
ನವದೆಹಲಿ, ಅಕ್ಟೋಬರ್ 10: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌ಗೆ ತೆರಳಲು ಯತ್ನಿಸಿದ 7,000ಕ್ಕೂ ಅಧಿಕ ಜನರನ್ನು ದೆಹಲಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಎಸ್ಐಆರ್ ಮತ್ತು ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6 ಬದಲಾವಣೆಗಳಲ್ಲಿ ಅಕ್ರಮ ನಡೆದಿವೆ ಎಂದು ಆರೋಪಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಬೆಳಗ್ಗೆಯಿಂದ ವಶಕ್ಕೆ ಪಡೆದಿರುವ ಎಲ್ಲ ಪ್ರತಿಭಟನಾಕಾರರನ್ನೂ ಪೊಲೀಸರು ಇಂದು ರಾತ್ರಿ ಬಿಡುಗಡೆ ಮಾಡಿದ್ದಾರೆ. ಆದರೆ, ಸಿಜೆಪಿ ನಾಯಕರಿಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯವಿಲ್ಲ. ಅವರನ್ನು ರಹಸ್ಯವಾದ ಸ್ಥಳದಲ್ಲಿ ಇರಿಸಲಾಗಿದೆ. ನಾಳೆ ಕೂಡ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಘೋಷಿಸಿರುವುದರಿಂದ ಈ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, ಮುಖಂಡರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ದೆಹಲಿಗೆ ಬಂದಿಳಿದ ತಕ್ಷಣ ವಿಮಾನದಲ್ಲೇ ವಶಕ್ಕೆ ಪಡೆಯಲಾಗಿತ್ತು. ದಿಪ್ಕೆ ಅವರ ಅಜ್ಜಿ ಮಹಾರಾಷ್ಟ್ರದಲ್ಲಿ ನಿಧನರಾಗಿದ್ದರೂ ಅವರು ಇನ್ನೂ ವಶದಲ್ಲೇ ಇದ್ದಾರೆ. ಅಂತ್ಯಕ್ರಿಯೆಗೆ ತೆರಳಲು ಅವಕಾಶ ನೀಡುವುದಾಗಿ ಪೊಲೀಸರು ತಿಳಿಸಿದ್ದರೂ, ಸಂಜೆ ವೇಳೆಗೆ ಅವರ ಬಿಡುಗಡೆಯ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ.
ಇದನ್ನೂ ಓದಿ: ‘ಜ್ಞಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ’; ಸಿಜೆಪಿ ನಿರ್ಧಾರ
ಸಿಜೆಪಿ ಸಂಘಟನೆಯು ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿರುವುದರಿಂದ ಭಾನುವಾರವೂ ಉದ್ವಿಗ್ನ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿಯಲ್ಲಿ ಭಾರಿ ಭದ್ರತಾ ವ್ಯವಸ್ಥೆ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Most of the people detained during today’s protest have been released: Delhi Police Sources https://t.co/IJdillPgK9
— IANS (@ians_india) October 10, 2026
ಮಧ್ಯ ದೆಹಲಿಯಲ್ಲಿ ಬೃಹತ್ ಪೊಲೀಸ್ ಮತ್ತು ಅರ್ಧಸೈನಿಕ ಪಡೆಗಳ ನಿಯೋಜನೆ, ಬ್ಯಾರಿಕೇಡ್‌ಗಳು ಮತ್ತು ಓಡಾಟದ ಮೇಲಿನ ನಿರ್ಬಂಧಗಳ ನಡುವೆಯೂ ಪ್ರತಿಭಟನಾಕಾರರನ್ನು ವಿವಿಧೆಡೆ ತಡೆಯಲಾಯಿತು. ಜಂತರ್ ಮಂತರ್‌ನಿಂದ 10 ಕಿ.ಮೀ ದೂರದಲ್ಲಿರುವ ದಿಲ್ಲಿ ಹಾಟ್ ಬಳಿ ನೇಹಾ ಬೋರಾ ನೇತೃತ್ವದ ‘ಐಸಾ’ ವಿದ್ಯಾರ್ಥಿ ಸಂಘಟನೆಯು ಧರಣಿ ನಡೆಸಲು ಯತ್ನಿಸಿದಾಗ ಪೊಲೀಸರು ಲಾಠಿ ಬಳಸಿ ಅವರನ್ನು ವ್ಯಾನ್‌ಗಳಿಗೆ ದೂಡಿದರು. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ನಂತರ ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ