ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್​ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡುರಾತ್ರಿ ಭಾರಿ ಹಣವನ್ನು ಲೂಟಿ ಮಾಡುವ ಉದ್ದೇಶದಿಂದ ಗ್ಯಾಸ್ ಕಟರ್ ಹಾಗೂ ಇತರ ಮಾರಕಾಸ್ತ್ರಗಳೊಂದಿಗೆ ಎಟಿಎಂ ಬೂತ್‌ಗೆ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್‌ನ ಅತ್ಯಾಧುನಿಕ 'ಇ-ಸರ್ವೆಲೆನ್ಸ್' ತಂತ್ರಜ್ಞಾನ ನೀಡಿದ ಸೂಕ್ತ ಎಚ್ಚರಿಕೆಯಿಂದಾಗಿ ಬ್ಯಾಂಕ್ ಮ್ಯಾನೇಜರ್ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ದು, ಭಾರಿ ಮೊತ್ತದ ಹಣ ಕಳ್ಳತನವಾಗುವುದು ತಪ್ಪಿದೆ. ಮಧ್ಯರಾತ್ರಿಯ ವೇಳೆ ಎಟಿಎಂ ಬೂತ್‌ಗೆ ನುಗ್ಗಿದ ಕಳ್ಳರು, ಎಟಿಎಂ ಯಂತ್ರವನ್ನು ಕತ್ತರಿಸಿ ಹಣವನ್ನು ದೋಚಲು ಗ್ಯಾಸ್ ಕಟರ್ ಹಾಗೂ ಯಂತ್ರ ಒಡೆಯುವ ವಿವಿಧ ಉಪಕರಣಗಳನ್ನು ತಂದಿದ್ದರು. ಬ್ಯಾಂಕ್‌ನ ಕೇಂದ್ರೀಯ ಇ-ಸರ್ವೆಲೆನ್ಸ್ ವ್ಯವಸ್ಥೆಯು ಕಂಟ್ರೋಲ್ ರೂಮ್‌ಗೆ ತುರ್ತು ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದ್ದರಿಂದ ಮ್ಯಾನೇಜರ್ ಬಂದು ಎಟಿಎಂನೊಳಗೆ ಆ ಇಬ್ಬರು ಕಳ್ಳರನ್ನು ಲಾಕ್ ಮಾಡಿದ್ದಾರೆ.

ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್​ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!
Atm Robbery Attempt

Updated on: Sep 29, 2026 | 4:54 PM

ನಾಗೌರ್, ಸೆಪ್ಟೆಂಬರ್ 29: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ತಡರಾತ್ರಿ ಎಟಿಎಂ ಲೂಟಿ ಮಾಡಲು ಯತ್ನಿಸಿದ ಕಳ್ಳರನ್ನು ಬ್ಯಾಂಕ್ ಮ್ಯಾನೇಜರ್ ಮತ್ತು ಆಕೆಯ ಪತಿ ಸೇರಿ ಎಟಿಎಂ ಬೂತ್‌ನೊಳಗೇ ಲಾಕ್ ಮಾಡಿ ಪೊಲೀಸರಿಗೆ ಒಪ್ಪಿಸಿದ ಸಾಹಸದ ಘಟನೆ ನಡೆದಿದೆ. ಬ್ಯಾಂಕ್‌ನ ಇ-ಸರ್ವೆಲೆನ್ಸ್ ತಂತ್ರಜ್ಞಾನದ ತಕ್ಷಣದ ಅಲರ್ಟ್​​ನಿಂದಾಗಿ ಬೂತ್‌ನಲ್ಲಿದ್ದ 16 ಲಕ್ಷ ರೂ.ಗೂ ಹೆಚ್ಚಿನ ಹಣ ಸುರಕ್ಷಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಸುಮಾರು 2.13ರ ಸುಮಾರಿಗೆ ನಾಗೌರ್‌ನಲ್ಲಿರುವ ಯುಸಿಒ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಕಳ್ಳರು ಎಟಿಎಂ ಬೂತ್ ಪ್ರವೇಶಿಸಿ ಹಣವನ್ನು ಕದಿಯುವ ಉದ್ದೇಶದಿಂದ ಯಂತ್ರವನ್ನು ಹಾನಿಗೊಳಿಸಲು ಪ್ರಾರಂಭಿಸಿದ್ದರು. ಈ ವೇಳೆ ಬ್ಯಾಂಕ್‌ನ ಇ-ಸರ್ವೆಲೆನ್ಸ್ ವ್ಯವಸ್ಥೆಯು ಈ ಚಟುವಟಿಕೆಯನ್ನು ಗುರುತಿಸಿ ತಕ್ಷಣವೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಅಜ್ಮೇರ್ ವಲಯದ ಬ್ಯಾಂಕ್ ಭದ್ರತಾ ಅಧಿಕಾರಿ ಗೌತಮ್ ನಗರ್ ಅವರಿಗೆ ಈ ಸಂದೇಶ ತಲುಪಿದ್ದು, ಅವರು ತಕ್ಷಣ ಬ್ರಾಂಚ್ ಮ್ಯಾನೇಜರ್​​ ಸರಿತಾ ಚೌಧರಿ ಅವರಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೊಬೈಲ್‌ಗೆ ಹಣ ಕಡಿತಗೊಂಡ ಮೆಸೇಜ್ ಬಂದ್ರೂ ಎಟಿಎಂನಿಂದ ಹಣ ಬಂದಿಲ್ವಾ? ಹಾಗಾದ್ರೆ ಈ ಕೆಲಸ ಮಾಡಿ

ಸರಿತಾ ಚೌಧರಿ ಅವರು ಬ್ಯಾಂಕ್‌ನ ಮೇಲಿರುವ ವಸತಿ ಗೃಹದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಅವರು ತಮ್ಮ ಪತಿಯೊಂದಿಗೆ ತಕ್ಷಣವೇ ಕೆಳಗಿದ್ದ ಎಟಿಎಂ ಬೂತ್‌ಗೆ ಹೋದರು. ಬೂತ್‌ನೊಳಗೆ ಇಬ್ಬರು ಕಳ್ಳರಿರುವುದನ್ನು ಕಂಡು, ತಕ್ಷಣವೇ ಹೊರಗಿನಿಂದ ಎಟಿಎಂ ಶಟರ್ ಎಳೆದು ಬಂದ್ ಮಾಡಿ, ಕಳ್ಳರನ್ನು ಒಳಗೇ ಲಾಕ್ ಮಾಡಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದರು.

ಎಟಿಎಂ ಬೂತ್‌ನೊಳಗೇ ಸಿಕ್ಕಿಬಿದ್ದ ಇಬ್ಬರು ಆರೋಪಿಗಳ ಬಂಧನ:

ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಶಟರ್ ತೆಗೆದು ಒಳಗಿದ್ದ ಇಬ್ಬರು ಶಂಕಿತರನ್ನು ಬಂಧಿಸಿದರು. ಬಂಧಿತರನ್ನು ಮುಂಡ್ವಾ ನಿವಾಸಿ ಚಹಾ ಅಂಗಡಿ ನಡೆಸುವ ಭರತ್ ಪ್ರಜಾಪತ್ ಹಾಗೂ ಆತನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕೋಮಲ್ ಕುಮಾರ್ ರಜಪೂತ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿಗಳು ಬೇರೊಬ್ಬರ ಮೋಟಾರ್ ಸೈಕಲ್‌ನಲ್ಲಿ ಎಟಿಎಂಗೆ ಬಂದಿದ್ದರು. ಎಟಿಎಂ ಯಂತ್ರವನ್ನು ಒಡೆಯಲು ಬಳಸುವ ಉಪಕರಣಗಳನ್ನು ಅವರು ತಂದಿದ್ದರು.

ಇದನ್ನೂ ಓದಿ: ಗುಪ್ತಾಂಗ ಕಟ್, ರೂಂನಲ್ಲಿತ್ತು ಗ್ರೈಂಡರ್; ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ್ ಶಿಷ್ಯನ ಅನುಮಾನಾಸ್ಪದ ಸಾವು

ಆರೋಪಿಗಳು ಎಟಿಎಂ ಯಂತ್ರದ ಮೇಲ್ಭಾಗದ ಕವರ್ ಅನ್ನು ಹಾನಿಗೊಳಿಸಿ, ಗುರುತು ಸಿಗದಿರಲು ಸಿಸಿಟಿವಿ ಕ್ಯಾಮೆರಾಗೆ ಗ್ರೀಸ್ ಹಚ್ಚಿದ್ದರು. ಜೊತೆಗೆ ಕ್ಯಾಮೆರಾದ ವೈರ್‌ಗಳನ್ನು ಸಹ ಕತ್ತರಿಸಿದ್ದರು. ಆದರೂ ಹಣವಿದ್ದ ಮುಖ್ಯ ಭಾಗವನ್ನು ತೆರೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಬ್ಯಾಂಕ್ ಅಧಿಕಾರಿಗಳ ಪ್ರಕಾರ, ಎಟಿಎಂ ಯಂತ್ರದಲ್ಲಿ 16 ಲಕ್ಷ ರೂ. ಹಣವಿತ್ತು. ಇಂದು ಬ್ಯಾಂಕ್ ಮುಷ್ಕರ ಪ್ರಸ್ತಾಪಿತವಾಗಿದ್ದರಿಂದ ಎಟಿಎಂಗೆ ಹೆಚ್ಚಿನ ಹಣವನ್ನು ತುಂಬಿಸಲಾಗಿತ್ತು ಎಂದು ಮ್ಯಾನೇಜರ್ ಸರಿತಾ ಚೌಧರಿ ತಿಳಿಸಿದ್ದಾರೆ.

ಎಟಿಎಂ ಲೂಟಿಗೆ ಯತ್ನಿಸಿದ ಇಬ್ಬರೂ ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ ಉಪಕರಣಗಳೊಂದಿಗೆ ಎಟಿಎಂ ಬೂತ್‌ನೊಳಗಿನಿಂದಲೇ ಬಂಧಿಸಲಾಗಿದೆ. ಪೊಲೀಸರು ಕೃತ್ಯಕ್ಕೆ ಬಳಸಿದ ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us