
ಒಡಿಶಾ, ಸೆಪ್ಟೆಂಬರ್ 24: ಬಂಗಾಳಕೊಲ್ಲಿಯಲ್ಲಿ ಭಾರಿ ಆತಂಕ ಸೃಷ್ಟಿಸಿದ್ದ ಅರ್ನಬ್ ಚಂಡಮಾರುತವು ಉತ್ತರ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾ ಕರಾವಳಿಯನ್ನು ಯಶಸ್ವಿಯಾಗಿ ದಾಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ. ವಿಶಾಖಪಟ್ಟಣ ಮತ್ತು ಗೋಪಾಲಪುರದ ನಡುವೆ, ಕಳಿಂಗಪಟ್ಟಣದ ಸಮೀಪ ಕರಾವಳಿ ದಾಟಿರುವ ಈ ಹವಾಮಾನ ವ್ಯವಸ್ಥೆಯು ಈಗ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಒಳನಾಡಿನತ್ತ ಸಾಗುತ್ತಿದ್ದು, ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ.
ಚಂಡಮಾರುತ ಕರಾವಳಿ ದಾಟುವ ಮುನ್ನವೇ ಒಡಿಶಾದ ಗಜಪತಿ, ಕೊರಾಪುಟ್, ರಾಯಗಡ, ನಬರಂಗ್‌ಪುರ, ಕಲಹಂಡಿ ಮತ್ತು ಗಂಜಾಂ ಸೇರಿದಂತೆ ಆರು ಪ್ರಮುಖ ಜಿಲ್ಲೆಗಳನ್ನು ರೆಡ್ ಝೋನ್‌ನಲ್ಲಿರಿಸಲಾಗಿತ್ತು. ಒಡಿಶಾದ 16ಕ್ಕೂ ಹೆಚ್ಚು ಪ್ರದೇಶಗಳಲ್ಲಿ 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ವಿಶೇಷವಾಗಿ ಕೊರಾಪುಟ್ ಜಿಲ್ಲೆಯ ಸೆಮಿಲಿಗುಡದಲ್ಲಿ ಕೇವಲ 24 ಗಂಟೆಗಳಲ್ಲಿ ಗರಿಷ್ಠ 230 ಮಿ.ಮೀ ಹಾಗೂ ಜೇಪೋರ್‌ನಲ್ಲಿ 161 ಮಿ.ಮೀ ದಾಖಲೆಯ ಮಳೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರವಾಹದ ಭೀತಿಯಿರುವ ಗಜಪತಿ ಜಿಲ್ಲೆಯ ತಗ್ಗು ಪ್ರದೇಶಗಳಿಂದ ಸುಮಾರು 1,500ಕ್ಕೂ ಹೆಚ್ಚು ನಿವಾಸಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾ ಸಚಿವ ಸುರೇಶ್ ಪೂಜಾರಿ ತಿಳಿಸಿದ್ದಾರೆ. ಇಡೀ ಕರಾವಳಿ ವಲಯದಿಂದ ಇದುವರೆಗೆ ಒಟ್ಟು 5,000ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ತಾಣಗಳಿಗೆ ತಲುಪಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ನೀರು ನುಗ್ಗುವ ಮೊದಲೇ ಸ್ಥಳಾಂತರ ಪೂರ್ಣಗೊಳಿಸಲು ಮತ್ತು ಹಾವು ಕಡಿತ ಸೇರಿದಂತೆ ಇತರ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆಂಟಿ-ವೆನಮ್ (ವಿಷ ನಿವಾರಕ) ಔಷಧಿಗಳನ್ನು ಸನ್ನದ್ಧವಾಗಿಡಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಶಾಲಾ-ಕಾಲೇಜುಗಳಿಗೆ ರಜೆ: ತೀವ್ರ ಮಳೆಯ ಹಿನ್ನೆಲೆಯಲ್ಲಿ ಒಡಿಶಾದ 10 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಮತ್ತಷ್ಟು ಓದಿ: ಅರ್ನಬ್ ಚಂಡಮಾರುತ: ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ವಾಯುಭಾರ ಕುಸಿತ, ಆಂಧ್ರ, ಒಡಿಶಾಗೆ ‘ರೆಡ್ ಅಲರ್ಟ್’
ಅಧಿಕಾರಿಗಳ ರಜೆ ರದ್ದು: ತುರ್ತು ಸೇವೆಗೆ ಅಡ್ಡಿಯಾಗದಂತೆ ಸರ್ಕಾರಿ ನೌಕರರ ಎಲ್ಲ ರಜೆಗಳನ್ನು ರದ್ದುಪಡಿಸಲಾಗಿದ್ದು, ಕೇಂದ್ರ ಸ್ಥಾನ ಬಿಟ್ಟು ಕದಲದಂತೆ ಸೂಚಿಸಲಾಗಿದೆ.
ಆಸ್ಪತ್ರೆಗಳ ಮುನ್ನೆಚ್ಚರಿಕೆ: ತಗ್ಗು ಪ್ರದೇಶಗಳಲ್ಲಿರುವ ಗರ್ಭಿಣಿಯರನ್ನು ಮುಂಚಿತವಾಗಿಯೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಗಳು (CHC) ಅಥವಾ ‘ಮಾ ಗೃಹ’ಗಳಿಗೆ ದಾಖಲಿಸಿ ಸೂಕ್ತ ವೈದ್ಯಕೀಯ ನಿಗಾ ವಹಿಸಲಾಗಿದೆ.
ಪೋಸ್ಟ್
ರಕ್ಷಣಾ ಪಡೆಗಳ ನಿಯೋಜನೆ: ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ (ODRAF) 33 ತುಕಡಿಗಳು ಮತ್ತು ಒಡಿಶಾ ಅಗ್ನಿಶಾಮಕ ಇಲಾಖೆಯ 380 ವಿಶೇಷ ತಂಡಗಳನ್ನು ಅತ್ಯಾಧುನಿಕ ರಕ್ಷಣಾ ಬೋಟ್‌ಗಳು ಹಾಗೂ ಕತ್ತರಿಸುವ ಯಂತ್ರಗಳೊಂದಿಗೆ ಕಣಕ್ಕಿಳಿಸಲಾಗಿದೆ.
ಚಂಡಮಾರುತವು ಒಳನಾಡಿಗೆ ಚಲಿಸುತ್ತಿದ್ದಂತೆ ಗಾಳಿಯ ವೇಗ ಕ್ರಮೇಣ ತಗ್ಗುವ ಸಾಧ್ಯತೆಯಿದ್ದರೂ, ಮುಂದಿನ 24 ಗಂಟೆಗಳ ಕಾಲ ಆಂಧ್ರ ಮತ್ತು ಒಡಿಶಾದ ನದಿ ತೀರ ಹಾಗೂ ಬೆಟ್ಟಗುಡ್ಡಗಳ ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಎಚ್ಚರಿಕೆಯನ್ನು ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ