Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಕಾಂಗ್ರೆಸ್‌ನ ನಿಜವಾದ ಬಣ್ಣ; ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ಟೀಕೆ

ಅಸ್ಸಾಂನ ಜಾಗಿರೋಡ್​ನಲ್ಲಿ 27,000 ಕೋಟಿ ರೂ. ಮೊತ್ತದ ಸೆಮಿ ಕಂಡಕ್ಟರ್ ಘಟಕ ಸ್ಥಾಪನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಆಕ್ರೋಶ ಹೊರಹಾಕಿದ್ದಾರೆ. ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಯಾಗುತ್ತಿರುವುದು ಕಾಂಗ್ರೆಸ್​ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಇದು ಕಾಂಗ್ರೆಸ್‌ನ ನಿಜವಾದ ಬಣ್ಣ; ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ಟೀಕೆ
ಹಿಮಂತ ಬಿಸ್ವ ಶರ್ಮಾ
Follow us
ಸುಷ್ಮಾ ಚಕ್ರೆ
|

Updated on:Oct 02, 2024 | 7:52 PM

ನವದೆಹಲಿ: ರಾಜಕೀಯ ಪ್ರಭಾವದಿಂದಾಗಿ ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯಾಗುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಜಾಗಿರೋಡ್‌ನಲ್ಲಿ ಟಾಟಾ ಗ್ರೂಪ್ 26,000 ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್ ಪ್ಲಾಂಟ್‌ ನಿರ್ಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಹಂಚಿಕೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ತೀವ್ರ ಮಾತಿನ ಸಮರ ನಡೆದಿದೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ದೇಶದ ಐದು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳ ಪೈಕಿ ನಾಲ್ಕು ಗುಜರಾತ್‌ನಲ್ಲಿ ಮತ್ತು ಒಂದು ಅಸ್ಸಾಂನಲ್ಲಿವೆ. ಆದರೆ ಅವುಗಳಲ್ಲಿ ಕರ್ನಾಟಕದಲ್ಲಿರುವ ಕೌಶಲ್ಯ ಅಥವಾ ನಾವೀನ್ಯತೆಗಳ ಪರಿಸರ ವ್ಯವಸ್ಥೆ ಇಲ್ಲ. ಇವು ರಾಜಕೀಯ ಪ್ರೇರಿತವಾಗಿವೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ ಹಿಮಂತ್ ಬಿಸ್ವ ಶರ್ಮಾ, ಅಸ್ಸಾಂನ ಅಭಿವೃದ್ಧಿಯನ್ನು ಕಾಂಗ್ರೆಸ್ ನಾಯಕ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಸ್ಸಾಂನ ಬೆಳವಣಿಗೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ. ಅಸ್ಸಾಂಗೆ ಸೆಮಿಕಂಡಕ್ಟರ್ ಉದ್ಯಮವನ್ನು ಆಯೋಜಿಸಲು ಯಾವುದೇ ಹಕ್ಕಿಲ್ಲ ಎಂದು ಕರ್ನಾಟಕದ ಮಂತ್ರಿಯೊಬ್ಬರು ಹೇಳಿಕೊಂಡಿದ್ದಾರೆ!” ಎಂದು ಅಸ್ಸಾಂ ಸಿಎಂ ಟೀಕಿಸಿದ್ದಾರೆ.

ಇದನ್ನೂ ಓದಿ: ಕಸ ಹರಡುವುದಲ್ಲ, ಸ್ವಚ್ಛತೆಯು ನಿತ್ಯದ ಕಾಯಕವಾಗಬೇಕು: ನರೇಂದ್ರ ಮೋದಿ

ಈ ಬಗ್ಗೆ ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಹಾಗಾದರೆ ಕರ್ನಾಟಕದ ಹಿತಾಸಕ್ತಿಗಳ ರಕ್ಷಣೆಯನ್ನು ಅಸ್ಸಾಂ ವಿರೋಧಿ ಎಂದು ಏಕೆ ರೂಪಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಸಿಎಂ ಹಿಮಂತ ಬಿಸ್ವಾ ಜೀ, ನೀವು ಮತ್ತು ಪ್ರಧಾನಿ ನರೇಂದ್ರ ಮೋದಿ ನಿಮ್ಮ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಿದಾಗ ಅದನ್ನು ಮಾಸ್ಟರ್​ ಸ್ಟ್ರೋಕ್ ಎಂದು ಕರೆಯುತ್ತೀರಿ. ನಾನು ಕರ್ನಾಟಕಕ್ಕೆ ಅದೇ ರೀತಿ ಮಾಡಿದಾಗ, ಅದನ್ನು ಅನ್ಯಾಯ ಎಂದು ಕರೆಯುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಅಸ್ಸಾಂನಲ್ಲಿ ಶರ್ಮಾ ಅವರು ಇತರ ಕೈಗಾರಿಕೆಗಳ ನಿರ್ವಹಣೆಯನ್ನು ಟೀಕಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ಚಹಾ ಮತ್ತು ಕಾಗದ ಕಾರ್ಖಾನೆಗಳು ಏಕೆ ಮುಚ್ಚಲ್ಪಟ್ಟಿವೆ? ಸರ್ಕಾರವು ಕೆಲವು ಕಂಪನಿಗಳಿಗೆ ಅನಗತ್ಯ ಸಬ್ಸಿಡಿಗಳನ್ನು ನೀಡಿದೆಯೇ? ಎಂದು ಕೇಳಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ 83 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಸಿಎಂ ಹಿಮಂತ್ ಬಿಸ್ವ ಶರ್ಮ ಅವರೇ, ಪರಸ್ಪರರ ಪರಿಸರ ವ್ಯವಸ್ಥೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ನಿಮ್ಮ ಪಕ್ಷದ ಯಜಮಾನರನ್ನು ಮೆಚ್ಚಿಸುವುದನ್ನು ನಿಲ್ಲಿಸಿ. ರಾಜ್ಯವನ್ನು ಕೌಶಲ್ಯಗೊಳಿಸಲು ಪ್ರಾರಂಭಿಸಿ ಮತ್ತು ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಹೂಡಿಕೆಗಳನ್ನು ಪಡೆಯಿರಿ. ಇದರಿಂದ ಹೆಚ್ಚಿನ ಜನರು ಉದ್ಯೋಗಿಯಾಗುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಹಿಮಂತ ಬಿಸ್ವ ಶರ್ಮಾ, “ಕೇವಲ ಮೂರೂವರೆ ವರ್ಷಗಳಲ್ಲಿ ಅಸ್ಸಾಂನಲ್ಲಿ ನಮ್ಮ ಸಾಧನೆಗಳನ್ನು ಕರ್ನಾಟಕವೂ ಗುರುತಿಸುವ ಸ್ಥಾನಕ್ಕೆ ಏರಿದ್ದೇವೆ” ಎಂದು ಹೇಳಿದ್ದಾರೆ. ಅಸ್ಸಾಂ ಭಾರತದ ಸೆಮಿ ಕಂಡಕ್ಟರ್ ಕ್ರಾಂತಿಯಲ್ಲಿ ಪ್ರಮುಖ ಆಟಗಾರನಾಗಲು ಸಿದ್ಧವಾಗಿದೆ ಎಂದು ಪ್ರತಿಪಾದಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Wed, 2 October 24