
ಕಾನಪುರ್, ಡಿಸೆಂಬರ್ 9: ಆಲಿಗಡ್ ಮುಸ್ಲಿಂ ಯೂನಿವರ್ಸಿಟಿಯ (Aligarh Muslim University) ಬೋಧಕರೊಬ್ಬರನ್ನು ಕ್ಯಾಂಪಸ್ನಲ್ಲೇ ಹತ್ಯೆ ಮಾಡಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಎಬಿಕೆ ಸ್ಕೂಲ್ನಲ್ಲಿ ಬೋಧಕರಾಗಿರುವ ರಾವ್ ದಾನಿಸ್ ಅಲಿಯನ್ನು ಗುಂಡಿಟ್ಟು ಸಾಯಿಸಲಾಗಿದೆ. ಆಲಿಗಡ್ನಲ್ಲಿರುವ ಯೂನಿವರ್ಸಿಟಿ ಕ್ಯಾಂಪಸ್ನ ಮೌಲಾನ ಆಜಾದ್ ಲೈಬ್ರರಿ ಪ್ರದೇಶದಲ್ಲಿ ಬುಧವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.
ಈ ಹತ್ಯೆಗೈದ ಹಂತಕರು ಯಾರೆಂದು ಗೊತ್ತಾಗಿಲ್ಲ. ದಾನಿಶ್ ಅಲಿ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳೊಂದಿಗೆ ಮೌಲಾನ ಆಜಾದ್ ಲೈಬ್ರರಿ ಸಮೀಪದ ಕ್ಯಾಂಟೀನ್ಗೆ ವಾಕಿಂಗ್ಗೆ ಹೋಗಿದ್ದರು. ಆಗ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಘಟನೆಯ ನಂತರ ಮತ್ತೊಂದು ಭಯಾನಕ ಅಪಘಾತ: ಎರಡು ಕಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್ಸು, 7 ಮಂದಿ ಸಾವು
ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು, ರಾವ್ ಅಲಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಕರೆದೊಯ್ದಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರ ಪ್ರಾಣ ಉಳಿಯಲಿಲ್ಲ. ಇಬ್ಬರು ಅಪರಿಚಿತ ವ್ಯಕ್ತಿಗಳು ಈ ಹತ್ಯೆಗೈದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಅಲಿಗಡ್ ಪೊಲೀಸರ ಟ್ವೀಟ್
ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಸದ್ಯ ಪೊಲೀಸರು ತನಿಖೆ ನಡೆಸತೊಡಗಿದ್ದಾರೆ. ಸುತ್ತಮುತ್ತಲಿನ ಸ್ಥಳದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗುತ್ತಿದ್ದು, ಹಂತಕರನ್ನು ಪತ್ತೆ ಮಾಡುವ ಪ್ರಯತ್ನವಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ