ಅರುಣಾಚಲ ಭಾರತದ್ದಲ್ಲ, ನಿಮ್ಮ ಪಾಸ್​ಪೋರ್ಟ್ ಅಸಿಂಧು: ಭಾರತೀಯ ಮಹಿಳೆಗೆ ಚೀನೀ ಅಧಿಕಾರಿಗಳ ಕಿರಿಕ್

Arunachal born woman detained for 18 hrs at Shanghai airport for having Indian passport: ಅರುಣಾಚಲ ಪ್ರದೇಶದಲ್ಲಿ ಜನಿಸಿದ ಮಹಿಳೆಯೊಬ್ಬರ ಭಾರತೀಯ ಪಾಸ್​ಪೋರ್ಟ್ ಅನ್ನು ಅಸಿಂಧು ಎಂದು ಚೀನೀ ಅಧಿಕಾರಿಗಳು ಪರಿಗಣಿಸಿದ್ದಾರೆ. ಪೆಮ್ ವಾಂಗ್ ತೋಂಗ್​ಡೋಕ್ ಎಂಬ ಮಹಿಳೆ ಶಾಂಘೈ ಏರ್​ಪೋರ್ಟ್​ನಲ್ಲಿ ತನ್ನನ್ನು ತಡೆಹಿಡಿದ ಘಟನೆಯನ್ನು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅರುಣಾಚಲವು ಚೀನಾಗೆ ಸೇರಿದ್ದು ಎಂದು ಚೀನೀ ಅಧಿಕಾರಿಗಳು ವಾದಿಸಿ, ತನ್ನನ್ನು 18 ಗಂಟೆ ಕಾಲ ತಡೆದು ನಿಲ್ಲಿಸಿದ್ದರು ಎಂದಿದ್ದಾರೆ.

ಅರುಣಾಚಲ ಭಾರತದ್ದಲ್ಲ, ನಿಮ್ಮ ಪಾಸ್​ಪೋರ್ಟ್ ಅಸಿಂಧು: ಭಾರತೀಯ ಮಹಿಳೆಗೆ ಚೀನೀ ಅಧಿಕಾರಿಗಳ ಕಿರಿಕ್
ಪೆಮ್ ವಾಂಗ್ ತೋಂಗ್​ಡುಕ್

Updated on: Nov 24, 2025 | 2:46 PM

ನವದೆಹಲಿ, ನವೆಂಬರ್ 24: ಭಾರತದ ಪಾಸ್​ಪೋರ್ಟ್ ಹೊಂದಿದ್ದ ಅರುಣಾಚಲಪ್ರದೇಶ ಮೂಲದ ಮಹಿಳೆಯೊಬ್ಬರನ್ನು ಚೀನಾದ ಶಾಂಘೈ ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಬ್ರಿಟನ್​ನಲ್ಲಿ ವಾಸಿಸುತ್ತಿರುವ ಪೆಮ್ ವ್ಯಾಂಗ್ ತೋಂಗ್​ಡೋಕ್ (Pem Wang Thongdok) ಎಂಬಾಕೆ ತಮ್ಮ ಎಕ್ಸ್ ಅಕೌಂಟ್​ನಿಂದ ಸರಣಿ ಪೋಸ್ಟ್​ಗಳನ್ನು ಹಾಕಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಾನು ಅರುಣಾಚಲಪ್ರದೇಶದಲ್ಲಿ ಜನಿಸಿದ್ದರಿಂದ ತಮ್ಮ ಭಾರತೀಯ ಪಾಸ್​ಪೋರ್ಟ್ ಅಸಿಂಧು ಎಂದು ಚೀನೀ ಅಧಿಕಾರಿಗಳು ಪರಿಗಣಿಸಿದ್ದರು ಎಂದು ಈ ಮಹಿಳೆ ಆರೋಪಿಸಿದ್ದಾರೆ.

ಶಾಂಘೈನ ಪುಡೋಂಗ್ ಇಂಟರ್ನ್ಯಾಷನಲ್ ಏರ್ಪೋರ್ಟ್​ನಲ್ಲಿ ನವೆಂಬರ್ 21ರಂದು ಈ ಘಟನೆ ನಡೆದಿದ್ದಾಗಿ ತೋಂಗ್​ಡೋಕ್ ಹೇಳಿದ್ದಾರೆ. ಆಕೆ ಲಂಡನ್​ನಿಂದ ಜಪಾನ್​ಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಶಾಂಘೈ ಏರ್​ಪೋರ್ಟ್​ನಲ್ಲಿ 18 ಗಂಟೆ ಕಾಲ ತನ್ನನ್ನು ತಡೆದು ನಿಲ್ಲಿಸಲಾಗಿತ್ತು ಎಂದು ಈಕೆ ಹೇಳಿದ್ದಾರೆ.

ಅರುಣಾಚಲ ಪ್ರದೇಶ ಚೀನಾಗೆ ಸೇರಿದ್ದು ಎಂದು ವಾದಿಸುತ್ತಿದ್ದ ಚೀನೀ ಅಧಿಕಾರಿಗಳು…

ಈ ಮಹಿಳೆ ಪ್ರಸಕ್ತ ಯುಕೆ ದೇಶದಲ್ಲಿ ವಾಸಿಸುತ್ತಿದ್ದಾರೆ. ಈಕೆ ಹುಟ್ಟಿದ್ದು ಅರುಣಾಚಲಪ್ರದೇಶದಲ್ಲಿ. ಭಾರತೀಯ ಪಾಸ್​ಪೋರ್ಟ್ ಹೊಂದಿದ್ದಾರೆ. ಆದರೆ, ಚೀನೀ ಅಧಿಕಾರಿಗಳ ಪ್ರಕಾರ ಅರುಣಾಚಲಪ್ರದೇಶವು ಚೀನಾಗೆ ಸೇರಿದ್ದು. ಹೀಗಾಗಿ, ಈ ಮಹಿಳೆ ಹೊಂದಿರುವ ಭಾರತೀಯ ಪಾಸ್​ಪೋರ್ಟ್ ಅಸಿಂಧು ಎಂದು ಇವರು ಪರಿಗಣಿಸಿದ್ದಾರೆ. ಆ ಘಟನೆಯನ್ನು ಸ್ಮರಿಸಿರುವ ಪೆಮ್ ವಾಂಗ್ ತೋಂಗ್​ಡುಕ್, ಅರುಣಾಚಲವು ಚೀನಾಗೆ ಸೇರಿದ್ದಾ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ 2 ಬಸ್ಸುಗಳು ಮುಖಾಮುಖಿ ಡಿಕ್ಕಿ; 6 ಸಾವು, 28 ಮಂದಿಗೆ ಗಾಯ

‘ಚೈನಾ ಈಸ್ಟರ್ನ್ ಏರ್​ಲೈನ್ಸ್ ಮತ್ತು ಚೀನಾ ಇಮ್ಮೈಗ್ರೇಶನ್​ನಿಂದಾಗಿ ನ. 21ರಂದು ಶಾಂಘೈ ಏರ್​ಪೋರ್ಟ್​ನಲ್ಲಿ ನನ್ನನ್ನು 18 ಗಂಟೆ ಕಾಲ ತಡೆದು ನಿಲ್ಲಿಸಿದರು. ನನ್ನ ಜನ್ಮಸ್ಥಳ ಅರುಣಾಚಲಪ್ರದೇಶವಾದ್ದರಿಂದ ಭಾರತೀಯ ಪಾಸ್​ಪೋರ್ಟ್ ಅನ್ನು ಅಸಿಂಧು ಎಂದು ಪರಿಗಣಿಸಿದ್ದಾರೆ. ಅವರ ಪ್ರಕಾರ ಅರುಣಾಚಲವು ಚೀನಾದ ಭಾಗವಂತೆ. ಇದು ನಿಜವಾ?’ ಎಂದು ಪೆಮ್ ವಾಂಗ್ ತೋಂಗ್​ಡುಕ್ ಅವರು ಅರುಣಾಚಲ ಸಿಎಂ ಪ್ರೇಮ್ ಖಂಡು, ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಪ್ರಧಾನಿ ಕಚೇರಿಗಳ ಎಕ್ಸ್ ಅಕೌಂಟ್​ಗಳನ್ನು ಟ್ಯಾಗ್ ಮಾಡಿ ಕೇಳಿದ್ದಾರೆ.

ಪೆಮ್ ವಾಂಗ್ ಅವರ ಒಂದು ಎಕ್ಸ್ ಪೋಸ್ಟ್

ಪೆಮ್ ವಾಂಗ್ ತೋಂಗ್​ಡೋಕ್ ಅವರು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆ ಘಟನೆ ಬಗ್ಗೆ ಇನ್ನಷ್ಟು ವಿವರ ಹಂಚಿಕೊಂಡಿದ್ದಾರೆ. ಅದರಂತೆ, ಶಾಂಘೈ ಏರ್ಪೋರ್ಟ್​ನಲ್ಲಿ ವಲಸೆ ಪ್ರಕ್ರಿಯೆ ಬಳಿಕ ಈಕೆಯ ಪಾಸ್​ಪೋರ್ಟ್ ಅನ್ನು ಅಧಿಕಾರಿಗಳು ಪಡೆದಿದ್ದರು. ಈಕೆ ಸೆಕ್ಯೂರಿಟಿ ಬಳಿ ಕಾಯುತ್ತಿದ್ದಾಗ ಒಬ್ಬ ಅಧಿಕಾರಿ ಬಂದು ಈಕೆಯ ಹೆಸರು ಮತ್ತು ಇಂಡಿಯಾ ಹೆಸರನ್ನು ಕಿರುಚಿ ಕರೆಯತೊಗಿದಳು.

ಬಳಿಕ ಅರುಣಾಚಲ ಮಹಿಳೆಯನ್ನು ವಲಸೆ ವಿಭಾಗಕ್ಕೆ ಕರೆದೊಯ್ದು, ‘ಅರುಣಾಚಲವು ಚೀನಾದ ಭಾಗವಾಗಿದೆ. ನಿಮ್ಮ ಪಾಸ್​ಪೋರ್ಟ್ ಅಸಿಂಧುವಾಗಿದೆ’ ಎಂದು ಹೇಳಿದ್ದಾಳೆ. ಜಪಾನ್​ಗೆ ಫ್ಲೈಟ್ ಹತ್ತಬೇಕಿದ್ದ ಪೆಮ್ ವಾಂಗ್ ಅವರನ್ನು ತಡೆಯಲಾಯಿತು.

ಇದನ್ನೂ ಓದಿ: ಜಿ20 ಆತಿಥ್ಯ ಇಷ್ಟು ಕಷ್ಟ ಅಂತ ಗೊತ್ತಿದ್ದರೆ ಓಡಿ ಹೋಗುತ್ತಿದ್ದೆ: ಪ್ರಧಾನಿ ಮೋದಿಗೆ ತಮಾಷೆ ಮಾಡಿದ ಸೌತ್ ಆಫ್ರಿಕಾ ಅಧ್ಯಕ್ಷ

ಹೊಸದಾಗಿ ಟಿಕೆಟ್ ಖರೀದಿಸಿದರೆ ಹೋಗಲು ಬಿಡುವುದಾಗಿ ಹೇಳುತ್ತಾರೆ. ನಂತರ ತೋಂಗ್​ಡೋಕ್ ಅವರು ತಮ್ಮ ಸ್ನೇಹಿತರೊಬ್ಬರ ಮೂಲಕ ಶಾಂಘೈನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಯನ್ನು ಸಂಪರ್ಕಿಸಿ ವಿಷಯ ತಿಳಿಸುತ್ತಾರೆ. ಭಾರತೀಯ ಅಧಿಕಾರಿಗಳು ಬಂದು ಈಕೆಯನ್ನು ಚೀನಾದಿಂದ ಹೊರಗೆ ಕಳುಹಿಸಲು ಸಹಾಯ ಮಾಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us