನಿರ್ಮಿತ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) “ಪ್ರಚಂಡ್” ಕೂಡ ಮೂರು ವಿಮಾನಗಳ ರಚನೆಯಲ್ಲಿ ಫ್ಲೈ-ಪಾಸ್ಟ್‌ನ ಭಾಗವಾಗಲಿದೆ.

ಈ ವೈಮಾನಿಕ ಪ್ರದರ್ಶನದಲ್ಲಿ ವಾಯುಪಡೆಯ ಯುದ್ಧ ವಿಮಾನಗಳಾದ ರಫೇಲ್, ಎಸ್​ಯು -30 ಮತ್ತು ಮಿರಾಜ್ 2000 ಹಾರಾಟವನ್ನು ಜನರು ವೀಕ್ಷಿಸಬಹುದು. ಇಂದು ಮಧ್ಯಾಹ್ನದ ನಂತರ ಸುಖ್ನಾ ಸರೋವರದಲ್ಲಿ ಗ್ರ್ಯಾಂಡ್ ಫ್ಲೈ-ಪಾಸ್ಟ್ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅಧ್ಯಕ್ಷತೆ ವಹಿಸುವರು. ಹೆಲಿಕಾಪ್ಟರ್‌ಗಳಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್, ಚಿನೂಕ್, ಅಪಾಚೆ ಮತ್ತು ಎಂಐ-17 ಈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ