ಆಸ್ಟ್ರೇಲಿಯಾ ಬೀಚ್ ಶೂಟರ್​​​ಗೆ ಹೈದರಾಬಾದ್​ ನಂಟು; 6 ಬಾರಿ ಭಾರತಕ್ಕೆ ಬಂದಿದ್ದ ಆರೋಪಿ

ಆಸ್ಟ್ರೇಲಿಯಾದ ಬೋಂಡಿ ಬೀಚ್ ಗುಂಡಿನ ದಾಳಿ ಪ್ರಕರಣದ ಆರೋಪಿ ಸಾಜಿದ್ ಅಕ್ರಮ್ ಪಾಕಿಸ್ತಾನಿ ಪ್ರಜೆ ಎಂಬ ಸಂಗತಿ ಬಯಲಾಗಿದೆ. ಆದರೆ, ಅದಕ್ಕೂ ಮುಖ್ಯವಾಗಿ ಆತನಿಗೂ ಭಾರತಕ್ಕೂ ನಂಟಿತ್ತು ಎಂಬ ಅಚ್ಚರಿಯ ಸಂಗತಿಯನ್ನೂ ಪತ್ತೆಹಚ್ಚಲಾಗಿದೆ. ಆರೋಪಿ ಸಾಜಿದ್ ಅಕ್ರಮ್ ಭಾರತಕ್ಕೆ 6 ಬಾರಿ ಭೇಟಿ ನೀಡಿದ್ದ. ಆತನ ಕುಟುಂಬದವರು ಹಲವು ವರ್ಷಗಳ ಹಿಂದೆಯೇ ಆತನೊಂದಿಗೆ ಸಂಬಂಧ ಕಡಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾ ಬೀಚ್ ಶೂಟರ್​​​ಗೆ ಹೈದರಾಬಾದ್​ ನಂಟು; 6 ಬಾರಿ ಭಾರತಕ್ಕೆ ಬಂದಿದ್ದ ಆರೋಪಿ
Australia Shooter Sajid Akram And His Son

Updated on: Dec 16, 2025 | 9:51 PM

ನವದೆಹಲಿ, ಡಿಸೆಂಬರ್ 16: ಆಸ್ಟ್ರೇಲಿಯಾದ ಬೋಂಡಿ ಬೀಚ್​​ನಲ್ಲಿ (Australia Attack) ಅಪ್ಪ-ಮಗ ಇಬ್ಬರೂ ಗುಂಡಿನ ದಾಳಿ ನಡೆಸಿ 15 ಜನರನ್ನು ಬಲಿ ಪಡೆದಿದ್ದರು. ಅವರಿಬ್ಬರ ಫೋಟೋವನ್ನೂ ಬಹಿರಂಗಪಡಿಸಲಾಗಿದ್ದು, ಶೂಟೌಟ್ ವೇಳೆ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ 50 ವರ್ಷದ ಸಾಜಿದ್ ಅಕ್ರಮ್ ಪಾಕಿಸ್ತಾನಿ ಪ್ರಜೆಯಾಗಿದ್ದಾನೆ. ಆತನ ಮಗ ನವೀದ್ ಅಕ್ರಮ್ ಆಸ್ಟ್ರೇಲಿಯಾದ ಪ್ರಜೆಯಾಗಿದ್ದಾನೆ. ಸಾಜಿದ್​ ಮೂಲ ಹುಡುಕಿದ ತನಿಖಾಧಿಕಾರಿಗಳಿಗೆ ಆತ ಭಾರತ ಮೂಲದವನು ಎಂಬ ವಿಷಯ ಗೊತ್ತಾಗಿದೆ. ಹೈದರಾಬಾದ್​​ನವನಾದ ಸಾಜಿದ್​ 1998ರಲ್ಲಿ ಹೈದರಾಬಾದ್‌ನಿಂದ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಆದರೂ ಆತ ಭಾರತದ ಪಾಸ್​​ಪೋರ್ಟ್​ ಹೊಂದಿದ್ದಾನೆ. ಆತ ಇದುವರೆಗೂ 6 ಬಾರಿ ಭಾರತಕ್ಕೆ ಬಂದು ಹೋಗಿದ್ದಾನೆ. ಅವರ ಮಗ ಹುಟ್ಟಿನಿಂದಲೇ ಆಸ್ಟ್ರೇಲಿಯಾದ ಪ್ರಜೆ. ಆದರೂ ಸಾಜಿದ್ ಮಾತ್ರ ಇನ್ನೂ ಪಾಕ್ ಪ್ರಜೆಯಾಗಿದ್ದಾನೆ.

ಸಾಜಿದ್ ಅಕ್ರಮ್ (50) ದಾಳಿಯ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆತನ ಮಗ ನವೀದ್ ಅಕ್ರಮ್ (24) ಪೊಲೀಸ್ ಕಾವಲಿನಡಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಟ್ರೇಲಿಯಾದ ತನಿಖಾಧಿಕಾರಿಗಳು ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಪ್ರೇರಿತವಾದ ಭಯೋತ್ಪಾದಕ ಕೃತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಡ್ನಿ ಗುಂಡಿನ ದಾಳಿ: ಶಂಕಿತರ ಕಾರಿನಲ್ಲಿ ಐಸಿಸ್ ಧ್ವಜ ಪತ್ತೆ

ಸಾಜಿದ್ ಅಕ್ರಮ್ ಯಾರು?:

50 ವರ್ಷದ ಸಾಜಿದ್ ಅಕ್ರಮ್ ಹೈದರಾಬಾದ್ ಮೂಲದವರಾಗಿದ್ದು, 1998ರ ನವೆಂಬರ್‌ನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದ. ಉದ್ಯೋಗ ಅರಸಿ ಭಾರತವನ್ನು ಬಿಡುವ ಮೊದಲು ಆತ ಹೈದರಾಬಾದ್‌ನಲ್ಲಿ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದ್ದ ಎಂದು ಹೈದರಾಬಾದ್​​ನ ಪೊಲೀಸರು ತಿಳಿಸಿದ್ದಾರೆ. ಸಾಜಿದ್ ಅಕ್ರಮ್ ಸುಮಾರು 27 ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ. ಆ ಅವಧಿಯಲ್ಲಿ ಹೈದರಾಬಾದ್‌ನಲ್ಲಿರುವ ಅವರ ಕುಟುಂಬದೊಂದಿಗೆ ಹೆಚ್ಚು ಸಂಪರ್ಕವನ್ನು ಹೊಂದಿರಲಿಲ್ಲ. ಸಾಜಿದ್ ಅಕ್ರಮ್ ಕೊನೆಯದಾಗಿ 2022ರಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದ.

ಇದನ್ನೂ ಓದಿ: ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು

ಆಸ್ಟ್ರೇಲಿಯಾಕ್ಕೆ ವಲಸೆ ಬಂದ ನಂತರ, ಸಾಜಿದ್ ಅಕ್ರಮ್ ವೆನೆರಾ ಗ್ರೊಸೊ ಎಂಬಾಕೆಯನ್ನು ವಿವಾಹವಾಗಿದ್ದ. ಆಕೆ ಯುರೋಪಿಯನ್ ಮೂಲದ ಮಹಿಳೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ನವೀದ್ ಮತ್ತು ಒಬ್ಬ ಮಗಳು ಇದ್ದಾಳೆ. ಬಳಿಕ ಅವರ ಕುಟುಂಬವು ಆಸ್ಟ್ರೇಲಿಯಾದಲ್ಲಿ ಶಾಶ್ವತವಾಗಿ ನೆಲೆಸಿತು. ಅವರ ಮಕ್ಕಳಿಬ್ಬರೂ ಆಸ್ಟ್ರೇಲಿಯನ್ ಪ್ರಜೆಗಳಾಗಿದ್ದಾರೆ.

ಬೋಂಡಿ ಬೀಚ್ ದಾಳಿ:

ಆಸ್ಟ್ರೇಲಿಯಾದ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ಬೋಂಡಿ ಬೀಚ್‌ನಲ್ಲಿ ಭಾನುವಾರ ಹನುಕ್ಕಾ ಆಚರಣೆಯ ಸಂದರ್ಭದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಯಿತು. ಈ ವೇಳೆ ಅಲ್ಲಿ ಸೇರಿದ್ದ 15 ಜನರು ಸಾವನ್ನಪ್ಪಿದರು. ತಕ್ಷಣ ಪೊಲೀಸರು ಶೂಟರ್​​ಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸಾಜಿದ್ ಅಕ್ರಮ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ನವೀದ್ ಅಕ್ರಮ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ