‘ಮಹಿಳೆಯರ ದಶಕಗಳ ಕಾಯುವಿಕೆ ಅಂತ್ಯಗೊಳ್ಳಲಿದೆ’; ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಬೆಂಬಲಿಸಲು ವಿಪಕ್ಷಗಳಿಗೆ ಅಮಿತ್ ಶಾ ಮನವಿ

ಕೇಂದ್ರದ ಹೊಸ ಕ್ಷೇತ್ರ ಪುನರ್​ವಿಂಗಡಣೆ ಪ್ರಸ್ತಾವನೆಯನ್ನು ಬೆಂಬಲಿಸುವಂತೆ ಎಲ್ಲಾ ವಿರೋಧ ಪಕ್ಷಗಳಿಗೆ ಮನವಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ಈ ವಿಧೇಯಕವು ದೇಶಾದ್ಯಂತ ಮಹಿಳೆಯರ ದಶಕಗಳ ಕಾಯುವಿಕೆಯನ್ನು ಅಂತ್ಯಗೊಳಿಸಲಿದೆ ಮತ್ತು ಅವರಿಗೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿಯನ್ನು ಒದಗಿಸಲಿದೆ ಎಂದು ಹೇಳಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ ಮತ್ತು ಚುನಾಯಿತ ಪ್ರಾತಿನಿಧ್ಯದಲ್ಲಿ ಅವರ ಬಲಿಷ್ಠ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಹೇಳಿದ್ದಾರೆ.

ಮಹಿಳೆಯರ ದಶಕಗಳ ಕಾಯುವಿಕೆ ಅಂತ್ಯಗೊಳ್ಳಲಿದೆ; ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆ ಬೆಂಬಲಿಸಲು ವಿಪಕ್ಷಗಳಿಗೆ ಅಮಿತ್ ಶಾ ಮನವಿ
ಅಮಿತ್ ಶಾ
Image Credit source: PTI

Updated on: Nov 28, 2026 | 6:59 PM

ನವದೆಹಲಿ, ನವೆಂಬರ್ 28: ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ. 50ರಷ್ಟು ಹೆಚ್ಚಿಸುವ ಸಂವಿಧಾನ (132ನೇ ತಿದ್ದುಪಡಿ) ವಿಧೇಯಕವನ್ನು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮನವಿ ಮಾಡಿದ್ದಾರೆ. ಆಡಳಿತದಲ್ಲಿ ಮಹಿಳೆಯರನ್ನು ಬಲಿಷ್ಠ ಪಾಲುದಾರರನ್ನಾಗಿ ಮಾಡುವ ಈ ಕ್ರಮವನ್ನು ಅವರು “ಐತಿಹಾಸಿಕ ಉಪಕ್ರಮ” ಎಂದು ಬಣ್ಣಿಸಿದ್ದಾರೆ. ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಸಂದೇಶ ನೀಡಿರುವ ಅಮಿತ್ ಶಾ, ಈ ತಿದ್ದುಪಡಿಯು 2029ರ ಲೋಕಸಭಾ ಚುನಾವಣೆಗೂ ಮೊದಲೇ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ಬರಲು ದಾರಿ ಮಾಡಿಕೊಡಲಿದೆ ಎಂದಿದ್ದಾರೆ.

“ಚುನಾಯಿತ ಪ್ರಾತಿನಿಧ್ಯದಲ್ಲಿ ಮಹಿಳೆಯರಿಗೆ ಬಲಿಷ್ಠ ಪಾತ್ರವನ್ನು ನೀಡುವುದು ಮೋದಿ ಸರ್ಕಾರದ ಬದ್ಧತೆಯಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು 132ನೇ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಿರುವುದರಿಂದ, ದೇಶದ ಮಹಿಳೆಯರ ದಶಕಗಳ ಕಾಯುವಿಕೆ ಅಂತ್ಯಗೊಳ್ಳುವ ಹಂತದಲ್ಲಿದೆ” ಎಂದು ಅಮಿತ್ ಶಾ ತಿಳಿಸಿದ್ದಾರೆ.

Loading...

‘ನಾರಿ ಶಕ್ತಿ ವಂದನ್ ಅಧಿನಿಯಮ’ದ (ಮಹಿಳಾ ಮೀಸಲಾತಿ ಕಾಯ್ದೆ) ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನೀಡಲಾಗಿರುವ ಶೇ. 33ರಷ್ಟು ಮೀಸಲಾತಿಯು ಈಗ ವಾಸ್ತವ ರೂಪಕ್ಕೆ ಬರಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಆಡಳಿತದಲ್ಲಿ ಮಹಿಳೆಯರನ್ನು ಪ್ರಬಲ ಪಾಲುದಾರರನ್ನಾಗಿ ಮಾಡುವ ಈ ಐತಿಹಾಸಿಕ ಉಪಕ್ರಮವನ್ನು ಎಲ್ಲಾ ಪಕ್ಷಗಳು ಬೆಂಬಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ‘ಅಧಿಕಾರ ಉಳಿಸಿಕೊಳ್ಳುವ ಹುನ್ನಾರ’; ಕ್ಷೇತ್ರ ಪುನರ್​ವಿಂಗಡಣೆ ಮಸೂದೆಗೆ ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ನವೆಂಬರ್ 27ರಂದು ಕೇಂದ್ರ ಸಚಿವ ಸಂಪುಟವು ಪರಿಷ್ಕೃತ ಕ್ಷೇತ್ರ ಪುನರ್​ವಿಂಗಡಣೆ ಯೋಜನೆಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ. 50ರಷ್ಟು ಹೆಚ್ಚಿಸಲಾಗುವುದು ಮತ್ತು 2051ರವರೆಗೆ ರಾಜ್ಯಗಳ ನಡುವಿನ ಪ್ರಸ್ತುತ ಪ್ರಾತಿನಿಧ್ಯದ ಅನುಪಾತವನ್ನು ಸ್ಥಿರವಾಗಿರಿಸಲಾಗುವುದು. ಇದರಿಂದ ದಕ್ಷಿಣ ಭಾರತದ ರಾಜ್ಯಗಳ ಆತಂಕ ನಿವಾರಣೆಯಾಗಿದ್ದು, ಡಿಎಂಕೆ, ಟಿಡಿಪಿ, ಜೆಡಿಎಸ್, ಬಿಆರ್‌ಎಸ್ ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಸೇರಿದಂತೆ ಹಲವು ಪಕ್ಷಗಳು ವಿಧೇಯಕಕ್ಕೆ ಬೆಂಬಲ ಸೂಚಿಸಿವೆ. ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯ ಬಣದ ಕೆಲವು ಪಕ್ಷಗಳು ವಿಧೇಯಕವನ್ನು ವಿರೋಧಿಸಲು ನಿರ್ಧರಿಸಿವೆ. ಈ ಸಂವಿಧಾನ ತಿದ್ದುಪಡಿ ವಿಧೇಯಕವು ಅಂಗೀಕಾರಗೊಳ್ಳಲು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Sat, 28 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us