
ನ್ಯೂಯಾರ್ಕ್, ಸೆಪ್ಟೆಂಬರ್ 25: ಗಲ್ಫ್, ಕೆಂಪು ಸಮುದ್ರ ಹಾಗೂ ಕಪ್ಪು ಸಮುದ್ರದ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಮಾನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರೊಬ್ಬರು ದಾಳಿಗೆ ಬಲಿಯಾದ ಬೆನ್ನಲ್ಲೇ ಜಾಗತಿಕ ವೇದಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಇಂತಹ ದಾಳಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ವಿಶ್ವಸಂಸ್ಥೆಯ 81ನೇ ಸಾಮಾನ್ಯಸಭೆಯ ಅಂಗವಾಗಿ ಭಾರತ ಮತ್ತು ಲೈಬೀರಿಯಾ ಜಂಟಿಯಾಗಿ ಆಯೋಜಿಸಿದ್ದ ‘ಹಡಗುಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯ ಮಿತ್ರರ ಗುಂಪು’ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ಅವರು, ಜಾಗತಿಕ ಜಲಮಾರ್ಗಗಳಲ್ಲಿ ಇತ್ತೀಚೆಗೆ ನಡೆದ ದಾಳಿಗಳಲ್ಲಿ ಭಾರತೀಯ ಸಿಬ್ಬಂದಿ ಬಲಿಯಾಗಿರುವ ಘಟನೆಗಳನ್ನು ಪ್ರಸ್ತಾಪಿಸಿದರು. “ನಾವಿಕರ ಪ್ರಮುಖ ಮೂಲ ದೇಶವಾಗಿ ಭಾರತ ಹಾಗೂ ವಿಶ್ವದ ಅತಿದೊಡ್ಡ ಹಡಗು ನೋಂದಣಿ ದೇಶವಾಗಿ ಲೈಬೀರಿಯಾ, ಹಡಗುಗಳು ಮತ್ತು ನಾವಿಕರ ಸುರಕ್ಷತೆಯನ್ನು ಎತ್ತಿಹಿಡಿಯಲು ಇಂದು ಒಂದಾಗಿವೆ” ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ: ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ
ಉದಾಹರಣೆಸಹಿತ ವಿವರಿಸಿದ ಜೈಶಂಕರ್:
“2 ದಿನಗಳ ಹಿಂದೆ ಒಮಾನ್ ಕೊಲ್ಲಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಧ್ವಜ ಹೊಂದಿದ್ದ ‘ಎಮ್‌ವಿ ಕೆಂಪ್ ಪ್ಲೂಟೊ’ ಕಂಟೇನರ್ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಪನಾಮ ಧ್ವಜದ ‘ಅಲ್ ಗಿಯಾ’ ತೈಲ ನೌಕೆಯ ಮೇಲೆ ದಾಳಿ ನಡೆದಿದ್ದು, ಭಾರತೀಯ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ. ಜುಲೈ 18ರಂದು ರಷ್ಯಾದ ಜಲಪ್ರದೇಶದಲ್ಲಿ ಈ ಹಡಗಿನ ಮೇಲೆ ದಾಳಿ ನಡೆದು, ಭಾರತೀಯ ಮೂಲದ ಚೀಫ್ ಆಫೀಸರ್ ಮೃತಪಟ್ಟಿದ್ದರು. ಜುಲೈ 19ರಂದು ಉಕ್ರೇನ್‌ನ ಒಡೆಸ್ಸಾದಿಂದ ಹೊರಟ ಈ ಹಡಗಿನ ಮೇಲೆ ದಾಳಿ ನಡೆದು, ನಾಲ್ವರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದರು. ನಾನು ನೀಡಿದ ಉದಾಹರಣೆಗಳಲ್ಲಿ ಭಾರತೀಯ ನಾವಿಕರು ಬಲಿಯಾಗಿದ್ದಾರೆ. ಆದರೆ, ಕಪ್ಪು ಸಮುದ್ರದಿಂದ ಕೆಂಪು ಸಮುದ್ರ ಹಾಗೂ ಗಲ್ಫ್‌ವರೆಗೆ ಪ್ರಪಂಚದ ಹಲವು ದೇಶಗಳ ನಾವಿಕರು ಈ ವರ್ಷ ಇಂತಹ ವಿಕೃತ ದಾಳಿಗಳಿಗೆ ಬಲಿಯಾಗಿದ್ದಾರೆ. ವಾಣಿಜ್ಯ ಹಡಗುಗಳ ಮೇಲಿನ ಈ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.
ದಿನಕ್ಕೆ 140 ಬಿಲಿಯನ್ ಡಾಲರ್ ವ್ಯಾಪಾರ:
“ಜಗತ್ತಿನಲ್ಲಿ ಪ್ರತಿದಿನ 140 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಅಂತಾರಾಷ್ಟ್ರೀಯ ವ್ಯಾಪಾರ ನಡೆಯುತ್ತಿದ್ದು, ಇದರಲ್ಲಿ ಶೇ. 80ಕ್ಕೂ ಹೆಚ್ಚು ಭಾಗ ಕಡಲ ಮಾರ್ಗಗಳನ್ನೇ ಅವಲಂಬಿಸಿದೆ. ಆದ್ದರಿಂದ ಸಾಗರ ಮಾರ್ಗಗಳ ರಕ್ಷಣೆ ಅತ್ಯಗತ್ಯ. ಹೆಚ್ಚಿನ ವಾಣಿಜ್ಯ ಹಡಗುಗಳ ನೋಂದಣಿ ದೇಶ ಒಂದಾಗಿದ್ದರೆ, ಅದರಲ್ಲಿ ಕೆಲಸ ಮಾಡುವ ನಾವಿಕರ ದೇಶವೇ ಬೇರೆಯಾಗಿರುತ್ತದೆ. ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಒಂದಾಗಿ ಒಗ್ಗಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ‘ನಮ್ಮ ಉಗ್ರರನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ’; ವಿಶ್ವಸಂಸ್ಥೆಯಲ್ಲಿ ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
ಪ್ರಧಾನಿ ಮೋದಿಯವರ ಬ್ರಿಕ್ಸ್ ಪ್ರಸ್ತಾಪ:
2 ವಾರಗಳ ಹಿಂದೆ ಭಾರತ ಆಯೋಜಿಸಿದ್ದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ನಾವಿಕರ ತುರ್ತು ಬೆಂಬಲ ಜಾಲ” ರಚಿಸುವ ಕುರಿತು ನೀಡಿದ್ದ ಪ್ರಸ್ತಾಪವನ್ನು ಸಚಿವ ಜೈಶಂಕರ್ ನೆನಪಿಸಿದರು. ಈ ಜಾಲವು ವಿವಿಧ ದೇಶಗಳ ರಾಯಭಾರ ಕಚೇರಿಗಳು ಮತ್ತು ಕಡಲ ಸಚಿವಾಲಯಗಳನ್ನು ಸಂಪರ್ಕಿಸಿ, ಆಪತ್ತಿನಲ್ಲಿರುವ ನಾವಿಕರಿಗೆ ತಕ್ಷಣವೇ ವೈದ್ಯಕೀಯ ನೆರವು, ಕುಟುಂಬದ ಸಂಪರ್ಕ ಮತ್ತು ಸ್ಥಳಾಂತರಿಸುವಿಕೆಗೆ ನೆರವಾಗಲಿದೆ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ