ಪೆಗಾಸಸ್ ಸ್ಪೈವೇರ್: ಅಂತಾರಾಷ್ಟ್ರೀಯ ಏಜೆನ್ಸಿಗಳು, ಭಾರತದ ಪ್ರತಿಪಕ್ಷಗಳಿಗೆ ಗೃಹ ಸಚಿವ ಅಮಿತ್ ಶಾರಿಂದ ಕಟು ತಿರುಗೇಟು
ಸಂಸತ್ತಿನಲ್ಲಿ ಪ್ರಾರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಅಡ್ಡಿಯುಂಟುಮಾಡಲು ಪ್ರತಿಪಕ್ಷಗಳು ಇದೀಗ ಪೆಗಾಸಸ್ ಸ್ಪೈವೇರ್ ವಿಷಯವನ್ನು ದೊಡ್ಡದು ಮಾಡುತ್ತಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ದೆಹಲಿ: ಸದ್ಯ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಗ್ಗೆ ಭಾರತದಲ್ಲಿ ಮತ್ತೊಮ್ಮೆ ಚರ್ಚೆ ಭುಗಿಲೆದ್ದಿದೆ. ಪೆಗಾಸಸ್ ಸ್ಪೈವೇರ್ ಮೂಲಕ ಯಾರೆಲ್ಲರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಪಟ್ಟಿಯನ್ನು ದಿ ವೈರ್ ನ್ಯೂಸ್ ವೆಬ್ಸೈಟ್ ಬಿಡುಗಡೆ ಮಾಡಿದ್ದು ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್, ಅಭಿಷೇಕ್ ಬ್ಯಾನರ್ಜಿ ಮತ್ತಿತರರ ಹೆಸರು ಇದೆ. ಇದೀಗ ಪ್ರತಿಪಕ್ಷಗಳು ಇದೇ ವಿಚಾರವಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಸದ್ಯ ಚರ್ಚೆಯಲ್ಲಿರುವ ಪೆಗಾಸಸ್ ಇಸ್ರೇಲಿ ಸ್ಪೈವೇರ್ ಬಗ್ಗೆ ಮಾತನಾಡಿ, ಕಾಂಗ್ರೆಸ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ತಿರುಗೇಟು ನೀಡಿದ ಗೃಹ ಸಚಿವ ಅಮಿತ್ ಶಾ, ಯಾರಿಗೂ ತಮ್ಮ ಪಿತೂರಿಯಿಂದ ಭಾರತದ ಅಭಿವೃದ್ಧಿಯನ್ನು ಹಳಿತಪ್ಪಿಸಲು ಸಾಧ್ಯವಿಲ್ಲ ಎಂದು ಕಟುವಾಗಿಯೇ ಹೇಳಿದ್ದಾರೆ.
ಭಾರತದಲ್ಲಿ ಹಾಲಿ ಇಬ್ಬರು ಸಚಿವರು, 40ಕ್ಕೂ ಹೆಚ್ಚು ಮಂದಿ ಪತ್ರಕರ್ತರು, ಮೂವರು ಪ್ರತಿಪಕ್ಷ ನಾಯಕರು, ಹಾಲಿ ನ್ಯಾಯಾಧೀಶರೊಬ್ಬರು, ಉದ್ಯಮಿಗಳು, ಹಲವು ಕಾರ್ಯಕರ್ತರು ಸೇರಿ 300 ಮಂದಿಯ ಫೋನ್ನ್ನು ಹ್ಯಾಕ್ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ. ಅದರಲ್ಲೂ ಈ ಸ್ಪೈವೇರ್ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟವಾಗಿದೆ ಎಂದೂ ಭಾನುವಾರ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಆದರೆ ಇದರಲ್ಲಿ ಸರ್ಕಾರದ ಪಾತ್ರ ಏನೇನೂ ಇಲ್ಲವೆಂದು ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.
ಸಂಸತ್ತಿನಲ್ಲಿ ಪ್ರಾರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಅಡ್ಡಿಯುಂಟುಮಾಡಲು ಪ್ರತಿಪಕ್ಷಗಳು ಇದೀಗ ಪೆಗಾಸಸ್ ಸ್ಪೈವೇರ್ ವಿಷಯವನ್ನು ದೊಡ್ಡದು ಮಾಡುತ್ತಿವೆ. ಇಷ್ಟುದಿನ ನನಗೆ ಟೀಕಿಸಲು ಕ್ರೊನೊಲಜಿ ಅರ್ಥ ಮಾಡಿಕೊಳ್ಳಿ ಎಂಬ ವಾಕ್ಯವನ್ನು ಉಪಯೋಗಿಸುತ್ತಿದ್ದರು. ನಾನು ಅದೇ ವಾಕ್ಯವನ್ನು ತಿರುಗಿ ಈಗ ಅವರಿಗೇ ಹೇಳುತ್ತೇನೆ. ಕ್ರೊನೊಲಜಿ ಅರ್ಥ ಮಾಡಿಕೊಳ್ಳಿ ಎಂದು ಅಮಿತ್ ಶಾ ತಿರುಗೇಟು ನೀಡಿದರು. ವಿಶ್ವಮಟ್ಟದಲ್ಲಿ ಭಾರತವನ್ನು ಅವಮಾನಿಸುವ ಒಂದೇ ಕಾರಣವನ್ನಿಟ್ಟುಕೊಂಡು ಈ ಬೇಹುಗಾರಿಕೆ ವರದಿ ಮಾಡಲಾಗಿದೆ. ಆದರೆ ಪ್ರಧಾನಿ ಮೋದಿ ಸರ್ಕಾರದ ಏಕೈಕ ಗುರಿಯೆಂದರೆ ರಾಷ್ಟ್ರದ ಅಭಿವೃದ್ಧಿ. ಮತ್ತು ಅದಕ್ಕೆ ಏನೇನು ಬೇಕೋ ಅದನ್ನು ಮಾತ್ರ ಮಾಡುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್
Amit Shah strong rebuttal to Opposition Leaders on Pegasus snooping row