ತಿದ್ದುಪಡಿಗೆ ಅಲ್ಲ, ಮಹಿಳಾ ಮೀಸಲಾತಿಗೇ ಪ್ರತಿಪಕ್ಷದ ವಿರೋಧ: ಗೃಹ ಸಚಿವ ಅಮಿತ್​​ ಶಾ

ಲೋಕಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಮತ್ತು ಜಾತಿ ಜನಗಣತಿ ಬಗ್ಗೆ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಯನ್ನು ಪರೋಕ್ಷವಾಗಿ ವಿರೋಧಿಸುತ್ತಿವೆ ಎಂದು ಆರೋಪಿಸಿದ ಅವರು, ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2029ರೊಳಗೆ ಮಸೂದೆ ಜಾರಿಯ ಗುರಿ ಇದ್ದು, ಜನಗಣತಿ ಜೊತೆ ಜಾತಿ ಗಣತಿಯೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ತಿದ್ದುಪಡಿಗೆ ಅಲ್ಲ, ಮಹಿಳಾ ಮೀಸಲಾತಿಗೇ ಪ್ರತಿಪಕ್ಷದ ವಿರೋಧ: ಗೃಹ ಸಚಿವ ಅಮಿತ್​​ ಶಾ
ಅಮಿತ್ ಶಾ
Image Credit source: Sansad TV

Updated on: Apr 17, 2026 | 7:29 PM

ನವದೆಹಲಿ, ಏಪ್ರಿಲ್​​ 17: ಮಹಿಳಾ ಮೀಸಲಾತಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಬಗ್ಗೆ ಚರ್ಚೆ ಸಂಬಂಧ ಲೋಕಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಉತ್ತರ ನೀಡಿದ್ದಾರೆ. ಯಾರೂ ಕೂಡ ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಲ್ಲ. ಎಲ್ಲರೂ ಕೂಡ ಸ್ವಾಗತ ಮಾಡಿದ್ದಾರೆ. ಆದ್ರೆ, ಇಂಡಿಯಾ ಮೈತ್ರಿಕೂಟ ಪರೋಕ್ಷವಾಗಿ ಅದನ್ನು ವಿರೋಧಿಸಿದೆ. ಅವರ ವಿರೋಧ ತಿದ್ದುಪಡಿಗಳಿಗೆ ಅಲ್ಲ. ಬದಲಾಗಿ ಮಹಿಳಾ ಮೀಸಲಾತಿಗೇ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹೀಗಾಗಿ ವಿರೋಧ ಪಕ್ಷದವರು ಮಹಿಳಾ ವಿರೋಧಿ ಮನಸ್ಥಿತಿಯವರು ಎಂದು ಅಮಿತ್​​ ಶಾ ತಿವಿದಿದ್ದಾರೆ.

ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಸಮಾನ ಪ್ರತಿನಿಧಿತ್ವಕ್ಕಾಗಿ ಕ್ಷೇತ್ರ ಮರುವಿಂಗಡಣೆ ಅಗತ್ಯ. ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸುವುದು SC/ST ಸ್ಥಾನಗಳ ಹೆಚ್ಚಳಕ್ಕೂ ವಿರೋಧಿಸಿದಂತೆಯೇ ಎಂದಿದ್ದಾರೆ. ಅಲ್ಲದೆ 2029ರ ಚುನಾವಣೆಗೆ ಮೊದಲು ಬಿಲ್​​ಗಳನ್ನಯ ಜಾರಿಗೆ ತರುವ ಉದ್ದೇಶ ಸರ್ಕಾರದ್ದಾಗಿದೆ. 20 ಲಕ್ಷಕ್ಕೂ ಹೆಚ್ಚು ಮತದಾರರಿರುವ 127 ಲೋಕಸಭಾ ಕ್ಷೇತ್ರಗಳಿವೆ. ಇಷ್ಟು ಜನರ ಸಮಸ್ಯೆಗಳನ್ನು ಒಬ್ಬ ಸಂಸದ ಹೇಗೆ ನಿಭಾಯಿಸಬಹುದು ಮತ್ತು ಅವರ ಅಗತ್ಯಗಳನ್ನು ಪೂರೈಸಬಹುದು? ಎಂದು ಅವರು ಇದೇ ವೇಳೆ ಸದನವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆ ಪರ ಮತ ಚಲಾಯಿಸಲು ಸಂಸದರಿಗೆ ಮೋದಿ ಮನವಿ

‘ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ’

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಲಾಗಿದೆ. ಆದರೆ ಉತ್ತರದವರಿಗೆ ಇರುವಷ್ಟೇ ಅಧಿಕಾರ ಈ ಸದನದಲ್ಲಿ ದಕ್ಷಿಣದವರಿಗೂ ಇದೆ. ಸುಳ್ಳನ್ನು ಜೋರಾಗಿ ಹೇಳಿದರೆ ಅದು ಸತ್ಯವಾಗಲ್ಲ. ಸತ್ಯ ಯಾವತ್ತೂ ಸತ್ಯವೇ. ಉತ್ತರ-ದಕ್ಷಿಣ ವಿಭಜನೆ ಬೇಕಿರೋದು ವಿಪಕ್ಷದವರಿಗೆ. ಯಾವುದೇ ರಾಜ್ಯಕ್ಕೂ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಲಕ್ಷದ್ವೀಪವಾಗಲಿ ಉತ್ತರ ಪ್ರದೇಶ ಆಗಲಿ, ಪ್ರತಿಯೊಂದು ರಾಜ್ಯಕ್ಕೂ ಸಂಸತ್ತಿನಲ್ಲಿ ನ್ಯಾಯಸಮ್ಮತ ಪ್ರತಿನಿಧಿತ್ವ ದೊರೆಯಲಿದೆ. ಅಧಿಕಾರದಲ್ಲಿದ್ದಾಗಲೂ, ವಿರೋಧ ಪಕ್ಷದಲ್ಲಿದ್ದಾಗಲೂ ಕಾಂಗ್ರೆಸ್ ಕ್ಷೇತ್ರ ಮರುವಿಂಗಡಣೆಗೆ ವಿರೋಧಿಸಿದೆ ಎಂದು ಅಮಿತ್​​ ಶಾ ಆರೋಪಿಸಿದ್ದಾರೆ.

543 ಸಂಸತ್ ಸ್ಥಾನಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ಈ ಐದು ರಾಜ್ಯಗಳಲ್ಲಿ ಪ್ರಸ್ತುತ 129 ಸ್ಥಾನಗಳಿದ್ದು, ಇದು ಶೇ. 23.76 ಆಗಿದೆ. ಶೇ.50 ಹೆಚ್ಚಳದ ನಂತರ ಸ್ಥಾನಗಳನ್ನು ಹಂಚಿದರೆ ಇದು 129ರಿಂದ 195ಕ್ಕೆ ಏರಿಕೆಗೊಂಡು, 816 ಸ್ಥಾನಗಳಲ್ಲಿ ಶೇ. 23.87 ಆಗುತ್ತದೆ. ಹೀಗಾಗಿ ಯಾರಿಗೂ ನಷ್ಟವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ನಾವು ಮಾಡಿದ ಪ್ರತಿಯೊಂದು ಕ್ರಮಕ್ಕೂ ಕಾಂಗ್ರೆಸ್ ಮತ್ತು ಪ್ರತಿಪಕ್ಷ ವಿರೋಧ ವ್ಯಕ್ತಪಡಿಸಿದೆ. ನಾವು ಆರ್ಟಿಕಲ್ 370 ರದ್ದುಗೊಳಿಸಿದಾಗ ಅವರು ವಿರೋಧಿಸಿದರು. ಏರ್‌ಸ್ಟ್ರೈಕ್‌ಗಳು ಮತ್ತು ‘ಆಪರೇಷನ್​​ ಸಿಂಧೂರ್’ ನಡೆಸಿದಾಗಲೂ ವಿರೋಧಿಸಿದರು. ರಾಮ ಮಂದಿರ ನಿರ್ಮಿಸಿದಾಗಲೂ ಅವರು ವಿರೋಧಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜನಗಣತಿ ವೇಳೆಯೇ ಜಾತಿಗಣತಿ’

ಕೋವಿಡ್-19 ಮಹಾಮಾರಿಯ ಕಾರಣ 2021ರಲ್ಲಿ ಜನಗಣತಿ ನಡೆಸಲು ಸಾಧ್ಯವಾಗಲಿಲ್ಲ. 2024ರಲ್ಲಿ ಮಾಡಲು ಮುಂದಾದಾಗ ಹಲವರು ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದರು. ಅಂತಿಮವಾಗಿ  ಜಾತಿ ಜನಗಣತಿ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್​​ ನಿರ್ಣಯದಂತೆ ಜನಗಣತಿ ವೇಳೆ ಜಾತಿ ಗಣತಿಯೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:59 pm, Fri, 17 April 26

Follow Us