AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ಪೈಲಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ…ಅಶೋಕ್ ಗೆಹ್ಲೋಟ್ ಹೇಳಿದ್ದೇನು?

ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸಚಿನ್ ಪೈಲಟ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. 2020ರ ಮಾನೇಸರ್ ಘಟನೆ ತಪ್ಪನ್ನು ಪೈಲಟ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ಬಿಜೆಪಿ ಕಾಂಗ್ರೆಸ್ ಅನ್ನು ಕೆಣಕಲು ಅವಕಾಶ ಸಿಗುತ್ತಿರಲಿಲ್ಲ ಎಂದಿದ್ದಾರೆ. ಪಕ್ಷದ ಭವಿಷ್ಯಕ್ಕೆ ಹಳೆಯ ಕಹಿ ನೆನಪು ಮರೆತು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದ್ದಾರೆ.

ಸಚಿನ್ ಪೈಲಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ...ಅಶೋಕ್ ಗೆಹ್ಲೋಟ್ ಹೇಳಿದ್ದೇನು?
ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ Image Credit source: NDTV
ನಯನಾ ರಾಜೀವ್
|

Updated on: Jun 08, 2026 | 10:15 AM

Share

ಜೈಪುರ, ಜೂನ್ 08: ರಾಜಸ್ಥಾನ(Rajasthan) ರಾಜಕಾರಣದಲ್ಲಿ ಸುಡು ಬಿಸಿಲಿನಂತೆಯೇ ರಾಜಕೀಯ  ಉಷ್ಣತೆಯೂ ಗಣನೀಯವಾಗಿ ಹೆಚ್ಚಾಗಿದೆ. 2020ರ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ರಾಜಸ್ಥಾನ ಕಾಂಗ್ರೆಸ್​ನ ಮಾನೇಸರ್ ರೆಸಾರ್ಟ್​ ಘಟನೆಯು ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಕುರಿತು ಜೂನ್ 7ರ ಭಾನುವಾರದಂದು ಜೈಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ತಮ್ಮದೇ ಪಕ್ಷದ ಸಹೋದ್ಯೋಗಿ ಸಚಿನ್ ಪೈಲಟ್ ವಿರುದ್ಧ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಸಚಿನ್ ಪೈಲಟ್ ಅವರು ಅಂದು ತಾವು ಮಾಡಿದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರೆ, ವಿರೋಧ ಪಕ್ಷವಾದ ಬಿಜೆಪಿಗೆ ಈ ಮಾನೇಸರ್ ಘಟನೆಯ ವಿಷಯವನ್ನು ಪದೇ ಪದೇ ಕಾಂಗ್ರೆಸ್ ಅನ್ನು ಕೆಣಕಲು ಯಾವುದೇ ಅವಕಾಶ ಸಿಗುತ್ತಿರಲಿಲ್ಲ ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 25, 2022 ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಹಿಷ್ಕಾರದ ವಿವಾದವನ್ನು ಪ್ರಸ್ತಾಪಿಸಿದ ಗೆಹ್ಲೋಟ್, ಆ ಸಮಯದಲ್ಲಿ ಹೈಕಮಾಂಡ್ ವಿರುದ್ಧ ಯಾವುದೇ ಬಂಡಾಯ ಅಥವಾ ಅಸಮಾಧಾನ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅದು ಕೇವಲ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸುವ ಪ್ರಸ್ತಾಪದ ವಿರುದ್ಧ ಶಾಸಕರು ವ್ಯಕ್ತಪಡಿಸಿದ ತೀವ್ರ ಭಿನ್ನಾಭಿಪ್ರಾಯವಾಗಿತ್ತು ಎಂದು ಅವರು ವಿವರಿಸಿದರು.

ಮತ್ತಷ್ಟು ಓದಿ: ರಾಜಸ್ಥಾನ ಸಿಎಂ ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರಿಗಿದೆ: ಸಚಿನ್ ಪೈಲಟ್ ಬಣ

ಅಂದು 100 ಕ್ಕೂ ಹೆಚ್ಚು ಶಾಸಕರ ಆಕ್ಷೇಪವೇನೆಂದರೆ ಯಾರು 2020 ರಲ್ಲಿ ತಮ್ಮದೇ ಪಕ್ಷದ ಶಾಸಕರನ್ನು ಕರೆದುಕೊಂಡು ಹರಿಯಾಣದ ಮಾನೇಸರ್‌ಗೆ ಹೋಗಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರೋ, ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಗೆ ಒಪ್ಪಲು ಸಾಧ್ಯವಿಲ್ಲ ಎಂಬುದಾಗಿತ್ತು. ಒಂದು ವೇಳೆ ಹೈಕಮಾಂಡ್ ವಿರುದ್ಧವೇ ನಿಜವಾದ ದಂಗೆ ನಡೆದಿದ್ದರೆ, ನನ್ನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುತ್ತಿರಲಿಲ್ಲ. ಆದರೆ, ಇಡೀ ಘಟನೆಯನ್ನು ತಪ್ಪಾಗಿ ಬಿಂಬಿಸಿ ನನಗೆ ಕೆಟ್ಟ ಹೆಸರು ತರಲು ಸಚಿನ್ ಪೈಲಟ್ ಅವರ ಆಪ್ತರು ಸಂಚು ರೂಪಿಸಿದ್ದರು.

ಪೈಲಟ್ ನನಗೆ ಮಗನಿದ್ದಂತೆ, ವೈಯಕ್ತಿಕ ದ್ವೇಷವಿಲ್ಲ ಸಚಿನ್ ಪೈಲಟ್ ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ಹಗೆತನವಿಲ್ಲ ಎಂಬುದನ್ನು ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ನಾವಿಬ್ಬರೂ ಈಗಲೂ ಪರಸ್ಪರ ಭೇಟಿಯಾಗುತ್ತೇವೆ, ನಗುತ್ತೇವೆ, ಮಾತನಾಡುತ್ತೇವೆ ಮತ್ತು ತಮಾಷೆ ಮಾಡುತ್ತೇವೆ. ನಾನು ಅವರನ್ನು ಮೊದಲಿನಿಂದಲೂ ಕುಟುಂಬದ ಕಿರಿಯ ಸದಸ್ಯನಂತೆ, ಮಗನಂತೆ ನಡೆಸಿಕೊಂಡಿದ್ದೇನೆ. ಆದರೆ, ಅವರು ಸತ್ಯವನ್ನು ಒಪ್ಪಿಕೊಳ್ಳಲು ಇನ್ನೂ ಕಲ್ತಿಲ್ಲ, ಅದಕ್ಕಾಗಿಯೇ ಈ ವಿವಾದ ಪದೇ ಪದೇ ಜೀವಂತವಾಗಿದೆ. ನಾನು ಆ ಘಟನೆಯ ನಂತರವೇ ‘ಮರೆತು ಕ್ಷಮಿಸಿ’ ಎಂದು ಹೇಳಿದ್ದೆ. ಆ ಭಾವನೆಯನ್ನು ಪೈಲಟ್ ಅರ್ಥ ಮಾಡಿಕೊಳ್ಳಬೇಕಿತ್ತು, ಎಂದಿದ್ದಾರೆ.

ಕೇಂದ್ರದಲ್ಲಿ ಸಚಿವರಾಗಲು ಸಹಾಯ ಮಾಡಿದ್ದೆ ತಮ್ಮ ರಾಜಕೀಯ ಇತಿಹಾಸದ ಮತ್ತೊಂದು ಪುಟವನ್ನು ಬಿಚ್ಚಿಟ್ಟ ಗೆಹ್ಲೋಟ್, ಸಚಿನ್ ಪೈಲಟ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಲು ತಾವು ದೊಡ್ಡ ಮಟ್ಟದ ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರು ಸಚಿವರಾಗಲು ಬಯಸಿ ನನಗೆ ಕರೆ ಮಾಡಿದಾಗ, ನಾನು ಅವರ ಪರವಾಗಿ ಹೈಕಮಾಂಡ್ ಜೊತೆ ಬ್ಯಾಟಿಂಗ್ ಮಾಡಿ ಸಚಿವ ಸ್ಥಾನ ಸಿಗುವಂತೆ ಮಾಡಿದ್ದೆ. ಆದರೆ ಪೈಲಟ್ ಇದನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ ಎಂಬ ಬೇಸರ ನನಗಿದೆ. ಅಶೋಕ್ ಗೆಹ್ಲೋಟ್ ನನಗೆ ಸಹಾಯ ಮಾಡಿದ್ದಾರೆ ಎಂದು ಅವರು ತಮ್ಮ ಸ್ನೇಹಿತರ ಮುಂದೆ ಹೇಳಿದ್ದರೂ ನನ್ನ ಹೃದಯ ತುಂಬಿ ಬರುತ್ತಿತ್ತು ಎಂದು ಭಾವುಕರಾಗಿ ನುಡಿದಿದ್ದಾರೆ.

 ರಾಜಕೀಯ ಸಲಹೆಗಾರರ ವಿರುದ್ಧ ಅಸಮಾಧಾನ ಕೆಲವು ರಾಜಕೀಯ ಸಲಹೆಗಾರರು,  ಸಚಿನ್ ಪೈಲಟ್ ಅವರ ಸುತ್ತ ನಿರಂತರವಾಗಿ ಅವಾಸ್ತವಿಕ ರಾಜಕೀಯ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ, ಇದು ವಾಸ್ತವದಲ್ಲಿ ಪೈಲಟ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಾನಿ ಮಾಡುತ್ತಿದೆ ಎಂದು ಗೆಹ್ಲೋಟ್ ಎಚ್ಚರಿಸಿದ್ದಾರೆ. ಪ್ರಸ್ತುತ ದೇಶ ಮತ್ತು ಕಾಂಗ್ರೆಸ್ ಪಕ್ಷ ಎರಡೂ ಕಠಿಣ ಬಿಕ್ಕಟ್ಟಿನ ಹಂತದಲ್ಲಿದ್ದು, ಹಳೆಯ ಕಹಿ ನೆನಪುಗಳನ್ನು ಮರೆತು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವತ್ತ ಎಲ್ಲ ನಾಯಕರು ಒಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಶೋಕ್ ಗೆಹ್ಲೋಟ್ ಅವರ ಈ ಭರ್ಜರಿ ರಾಜಕೀಯ ಹೇಳಿಕೆಗಳು ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದರೂ, ಸಚಿನ್ ಪೈಲಟ್ ಕಡೆಯಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪೈಲಟ್ ಅವರು ಈ ಸುದೀರ್ಘ ಹೇಳಿಕೆಗಳ ಕುರಿತು ಸಂಪೂರ್ಣ ಮೌನ ವಹಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More